‘ಕಾಟೇರ’ದಲ್ಲಿ ಛಬ್ಬಿ ಛಬ್ಬಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ. ಆದರೆ ಈ ಪಾತ್ರಕ್ಕೆ ತೆಳ್ಳಗಾಗೋದು ಅನಿವಾರ್ಯ ಎಂದು ಸಂದರ್ಶನದಲ್ಲಿ ಆರಾಧನಾ ರಾಮ್‌ ಹೇಳಿದ್ದಾರೆ.

ಪ್ರಿಯಾ ಕೆರ್ವಾಶೆ

* ಕಾಟೇರ ನಂತರ ತುಂಬ ಗ್ಯಾಪ್‌ ಆಯ್ತಲ್ಲಾ?
ಸಾಕಷ್ಟು ಸ್ಕ್ರಿಪ್ಟ್‌ಗಳು ಬರುತ್ತಿದ್ದವು. ಕೆಲವದರಲ್ಲಿ ಕಥೆ ಚೆನ್ನಾಗಿತ್ತು, ಟೀಮ್‌ ಸೆಟ್‌ ಆಗುತ್ತಿರಲಿಲ್ಲ. ಇನ್ನೂ ಕೆಲವು ಪಾತ್ರಗಳೇ ನನಗೆ ಇಷ್ಟ ಆಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ‘ಕಾಟೇರ’ ಯಶಸ್ಸು ನನ್ನ ಮೇಲೆ ಒಂದಿಷ್ಟು ಜವಾಬ್ದಾರಿಯನ್ನೂ ಹೊರಿಸಿತ್ತು. ಪಾತ್ರಗಳ ಆಯ್ಕೆಯಲ್ಲಿ ನಾನು ಚ್ಯೂಸಿ ಆಗೋದು ಅನಿವಾರ್ಯವಾಗಿತ್ತು.

* ಈ ಸಿನಿಮಾದಲ್ಲಿ ನಿಮ್ಮ ಪಾತ್ರ?
ಕಾಟೇರ ಸಿನಿಮಾಕ್ಕೆ ಕಂಪ್ಲೀಟ್ ವಿರುದ್ಧ ಬಗೆಯ ಪಾತ್ರ. ಮುಖ್ಯಮಂತ್ರಿಗಳ ಮಗಳಾಗಿ ಬೋಲ್ಡ್‌ ಆ್ಯಂಡ್‌ ಬಿಂದಾಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಔಟ್‌ ಆ್ಯಂಡ್‌ ಔಟ್‌ ಮಾಡರ್ನ್‌ ಹುಡುಗಿ. ಸಾಕಷ್ಟು ತೂಕ ಇರುವ ಪಾತ್ರ. ಆದರೆ ಅದಕ್ಕೆ ನಾನೀಗ ತೂಕ ಇಳಿಸಿಕೊಳ್ಳಬೇಕಿದೆ.

* ಬಾಡಿ ಟ್ರಾನ್ಸ್‌ಫಾರ್ಮೇಶನ್‌ ಮಾಡ್ತಿದ್ದೀರ?
ಖಂಡಿತಾ. ‘ಕಾಟೇರ’ದಲ್ಲಿ ಛಬ್ಬಿ ಛಬ್ಬಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ. ಆದರೆ ಈ ಪಾತ್ರಕ್ಕೆ ತೆಳ್ಳಗಾಗೋದು ಅನಿವಾರ್ಯ. ಆ ಪ್ರೊಸೆಸ್‌ ಶುರುವಾಗಿದೆ. ನಿತ್ಯ ಜಿಮ್‌ನಲ್ಲಿ ವರ್ಕೌಟ್‌ ಮಾಡ್ತಿದ್ದೀನಿ. ನವೆಂಬರ್‌ನಿಂದ ಶೂಟಿಂಗ್‌ ಶುರುವಾಗಲಿದೆ. ಅಷ್ಟೊತ್ತಿಗೆ ರೆಡಿ ಆಗಬೇಕಿದೆ.

* ಉಪೇಂದ್ರ ಜೊತೆ ವಯಸ್ಸಿನ ಅಂತರ ಜಾಸ್ತಿ ಆಗಿದೆ ಅನಿಸಲಿಲ್ವಾ?
ಈ ಪ್ರಶ್ನೆಗೆ ಉತ್ತರ ಸ್ಕ್ರೀನ್‌ ಮೇಲೇ ಸಿಗುತ್ತೆ. ನಮ್ಮಿಬ್ಬರ ಪಾತ್ರಗಳೇ ಆ ರೀತಿ ಇವೆ. ಹಾಗೆಂದು ನಾವಿಬ್ಬರೂ ಜೋಡಿಯಾಗಿಯೇ ಇರ್ತೀವಿ. ಆದರೆ ವಯಸ್ಸಿನ ಅಂತರ ಅನ್ನೋದು ಕೌಂಟ್‌ ಆಗೋದಿಲ್ಲ.

* ಉಪೇಂದ್ರ ಸಿನಿಮಾಗಳನ್ನು ನೋಡಿದ್ದೀರ?
ಖಂಡಿತಾ. ನಾನವರ ದೊಡ್ಡ ಫ್ಯಾನ್‌. ನಾನು ಈ ಸಿನಿಮಾ ಒಪ್ಪಿಕೊಳ್ಳೋದಕ್ಕೆ ಅವರೂ ಮುಖ್ಯ ಕಾರಣ. ಕ್ರಿಯೇಟಿವಿಟಿಗೆ ಇನ್ನೊಂದು ಹೆಸರಿನಂತಿರುವ ‘ಉಪೇಂದ್ರ ಸ್ಟೈಲ್‌’ನ ಸಿನಿಮಾಕ್ಕೆ ನಾಯಕಿ ಆಗ್ತಿದ್ದೀನಿ ಅನ್ನೋದೇ ನನಗೆ ಹೆಮ್ಮೆ. ಆದರೆ ಇಂಥಾ ಕಥೆಯಲ್ಲಿ, ಪಾತ್ರದಲ್ಲಿ ಅವರು ಈ ಹಿಂದೆ ಕಾಣಿಸಿಕೊಂಡಿಲ್ಲ. ನನ್ನ ಪಾತ್ರವೂ ಅವರ ಈ ಹಿಂದಿನ ಸಿನಿಮಾಗಳ ಯಾವ ನಾಯಕಿ ಪಾತ್ರವನ್ನೂ ಹೋಲುವುದಿಲ್ಲ.

* ಬೇರೆ ಭಾಷೆ ಸಿನಿಮಾಗಳಿಂದ ಆಫರ್‌ ಬರ್ತಿಲ್ವಾ?
ಬರ್ತಿದೆ. ಶೀಘ್ರ ಬೇರೆ ಭಾಷೆಯಲ್ಲಿ ನನ್ನ ಹೊಸ ಸಿನಿಮಾ ಘೋಷಣೆಯಾಗಲಿದೆ. ಆದರೆ ಆ ಬಗ್ಗೆ ಈಗಲೇ ಗುಟ್ಟು ಬಿಟ್ಟುಕೊಡುವಂತಿಲ್ಲ.