Asianet Suvarna News Asianet Suvarna News

ರಂಗಭೂಮಿಯೇ ವರವಾಯ್ತು ಅಂತಾರೆ `ವರಲಕ್ಷ್ಮೀ' ಮಾಲಿನಿ ಪಿ. ರಾವ್

`ಕನ್ನಡತಿ' ಧಾರಾವಾಹಿಯಲ್ಲಿ ಮಾಲಿನಿ ರಾವ್ ಅವರ ನಟನೆಯ ಪಾತ್ರವೂ ಪ್ರಮುಖ ಸ್ಥಾನ ಪಡೆದಿದೆ. ರತ್ನಮಾಲಾ ಸ್ನೇಹಿತೆ ವರಲಕ್ಷ್ಮಿಯಾಗಿ ಗಮನ ಸೆಳೆದಿರುವ ಮಾಲಿನಿಯವರು ಬಣ್ಣದ ಲೋಕಕ್ಕೆ ಕಾಲಿಟ್ಟು 34 ವರ್ಷಗಳಾಗಿವೆ. ಅವರೊಂದಿಗೆ ನಡೆಸಿರುವ ಮಾತುಕತೆ ಇದು.
 

Actress Varalakshmi fame Malini rao interview
Author
Bengaluru, First Published Dec 20, 2020, 11:58 AM IST

ಶಶಿಕರ ಪಾತೂರು

ಮಾಲಿನಿ ರಾವ್ ಅವರು ಕನ್ನಡತಿ ಕಿರುತೆರೆ ಪ್ರೇಕ್ಷಕರಿಗೆ ವರಲಕ್ಷ್ಮಿಯಾಗಿ ಪರಿಚಿತೆ. ಆದರೆ ಅವರು `ಸಾಹಸ ಲಕ್ಷ್ಮಿಯರು' ಕಾಲದಿಂದಲೇ ಜನಪ್ರಿಯವಾದ ನಟಿ. ಇದುವರೆಗೆ ಸುಮಾರು ಎಪ್ಪತ್ತರಷ್ಟು ಧಾರಾವಾಹಿಗಳ ಅಸಂಖ್ಯಾತ ಕಂತುಗಳಲ್ಲಿ ಕಾಣಿಸಿರುವ ಈ ಹಿರಿಯ ಪ್ರತಿಭೆ ವಯಸ್ಸಿನಲ್ಲಿ ಕಿರಿಯರೇ ಹೌದು. ಬಾಲ್ಯದಿಂದಲೇ ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡ ಮಾಲಿನಿಯವರಿಗೆ ಇನ್ನಷ್ಟು ಸಾಧಿಸುವ ಬಗ್ಗೆ ಕನಸುಗಳಿವೆ. ಅವೆಲ್ಲದರ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜೊತೆ ಹಂಚಿಕೊಂಡಿದ್ದಾರೆ.

ಕನ್ನಡತಿಯ `ಸ್ಪಾನರ್ ಶಿವ' ಮಹೇಶ್

ರಂಗಭೂಮಿ ಜೊತೆಗಿನ ನಿಮ್ಮ ನಂಟು ಶುರುವಾಗಿದ್ದು ಹೇಗೆ?
ಗುಬ್ಬಿ ವೀರಣ್ಣನವರ ಸಂಸ್ಥೆಗೂ ಮೊದಲೇ ಇದ್ದ ವರದಾಚಾರ್ ಅವರ ನಾಟಕ ಕಂಪೆನಿಯಲ್ಲಿ ನನ್ನ ತಂದೆಯವರಿದ್ದರು. ಅವರ ಹೆಸರ ಮಾಧವ ರಾವ್ ಪರಾಕಿ. ಅವರು ನನ್ನನ್ನು ಏಳು ವರ್ಷದ ಮಗುವಾಗಿದ್ದಾಗಲೇ ವೇದಿಕೆ ಹತ್ತಿಸಿದ್ದರು. ನಾನು ಭರತನಾಟ್ಯದ ಬೇಸಿಕ್ ಕಲಿತಿದ್ದೇನೆ. ಕೊಳಲು  ನುಡಿಸಬಲ್ಲೆ. ಬಾಲ್ಯದಲ್ಲಿ ಮಿಮಿಕ್ರಿ, ಕ್ರಾಫ್ಟ್ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದೆ. SSLC ಮುಗಿಯುತ್ತಿದ್ದಂತೆ ನಾಟಕ ನಿರ್ದೇಶಿಸುತ್ತಿದ್ದೆ. ಹಾಗಾಗಿ ಬಣ್ಣದ ನಂಟು ರಕ್ತದಲ್ಲೇ ಉಂಟು ಎನ್ನಬಹುದು.

ಕಿರುತೆರೆಯ ಪ್ರವೇಶ ಯಾವಾಗ ಆಯಿತು? 
ನಿಜ ಹೇಳಬೇಕೆಂದರೆ ರಂಗಭೂಮಿ, ಕಿರುತೆರೆಗೆ ಮೊದಲೇ ನಾನು ಬಾಲನಟಿಯಾಗಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದೆ! ಕಿರುತೆರೆ ವಿಚಾರಕ್ಕೆ ಬಂದರೆ ಮೆಗಾ ಸೀರಿಯಲ್ಸ್‌ ಶುರುವಾಗುವ ಮೊದಲೇ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ `ದೊಡ್ಡ ಮನೆ' ಎನ್ನುವ ಧಾರಾವಾಹಿಯಲ್ಲಿ  ನನ್ನ ರಂಗಪ್ರವೇಶವಾಯಿತು. ಅದು ಸುಮಾರು 36 ಕಂತುಗಳು ಪ್ರಸಾರವಾಗಿತ್ತು. ಅದರ ಬಳಿಕ ಹಲವಾರು ಮೆಗಾ ಧಾರಾವಾಹಿಗಳಲ್ಲಿ ನಟಿಸಿದೆ.

ಚಿತ್ಕಳಾ ಈಗ ಕನ್ನಡತಿಯ ರತ್ನಮಾಲ

ಆನಂತರ `ಬಿದಿಗೆ ಚಂದ್ರಮ', `ಕವಲು ದಾರಿ', `ಬಣ್ಣ' ಹೀಗೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದೆ. ಅವುಗಳ ನಡುವೆ ರಂಗಭೂಮಿ ನಾಟಕಗಳು, ಟೆಲಿಫಿಲ್ಮ್ಸ್‌ಗಳಲ್ಲಿಯೂ ನಟಿಸುತ್ತಿದ್ದೆ. ಆದರೆ ನನಗೆ ಇವೆಲ್ಲವುಗಳಿಗೆ ರಂಗಭೂಮಿಯದೇ ಹಿನ್ನೆಲೆ ಇತ್ತು. ಬಿ ಸುರೇಶ್, ಎ ಎಸ್ ಮೂರ್ತಿಯವರ `ಅಭಿನಯ ತರಂಗ', `ಶಶಿ ಕಲಾವಿದರು', `ಸಂಧ್ಯಾ ಕಲಾವಿದರು', `ಮೈಕೋ ಲಲಿತ' ಕಲಾತಂಡದಲ್ಲಿಯೂ ಕೆಲಸ ಮಾಡಿದ್ದೆ.

ಹಾಗಾದರೆ ನೀವು ಕಿರುತೆರೆಗೆ ಹೆಚ್ಚು ಗಮನ ನೀಡಲು ಕಾರಣವೇನು?
ನನ್ನ ಪತಿ ಪ್ರಸನ್ನ ರಾವ್ ಕೂಡ ರಂಗಭೂಮಿ ಕಲಾವಿದರು. ಮಾವ, ಬಾವನವರು ಕೂಡ ರಂಗಭೂಮಿಯವರೇ. `ಸಿರಿ ಸಂಪಿಗೆ' ಎನ್ನುವ ನಾಟಕದಲ್ಲಿ ಪ್ರಸನ್ನರ ಭೇಟಿಯಾಗಿ, ಪರಿಚಯ ಪ್ರೇಮವಾಗಿ ವಿವಾಹವಾಯಿತು. ಹಾಗಾಗಿ ಇಬ್ಬರದೂ ರಂಗಭೂಮಿ ಕುಟುಂಬವಾದ ಕಾರಣ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿರಲಿಲ್ಲ. ಮದುವೆ ಬಳಿಕ ಇಬ್ಬರೂ ರಂಗಭೂಮಿಯನ್ನಷ್ಟೇ ನಂಬಿದರೆ ಬದುಕು ಕಷ್ಟ ಎಂದು ಅರ್ಥ ಮಾಡಿಕೊಂಡು ಅವರು ಬೇರೆ ವೃತ್ತಿ ಆರಿಸಿಕೊಂಡರು.

ಕನ್ನಡತಿ ರಂಜನಿ ರಾಘವನ್ ಜೊತೆ ಮಾತುಕತೆ

ನಾನು ಸಿನಿಮಾ, ಸೀರಿಯಲ್ ಕಡೆಗೆ ಗಮನಹರಿಸಿದೆ. ಹಾಗಂತ ರಂಗಭೂಮಿ ನಂಟು ದೂರವಾಗಿಲ್ಲ. ಮದುವೆಯ ಬಳಿಕ ಮಗನ ಹೆಸರಲ್ಲಿ `ಶ್ರೀ ನಿನಾದ ಕಲಾ ಸಂಗಮ' ಎನ್ನುವ ಸಂಸ್ಥೆ ಹುಟ್ಟು ಹಾಕಿದೆ. ಅದರ ಮೂಲಕ ಭರತನಾಟ್ಯ, ಸುಗಮ ಸಂಗೀತ ಸೇರಿದಂತೆ ಮಕ್ಕಳಿಗೆ ಥಿಯೇಟರ್ ಕ್ಲಾಸ್ ನೀಡುತ್ತಿದ್ದೆ. ಕೊರೊನಾ ಲಾಕ್ಡೌನ್ ಬಳಿಕ ಪ್ರಸ್ತುತ ಎರಡು ಧಾರಾವಾಹಿಗಳಲ್ಲಿ ಮಾತ್ರ ನಟಿಸುತ್ತಿದ್ದೇನೆ. ರಂಗಭೂಮಿಯ ಕನಸು ಮುಂದುವರಿದಿದೆ. 

`ಕನ್ನಡತಿ'ಯ ವರಲಕ್ಷ್ಮೀ ಪಾತ್ರದ ವಿಶೇಷತೆ ಏನು?
ಕನ್ನಡತಿ ಧಾರಾವಾಹಿಯಲ್ಲಿನ ಪ್ರತಿಯೊಂದು ಪಾತ್ರಗಳನ್ನು ಕೂಡ ಪ್ರೇಕ್ಷಕರು ಮೆಚ್ಚುತ್ತಿರುವುದೇ ವಿಶೇಷತೆ. ಅದಕ್ಕೆ ತಂಡ ಮತ್ತು ನಿರ್ದೇಶಕ ಯಶವಂತ್ ಅವರು ಕಾರಣ. ನನ್ನ ವೃತ್ತಿ ಬದುಕಿನ ಇಷ್ಟೊಂದು ಧಾರಾವಾಹಿಗಳಲ್ಲಿ ಈ ಮಟ್ಟಕ್ಕೆ ಹೆಸರು ದೊರಕಿದ್ದು ಬೆರಳೆಣಿಕೆಯ ಸಂದರ್ಭದಲ್ಲಿ ಮಾತ್ರ. ಈ ಹಿಂದೆ ಫಣಿರಾಮಚಂದ್ರ ಅವರವ `ಸಾಹಸ ಲಕ್ಷ್ಮಿಯರು' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿದ್ದ ನಾನು ಮತ್ತು ಲಕ್ಷ್ಮೀ ನಾಡಗೌಡ ಜಯನಗರ ನಾಲ್ಕನೇ ಬ್ಲಾಕಲ್ಲಿ ಯಾವುದೋ ಪರ್ಚೇಸ್‌ಗೆಂದು ಹೋಗಿದ್ದಾಗ ಜನ ಸೇರಿ ಅಲ್ಲಿಂದ ಓಡಿಸಿದ್ದರು. ಯಾಕೆಂದರೆ ನಮ್ಮ ಪಾತ್ರಗಳು ಆ ಮಟ್ಟಕ್ಕೆ ಅವರ ಮೇಲೆ ಪ್ರಭಾವ ಬೀರಿದ್ದವು. ಟಿಎನ್ ಸೀತಾರಾಮ್ ಅವರ `ಮುಕ್ತ' ಧಾರಾವಾಹಿಯ ರಮಾಮಣಿಯ ಪಾತ್ರವನ್ನು ಕೂಡ ಇಂದಿಗೂ ತುಂಬ ಜನ ಗುರುತಿಸುತ್ತಾರೆ. ಇವುಗಳೊಂದಿಗೆ ಬಣ್ಣ, ಪರಂಪರೆ ಸೇರಿದಂತೆ ಹಲವಾರು ಧಾರಾವಾಹಿಗಳು ನನಗೆ ಮರೆಯಲಾಗದ ಅನುಭವ ನೀಡಿದೆ. ಇದೀಗ ವರಲಕ್ಷ್ಮೀ ಪಾತ್ರದ ಮೂಲಕವೇ ಜನತೆ ನನ್ನನ್ನು ಗುರುತಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಕನ್ನಡತಿ ತಂಡದ ಬಗ್ಗೆ ಕೃತಜ್ಞತೆಯಿದೆ.

Follow Us:
Download App:
  • android
  • ios