ನಮ್ಮನ್ನಗಲಿದ ಗಂಗಾಧರಯ್ಯನ ನೆನಪಲ್ಲಿ ವಿಜಯ ಸೂರ್ಯ
ಶುಕ್ರವಾರ ರಾತ್ರಿ ನಮ್ಮನ್ನು ಅಗಲಿದ ಹಿರಿಯ ನಟ ಹುಲಿವಾನ್ ಗಂಗಾಧರಯ್ಯ ಕೊನೆಯದಾಗಿ ನಟಿಸುತ್ತಿದ್ದ ಧಾರಾವಾಹಿಯ ಹೆಸರು `ಪ್ರೇಮಲೋಕ'. ಅದರಲ್ಲಿ ನಾಯಕರಾಗಿ ನಟಿಸುತ್ತಿರುವವರು `ಅಗ್ನಿಸಾಕ್ಷಿ' ಖ್ಯಾತಿಯ ವಿಜಯ ಸೂರ್ಯ. ಗಂಗಾಧರಯ್ಯನ ಸಾವು ವಿಜಯ್ ಸೂರ್ಯ ಅವರಿಗೂ ಆಘಾತ ನೀಡಿದೆ. ಚಿತ್ರೀಕರಣದ ಸಂದರ್ಭದಲ್ಲಿ ಅವರ ಜತೆಗಿನ ಆತ್ಮೀಯತೆ ಹೇಗಿತ್ತು ಎನ್ನುವ ಬಗ್ಗೆ ಸ್ವತಃ ವಿಜಯ ಸೂರ್ಯ ಅವರೇ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.
- ಶಶಿಕರ ಪಾತೂರು
ಪ್ರೇಮಲೋಕದಲ್ಲಿ ನಿಮ್ಮ ಮತ್ತು ಗಂಗಾಧರಯ್ಯ ಅವರ ನಡುವಿನ ಸಂಬಂಧವೇನು?
ನಾನು ಧಾರಾವಾಹಿಯಲ್ಲಿ ಅವರನ್ನು ತಾತ ಎಂದು ಕರೆಯುತ್ತಿರುತ್ತೇನೆ. ಆದರೆ ಕತೆಯ ಪ್ರಕಾರ ನನಗೆ ಅವರೊಂದಿಗೆ ಸಂಬಂಧವೇ ಇರುವುದಿಲ್ಲ. ಧಾರಾವಾಹಿಯಲ್ಲಿ ಸುಧೀರ್ ಎನ್ನುವ ಪಾತ್ರವಿದೆ. ಅದನ್ನು ಶಿಶಿರ್ ಶಾಸ್ತ್ರಿ ಮಾಡಿದ್ದಾರೆ. ನಾನು ನಾನೇ ಸುಧೀರ್ ಎಂದು ಹೇಳಿ ಅವರ ಮನೆಗೆ ಹೋಗುತ್ತೇನೆ. ಹಾಗಾಗಿ ನಾನು ಅವರನ್ನು ತಾತ ಎಂದು ಕರೆಯುತ್ತೇನೆ. ಹಾಗೆ ನೋಡಿದರೆ ನಾನು ಅವರೊಂದಿಗೆ ನಟಿಸುತ್ತಿರುವ ಪ್ರಥಮ ಧಾರಾವಾಹಿ ಇದು. ದುರಾದೃಷ್ಟವಶಾತ್ ಕೊನೆಯ ಧಾರಾವಾಹಿ ಕೂಡ ಇದೇ ಆಗಿಬಿಟ್ಟಿದೆ. ಲಾಕ್ಡೌನ್ ಆದ ಬಳಿಕ ಅವರ ಜತೆಗೆ ನನ್ನ ದೃಶ್ಯದ ಚಿತ್ರೀಕರಣ ನಡೆಸಿದ್ದು ಒಂದೇ ದಿನ. ಅದು ಒಂದು ಕಂಟಿನ್ಯುಟಿ ದೃಶ್ಯಕ್ಕಾಗಿ ಮಾತ್ರ. ಅದರ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಆಗಿತ್ತು. ನಿಜದಲ್ಲಿ ನೋಡಿದರೆ ಅವರಿಗೆ ತುಂಬಾನೇ ಆಸಕ್ತಿ ಇತ್ತು ಶೂಟಿಂಗ್ ನಲ್ಲಿ ನಿರಂತರವಾಗಿ ಪಾಲ್ಗೊಳ್ಳಬೇಕು ಅಂತ. ಆದರೆ ಪ್ರೊಡಕ್ಷನ್ ಕಡೆಯಿಂದಲೇ ಈಗ ಬೇಡ, ಸೇಫ್ ಅಲ್ಲ ಎಂದು ಹೇಳಿದ್ದರು. ಅದು ಕಳೆದ ತಿಂಗಳು ಶೂಟ್ ಮಾಡಿರುವಂಥದ್ದು.
ಚಿತ್ರೀಕರಣದ ವೇಳೆ ಸೆಟ್ಟಲ್ಲಿ ತೆಗೆದುಕೊಳ್ಳುತ್ತಿದ್ದ ಮುಂಜಾಗ್ರತೆಗಳು ಹೇಗಿದ್ದವು?
ಧಾರಾವಾಹಿಯ ತಂಡ ಸಾಕಷ್ಟು ಎಚ್ಚರಿಕೆ ವಹಿಸಿತ್ತು. ಸುಮಾರು ಐವತ್ತು ಸಾವಿರ ಕೊಟ್ಟು, ಸೆಟ್ಟಲ್ಲಿಯೇ ಒಂದು ಸ್ಯಾನಿಟೈಸಿಂಗ್ ಮಷಿನ್ ತಂದಿರಿಸಲಾಗಿತ್ತು. ಅದರ ಮೂಲಕ ಎಲ್ಲರಿಗೂ ಪೂರ್ತಿ ದೇಹಕ್ಕೆ ಸ್ಪ್ರೇ ಮಾಡಲಾಗುತ್ತಿತ್ತು. ಕಾಲಿನಿಂತ ತಲೆಯ ವರೆಗೆ ಸ್ಪ್ರೇ ಮಾಡಿದ ಬಳಿಕವೂ ಸೆಟ್ ಒಳಗೆ ಪ್ರವೇಶಿಸುತ್ತಿದ್ದೆವು. ಆಮೇಲೆ ನನಗಂತೂ ನಾಯಕಿಯನ್ನು ಬಿಟ್ಟರೆ ಬೇರೆ ಯಾರ ಬಳಿಗೂ ತುಂಬ ಹತ್ತಿರ ಹೋಗಿ ಮಾತನಾಡಬೇಕಾದ ಸನ್ನಿವೇಶ ಇರಲಿಲ್ಲ. ತುಂಬ ಕಡಿಮೆ ಕಲಾವಿದರೆದ್ದೆವು. ಮೂರು ನಾಲ್ಕು ಜನಗಳು ಮಾತ್ರ. ತಂತ್ರಜ್ಞರು ಕೂಡ ಮಾಸ್ಕ್, ಗ್ಲೌಸ್ ಮೊದಲಾದವುಗಳನ್ನು ಬಳಸಿಕೊಂಡೇ ಎಚ್ಚರಿಕೆ ವಹಿಸಿದ್ದರು. ಹೀಗೆ ನಾವು ನೂರು ಪರ್ಸೆಂಟ್ ಎಚ್ಚರಿಕೆ ವಹಿಸಿದ್ದರೂ ವೈರಸ್ ಬಗ್ಗೆ ನಾವು ಹೇಳುವುದು ಕಷ್ಟ ತಾನೇ? ಹಾಗಾಗಿ ಅವರಿಗೆ ಕೊರೊನಾದಿಂದಾಗಿಯೇ ಸಾವಾಗಿದೆ ಎಂದು ತಿಳಿದಾಗ ನನಗೆ ಮಗು ನೆನಪಾಯಿತು. ಯಾಕೆಂದರೆ ನಾನು ಒಂದು ವೇಳೆ ನನಗೆ ಇಮ್ಯುನಿಟಿ ಪವರಲ್ಲಿ ಕೊರೊನಾ ಲಕ್ಷಣಗಳಿಂದ ಪಾರಾಗಿದ್ದರೂ, ಮಗುವಿನ ಗತಿಯೇನು ಎಂದು ಭಯವಾಯಿತು. ತಕ್ಷಣ ವೈದ್ಯರಿಗೆ ಫೋನ್ ಮಾಡಿದೆ. ಅವರು ಚಿತ್ರೀಕರಣ ನಡೆದು ಎಷ್ಟು ಸಮಯ ಆಯಿತು ಎಂದು ಕೇಳಿದ್ರು. ಆಮೇಲೇನಾದರೂ ಅನಾರೋಗ್ಯದ ಲಕ್ಷಣ ಕಾಣಿಸಿದೆಯಾ ಎಂದು ವಿಚಾರಿಸಿದರು. ಇಲ್ಲ ಎಂದಾಗ ಚಿಂತೆ ಮಾಡಬೇಕಿಲ್ಲ ಎಂದರು. ಚಿತ್ರೀಕರಣ ನಡೆದು ಈಗಾಗಲೇ ಇಪ್ಪತ್ತು ದಿನಗಳಾಗಿವೆ. ಆದರೂ ಮುಂದಿನ ವಾರ ಒಮ್ಮೆ ಬನ್ನಿ ಎಂದರು. ಇಲ್ಲಿ ಕಷಾಯ ಎಲ್ಲ ಕುಡಿಯುತ್ತಿರುತ್ತೇನೆ. ಹಾಗೆ ನೋಡಿದರೆ ಸೆಟ್ಟಲ್ಲಿ ಕೂಡ ಕಷಾಯ ಕೊಡುತ್ತಿದ್ದರು. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೆವು. ಆದರೆ ಹೇಗೆ ಬಂತು ಅಂತಾನೇ ಗೊತ್ತಾಗುತ್ತಿಲ್ಲ.
ಹಿರಿಯ ನಟ ಹುಲಿವಾನ್ ಗಂಗಾಧರಯ್ಯ ಇನ್ನಿಲ್ಲ
ಸೆಟ್ಟಲ್ಲಿ ನಿಮ್ಮ ಮತ್ತು ಅವರ ನಡುವಿನ ಬಾಂಧವ್ಯ ಹೇಗಿತ್ತು?
ನನಗಂತೂ ಒಂದೊಂದು ಧಾರಾವಾಹಿ ನಾಲ್ಕು ವರ್ಷ ಎಲ್ಲ ಮುಂದುವರಿದಾಗ ಕೆಲವೊಮ್ಮೆ `ಅಯ್ಯೋ' ಅನಿಸಿದ್ದು ಇದೆ. ಆದರೆ ಅವರು ಹಾಗಿರಲಿಲ್ಲ, ಪ್ರತಿ ದಿನವೂ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿದ್ದರು. ಕಾಮಿಡಿಯಾಗಿ ನಾವು ಫೊಟೊಗಳನ್ನು ತೆಗೆಯುತ್ತಿದ್ದೆವು. ಒಮ್ಮೆನಾನು ಮಲಗಿದ್ದಾಗ ಅವರು ಫೊಟೋ ತೆಗೆದಿದ್ದರು. ಮತ್ತೊಮ್ಮೆ ಅವರು ಮಲಗಿದ್ದಾಗ ನಾನು ಹೋಗಿ ಫೊಟೊ ತೆಗೆದಿದ್ದೆ. ಅದು ತಮಾಷೆಯ ಫೊಟೊ. ಇತ್ತೀಚೆಗೂ ಕೂಡ ಅವರನ್ನು ಕರೆಸಿದ ಬಳಿಕ ಚಿತ್ರೀಕರಣಕ್ಕೆ ತಡವಾಗುತ್ತಿದ್ದರೂ ಏನನ್ನೂ ಹೇಳುತ್ತಿರಲಿಲ್ಲ. ಒಂದೆರಡು ಗಂಟೆಗಳೇ ಕಾಯಬೇಕಾಗಿ ಬಂದಾಗ ಯಾವತ್ತೂ ಬೇಜಾರು ಮಾಡಿಕೊಂಡವರೇ ಅಲ್ಲ, ಇನ್ನಷ್ಟು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಲಾಕ್ಡೌನ್ ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಾದರೆ ಅವರ ವಯಸ್ಸಿನ ಬಗ್ಗೆಯೂ ನಾವು ಚರ್ಚೆಮಾಡಿದ್ದೆವು. ಆಗ ಅವರು ಕೇಳಿದ್ದು, "ಯಾಕೆ ನನ್ನ ವಯಸ್ಸಿನವರು ಯಾರೂ ಕೆಲಸ ಮಾಡಬಾರದ?" ಎಂದು ಕೇಳುತ್ತಿದ್ದರು. ಈಗ ನಾವು ಏನನ್ನೂ ಹೇಳುವುದು ತಪ್ಪಾಗುತ್ತೆ. ಯಾಕೆಂದರೆ ಈ ವಯಸ್ಸಿನಲ್ಲಿ ಕೂಡ ಅವರಿಗೆ ನಟನೆಯ ಬಗ್ಗೆ ತುಂಬ ಆಸಕ್ತಿ ಇತ್ತು. ಲಾಕ್ಡೌನ್ ಮೊದಲು ಕೂಡ ಚಿತ್ರಿಕರಣದ ವೇಳೆ ಅವರಿಗೆ ಉಸಿರಾಟದ ತೊಂದರೆ ಆಗಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು. ಆಗಲೇ ರಿಕವರ್ ಕೂಡ ಆಗಿದ್ದರು. ಅವರು ಹೇಳುತ್ತಿದ್ದರು, 'ಇದು ನನಗೆ ದೇವರ ಆಶೀರ್ವಾದವಾಗಿ ಹೆಚ್ಚುವರಿ ದಿನಗಳು' ಎಂದು. ಅಂದರೆ ಅವರಿಗೆ ಆರೋಗ್ಯದ ಇಶ್ಯು ಮೊದಲೇ ಇತ್ತು. ಅದರ ಕಲ್ಪನೆಯೂ ಅವರಲ್ಲಿತ್ತು. ಅವರ ಆರೋಗ್ಯದ ಬಗ್ಗೆ ಆಗಿನಿಂದಲೇ ನನಗೆ ಭಯ ಇತ್ತು. ಹಾಗಾಗಿ ಇಂದಿನ ಸಾವು ಎನ್ನುವುದು ಅವರಿಗೂ, ನಮಗೂ ತೀರ ಅನಿರೀಕ್ಷಿತ ಸುದ್ದಿಯೇನೂ ಆಗಿರಲಿಲ್ಲ. ಬಹುಶಃ ಇಂದು ಸಮಯ ಬಂತು, ಭಗವಂತ ಕರೆಸಿಕೊಂಡಿದ್ದಾನೆ. ಒಬ್ಬ ಒಳ್ಳೆಯ ಕಲಾವಿದನನ್ನು ಕಳೆದುಕೊಂಡಿದ್ದೇವೆ.