Asianet Suvarna News Asianet Suvarna News

'ನರಸಿ’ ಪಾತ್ರದ ಬಳಿಕ ಅಶ್ವಿನ್ ರನ್ನು ಅರಸಿ ಬರುತ್ತಿವೆ ಅವಕಾಶಗಳು!

ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ `ಅವನೇ ಶ್ರೀಮನ್ನಾರಾಯಣ’ ಕನ್ನಡದ ಹಲವು ಕಲಾವಿದರನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದರಲ್ಲಿ ಕೂಡ ನರಸಿ ಪಾತ್ರದಲ್ಲಿ ಕಾಣಿಸಿಕೊಂಡ ಅಶ್ವಿನ್ ಹಾಸನ್ ನಟನೆ ವ್ಯಾಪಕವಾಗಿ ಪ್ರೇಕ್ಷಕರ ಪ್ರಶಂಸೆಗೆ ಒಳಗಾಯಿತು. `ನರಸಿ' ಎನ್ನುವ ಒಂದು ಪಾತ್ರದಿಂದಾಗಿ ಹೊಸ ಅವಕಾಶಗಳು ಅವರನ್ನು ಅರಸಿ ಬರತೊಡಗಿವೆ. ಅಶ್ವಿನ್ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್  ನಡೆಸಿರುವ ಮಾತುಕತೆ ಇದು.
 

Actor Ashwin Hassan share new project plans Exclusive interview
Author
Bangalore, First Published Apr 2, 2020, 4:03 PM IST
  • Facebook
  • Twitter
  • Whatsapp

ಕನ್ನಡದಲ್ಲಿ ಖಳನಟರ ಕೊರತೆ ಇದೆ ಎನ್ನುವುದು ಸಿನಿಮಾ ಮಾಡುವವರಿಗೆ ಮಾತ್ರವಲ್ಲ, ನೋಡುವವರಿಗೂ ಅನಿಸುವ ವಿಚಾರ. ಯಾಕೆಂದರೆ ಸ್ಟಾರ್ ಸಿನಿಮಾ ಎಂದೊಡನೆ ವಿಲನ್‌ಗಳನ್ನು ಪರಭಾಷೆಯಿಂದ ಕರೆತರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ `ಅವನೇ ಶ್ರೀಮನ್ನಾರಾಯಣ’ ಕನ್ನಡದಲ್ಲಿ ನಾಯಕಿಯನ್ನು ಹೊರತುಪಡಿಸಿ ಉಳಿದವರೆಲ್ಲ ಕನ್ನಡದ ಕಲಾವಿದರೇ ಆಗಿದ್ದರು. ಅದರಲ್ಲಿ ಕೂಡ ನರಸಿ ಪಾತ್ರದಲ್ಲಿ ಕಾಣಿಸಿಕೊಂಡ ಅಶ್ವಿನ್ ಹಾಸನ್ ನಟನೆ ಪ್ರೇಕ್ಷಕರ ಪ್ರಶಂಸೆಗೆ ಒಳಗಾಯಿತು. ನರಸಿ ಎನ್ನುವ ಒಂದು ಪಾತ್ರದಿಂದಾಗಿ ಹೊಸ ಅವಕಾಶಗಳು ಅವರನ್ನು ಅರಸಿ ಬರತೊಡಗಿವೆ. ಅಶ್ವಿನ್ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್  ನಡೆಸಿರುವ ಮಾತುಕತೆ ಇದು.

- ಶಶಿಕರ ಪಾತೂರು

ನಟನಾ ಕ್ಷೇತ್ರಕ್ಕೆ ನಿಮ್ಮ ಪ್ರವೇಶವಾಗಿದ್ದು ಹೇಗೆ?
ನಾನು ಮಾಡಿದ್ದು, ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ. ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸಿದ್ದರೂ, ಸಿನಿಮಾ ಕಲಾವಿದನಾಗುವ ಕನಸು ಇರಲಿಲ್ಲ.ಆದರೆ ಸುಮಾರು ಹದಿನೈದು ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದೆ.  ಆದರೆ ಆಗ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು ಎನ್ನುವ ಆಸೆಯೂ ಇತ್ತು. ಸ್ಟಾರ್ ನಟರ ವಿಚಾರಕ್ಕೆ ಬಂದರೆ ಅಣ್ಣಾವ್ರಿಂದ ಹಿಡಿದು ಪ್ರತಿಯೊಬ್ಬರೂ ಇಷ್ಟವಾಗುತ್ತಾರೆ. ಆದರೆ ನನ್ನ ಮೆಚ್ಚಿನ ಕಲಾವಿದರ ವಿಚಾರಕ್ಕೆ ಬಂದಾಗ ಅನಂತನಾಗ್ ಮತ್ತು ಪ್ರಕಾಶ್ ರೈ ಎಂದರೆ ನನಗೆ ಇಷ್ಟ. ಅವರ ಹಿನ್ನೆಲೆ ರಂಗಭೂಮಿ ಇದ್ದ ಕಾರಣ ನನಗೂ ರಂಗಭೂಮಿಗೆ ಸೇರುವ ಆಸೆ ಇತ್ತು. ಆದರೆ ಮನೆಯಲ್ಲಿ ಅಮ್ಮ, ಚಿಕ್ಕಮ್ಮ ಸಂಗೀತ ಕಲಿತಿದ್ದರೂ ಸಹ, ಯಾರೂ ಕಲಾರಂಗವನ್ನು ವೃತ್ತಿಯಾಗಿ ಸ್ವೀಕರಿಸಿದವರು ಇರಲಿಲ್ಲ. ಹಾಗಾಗಿ ಪ್ರೋತ್ಸಾಹ ಅಷ್ಟಕ್ಕಷ್ಟೇ ಇತ್ತು. ನಿರ್ದೇಶಕ ವಿನುಬಳಂಜ ಅವರ ಪರಿಚಯದ ಮೂಲಕ `ಕಲಾಗಂಗೋತ್ರಿ’ ನಾಟಕ ತಂಡಕ್ಕೆ ಸೇರಿಕೊಂಡೆ. ಜತೆಗೆ ಕೆಲಸದಲ್ಲಿಯೂ ಇದ್ದೆ. ಹಾಗೆ ಧಾರಾವಾಹಿ ಕ್ಷೇತ್ರಕ್ಕೂ ಕಾಲಿಟ್ಟೆ. ಈಗ ಸಿನಿಮಾದಲ್ಲಿದ್ದೀನಿ.

ರಂಗಭೂಮಿಗೆ ರಂಗಭೂಮಿಯೇ ಸಾಟಿ ಎಂದ ಪ್ರಮೋದ್ ಶೆಟ್ಟಿ

ಹದಿನೈದು ವರ್ಷಗಳಲ್ಲಿ ಅವಕಾಶಕ್ಕಾಗಿ ಕಷ್ಟ ಪಟ್ಟ ಸಂದರ್ಭಗಳಿವೆಯೇ?
ತುಂಬ ಸಮಯ ನನಗೆ ನಟನೆಯನ್ನು ನಂಬಿ ಜೀವನ ನಡೆಸಬಹುದು ಎನ್ನುವ ಬಗ್ಗೆ ಧೈರ್ಯವೇ ಇರಲಿಲ್ಲ! ನಾಟಕದಲ್ಲಿ ನನ್ನ ನಟನೆ ನೋಡಿ `ಆಪರೇಶನ್ ಅಂಕುಶ’  ಎನ್ನುವ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಬಳಿಕ ದುನಿಯಾ ರಶ್ಮಿಯವರ ಎರಡನೇ ಚಿತ್ರ `ಮಂದಾಕಿನಿ’ಯಲ್ಲಿ ಸಹನಾಯಕನಾಗಿ ನಟಿಸುವ ಅವಕಾಶ ಲಭಿಸಿತು. ಇದರ ನಡುವೆ ಇಂಜಿನಿಯರ್ ಆಗಿ ಕೆಲಸ ಮಾಡುತ್ತಲೇ ಇದ್ದೆ. ಕೆಲಸದ ನಿಮಿತ್ತ ಒಂದು ವರ್ಷ ಫ್ರಾನ್ಸ್‌ಗೂ ಹೋಗಿ ಬಂದೆ! ಬಂದ ಬಳಿಕ `ಪಾಸಿಟಿವ್’ ಎನ್ನುವ ಶಾರ್ಟ್ ಫಿಲ್ಮ್ ಮಾಡ್ದೆ. ನಾಟಕ ಕೂಡ ಮಾಡುತ್ತಿದ್ದೆ. ಆದರೆ ಕ್ಯಾಮೆರಾ ಮುಂದಿನ ಯಾವ ಅವಕಾಶಗಳು ನಿರಂತರವಾಗಿ ಇರಲಿಲ್ಲ. ಇಂಥ ಸಂದರ್ಭದಲ್ಲಿ `ಪಲ್ಲವಿ ಅನುಪಲ್ಲವಿ’ ಧಾರಾವಾಹಿಯಲ್ಲಿ ನಟಿಸುವ ಆಹ್ವಾನ ಬಂತು. ಆದರೆ ನನಗೆ ಕೆಲಸ ಬಿಡಲು ಮನಸು ಇರಲಿಲ್ಲ. ಅದೃಷ್ಟಕ್ಕೆ ಆಫೀಸಲ್ಲಿ ನೈಟ್ ಶಿಫ್ಟ್ ಮಾಡುವ ಅವಕಾಶ ಸಿಕ್ಕ ಕಾರಣ, ರಾತ್ರಿ ಕಚೇರಿಯ ಕೆಲಸ ಮಾಡಿ ಬೆಳಿಗ್ಗೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೆ. ಆ ಡೆಡಿಕೇಶನ್ ಗೆ `ಬೆಸ್ಟ್ ವಿಲನ್’ ಪ್ರಶಸ್ತಿ ಸಿಕ್ಕಿತು.  ಆನಂತರ ಅನಂತನಾಗ್ ಅವರೊಂದಿಗೆ `ಚಿಟ್ಟೆ ಹೆಜ್ಜೆ’ಯಲ್ಲಿ ನಟಿಸುವ ಅವಕಾಶ ದೊರೆಯಿತು. ಬಳಿಕ  `ಲವಲವಿಕೆ’ಯಲ್ಲಿಯೂ ಅಭಿನಯಿಸಿದೆ. ವೃತ್ತಿ ಬದುಕಿನಲ್ಲಿ ಕೂಡ ಸ್ವಲ್ಪ ಲವಲವಿಕೆ ಬಂದಿತು.

ಧಾರಾವಾಹಿಯಿಂದ ಸಿನಿಮಾ ಸೇರಿಕೊಂಡಾಗ ಆದ ಅನುಭವ ಹೇಗಿತ್ತು?
ಧಾರಾವಾಹಿಯ ಅಭಿನಯದಿಂದಾಗಿಯೇ ಛಾಯಾಗ್ರಾಹಕ ಕೃಷ್ಣ ಅವರು ತಮ್ಮ ನಿರ್ದೇಶನದ `ಹೆಬ್ಬುಲಿ’ ಚಿತ್ರದಲ್ಲಿ ಕರ್ಪೊರೇಟರ್ ರಂಗನಾಥ್ ಎನ್ನುವ ಖಳನ ಪಾತ್ರ ನೀಡಿದರು. ಬಳಿಕ `ಜಗ್ಗುದಾದ’ದಲ್ಲಿ ದರ್ಶನ್ ಸರ್ ಅವರ ಸ್ನೇಹಿತನ ಪಾತ್ರ, ಅಪ್ಪು ಸರ್ ಜತೆಗೆ `ರಾಜ್ ಕುಮಾರ’ ಸಿನಿಮಾದಲ್ಲಿನ ಪಾತ್ರ.. ಹೀಗೆ ಒಂದೇ ವರ್ಷದಲ್ಲಿ ಮೂವರು ಸ್ಟಾರ್ಸ್‌ ಜತಗೆ ನಟಿಸುವ ಅವಕಾಶ ದೊರಕಿದ್ದು ಮರೆಯಲಾಗದ ಅನುಭವ. ಆದರೆ ಆಮೇಲೆ ಕೂಡ ನನಗೆ ದೊಡ್ಡ ಅವಕಾಶಗಳು ಸಿಗಲಿಲ್ಲ ಎನ್ನುವುದು ವಿಪರ್ಯಾಸ. ಹಾಗಾಗಿ ನನಗೆ ಪಾತ್ರಗಳನ್ನು ಆಯ್ದುಕೊಳ್ಳುವ ಚಾನ್ಸ್ ಸಿಗಲಿಲ್ಲ. ಅಭಿನಯವೇ ವೃತ್ತಿ ಬದುಕು ಆಗಿರುವ ಕಾರಣ, ಸಿಕ್ಕ ಪಾತ್ರಗಳನ್ನೇ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ನನಗಿತ್ತು. ಇಂಥ ಸಂದರ್ಭದಲ್ಲಿ`ಅವನೇ ಶ್ರೀಮನ್ನಾರಾಯಣ’ ಸಿನಿಮಾ ನನಗೆ ದೊಡ್ಡಅವಕಾಶವನ್ನೇ ನೀಡಿತು.

ಬೆಳ್ಳಿ ಪರದೆ ಮಹಾರಾಣಿ ಈಗಿನ ಕನ್ನಡ ಚಿತ್ರಗಳ ಬಗ್ಗೆ ಏನು ಹೇಳ್ತಾರೆ?

'ಅವನೇ ಶ್ರಿಮನ್ನಾರಾಯಣ’ದಲ್ಲಿ ಅವಕಾಶ ಸಿಕ್ಕ ಘಟನೆಯ ಬಗ್ಗೆ ಹೇಳಿ

`ಅವನೇ ಶ್ರೀ ಮನ್ನಾರಾಯಣ’ ಚಿತ್ರ ತಂಡದಲ್ಲಿ ನನಗೆ ನಿರ್ದೇಶಕ ಸಚಿನ್ ಸರ್ ಪರಿಚಯವಿದ್ದರು. ಅವರ ಮೂಲಕ ಅವಕಾಶ ಸಿಗಬಹುದೇನೋ ಎನ್ನುವ ನಿರೀಕ್ಷೆಯಲ್ಲಿದ್ದೆ. ಅಷ್ಟರಲ್ಲಿ ಹೇಮಂತ್ ರಾವ್  ಅವರು  ರಕ್ಷಿತ್ ಸರ್ ಗೆ ನನ್ನ ಬಗ್ಗೆ ಹೇಳಿ ಶಿಫಾರಸ್ಸು ಮಾಡಿದ್ದರು. ನನಗೆ ಸಿಕ್ಕ ನರಸಿ ಪಾತ್ರಕ್ಕೆ ಜೀವ ತುಂಬಲು ಇನ್ನಿಲ್ಲದ ಪ್ರಯತ್ನ ಮಾಡಿದೆ. ನಿರ್ದೇಶಕರು ಸೇರಿದಂತೆ ಸೆಟ್‌ನಲ್ಲಿದ್ದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಪ್ರಮೋದ್ ಸರ್ ಹೀಗೆ ಪ್ರತಿಯೊಬ್ಬರು ಕೂಡ ನನ್ನ ನಟನೆಯ ಬಗ್ಗೆ ಪ್ರೋತ್ಸಾಹ ಮಾಡಿದವರೇ ಇದ್ದರು. ಅದು ನನಗೆ ಚಿತ್ರದೊಳಗೆ ಇನ್ನಷ್ಟು ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಅಷ್ಟು ದೊಡ್ಡ ಮಟ್ಟದ ಚಿತ್ರದಲ್ಲಿ ದೊಡ್ಡ ಕಲಾವಿದರ ಜತೆಗೆ ನನ್ನ ಪಾತ್ರಕ್ಕೆ ಉತ್ತಮ ಅವಕಾಶ ನೀಡಿರುವುದಕ್ಕೆ ನಾನು ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಲೇಬೇಕು.

ನಿಮ್ಮ ಯಾವೆಲ್ಲ ಚಿತ್ರಗಳು ಬಿಡುಗಡೆಗೆ ತಯಾರಾಗಿವೆ?

ಈಗ ಹೊಸ ಅವಕಾಶಗಳು ಬರುತ್ತಿವೆ. ಪುನೀತ್ ರಾಜ್ ಕುಮಾರ್ ಅವರ `ಯುವರತ್ನ’ದಲ್ಲಿ ನಟಿಸಿದ್ದೇನೆ. `ಜೇಮ್ಸ್’ನಲ್ಲಿ ಕೂಡ ಒಂದು ಪಾತ್ರ ಇದೆ ಎಂದು ನಿರ್ದೇಶಕರು ಹೇಳಿದ್ದಾರೆ. ರಕ್ಷಿತ್ ಸರ್ ಪ್ರೊಡಕ್ಷನ್ ನಲ್ಲೇ ಹೊಸ ಚಿತ್ರ ತಯಾರಾಗುತ್ತಿದೆ. ಅದರಲ್ಲಿಯೂ ಪಾತ್ರವಿರುವ ಬಗ್ಗೆ ಮಾತುಕತೆ ನಡೆದಿದೆ. ಇದೀಗ ನಾನು ನಟಿಸಿರುವ ಸುಮಾರು ಏಳು ಸಿನಿಮಾಗಳು ಬಿಡುಗಡೆಗೆ ಬಾಕಿ ಇವೆ. `ಆ ಒಂದು ನೋಟು’ ಎನ್ನುವ  ಚಿತ್ರದಲ್ಲಿ ಎರಡು ಸಾವಿರದ ನೋಟಿನ ಪಯಣದ ಕತೆ ಇದೆ. `ಫಸ್ಟ್ ರ್ಯಾಂಕ್ ರಾಜು’ ತಂಡದ `ಎಲ್ಲೋ ಬೋರ್ಡ್’ ಚಿತ್ರದಲ್ಲಿ ನಟಿಸಿದ್ದೇನೆ. ಇವಲ್ಲದೆ `ರಾಮಾರ್ಜುನ’, `ಕಡಲ ತೀರದ ಭಾರ್ಗವ’ ಮೊದಲಾದ ಸಿನಿಮಾಗಳು ಬಿಡುಗಡೆಗೆ ಬಾಕಿ ಇವೆ. ಒಟ್ಟಿನಲ್ಲಿ ಒಮ್ಮೆ ಕೊರೊನಾ ಸಮಸ್ಯೆ ದೂರವಾಗಿ ಲಾಕ್ಡೌನ್‌ ಮುಗಿದರೆ ಸಿನಿಮಾಗಳಲ್ಲಿ ಸಕ್ರಿಯವಾಗುವ ಸಂದರ್ಭ ಸಿಗಲಿದೆ.

Follow Us:
Download App:
  • android
  • ios