ರಂಗಭೂಮಿಗೆ ರಂಗಭೂಮಿಯೇ ಸಾಟಿ ಎಂದ ಪ್ರಮೋದ್ ಶೆಟ್ಟಿ

ಪ್ರಮೋದ್ ಶೆಟ್ಟಿಯವರು ತಮ್ಮ ಇಂದಿನ ಅಭಿನಯ ಆಸಕ್ತಿಯ ಹಿಂದೆ ಇರುವ ಮೂಲ ಸೆಲೆ ರಂಗಭೂಮಿ ಎಂದು ಹೇಳುವ ಮೂಲಕ ಇಂದಿನ `ವಿಶ್ವ ರಂಗಭೂಮಿ' ದಿನದಲ್ಲಿ ತಮ್ಮ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸಿದ್ದಾರೆ. ರಂಗಭೂಮಿ ಜನತೆಗಿನ ಅವರ ಸಂಬಂಧದ ಬಗ್ಗೆ ಇಲ್ಲಿ ಅವರು ಮಾತನಾಡಿದ್ದಾರೆ.

Pramod Shetty praises theater Art on World theater art

`ಉಳಿದವರು ಕಂಡಂತೆ' ಚಿತ್ರದ ಬಳಿಕ ಕನ್ನಡ ಸಿನಿಮಾ ಪ್ರೇಕ್ಷಕರ ನೆನಪಲ್ಲಿ ಉಳಿದವರು ಪ್ರಮೋದ್ ಶೆಟ್ಟಿ. ಯಾವುದೇ ಒಂದು ರೀತಿಯ ಪಾತ್ರಕ್ಕೆ ಬ್ರ್ಯಾಂಡ್ ಆಗಿ ಬಿಡಬಾರದು ಎನ್ನುವ ಮನೋಭಾವ ಶೆಟ್ಟರದ್ದು. ಹಾಗಾಗಿಯೇ ತಾವು ನಿರಾಕರಿಸಿದ ಪೊಲೀಸ್ ಪಾತ್ರಗಳೇ ಸುಮಾರು 25ರಷ್ಟು ಆಗಬಹುದು ಎನ್ನುತ್ತಾರೆ ಪ್ರಮೋದ್. ಹಾಗಾಗಿ ಪಾತ್ರಗಳ ಆಯ್ಕೆಗೆ ಸ್ವಾತಂತ್ರ್ಯ ಇದ್ದಾಗ ಮಾತ್ರ ಚಿತ್ರವನ್ನು ಒಪ್ಪಿಕೊಳ್ಳುತ್ತೇನೆ ಎನ್ನುವುದು ಇವರ ತರ್ಕ. ಅವೆಲ್ಲಕ್ಕೂ ಕಾರಣವಾಗಿರುವಂಥದ್ದು ತಮಗೆ ಸಿಕ್ಕಂಥ ರಂಗಭೂಮಿಯ ಅನುಭವ ಎನ್ನುವುದು ಪ್ರಮೋದ್ ಶೆಟ್ಟಿವರ ಅನಿಸಿಕೆ. ತಮ್ಮ ಇಂದಿನ ಅಭಿನಯ ಆಸಕ್ತಿಯ ಹಿಂದೆ ಇರುವ ಮೂಲ ಸೆಲೆ ರಂಗಭೂಮಿ ಎಂದು ಹೇಳುವ ಮೂಲಕ ಇಂದಿನ `ವಿಶ್ವ ರಂಗಭೂಮಿ' ದಿನದಲ್ಲಿ ತಮ್ಮ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ನಾಲ್ಕಾರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿರುವಾಗಲೇ ಕೊರೊನ ವೈರಸ್ ಭೀತಿಯಿಂದ ಪೂರ್ತಿ ದೇಶವೇ ಲೌಕ್‌ಡೌನ್ ಮಾಡಲಾಗಿದೆ. ಸದಾ ಚಟುವಟಿಕೆಯಲ್ಲಿ ನಿರತರಾಗಿದ್ದಂಥ ಪ್ರಮೋದ್ ಶೆಟ್ಟಿಯವರು ಈಗ ಏನು ಮಾಡುತ್ತಿದ್ದಾರೆ ಎನ್ನುವುದು ಸೇರಿದಂತೆ ಸಾಕಷ್ಟು ಸಂಗತಿಗಳನ್ನು ಸುವರ್ಣ ನ್ಯೂಸ್.ಡಾಮ್ ಜತೆಗೆ ಹಂಚಿಕೊಂಡಿದ್ದಾರೆ.  

-ಶಶಿಕರ ಪಾತೂರು

ವೈರಸ್‌ಗೆ ಹೆದರಿ ತವರಿಗೆ ವಾಪಾಸಾದವರ ಜತೆ ನೀವೇಕೆ ಹೋಗಿಲ್ಲ? ಭಯವಿಲ್ಲವೇ ?
ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರಿಗೆ ಮರಳಿದವರೆಲ್ಲ ಭಯದಿಂದಲೇ ಹೋಗಿದ್ದಾರೆ ಎನ್ನಲಾಗದು. ಕಚೇರಿಗೆ ಬಂದು ಸಹಿ ಮಾಡಬೇಕು ಎಂದಿದ್ದರೆ ಬೆಂಗಳೂರಲ್ಲೇ ಇರಬೇಕು. ಆದರೆ ಮನೆಯಿಂದಲೇ ಮಾಡುವ ಕೆಲಸವಾದರೆ ಇಲ್ಲಿ ಇದ್ದು ಯಾಕೆ ಕಷ್ಟಪಡಬೇಕು? ಒಬ್ಬೊಬ್ಬರೇ ಇರುವಾಗ ಆಹಾರದ್ದು ಕೂಡ ಸಮಸ್ಯೆ. ಪತ್ನಿ ಮಕ್ಕಳು ಇದ್ದರೆ ಎಲ್ಲರಿಗೂ ಒಟ್ಟಿಗೆ ರಜೆ ಸಿಗುವುದು ಕಷ್ಟ. ಹಾಗಾಗಿ ನಿಜಕ್ಕೂ ಊರು ಮಿಸ್ ಮಾಡಿಕೊಂಡವರು ಊರಿಗೆ ಹೋಗಿದ್ದಾರೆ. ನನಗೂ ಒಂದಷ್ಟು ಕಾಲಾವಕಾಶ ಸಿಕ್ಕಿದ್ದರೆ ಹೋಗುತ್ತಿದ್ದೆ. ಆದರೆ  ನನ್ನ ಅಪ್ಪ,ಅಮ್ಮ,ಪತ್ನಿ, ಅತ್ತೆ, ಮಾವ ಎಲ್ಲರೂ ನನ್ನ ಜತೆಯಲ್ಲೇ ಇದ್ದಾರೆ. ಆದರೂ ಊರಿಗೆ ಹೋಗಬೇಕು ಎಂದುಕೊಂಡಿದ್ದೆ. ಯಾಕೆಂದರೆ ಹುಟ್ಟಿದ ಊರು ಅಂದರೆ ಎಲ್ಲರಿಗೂ ಒಂದು ಸಹಜ ಸೆಳೆತ ಇದ್ದೇ ಇರುತ್ತದಲ್ಲ?

ಅಪ್ಪ ಅಮ್ಮನ ಮಾತು ನಿರಾಕರಿಸಿ ಚಿತ್ರರಂಗಕ್ಕೆ ಬಂದೆ: ಸ್ಫೂರ್ತಿ

ನೀವು ಇತ್ತೀಚೆಗೆ ಯಾವುದೇ ಪೊಲೀಸ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲವಂತೆ ಕಾರಣವೇನು?
ರಂಗಭೂಮಿ ಕಲಾವಿದನಾಗಿ ಯಾವುದಕ್ಕೂ ಬ್ರ್ಯಾಂಡ್ ಆಗಬಾರದು ಎನ್ನುವುದಷ್ಟೇ ನನ್ನ ಪ್ರಯತ್ನ. ಹೈಟ್ ವೈಟ್ ಚೆನ್ನಾಗಿದ್ದಾರೆ ಎಂದಾಕ್ಷಣ ಎಲ್ಲರೂ ಪೊಲೀಸ್ ಅಫೀಸರ್ ಪಾತ್ರವನ್ನೇ ನೀಡುತ್ತಾ ಹೋದರು. ನಾನು ನಿರಾಕರಿಸಿದ ಚಿತ್ರಗಳೇ 25ಇರಬಹುದು! ಒಂದೂವರೆ ಗಂಟೆ ನಡೆದ ನಾಟಕದಲ್ಲಿ ಸ್ಟೇಜಲ್ಲಿ ಐದೇ ನಿಮಿಷ ನಟಿಸಿದರೂ ಅದು ಚಪ್ಪಾಳೆ ಪಡೆಯುವಂತಿರಬೇಕು ಎನ್ನುವ ಥಿಯರಿ ಕಲಿತುಕೊಂಡು ಬಂದವನು ನಾನು. ಹಾಗಾಗಿ ಪಾತ್ರ ಯಾವುದು ಎನ್ನುವುದಕ್ಕಿಂತ ಎಲ್ಲ ಪಾತ್ರಗಳಲ್ಲಿಯೂ ಛಾಪು ಮೂಡಿಸುವ ಪ್ರಯತ್ನ ಮಾಡುತ್ತೇನೆ.  ಆದರೆ ಇತ್ತೀಚೆಗೆ ನಾಲ್ಕೈದು  ಚಿತ್ರಗಳಲ್ಲಿ ಪೊಲೀಸ್ ಮಾಡಿದೆ. ಅದಕ್ಕೆ ಕಾರಣ ಆ ಪೊಲೀಸ್ ಪಾತ್ರಗಳಲ್ಲಿ ವೈವಿಧ್ಯತೆ ಇತ್ತು. `ಬೆಲ್ ಬಾಟಂ'ನಲ್ಲಿ ಕಾಮಿಡಿ ಜತೆ ಖಳಛಾಯೆ ಸೇರಿದಂಥ ಪಾತ್ರವಿತ್ತು. ಮುಂದೆ ಬಿಡುಗಡೆಯಾಗಲಿರುವ ನಕ್ಷೆ, ಶೋಕಿವಾಲ, ಕೃಷ್ಣ ಟಾಕೀಸ್ ಸಿನಿಮಾಗಳಲ್ಲಿ ಪೊಲೀಸ್ ಪಾತ್ರಗಳಲ್ಲಿ ಕಾಣಸಿಕೊಳ್ಳುತ್ತಿದ್ದೇನೆ.

ಕರನಾಡೊಳು ನವಮಣಿಯಾದ ನಿರ್ದೇಶಕ ಶಿವಮಣಿ

ನಿಮಗೆ ರಂಗಭೂಮಿಯ ಮೇಲೆ ಆಸಕ್ತಿ ಮೂಡಲು ಕಾರಣವೇನು?
ಬಿ.ಕಾಮ್ ಮಾಡಿದ ಮೇಲೆ ನನಗೆ ಎನ್.ಎಸ್.ಡಿ ಸೇರಬೇಕು ಎಂದಿತ್ತು. ಆದರೆ `ಶೆಟ್ರ ಜಾತಿಯಲ್ಲಿ ಅದೆಲ್ಲ ಯಾರು ಮಾಡ್ತಾರೆ.. ಬಿಸ್ನೆಸ್ ಮಾಡು' ಎಂದಿದ್ದರು ಅಪ್ಪ. ಕೊನೆಗೆ ದೆಹಲಿ ಹೋಗೋದು ಬೇಡ ಎಂದ ಕಾರಣ ಎನ್.ಎಸ್.ಡಿ ಬದಲು ನೀನಾಸಂಗೆ ಸೇರಿಕೊಂಡೆ. ಇಂದಿನ ವಿಜಯಾ ಕಾಲೇಜು ಅಂದಿನ  ಜಯನಗರದ ಬಿಎಚ್ಚೆಸ್ ಆಗಿತ್ತು. ಡಿಗ್ರಿ ಮುಗಿದ ಮೇಲೆ ನಾನು ಧಾರಾವಾಹಿ ಮಾಡತೊಡಗಿದೆ. ಅದರಲ್ಲಿ `ಲಕುಮಿ' ಧಾರಾವಾಹಿಯ ಪಾಪಣ್ಣ ಪಾತ್ರ ತುಂಬ ಜನಪ್ರಿಯವಾಗಿತ್ತು. ಅದರ ಬಳಿಕ ನಾಲ್ಕೈದು ಧಾರಾವಾಹಿ ಮಾಡಿದೆ. ಆದರೆ ನನಗೆ ಕ್ಯಾಮೆರಾ ಬೋರ್ ಹೊಡೆಯತೊಡಗಿತು. ಧಾರಾವಾಹಿಯಲ್ಲಿ ಆ ದಿನಗಳಲ್ಲಿ ಒಳ್ಳೆಯ ಸಂಪಾದನೆ ಇದ್ದರೂ ಸಹ ಮತ್ತೆ ರಂಗಭೂಮಿಗೆ ಹೋಗಿ ಕ್ಲಾಸ್ ಮಾಡೋದು, ಆರ್ಟ್ ವರ್ಕ್ ಮಾಡೋದು ಎಲ್ಲ ಮಾಡುತ್ತಿದ್ದೆ. ಯಾಕೆಂದರೆ ರಂಗಭೂಮಿಯಲ್ಲಿನ ಪಾತ್ರಗಳ ವೈವಿಧ್ಯತೆ, ಕಲಿಕೆ ಬೇರೆಲ್ಲೂ ಸಾಧ್ಯವಿರಲಿಲ್ಲ. ಬಳಿಕ ಅಲ್ಲಿಂದ ಸಿನಿಮಾರಂಗಕ್ಕೆ ಹೋಗುವ ಮನಸ್ಸು ಕೂಡ ನನಗಿರಲಿಲ್ಲ. ಆದರೆ ಗುರುಗಳಾದ ಕೃಷ್ಣಮೂರ್ತಿ ಕವತ್ತಾರು ಸರ್ ಅವರ ಒತ್ತಾಯಕ್ಕೆ ಒಂದು ಚಿತ್ರ ಮಾಡಿದೆ. ಮತ್ತೆ ನಟನೆ ಬೇಡ ಎಂದುಕೊಂಡಿದ್ದ ನನ್ನನ್ನು ಒತ್ತಾಯದಿಂದ ಕರೆತಂದು `ಉಳಿದವರು ಕಂಡಂತೆ' ಚಿತ್ರದಲ್ಲಿ ಭಾಗಿಯಾಗುವಂತೆ ಮಾಡಿದ್ದು ರಿಷಭ್ ಶೆಟ್ಟಿ. ಆತ ಕೂಡ ನನ್ನ ರಂಗಭೂಮಿ ಸ್ನೇಹಿತ.

ರಂಗಭೂಮಿಯಿಂದ ಯಾವುದಾದರೂ ನಾಟಕವನ್ನು ಸಿನಿಮಾ ಮಾಡಬಹುದಲ್ಲ?
ಡಿ.ಕೆ ಚೌಟರ `ಹುಲಿ ಮತ್ತು ಕಡಸು' ನಾಟಕದಲ್ಲಿ ನಾನೇ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದೆ. ಅದನ್ನು ಸಿನಿಮಾ ಮಾಡುವ ಬಗ್ಗೆ ಅವರಲ್ಲಿ ಮಾತನಾಡಲು ಹೋಗಿದ್ದೆ. ಅದರ ರೈಟ್ಸ್‌ ಅನ್ನು ತಾವು ತುಳು ಚಿತ್ರರಂಗದವರಿಗೆ ನೀಡಿದ್ದಾಗಿ ಆಗ ಅವರು ತಿಳಿಸಿದರು. ಆಗ ರೈಟ್ಸ್ ನನಗೆ ಸಿಕ್ಕಿದ್ದರೆ `ಕಥಾ ಸಂಗಮ'ದೊಳಗೆ ಅದನ್ನು ಕೂಡ ಒಂದು ಚಿತ್ರವಾಗಿ ಮಾಡುವವನಿದ್ದೆ. ಅಂದಹಾಗೆ ರಂಗಭೂಮಿ ನನಗೆ ಅದರ ಕತೆಯಲ್ಲಿನ ಹೊಸತನಕ್ಕೆ ಮಾತ್ರ ಇಷ್ಟವಾಗುವುದಲ್ಲ. ಅಲ್ಲಿ ನೇರವಾಗಿ ಪ್ರತಿಕ್ರಿಯೆ ಸಿಗುತ್ತದೆ  ಎನ್ನುವುದು ಒಂದಾದರೆ ಅಲ್ಲಿ ಕಲಿಕೆಗೆ ಹೆಚ್ಚು ಅವಕಾಶ ಇರುತ್ತದೆ ಎನ್ನುವುದು ಮತ್ತೊಂದು ಪ್ರಮುಖ ಕಾರಣ. ಪ್ರಥಮ ಪ್ರದರ್ಶನಕ್ಕಾಗಿ ಸ್ಟೇಜ್ ಹತ್ತುವ ಮೊದಲು, ಒಂದು ತಿಂಗಳ ರಿಹರ್ಸಲ್ ಕಲಿಕೆಯಾದರೆ, ಬಳಿಕದ ಪ್ರತಿಯೊಂದು ಪ್ರದರ್ಶನಗಳು ಕೂಡ ಹೊಸತನ್ನು ಕಲಿಸುತ್ತಾ ಹೋಗುತ್ತದೆ. ಒಂದು ಪ್ರದರ್ಶನದಲ್ಲಿ ತಪ್ಪಾಗಿ ಕಂಡಿದ್ದನ್ನು ತಿದ್ದಿಕೊಳ್ಳುವ ಅವಕಾಶ ಇರುತ್ತದೆ. ಒಟ್ಟಿನಲ್ಲಿ ರಂಗಭೂಮಿಗೆ ರಂಗಭೂಮಿಯೇ ಸಾಟಿ. ಎಲ್ಲ ರಂಗಾಸಕ್ತರಿಗೂ ವಿಶ್ವರಂಗಭೂಮಿ ದಿನಾಚರಣೆಯ ಶುಭಾಶಯಗಳು.

Latest Videos
Follow Us:
Download App:
  • android
  • ios