ಲಾಕ್‌ಡೌನ್‌ ನಂತರ ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಭಾರತದ ಮೊದಲ ಸಿನಿಮಾ ‘ಆಕ್ಟ್ 1978’. ಟ್ರೇಲರ್‌ ಮೂಲಕ ಈಗಾಗಲೇ ಜೋರು ಸೌಂಡು ಮಾಡಿರುವ ಈ ಚಿತ್ರದ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ಇಲ್ಲಿ ಮಾತನಾಡಿದ್ದಾರೆ.

ಈ ಕತೆ ಸಿನಿಮಾ ಆಗಬೇಕು ಅನಿಸಿದ್ದು ಯಾಕೆ?

ಸರ್ಕಾರಿ ಕಚೇರಿಗಳು, ಅದರ ವ್ಯವಸ್ಥೆ ಹಾಗೂ ಈ ಕಚೇರಿಗಳಲ್ಲಿ ಸಾಮಾನ್ಯ ಜನರನ್ನು ನೋಡುವ ರೀತಿ ಬಗ್ಗೆ ಎಲ್ಲರಿಗೂ ಸಿಟ್ಟಿದೆ. ಆ ಸಿಟ್ಟು ಈ ಕತೆಯ ಅಡಿಪಾಯ. ಒಂದು ಸಣ್ಣ ಕೆಲಸ ಆಗಬೇಕು ಅಂದರೂ ಪ್ರಭಾವ, ಶಿಫಾರಸ್ಸು ಬೇಕು. ಇಲ್ಲದೆ ಹೋದರೆ ಜನರನ್ನು ಕಸದಂತೆ ನೋಡುತ್ತಾರೆ.ಇಂಥ ವ್ಯವಸ್ಥೆಯೊಂದಕ್ಕೆ ಸಿನಿಮಾ ಕನ್ನಡಿ ಹಿಡೀಬೇಕು ಅನಿಸಿದಾಗ ‘ಆಕ್ಟ್ 1978’ ಹುಟ್ಟಿತು.

40 ಲೀಟರ್ ಎದೆಹಾಲು ದಾನ ಮಾಡಿದ ನಿರ್ಮಾಪಕಿ, ಕಾರಣ ಕೇಳಿ..!

ನಿಮ್ಮ ಪ್ರಕಾರ ಇದು ಯಾರನ್ನು ಸೂಚಿಸುವ, ಯಾರನ್ನು ಪ್ರತಿನಿಧಿಸುವ ಸಿನಿಮಾ?

ಇದೊಂದು ಕಾಮನ್‌ಮ್ಯಾನ್‌ ಕತೆ. ಕೋಟಿ ಕೋಟಿ ಸಾಮಾನ್ಯ ಜನರ ಬದುಕು, ಕಷ್ಟ, ನೋವುಗಳನ್ನು ಹೇಳುವ ಸಿನಿಮಾ ಇದು. ಇಲ್ಲಿ ಭ್ರಷ್ಟಾಚಾರ ಇದೆ. ಹಾಗಂತ ಅದರ ಬಗ್ಗೆ ಭಾಷಣ ಬಿಗಿದಿಲ್ಲ. ಇಲ್ಲಿ ನೋವುಗಳಿವೆ, ಹಾಗಂತ ಹೀರೋಯಿಸಂ ಮೂಲಕ ಎಲ್ಲರನ್ನು ಸುಟ್ಟು ಹಾಕಿಸಿಲ್ಲ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡಿ. ನೀವು ಈ ಮನುಷ್ಯತ್ವ ಮರೆತು, ಜನರನ್ನು ಮೂಲೆಗುಂಪು ಮಾಡಿದರೆ ಆತನಲ್ಲಿ ಹುಟ್ಟಿಕೊಳ್ಳುವ ಸಿಟ್ಟು- ಅಕ್ರೋಶವನ್ನು ಸರ್ಕಾರ ಎದುರಿಸಲು ಆಗಲ್ಲ.

ಸರ್ಕಾರ ಮತ್ತು ಆಕ್ರೋಶಿತ ಸಾಮಾನ್ಯನ ನಡುವಿನ ರೆಬೆಲ್‌ ಕತೆನಾ?

ರೆಬೆಲ್‌ ಇದೆ, ಹಿಂಸೆಯಿಂದ ಕೂಡಿದ ರೆಬೆಲ್‌ ಅಲ್ಲ. ಮಾನವೀತೆಯಿಂದ ಕೂಡಿದ ಕಿಚ್ಚು. ಇದ ಎಲ್ಲರೊಳಗೂ ಇರುವ ಸಿಟ್ಟಿಗೆ ವೇದಿಕೆ ಆಗುತ್ತದೆ. ‘ನಮ್ಮನ್ನು ಅಂಡರ್‌ಎಸ್ಟಿಮೇಟ್‌’ ಮಾಡಬೇಡಿ ಎನ್ನುವ ಸಾಮಾನ್ಯನ ಎಚ್ಚರಿಕೆ ಇರುತ್ತದೆ. ಸರ್ಕಾರಿ ಕಚೇರಿಗಳು, ಜನ ಪ್ರತಿನಿಧಿಗಳು ಜನರಿಗಿಂತಲೂ ದೊಡ್ಡ ಲಾರ್ಡ್‌ಗಳಲ್ಲ ಎನ್ನುತ್ತದೆ ಈ ಸಿನಿಮಾ. ಅದಕ್ಕೆ ಟ್ರೇಲರ್‌ನಲ್ಲೇ ನಾವು ಹೇಳಿರುವುದು ‘ನೀಡ್‌ ರೆಸ್ಪೆಕ್ಟ್’ ಎನ್ನುವ ಡೈಲಾಗ್‌.

ಈ ಮಾಜಿ ವಿಶ್ವ ಸುಂದರಿಗೆ ಲವ್ ಅಗಿದ್ದು 15 ವರ್ಷ ಚಿಕ್ಕವನ ಮೇಲೆ, ಅದೂ ಇನ್‌ಸ್ಟಾಗ್ರಾಂನಲ್ಲಿ..!

ಬಾಂಬ್‌ ಕಟ್ಟಿಕೊಂಡ ಮಹಿಳೆ, ಮೌನವಾಗಿ ಪ್ರತಿಭಟಿಸುವ ಗಾಂಧಿ ಪಾತ್ರ. ಇವರಲ್ಲಿ ಯಾರ ಮಾರ್ಗ ಸರಿ?

ಇಲ್ಲಿ ಮಹಾತ್ಮ ಗಾಂಧಿ ಇದ್ದಾರೆ. ಹಾಗೆ ಒಳಗೆ ಅಂಬೇಡ್ಕರ್‌ ಕೂಡ ಇದ್ದಾರೆ. ಆಯ್ಕೆ ಜನರಿಗೆ ಬಿಟ್ಟಿದ್ದು. ಆದರೆ, ಅಂಬೇಡ್ಕರ್‌ ಆಶಯ ಸಂವಿಧಾನವೇ ನಮಗೆ ಅಂತಿಮ ದಾರಿ. ಹಿಂಸೆಗಿಂತ ಹ್ಯೂಮ್ಯಾನಿಟಿಯೇ ಗೆಲ್ಲುವುದು. ಆದರೆ, ಆ ಹುಮ್ಯಾನಿಟಿಗೆ ಪೆಟ್ಟು ಬಿದ್ದರೆ ಜನ ಯಾವ ದಾರಿ ಆಯ್ಕೆ ಮಾಡಿಕೊಳ್ಳುತ್ತಾನೆ?

ಈಗಲೂ ಆ ಸಮಸ್ಯೆಗಳು ಇದ್ದಾವೆಯೇ?

ಖಂಡಿತ ಇದೆ. ಯಾರು ಬೇಕಾದರೂ ಸರ್ಕಾರಿ ಕಚೇರಿಗಳಿಗೆ ಹೋಗಿ ಖಚಿತಪಡಿಸಿಕೊಳ್ಳಬಹುದು. ಸರ್ಕಾರವೇ ರೂಪಿಸಿರುವ ಯೋಜನೆಗಳನ್ನು ಕಾನೂನುಬದ್ಧವಾಗಿಯೇ ಪಡೆದುಕೊಳ್ಳಲು, ನಿಮ್ಮ ಸೌಲಭ್ಯಗಳನ್ನು ನೀವೇ ದಕ್ಕಿಸಿಕೊಳ್ಳಲು ಸರ್ಕಾರಿ ಕಚೇರಿಗಳ ಬಾಗಿಲು ತಟ್ಟಿದರೆ ‘ಆಕ್ಟ್ 1978’ ಸಿನಿಮಾ ಅಲ್ಲ, ಈ ಮಣ್ಣಿನ ಪ್ರತಿಯೊಬ್ಬನ ಕತೆæ ಎನಿಸುತ್ತದೆ.

ಈ ಚಿತ್ರವನ್ನು ಜನ ಯಾಕೆ ನೋಡಬೇಕು? ಲಾಕ್‌ಡೌನ್‌ ನಂತರ ತೆರೆಗೆ ಬರುತ್ತಿರುವ ಸಿನಿಮಾ ಎನ್ನುವ ಕಾರಣಕ್ಕಾ?

ಎರಡು ಕಾರಣಗಳಿವೆ. ಒಂದು ಇದು ನಿಮ್ಮದೇ ಕತೆ. ಇಷ್ಟುದಿನ ಬೇರೆ ಸೂಪರ್‌ ಹೀರೋಗಳ ಕತೆಗಳನ್ನು ನೋಡಿ ಗೆಲ್ಲಿಸಿದ್ದೀರಿ. ಖುಷಿಪಟ್ಟಿದ್ದೀರಿ. ಆದರೆ, ನೀವು ಅನುಭವಿಸಿದ, ನಿಮ್ಮದೇ ಜೀವನದ ಕತೆಯೊಂದು ತೆರೆ ಮೇಲೆ ಬರುತ್ತಿದೆ. ಎರಡನೆಯದು, ಕೊರೋನಾದಿಂದ ಎಲ್ಲ ಕ್ಷೇತ್ರಗಳಲ್ಲೂ ಒಂದು ವಿಷಾದ ಆವರಿಸಿಕೊಂಡಿದೆ. ಅದು ಚಿತ್ರರಂಗದಲ್ಲೂ ಕೂಡ. ಈ ವಿಷಾದದ ಮೋಡಗಳಿಗೆ ನಾವು ಎದುರಾಗಿ ನಿಲ್ಲಬೇಕು. ಬೆಳಕು ಕಾಣಬೇಕು. ಈ ಚಿತ್ರ ನೋಡುವುದರಿಂದ ಒಂದು ಒಳ್ಳೆಯ ಕತೆ ಗೆಲ್ಲುತ್ತದೆ. ಹಾಗೆ ಸಾವಿರಾರು ಜನ ನಂಬಿಕೊಂಡಿರುವ ಉದ್ಯಮಕ್ಕೆ ಹೊಸ ಜೀವ ಬರುವ ಮೊದಲ ಮೆಟ್ಟಿಲಿಗೆ ನೀವು ಸಾಕ್ಷಿಯಾಗುತ್ತೀರಿ.

ಇದು ನಿಷ್ಕರ್ಷದಂತೆ ಒಂದೇ ಕಚೇರಿಯಲ್ಲಿ ನಡೆಯುವ ಕತೆನಾ?

ಶೇ.80 ಭಾಗ ಕತೆ ನಡೆಯುವುದು ಒಂದೇ ಕಚೇರಿಯಲ್ಲಿ. ಆದರೆ, ಅದರ ಪರಿಣಾಮ ಹೊರ ಜಗತ್ತಿನಲ್ಲಿ ಕಾಣುತ್ತದೆ. ವಿಧಾನಸೌಧದಲ್ಲಿ ಚರ್ಚೆಗೆ ಬರುತ್ತದೆ. ಇಡೀ ದಿನ ಸರ್ಕಾರಿ ವ್ಯವಸ್ಥೆಯ ಬುಡ ಅಲ್ಲಾಡುತ್ತದೆ. ಮೂರು, ನಾಲ್ಕು ಟ್ರ್ಯಾಕ್‌ ಕತೆ ಸಾಗುತ್ತದೆ. ಸರ್ಕಾರ, ಸಾಮಾನ್ಯ ಜನ, ಮಾಧ್ಯಮಗಳು, ವ್ಯವಸ್ಥೆ ಎಲ್ಲರು ಪಾತ್ರಧಾರಿಗಳೇ.

ಮೂರನೇ ಚಿತ್ರದಿಂದ ನಿಮ್ಮಲ್ಲಿ ಆದ ಬದಲಾವಣೆಗಳೇನು?

ಒಂಚೂರು ಸೌಂಡು ಜಾಸ್ತಿ ಆಗಿದೆ. ಕತೆ ಹೇಳುವ ರೀತಿ ಬದಲಾಯಿಸಿಕೊಂಡಿದ್ದೇನೆ. ವೇಗ ಇದೆ. ಕಮರ್ಷಿಯಲ್‌ ಟಚ್‌ ಇದೆ. ಫ್ರೇಮ್‌ ಟು ಫ್ರೇಮ್‌ ಟ್ವಿಸ್ಟ್‌ ಇದೆ. ಜನರಿಗೆ ಇಷ್ಟವಾಗುವ ಅಂಶಗಳನ್ನು ಈ ಚಿತ್ರದಲ್ಲಿ ತಂದಿದ್ದೇನೆ. ಇಷ್ಟುದಿನ ನನ್ನ ಭಾಷೆಯಲ್ಲಿ ಜನರ ಕತೆ ಹೇಳುತ್ತಿದ್ದೆ. ಈಗ ಜನರ ಭಾಷೆಯಲ್ಲೇ ಅವರದ್ದೇ ಕತೆ ಹೇಳುತ್ತಿದ್ದೇನೆ. ಆ ಮಟ್ಟಿಗೆ ನಿರ್ದೇಶಕನಾಗಿ ನಾನು ಬದಲಾಗಿದೆ. ಹಾಗಂತ ನನ್ನತನ ನಾನು ಬಿಟ್ಟುಕೊಟ್ಟಿಲ್ಲ. ಕೊನೆಗೂ ಇದು ಡೈರೆಕ್ಟರ್‌ ಸಿನಿಮಾ, ಕಂಟೆಂಟ್‌ ಸಿನಿಮಾ.

ದೊಡ್ಡ ಚಿತ್ರಗಳೇ ಥಿಯೇಟರ್‌ಗಳಿಗೆ ಬಾರದಿದ್ದಾಗ ನೀವು ಯಾ ಧೈರ್ಯದ ಮೇಲೆ ಚಿತ್ರವನ್ನು ತೆರೆಗೆ ತರುತ್ತಿದ್ದೀರಿ?

ನಮ್ಮಂಥ ಸಿನಿಮಾಗಳಿಗೆ ಯಾವಗಲೂ ರಿಸ್ಕ್‌ ಇದ್ದಿದ್ದೆ. ಯಾಕೆಂದರೆ ಫಸ್ಟ್‌ ಡೇ ಫಸ್ಟ್‌ ಶೋ ತುಂಬಿಸುವ ಹೀರೋಗಳು ಇಲ್ಲಿಲ್ಲ.ಆದರೆ, ಕತೆಗೆ ಜೀವ ತುಂಬುವ ಪಾತ್ರದಾರಿಗಳು ಇದ್ದಾರೆ. ಇದು ಕಂಟೆಂಟ್‌ ಸಿನಿಮಾ. ಜನರಿಂದ ಜನರಿಗೆ ತಲುಪಬೇಕಾದ ಸಿನಿಮಾ. ಹೀಗಾಗಿ ಗುಂಪಿನಲ್ಲಿ ಕಳೆದು ಹೋಗುವುದು ಬೇಡ. ಈ ಸಮಯದಲ್ಲಿ ಬರಲು ಯಾರೂದಾರೂ ಧೈರ್ಯ ಮಾಡಬೇಕಿತ್ತು. ಕತೆ ಮೇಲೆ ನಂಬಿಕೆ ಇಟ್ಟು ಬರುತ್ತಿದ್ದೇವೆ.

- ಆರ್‌ ಕೇಶವಮೂರ್ತಿ