ಊಹಿಸಿಕೊಳ್ಳಿ, ನಿಮಗೆ ಜ್ವರ ಬಂದಿರುತ್ತದೆ, ಆದರೂ ನಿಮಗದು ಅರಿವಿಗೆ ಬಂದಿರುವುದಿಲ್ಲ. ನೀವು ಹೀಗೆ ದಾರಿಯಲ್ಲಿ ಹೋಗುತ್ತಿರುತ್ತೀರಿ, ಇಲ್ಲವೇ ಕಾರಿನಲ್ಲಿ ಪ್ರಯಾಣಿಸಬೇಕು ಎಂದು ಕಾರಿನ ಹತ್ತಿರಕ್ಕೆ ಬರುತ್ತೀರಿ ಅಥವಾ ಕಾರೊಳಗೆ ಪ್ರವೇಶಿಸುತ್ತೀರಿ. ಆಗ ನಿಮಗೆ ಜ್ವರ ಬಂದಿದೆ, ಉಷ್ಣತೆ ಸಹಜ ಸ್ಥಿತಿಗಿಂತ ತುಸು ಹೆಚ್ಚೇ ಇದೆ ಎಂದು ಕಾರು ಹೇಳುತ್ತದೆ!


ವಾಹ್, ಕಲ್ಪಿಸಿಕೊಂಡರೇ ಎಷ್ಟು ಚೆಂದ ಅಲ್ವಾ? ಹೌದು. ಇಂಥದ್ದೊಂದು ತಂತ್ರಜ್ಞಾನವನ್ನು ಕಾರಿನಲ್ಲಿ ಅಳವಡಿಸಲು ಇಸ್ರೇಲ್‌ನ ಯುವಿಐ (UVeye) ಕಂಪನಿ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಯನ್ನೂ ಮಾಡಿಕೊಂಡಿದೆ. ಈ ಹೊಸ ತಂತ್ರಜ್ಞಾನದ ಮೂಲಕ ಕಾರಿನಲ್ಲಿರುವ ಚಾಲಕನ ಸಹಿತ ಯಾವುದೇ ಪ್ರಯಾಣಿಕರಿಗೆ ಕೊರೋನಾ ವೈರಸ್ ನಂತಹ ಸೋಂಕಿದ್ದರೂ ಅವರನ್ನು ಮುಟ್ಟದೇ ಕಂಡುಹಿಡಿಯಬಹುದಾಗಿದೆ.

ಇದನ್ನೂ ಓದಿ: ಲಾಕ್‌ಡೌನ್‌ನಲ್ಲಿ ಕಾರು ಮೇಂಟೇನ್ ಸೀಕ್ರೆಟ್ ಕೊಟ್ಟ ಅಟೋ ಕಂಪನಿಗಳು

"
ಹೀಗೆ ಸಂಪರ್ಕ ರಹಿತವಾಗಿರುವ ಈ ಥರ್ಮಲ್ ಸೆನ್ಸಾರ್ (ಉಷ್ಣ ಸಂವೇದಕ) ತಂತ್ರಜ್ಞಾನದ ಮೂಲಕ ಚಾಲಕ, ಪ್ರಯಾಣಿಕರು ಕಾರಿನ ಕಿಟಗಿ ಗಾಜಿನ ಹತ್ತಿರ ಬಂದಾಗಲೇ ಕಂಡುಹಿಡಿಯಬಹುದಾಗಿದೆ. ಇದಕ್ಕೆ ಇನ್ಫ್ರಾರೆಡ್ ಥರ್ಮಲ್- ಇಮೇಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಇದು ಕೆಲವು ಮೀಟರ್ ದೂರದಿಂದಲೇ ಮನುಷ್ಯನ ದೇಹದ ಉಷ್ಣತೆಯನ್ನು ಪತ್ತೆ ಮಾಡುತ್ತದೆ.


ಶೀಘ್ರ ಪತ್ತೆಗೆ ಸಹಕಾರಿ
ಯುವಿಐ ಕಂಪನಿ ಈಗ ಈ ತಂತ್ರಜ್ಞಾನವನ್ನು ವೈದ್ಯಕೀಯ ಮತ್ತು ಪೊಲೀಸ್ ಸೇವೆಗಳಿಗೆ ಬಳಸುವ ವಾಹನಗಳಿಗೆ ಯಾವುದೇ ರೀತಿಯ ಲಾಭವಿಲ್ಲದಂತೆ ಅಳವಡಿಸುವ ಚಿಂತನೆ ನಡೆಸಿದೆ. ಅಲ್ಲದೆ, ಸರ್ಕಾರಗಳು ಈ ತಂತ್ರಜ್ಞಾನವನ್ನು ಈಗ ಕಾಣಿಸಿಕೊಂಡಿರುವ ಕೊರೋನಾ ವೈರಸ್ (ಕೋವಿಡ್-19) ಮಹಾಮಾರಿಯನ್ನು ಶೀಘ್ರವಾಗಿ ಪತ್ತೆಹಚ್ಚಲು ಅನುಕೂಲವಾಗಲಿದೆ. ಜೊತೆಗೆ ಯಾವುದೇ ರೀತಿಯಾಗಿ ಕೈ ಬಳಸಿ ಪರೀಕ್ಷಿಸುವ ಪ್ರಮೇಯವೇ ಇರುವುದಿಲ್ಲ. ಒಮ್ಮೆ ಕಾಯಿಲೆ ಇರುವುದು ಪತ್ತೆಯಾದರೆ, ಅಂಥವರು ತಕ್ಷಣವೇ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಲೂ ಅನುಕೂಲವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.


ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ ಹೋಂಡಾ ಸಿಟಿಗೆ 5 ಸ್ಟಾರ್, ಸೆಕ್ಯೂರಿಟಿ ಸಿಸ್ಟಂನಲ್ಲಿ ಎಲ್ಲರಿಗಿಂತ ಮುಂದೆ!


ಅಮೆರಿಕ, ಇಂಗ್ಲೆಂಡ್ ಆಯ್ತು, ಭಾರತದಲ್ಲಿ ಯಾವಾಗ?
ಈ ತಂತ್ರಜ್ಞಾನ ಈಗ ಅಮೆರಿಕ ಹಾಗೂ ಇಂಗ್ಲೆಂಡ್‌ನಲ್ಲಿ ಮುಂದಿನ ವಾರದಿಂದಲೇ ಅಳವಡಿಕೆಯಾಗುತ್ತಿದ್ದು, ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಆದರೆ, ಭಾರತದಲ್ಲಿ ಯಾವಾಗ ಈ ತಂತ್ರಜ್ಞಾನ ಕಾರಿನ ಜೊತೆಗೆ ರಸ್ತೆಗೆ ಇಳಿಯಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. 

ಇದಲ್ಲದೆ ಕಂಪನಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಕ ಕಾರಿನಲ್ಲಿ ಕಂಡುಬರುವ ಸೆಕ್ಯುರೆಟಿ ಥ್ರೆಟ್ (ಭದ್ರತಾ ನ್ಯೂನತೆ), ವಾಹನಗಳ ಗುಣಮಟ್ಟದ ನ್ಯೂನತೆಗಳನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. 

ಈ ನಿಟ್ಟಿನಲ್ಲಿ ಯುವಿಐ ಜಗತ್ತಿನ 6 ಪ್ರಮುಖ ಕಾರು ಉತ್ಪಾದಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ವೆಹಿಕಲ್-ಇನ್ಸ್‌ಸ್ಪೆಕ್ಷನ್ ಸಿಸ್ಟಂ ಅಳವಡಿಸಲು ಮುಂದಾಗಿದ್ದಲ್ಲದೆ, ವಿಶ್ವಾದ್ಯಂತ ಈ ತಂತ್ರಜ್ಞಾನವುಳ್ಳ ಕಾರುಗಳನ್ನು ಪರಿಚಯಿಸಲು ಮುಂದಾಗಿದೆ.

ಇದನ್ನೂ ಓದಿ: ಬುಕ್ ಮಾಡಿದ ಹತ್ತೇ ದಿನದಲ್ಲಿ ಕೈಸೇರಲಿದೆ ಜಾವಾ; ಫುಲ್ ಖುಷ್ ಹುವಾ!

ಕೋವಿಡ್-19 ಪತ್ತೆಗೆ ಉಪಕಾರಿ
ಈಗಂತೂ ವಿಶ್ವವನ್ನು ವ್ಯಾಪಿಸಿರುವ ಕೋವಿಡ್-19 (ಕೊರೋನಾ) ವೈರಸ್ ಸಾಂಕ್ರಾಮಿಕ ರೋಗವಾದ್ದರಿಂದ ಯಾರಲ್ಲಿ ಬಂದಿದೆ ಎಂದು ಮೇಲ್ನೋಟಕ್ಕೆ ತಿಳಿಯುವುದಿಲ್ಲ. ಸಾರ್ವಜನಿಕ ಸಂಚಾರಗಳಂತಹ ಸಂದರ್ಭದಲ್ಲಿ ಇಂಥಹ ನೂತನ ಟೆಕ್ನಾಲಜಿಗಳು ವಾಹನಗಳಲ್ಲಿ ಅಳವಡಿಕೆಯಾಗಿದ್ದರೆ ಬಹುಬೇಗ ಕಂಡುಹಿಡಿಯಬಹುದು. ಹಾಗೂ ಜೊತೆಯಲ್ಲಿ ಇದ್ದವರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಈ ಮೂಲಕ ರೋಗ ಹರಡುವಿಕೆಯನ್ನು ಸುಲಭ ಮತ್ತು ಶೀಘ್ರವಾಗಿ ತಡೆಗಟ್ಟಬಹುದಾಗಿದೆ. ಆದರೆ, ಇಂಥ ತಂತ್ರಜ್ಞಾನಗಳು ಭಾರತವನ್ನು ಪ್ರವೇಶಿಸಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದು ಈಗಿನ ಪ್ರಮುಖ ಪ್ರಶ್ನೆಯಾಗಿದೆ.