ಇ20 ಪೆಟ್ರೋಲ್ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಯೂಟ್ಯೂಬರ್ ತನ್ನ ಬೆಂಜ್ ಕಾರಿನ ಮೈಲೇಜ್ ಕುಸಿತವಾಗಿದ್ದು ಮಾತ್ರವಲ್ಲ ಎಂಜಿನ್ ಕೂಡ ಶೀಗ್ರದಲ್ಲೇ ಹಾಳಾಗಲಿದೆ ಎಂದು ಆರೋಪಿಸಿದ ವಿಡಿಯೋಗೆ ಖುದ್ದು ಮರ್ಸಿಡೀಸ್ ಬೆಂಜ್ ಉತ್ತರ ನೀಡಿದೆ.

ನವದೆಹಲಿ (ಜು.13) ಭಾರತದಲ್ಲಿ ಪೆಟ್ರೋಲ್‌ನಲ್ಲಿ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಇ20 ಪೆಟ್ರೋಲ್ ದೇಶದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಹಲವರು ತಮ್ಮ ವಾಹನಗಳ ಎಂಜಿನ್ ಸಮಸ್ಯೆಯಾಗುತ್ತಿದೆ, ಮೈಲೇಜ್ ಸಿಗುತ್ತಿಲ್ಲ, ವಿಮೆಗಳು ಅನ್ವಯವಾಗುತ್ತಿಲ್ಲ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಇದರ ನಡುವೆ ಯೂಟ್ಯೂಬರ್ ಸೌರವ್ ಜೋಶಿ ಮಾಡಿದ ಗಂಭೀರ ಆರೋಪ ಭಾರಿ ಸದ್ದು ಮಾಡಿತ್ತು. ತನ್ನ ಬೆಂಜ್ ಕಾರು 16 ರಿಂದ 17 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತು. ಆದರೆ ಇ20 ಪೆಟ್ರೋಲ್‌ನಿಂದ 5ಕ್ಕೆ ಕುಸಿದಿದೆ ಎಂಬ ಆರೋಪ ಮಾಡಿದ್ದರು. ಈ ಆರೋಪ ಹಾಗೂ ಕೋಲಾಹಲಕ್ಕೆ ಖುದ್ದು ಮರ್ಸಿಡೀಸ್ ಬೆಂಜ್ ಸ್ಪಷ್ಟನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೌರವ್ ಜೋಶಿ ಆರೋಪವೇನು?

ವ್ಲಾಗರ್ ಸೌರವ್ ಜೋಶಿ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಮೂಲಕ ಗಂಭೀರ ಆರೋಪ ಮಾಡಿದ್ದರು. ವಿಡಿಯೋ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು. ನನ್ನ ಕಾರಿಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಹಾಕಲು ಭಯವಾಗುತ್ತಿದೆ. ಮೊದಲು ನನ್ನ ಮರ್ಸಿಡಿಸ್ ಬೆಂಜ್ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 16 ರಿಂದ 17 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತು. ಇದೀಗ ಕೇವಲ 5 ಕಿಲೋಮೀಟರ್‌ಗೆ ಕುಸಿದಿದೆ. ನನ್ನ ಕಾರು ಶೀಘ್ರದಲ್ಲೇ ಸಂಪೂರ್ಣ ಹಾಳಾಗಲಿದೆ ಎಂದು ಆರೋಪಿಸಿದ್ದರು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಹಲವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದರು. ತಮ್ಮ ವಾಹನ ಕೂಡ ಮೈಲೇಜ್ ಡ್ರಾಪ್ ಆಗಿದೆ. ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀಡಿ ಜನರ ವಾಹನಗಳನ್ನು ಹಾಳು ಮಾಡುತ್ತಿದೆ. ಅವೈಜ್ಞಾನಿಕ ಮಿಶ್ರಣದಿಂದ ವಾಹನದ ಎಂಜಿನ್ ಹಾಳಾಗುತ್ತಿದೆ. ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವಂತ ಮಾಡಲು ಈ ತಂತ್ರ ಪ್ರಯೋಗಿಸಿದೆ ಎಂದು ಹಲವರು ಆರೋಪ ಮಾಡಿದ್ದರು. ವಿಡಿಯೋ ಸದ್ದು ಮಾಡುತ್ತಿದ್ದಂತೆ ಇದೀಗ ಮರ್ಸಿಡೀಸ್ ಬೆಂಜ್ ಸ್ಪಷ್ಟನೆ ನೀಡಿದೆ.

ಮರ್ಸಿಡೀಸ್ ಬೆಂಜ್ ಕೊಟ್ಟ ಉತ್ತರವೇನು?

ಮರ್ಸಿಡೀಸ್ ಬೆಂಜ್ ತನ್ನ ಗ್ರಾಹಕರ ಸುರಕ್ಷತೆ, ವಾಹನಗಳ ಬಾಳಿಕೆ, ಪರ್ಫಾಮೆನ್ಸ್ ಬಗ್ಗೆ ಹೆಚ್ಚಿನ ಗಮನಕೇಂದ್ರಿರಿಸಿದೆ. ಇದು ಕಂಪನಿಯ ಅತ್ಯುನ್ನತ ಜವಾಬ್ದಾರಿಯಾಗಿದೆ. ಎಲ್ಲಾ ಮರ್ಸಿಡೀಸ್ ಬೆಂಜ್ ಬಿಎಸ್6 ವಾಹನ ಇ20 ಪೆಟ್ರೋಲ್ ಇಂಧನಕ್ಕೆ ಹೊಂದಿಕೆಯಾಗುವಂತ ಎಂಜಿನ್ ಹಾಗೂ ತಂತ್ರಜ್ಞಾನ ಬಳಸಲಾಗಿದೆ. ಸಂಬಂಧಪಟ್ಟ ಇಲಾಖೆ, ಪರಿಣಿತರಿಂದ ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ. ಈ ಕುರಿತು ನಮ್ಮ ಗ್ರಾಹಕರ ಯಾವುದೇ ತಾಂತ್ರಿಕ ಸೇರಿದಂತೆ ಇತರ ಪ್ರಶ್ನೆಗಳಿಗೆ ಉತ್ತರಿಸಲು, ನೆರವು ನೀಡಲು ಬೆಂಜ್ ಸದಾ ಸಿದ್ಧವಾಗಿದೆ ಎಂದು ಬೆಂಜ್ ಸ್ಪಷ್ಟನೆ ನೀಡಿದೆ.

Scroll to load tweet…