- Home
- Automobile
- Car News
- ಟಾಟಾ ಟಿಯಾಗೋ ಇವಿಗೆ ನಡುಕ ಹುಟ್ಟಿಸಲು ಬರ್ತಿದೆ ಮಾರುತಿ ಸುಜುಕಿಯ ಪುಟ್ಟ ಇವಿ; ಇದರ ಬೆಲೆ ತೀರಾ ಅಗ್ಗ!
ಟಾಟಾ ಟಿಯಾಗೋ ಇವಿಗೆ ನಡುಕ ಹುಟ್ಟಿಸಲು ಬರ್ತಿದೆ ಮಾರುತಿ ಸುಜುಕಿಯ ಪುಟ್ಟ ಇವಿ; ಇದರ ಬೆಲೆ ತೀರಾ ಅಗ್ಗ!
ಮಾರುತಿ ಸುಜುಕಿ 'ವಿಷನ್ ಇ-ಸ್ಕೈ' ಎಂಬ ಹೊಸ, ಅಗ್ಗದ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಟಾಟಾ ಟಿಯಾಗೋ ಇವಿಗೆ ಪೈಪೋಟಿ ನೀಡಲಿರುವ ಈ ಕಾರು, ಒಂದೇ ಚಾರ್ಜ್‌ನಲ್ಲಿ 270 ಕಿ.ಮೀ ಮೈಲೇಜ್ ನೀಡುವ ನಿರೀಕ್ಷೆಯಿದೆ. ಜಾಗತಿಕ ಮಾರುಕಟ್ಟೆಯ ನಂತರ ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಮಾರುತಿ ಸುಜುಕಿಯ ಪುಟ್ಟ ಎಲೆಕ್ಟ್ರಿಕ್ ಕಾರ್
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ‘ಇ-ವಿಟಾರಾ’ (e-Vitara) ಮಿಡ್‌ಸೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಇದರ ಮಾರಾಟ ಪ್ರಕ್ರಿಯೆ ಹಂತಹಂತವಾಗಿ ವೇಗ ಪಡೆದುಕೊಳ್ಳುತ್ತಿದೆ. ಆದರೆ, ಮಧ್ಯಮ ವರ್ಗದ ಗ್ರಾಹಕರ ಬಜೆಟ್‌ಗೆ ಈ ಎಸ್‌ಯುವಿ ಕೊಂಚ ದುಬಾರಿಯಾಗಿದೆ. ಇದೇ ಕಾರಣಕ್ಕೆ ಸುಜುಕಿ ಕಂಪನಿಯು ಇದೀಗ ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಅತ್ಯಂತ ಅಗ್ಗದ ಎಂಟ್ರಿ ಲೆವೆಲ್ ಸಣ್ಣ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ.
ಟಿಯಾಗೋ ಇವಿಗೆ ಪೈಪೋಟಿ ನೀಡಲಿರುವ 'ವಿಷನ್ ಇ-ಸ್ಕೈ'
ನಾವು ಮಾತನಾಡುತ್ತಿರುವುದು ಸುಜುಕಿ ಕಂಪನಿಯ ಮುಂಬರುವ ಹೊಸ ಪುಟ್ಟ ಎಲೆಕ್ಟ್ರಿಕ್ ಕಾರ್ ಆದ 'ವಿಷನ್ ಇ-ಸ್ಕೈ' (Vision e-Sky) ಕುರಿತು. ಈ ಕಾರು ಮಾರುಕಟ್ಟೆಯಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿರುವ ಟಾಟಾ ಟಿಯಾಗೋ ಇವಿ (Tiago EV) ಮತ್ತು ಎಂಜಿ ಕಾಮೆಟ್ ಇವಿ (MG Comet EV) ಕಾರುಗಳಿಗೆ ನೇರ ಪೈಪೋಟಿ ನೀಡಲಿದೆ. ಗಾತ್ರದಲ್ಲಿ ಇದು ಟಿಯಾಗೋ ಇವಿಗಿಂತ ಚಿಕ್ಕದಾಗಿದ್ದು, ಎಂಜಿ ಕಾಮೆಟ್‌ಗಿಂತ ದೊಡ್ಡದಾಗಿರಲಿದೆ. 2025ರ ಜಪಾನ್ ಮೊಬಿಲಿಟಿ ಶೋನಲ್ಲಿ ಸುಜುಕಿ ಕಂಪನಿಯು ಈ ಕಾರಿನ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿ ಈಗಾಗಲೇ ಎಲ್ಲರ ಗಮನ ಸೆಳೆದಿದೆ.
ಮಾರುತಿ ಎಸ್-ಪ್ರೆಸೋಗಿಂತಲೂ ಕಿರಿದಾದ ಡೈಮೆನ್ಷನ್
ಗಾತ್ರ ಮತ್ತು ವಿನ್ಯಾಸದ ದೃಷ್ಟಿಯಿಂದ ಈ ಕಾರು ಅತ್ಯಂತ ಪ್ರಾಯೋಗಿಕ ಹಾಗೂ ನಗರ ಪ್ರದೇಶದ ಬಳಕೆಗೆ ಸೂಕ್ತವಾಗಿರಲಿದೆ. ಈ ಕಾರು ಕೇವಲ 3395 ಎಂಎಂ ಉದ್ದ ಇರಲಿದ್ದರೆ, 1475 ಎಂಎಂ ಅಗಲ ಹೊಂದಿರಲಿದೆ. 1625 ಎಂಎಂ ಎತ್ತರ ಇರಲಿದೆ. ಅಂದರೆ, ಈ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿಯ ಸಣ್ಣ ಕಾರಾದ 'ಎಸ್-ಪ್ರೆಸೋ' (S-Presso) ಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿರಲಿದೆ. ಇದು ಹೆವಿ ಟ್ರಾಫಿಕ್ ರಸ್ತೆಗಳಲ್ಲಿ ಸುಲಭವಾಗಿ ಚಲಿಸಲು ಮತ್ತು ಪಾರ್ಕಿಂಗ್ ಮಾಡಲು ಅತ್ಯಂತ ಸಹಕಾರಿಯಾಗಲಿದೆ.
ಬರೋಬ್ಬರಿ 270 ಕಿ.ಮೀ ಮೈಲೇಜ್ ರೇಂಜ್!
ಈ ಸಣ್ಣ ಎಲೆಕ್ಟ್ರಿಕ್ ಕಾರು ಗಾತ್ರದಲ್ಲಿ ಕಿರಿದಾಗಿದ್ದರೂ ಮೈಲೇಜ್ ಸಾಮರ್ಥ್ಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಒಂದೇ ಚಾರ್ಜ್‌ನಲ್ಲಿ ಈ ಕಾರ್ ಬರೋಬ್ಬರಿ 270 ಕಿಲೋಮೀಟರ್ ಕ್ಲೈಮ್ಡ್ ರೇಂಜ್ (Claimed Range) ನೀಡಲಿದೆ ಎಂದು ವರದಿಗಳು ತಿಳಿಸಿವೆ. ಆರಂಭಿಕ ಹಂತದಲ್ಲಿ ಈ ಕಾರನ್ನು ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಕಂಪನಿ ಯೋಜಿಸುತ್ತಿದ್ದು, ಅಲ್ಲಿ ಇದು ಹೊಂಡಾ ಸೂಪರ್-ಎನ್ (Honda Super-N) ನಂತಹ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಯಾವಾಗ?
ಸುಜುಕಿ ಕಂಪನಿಯು ಈ ಕಾರನ್ನು ಜಾಗತಿಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸುತ್ತಿದೆ. ಸದ್ಯ ಲಭ್ಯವಿರುವ ವರದಿಗಳ ಪ್ರಕಾರ, ಸುಜುಕಿ ಬ್ರ್ಯಾಂಡ್ ಈ ಕಾರನ್ನು ಇದೇ ಆರ್ಥಿಕ ವರ್ಷದಲ್ಲಿ (Current Financial Year) ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಭಾರತಕ್ಕೂ ಬರಲಿದೆಯೇ ಈ ಅಗ್ಗದ ಇವಿ?
ಸದ್ಯಕ್ಕೆ ಸುಜುಕಿ ಕಂಪನಿಯು ಈ ಕಾರನ್ನು ಜಾಗತಿಕ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸುತ್ತಿದೆ. ಆದರೆ, ಭಾರತದಲ್ಲಿ ಬಜೆಟ್ ಬೆಲೆಯ ಇವಿ ಕಾರುಗಳಿಗೆ ಇರುವ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಮಾರುತಿ ಸುಜುಕಿ ಈ ಕಾರಿನ ಭಾರತೀಯ ಆವೃತ್ತಿಯನ್ನು (Localized Version) ಇಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ, ಮಾರುತಿ ಸುಜುಕಿ ಕಡೆಯಿಂದ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಗ್ರಾಹಕರು ಸದ್ಯ ಕಾಯ್ದು ನೋಡಬೇಕಾಗಿದೆ.

