ವಾಹನಗಳ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಮೇಲಿನ ವ್ಯಾಮೋಹದಿಂದಾಗಿ ಸಾರಿಗೆ ಇಲಾಖೆಯು 2025-26ನೇ ಸಾಲಿನಲ್ಲಿ ಇ-ಹರಾಜಿನ ಮೂಲಕ ದಾಖಲೆಯ 118.14 ಕೋಟಿ ರೂ. ಆದಾಯ ಗಳಿಸಿದೆ.
ಬೆಂಗಳೂರು (ಆ.17): ವಾಹನಗಳ ನೋಂದಣಿ ಸಂಖ್ಯೆ ಎನ್ನುವುದು ಇನ್ನು ಮುಂದೆ ಕೇವಲ ಒಂದು ಗುರುತು ಮಾತ್ರವಲ್ಲ. ಬದಲಿಗೆ, ಕಳೆದ ಕೆಲವು ವರ್ಷಗಳಿಂದ ಇದು ಪ್ರತಿಷ್ಠೆಯ ಪ್ರತೀಕವಾಗಿ, ಅದೃಷ್ಟದ ಸಂಕೇತವಾಗಿ ಮತ್ತು ವೈಯಕ್ತಿಕ ಪರಿಚಯದ ವಿಧಾನವಾಗಿ ರೂಪುಗೊಂಡಿದೆ. ರಾಜಕಾರಣಿಗಳು ಮತ್ತು ಸಿನಿಮಾ ಸ್ಟಾರ್‌ಗಳಿಂದ ಹಿಡಿದು ಉದ್ಯಮಿಗಳು ಹಾಗೂ ಯುವ ಲಕ್ಸುರಿ ಕಾರು ಮಾಲೀಕರವರೆಗೆ ವಿಶೇಷ 'ಫ್ಯಾನ್ಸಿ' ನೋಂದಣಿ ಸಂಖ್ಯೆಗಳನ್ನು ಸ್ವಂತವಾಗಿಸಿಕೊಳ್ಳಲು ನಡೆಯುತ್ತಿರುವ ಪೈಪೋಟಿಯು ಸಾರಿಗೆ ಇಲಾಖೆಗೆ ದಾಖಲೆ ಮಟ್ಟದ ಆದಾಯವನ್ನು ತಂದುಕೊಡುತ್ತಿದೆ. 2025-26ನೇ ಸಾಲಿನಲ್ಲಿ ಒಂದೇ ವರ್ಷದಲ್ಲಿ ಪ್ರೀಮಿಯಂ ನೋಂದಣಿ ಸಂಖ್ಯೆಗಳ ಇ-ಹರಾಜಿನ ಮೂಲಕ ಇಲಾಖೆಯು ಅತಿ ಹೆಚ್ಚು ಅಂದರೆ ಬರೋಬ್ಬರಿ 118.14 ಕೋಟಿ ರೂಪಾಯಿಗಳ ಭರ್ಜರಿ ಆದಾಯವನ್ನು ಗಳಿಸಿದೆ.
ಐದು ವರ್ಷಗಳಲ್ಲಿ ದಾಖಲೆ ಮಟ್ಟದ ಆದಾಯ ಏರಿಕೆ
0001, 0007, 9999, 1111 ಮತ್ತು 7777 ರಂತಹ ಜನಪ್ರಿಯ ಸಂಖ್ಯೆಗಳ ಮೇಲಿನ ಹೆಚ್ಚುತ್ತಿರುವ ವ್ಯಾಮೋಹವು, ವಾಹನ ಮಾಲೀಕರು ಲಕ್ಷಾಂತರ ರೂಪಾಯಿಗಳನ್ನು, ಕೆಲವೊಮ್ಮೆ ಕಾರಿನ ಬೆಲೆಗಿಂತಲೂ ಹೆಚ್ಚಿನ ಹಣವನ್ನು ತಮ್ಮಿಷ್ಟದ ನಂಬರ್‌ಗಾಗಿ ಖರ್ಚು ಮಾಡಲು ಸಿದ್ಧರಿರುವುದನ್ನು ತೋರಿಸುತ್ತದೆ. ಸಾರಿಗೆ ಇಲಾಖೆಯ ದತ್ತಾಂಶದ ಪ್ರಕಾರ, ಫ್ಯಾನ್ಸಿ ನಂಬರ್ ಹರಾಜಿನಿಂದ ಬರುವ ಆದಾಯವು ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಏರಿಕೆಯಾಗಿದೆ.
- 2021-22: 24.51 ಕೋಟಿ ರೂ.
- 2022-23: 66.34 ಕೋಟಿ ರೂ.
- 2023-24: 94.58 ಕೋಟಿ ರೂ.
- 2024-25: 89.20 ಕೋಟಿ ರೂ.
- 2025-26: ದಾಖಲೆಯ 118.14 ಕೋಟಿ ರೂ.
ಬೆಂಗಳೂರು ಮತ್ತು ಮೈಸೂರಿನಲ್ಲಿ ಮುಂಚೂಣಿ ಕ್ರೇಜ್
ಈ ಕ್ರೇಜ್ ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಐಷಾರಾಮಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆಯಾಗಿದೆ. ಕೋರಮಂಗಲದ ಕೆಎ-01 (KA-01) ಪ್ರಾದೇಶಿಕ ಸಾರಿಗೆ ಕಚೇರಿಯು (RTO) ಪ್ರೀಮಿಯಂ ನೋಂದಣಿ ಸಂಖ್ಯೆಗಳಿಗೆ ಅತಿ ಹೆಚ್ಚು ಬಿಡ್‌ಗಳನ್ನು ದಾಖಲಿಸುವುದನ್ನು ಮುಂದುವರಿಸಿದೆ, ಇದರ ನಂತರದ ಸ್ಥಾನದಲ್ಲಿ ಮೈಸೂರು ಇದೆ.
ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಪ್ರಮುಖ ಸಂಖ್ಯೆಗಳ ವಿವರ
'0001' ಸಂಖ್ಯೆಯು 28.60 ಲಕ್ಷ ರೂ.ಗಳಿಗೆ ಮಾರಾಟವಾಗಿದೆ. ಮತ್ತೊಂದು ವಾಹನಕ್ಕೆ '0001' ಸಂಖ್ಯೆಯು 22.85 ಲಕ್ಷ ರೂ.ಗಳಿಗೆ ಹರಾಜಾಗಿದೆ. ಇನ್ನುಳಿದಂತೆ 9999 ಸಂಖ್ಯೆ 21.75 ಲಕ್ಷ ರೂ., ಮತ್ತೊಂದು 0001 ಸಂಖ್ಯೆ 20.75 ಲಕ್ಷ ರೂ. ಹಾಗೂ 0081 ಸಂಖ್ಯೆಯು 21.15 ಲಕ್ಷ ರೂ.ಗಳ ಗರಿಷ್ಠ ಬಿಡ್ ಪಡೆದುಕೊಂಡಿದೆ.
ಅನಧಿಕೃತ ಮಾರ್ಗಗಳಿಗೆ ಅಂತ್ಯ ಹಾಡಿದ ಪಾರದರ್ಶಕ ಆನ್‌ಲೈನ್ ಹರಾಜು
ತಮ್ಮಿಷ್ಟದ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳುವುದು ಹಿಂದೆ ಅನಧಿಕೃತ ಮಾರ್ಗಗಳು ಅಥವಾ ಶಿಫಾರಸುಗಳನ್ನು ಅವಲಂಬಿಸಿತ್ತು. ಸಾರಿಗೆ ಇಲಾಖೆಯು ಪಾರದರ್ಶಕ ಇ-ಹರಾಜು (e-auction) ವ್ಯವಸ್ಥೆಯನ್ನು ಪರಿಚಯಿಸುವ ಮೊದಲು, ಅರ್ಜಿದಾರರು ವಿಐಪಿ ನಂಬರ್‌ಗಳನ್ನು ಮುಂಚಿತವಾಗಿ ಪಡೆದುಕೊಳ್ಳಲು ವೈಯಕ್ತಿಕ ಪ್ರಭಾವವನ್ನು ಬೀರುವುದು ಅಥವಾ ಅಧಿಕಾರಿಗಳಿಗೆ ಲಂಚ ನೀಡುವುದು ಸಾಮಾನ್ಯಾವಾಗಿತ್ತು.
ಆದರೆ, ಡಿಜಿಟಲ್ ಹರಾಜು ಪ್ರಕ್ರಿಯೆಯು ಪ್ರಸ್ತುತ ಮತ್ತು ಮುಂಗಡ ಸಿರೀಸ್‌ಗಳಲ್ಲಿ (running and advance series) ಲಭ್ಯವಿರುವ ಸಂಖ್ಯೆಗಳಿಗೆ ಯಾರು ಬೇಕಾದರೂ ಮುಕ್ತವಾಗಿ ಬಿಡ್ ಮಾಡಲು ಅವಕಾಶ ಕಲ್ಪಿಸುವ ಮೂಲಕ ಇಂತಹ ಅಕ್ರಮಗಳಿಗೆ ಬಹುತೇಕ ಕಡಿವಾಣ ಹಾಕಿದೆ. ಇಂದು ಬಿಡ್‌ದಾರರು ಸ್ಪರ್ಧಾತ್ಮಕ ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸುವ ಮೊದಲು ಭದ್ರತಾ ಠೇವಣಿ (Earnest Money Deposit) ಯೊಂದಿಗೆ ನಿಗದಿತ ನೋಂದಣಿ ಶುಲ್ಕವನ್ನು ಪಾವತಿಸುತ್ತಿದ್ದಾರೆ.
ಪ್ರತಿಷ್ಠೆ, ಸಂಖ್ಯಾಶಾಸ್ತ್ರ ಮತ್ತು ಹೂಡಿಕೆ ಮೌಲ್ಯ
ಪ್ರತಿಷ್ಠೆ, ಸಂಖ್ಯಾಶಾಸ್ತ್ರ (Numerology) ಮತ್ತು ಹೂಡಿಕೆಯ ಮೌಲ್ಯದ ಸಂಯೋಜನೆಯೇ ಈ ಭಾರಿ ಬೇಡಿಕೆಗೆ ಕಾರಣ ಎಂದು ಅಧಿಕಾರಿಗಳು ವಿವರಿಸುತ್ತಾರೆ. ಅನೇಕ ಖರೀದಿದಾರರು ನಿರ್ದಿಷ್ಟ ಸಂಖ್ಯೆಗಳು ಸಮೃದ್ಧಿ ಅಥವಾ ಯಶಸ್ಸನ್ನು ತರುತ್ತವೆ ಎಂದು ನಂಬಿದರೆ, ಇತ್ತ ಕೆಲವರು ಪುನರಾವರ್ತಿತ ಅಂಕಿಅಂಶಗಳನ್ನು ನೆನಪಿಟ್ಟುಕೊಳ್ಳಲು ಸುಲಭವೆಂದು ಇಷ್ಟಪಡುತ್ತಾರೆ. ಐಷಾರಾಮಿ ವಾಹನಗಳ ಮರುಮಾರಾಟ ಮೌಲ್ಯವನ್ನು ಹೆಚ್ಚಿಸುವುದರ ಜೊತೆಗೆ, ಪ್ರೀಮಿಯಂ ನೋಂದಣಿ ಸಂಖ್ಯೆಗಳು ವ್ಯಾಪಾರ ಮಾಲೀಕರಿಗೆ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳಿಗೆ (influencers) ಒಂದು ಬ್ರ್ಯಾಂಡಿಂಗ್ ಸಾಧನವಾಗಿ ಮಾರ್ಪಟ್ಟಿವೆ.
"ವಾಹನ ಮಾಲೀಕರು ಆಕರ್ಷಕ ನೋಂದಣಿ ಸಂಖ್ಯೆಗಳನ್ನು ಪಡೆಯಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಕೇವಲ ಫ್ಯಾನ್ಸಿ ನಂಬರ್ ಹರಾಜಿನಿಂದಲೇ ಇಲಾಖೆಯು ಒಂದೇ ಹಣಕಾಸು ವರ್ಷದಲ್ಲಿ ಸುಮಾರು 118 ಕೋಟಿ ರೂ.ಗಳನ್ನು ಗಳಿಸಿದೆ" ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ರಾಜಕೀಯ ನಾಯಕರು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಅನೇಕರು ತಮ್ಮ ಜನ್ಮ ದಿನಾಂಕಗಳು, ಅದೃಷ್ಟದ ಸಂಖ್ಯೆಗಳು ಅಥವಾ ಸಂಖ್ಯಾಶಾಸ್ತ್ರದ ಆದ್ಯತೆಗಳಿಗೆ ಹೊಂದಿಕೆಯಾಗುವ ನೋಂದಣಿ ಸಂಖ್ಯೆಗಳನ್ನು ಆರಿಸಿಕೊಳ್ಳುತ್ತಾರೆ. ಚಲನಚಿತ್ರ ವ್ಯಕ್ತಿತ್ವಗಳು, ಉದ್ಯಮಿಗಳು ಮತ್ತು ಶ್ರೀಮಂತ ವ್ಯಕ್ತಿಗಳು (HNIs) ಕೂಡ ವಿಶೇಷ ಸಂಯೋಜನೆಗಳನ್ನು ಪಡೆದುಕೊಳ್ಳಲು ಉತ್ಸುಕರಾಗಿದ್ದು, ಬಿಡ್‌ಗಳನ್ನು ಸಲ್ಲಿಸುವ ಮೊದಲು ಹೆಚ್ಚಾಗಿ ಜ್ಯೋತಿಷಿಗಳನ್ನು ಸಂಪರ್ಕಿಸುತ್ತಾರೆ.
"ಈ ಬೆಳೆಯುತ್ತಿರುವ ಗೀಳು ಅನಿರೀಕ್ಷಿತ ಆರ್ಥಿಕ ಲಾಭವನ್ನು ತಂದುಕೊಟ್ಟಿದೆ. ಯಾವುದೇ ಹೆಚ್ಚುವರಿ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡದೆ, ಇಲಾಖೆಯು ಕೇವಲ ಸೀಮಿತ ಸಂಖ್ಯೆಯ ಅಪೇಕ್ಷಿತ ಸಂಖ್ಯೆಗಳನ್ನು ಹರಾಜು ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳ ತೆರಿಗೆಯೇತರ ಆದಾಯವನ್ನು (non-tax revenue) ಉತ್ಪಾದಿಸುತ್ತಿದೆ. ಪ್ರತಿವರ್ಷ ಹೆಚ್ಚಿನ ಐಷಾರಾಮಿ ವಾಹನಗಳು ರಸ್ತೆಗಿಳಿಯುತ್ತಿರುವುದರಿಂದ, ವಿಶೇಷ ನೋಂದಣಿ ಸಂಖ್ಯೆಗಳ ಸ್ಪರ್ಧೆಯು ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ" ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.


