ಜೆಎಸ್‌ಡಬ್ಲ್ಯೂ ಮೋಟರ್ಸ್, ಚೀನಾದ 'ಚೆರಿ ಆಟೋಮೊಬೈಲ್' ಜೊತೆಗೂಡಿ ಭಾರತದಲ್ಲಿ 5 ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸ್ಥಳೀಯವಾಗಿ ತಯಾರಿಸಲ್ಪಡುವ ಈ ಕಾರುಗಳಲ್ಲಿ ಜೆಟೋರ್ T2, ಜೈಕೂ J5 ನಂತಹ ಮಾಡೆಲ್‌ಗಳು ಸೇರಿವೆ.
ನವದೆಹಲಿ (ಜು.30): ಭಾರತದ ಪ್ಯಾಸೆಂಜರ್ ವಾಹನ ಮಾರುಕಟ್ಟೆಯಲ್ಲಿ ಧಮಾಕಾ ಸೃಷ್ಟಿಸಲು 'ಜೆಎಸ್‌ಡಬ್ಲ್ಯೂ ಮೋಟರ್ಸ್' (JSW Motors) ಭರ್ಜರಿ ತಯಾರಿ ನಡೆಸಿದೆ. ಚೀನಾದ ಪ್ರಮುಖ ಕಾರು ತಯಾರಿಕಾ ಸಂಸ್ಥೆ 'ಚೆರಿ ಆಟೋಮೊಬೈಲ್' (Chery Automobile) ಜೊತೆ ಕೈಜೋಡಿಸಿರುವ ಜೆಎಸ್‌ಡಬ್ಲ್ಯೂ, ದೇಶಿಯ ಮಾರುಕಟ್ಟೆಗೆ 5 ಹೊಸ ಎಸ್‌ಯುವಿ (SUV) ಮಾಡೆಲ್‌ಗಳನ್ನು ಪರಿಚಯಿಸಲು ಸಜ್ಜಾಗಿದೆ. ಇವುಗಳಲ್ಲಿ ಜೆಟೋರ್ T2, ಜೈಕೂ J5, ಐಕಾರ್ V23 EV, QQ3 EV ಮತ್ತು ಜೈಕೂ J7 ಕಾರುಗಳು ಸೇರಿವೆ. ಅದರೊಂದಿಗೆ ಜೆಎಸ್‌ಡಬ್ಲ್ಯೂ ಮೋಟರ್ಸ್ ಪ್ರಥಮ ಬಾರಿಗೆ ಸ್ವಂತ ಹೆಸರಿನಲ್ಲಿ ಭಾರತದಲ್ಲಿ ಕಾರುಗಳನ್ನು ಬಿಡುಗಡೆ ಮಾಡಲಿದೆ. ಈ ಎಲ್ಲಾ ವಾಹನಗಳನ್ನು ಭಾರತದಲ್ಲೇ ಸ್ಥಳೀಯವಾಗಿ (Locally) ತಯಾರಿಸಲಾಗುತ್ತದೆ. ಜೈಕೂ J5 ಕಾರು ಕ್ರೆಟಾ, ಸೆಲ್ಟೋಸ್ ಹಾಗೂ ಗ್ರಾಂಡ್ ವಿಟಾರಾದಂತಹ ಜನಪ್ರಿಯ ಎಸ್‌ಯುವಿಗಳಿಗೆ ನೇರಾನೇರ ಪೈಪೋಟಿ ನೀಡಲಿದೆ.
ಚೀನಾ ಮೂಲದ 'ಚೆರಿ' ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿದ್ದು, ಅದರ ಅಡಿಯಲ್ಲಿ ಜೆಟೋರ್ (Jetour), ಜೈಕೂ (Jaecoo), ಐಕಾರ್ (iCAR) ಮತ್ತು ಎಕ್ಸೀಡ್ (Exceed) ನಂತಹ ಪ್ರಸಿದ್ಧ ಬ್ರ್ಯಾಂಡ್‌ಗಳಿವೆ. ಈ ಸಹಭಾಗಿತ್ವದ ಮೂಲಕ ಜೆಎಸ್‌ಡಬ್ಲ್ಯೂ ಸಂಸ್ಥೆಗೆ ಚೆರಿ ಕಂಪನಿಯ ಪ್ಲಾಟ್‌ಫಾರ್ಮ್, ಸುಧಾರಿತ ತಂತ್ರಜ್ಞಾನ ಹಾಗೂ ಬಿಡಿಭಾಗಗಳ ಸಂಪೂರ್ಣ ಬೆಂಬಲ ಸಿಗಲಿದೆ. ಜೆಎಸ್‌ಡಬ್ಲ್ಯೂ ಮೋಟರ್ಸ್ ತನ್ನ ಹೆಸರಿನಲ್ಲಿಯೇ ಈ ಕಾರುಗಳನ್ನು ಮಾರುಕಟ್ಟೆಗೆ ತರಲಿದ್ದು, ಭಾರತದಲ್ಲೇ ಸ್ಥಳೀಯವಾಗಿ ಇವುಗಳನ್ನು ಉತ್ಪಾದಿಸಲಿದೆ.
ಜೆಟೋರ್ T2 (Jetour T2): ಮಹೀಂದ್ರಾ ಥಾರ್ ರಾಕ್ಸ್ ಗೆ ಸವಾಲು
ಜೆಎಸ್‌ಡಬ್ಲ್ಯೂ ಸಂಸ್ಥೆಯ ಮೊದಲ ಕಾರಾಗಿ 'ಜೆಟೋರ್ T2' ಭಾರತದ ರಸ್ತೆಗಿಳಿಯುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಜೆಎಸ್‌ಡಬ್ಲ್ಯೂನ ನೂತನ ಉತ್ಪಾದನಾ ಘಟಕದಲ್ಲಿ ಇದನ್ನು ತಯಾರಿಸಲಾಗುತ್ತದೆ.
ಈ ಕಾರು ಅತ್ಯಂತ ರಫ್ ಅಂಡ್ ಟಫ್ ಹಾಗೂ ಬಾಕ್ಸಿ ವಿನ್ಯಾಸವನ್ನು ಹೊಂದಿದ್ದು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಆಫ್-ರೋಡ್ ಎಸ್‌ಯುವಿ ಲುಕ್ ನೀಡುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದು ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದ್ದು, ಪೆಟ್ರೋಲ್ ಇಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಹಾಗೂ ಬಲಿಷ್ಠ ಬ್ಯಾಟರಿ ಬೆಂಬಲವನ್ನು ಹೊಂದಿದೆ.
ಜೈಕೂ J5 (Jaecoo J5): ಕ್ರೆಟಾ, ಸೆಲ್ಟೋಸ್‌ಗೆ ಟಕ್ಕರ್
ಸಂಸ್ಥೆಯ ಎರಡನೇ ಪ್ರಮುಖ ಎಸ್‌ಯುವಿಯಾಗಿ 'ಜೈಕೂ J5' ಬಿಡುಗಡೆಯಾಗಲಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ಗೆ ಕಠಿಣ ಸ್ಪರ್ಧೆ ನೀಡಲಿದೆ. ಜಾಗತಿಕ ಮಾಡೆಲ್‌ಗಳಲ್ಲಿ ಇದನ್ನು ಟರ್ಬೊ ಪೆಟ್ರೋಲ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಇಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತಿದೆ.
ಐಕಾರ್ V23 EV (iCar V23 EV): ಇವಿ ಮಾರುಕಟ್ಟೆಯತ್ತ ಗಮನ
ಜೆಎಸ್‌ಡಬ್ಲ್ಯೂನ ಎಲೆಕ್ಟ್ರಿಕ್ ವಾಹನಗಳ ಸಾಲಿನಲ್ಲಿ 'ಐಕಾರ್ V23 EV' ಪ್ರಮುಖ ಆಕರ್ಷಣೆಯಾಗಲಿದೆ. ಇದು ದೊಡ್ಡ ಬ್ಯಾಟರಿ ಪ್ಯಾಕ್ ಹಾಗೂ ಆಲ್-ವೀಲ್ ಡ್ರೈವ್ (AWD) ಸಿಸ್ಟಮ್ ಹೊಂದುವ ಸಾಧ್ಯತೆಯಿದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 430 ಕಿಲೋಮೀಟರ್‌ಗಳಷ್ಟು ಮೈಲೇಜ್ (ರಾಂಜ್) ನೀಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಭಾರತದಲ್ಲಿ ಇದು ಮಹೀಂದ್ರಾ BE 6, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಮತ್ತು ಮಾರುತಿ e-ವಿಟಾರಾಗೆ ಪ್ರಬಲ ಎದುರಾಳಿಯಾಗಲಿದೆ.
QQ3 EV ಮತ್ತು ಜೈಕೂ J7 ಕೂಡ ಲಿಸ್ಟ್‌ನಲ್ಲಿ
ಇದರ ಹೊರತಾಗಿ, ಕಂಪನಿಯು ಆರಂಭಿಕ ಹಂತದ ಎಲೆಕ್ಟ್ರಿಕ್ ಕಾರಾಗಿ 'QQ3 EV' ಅನ್ನು ಪರಿಚಯಿಸಲಿದ್ದು, ಇದು ಟಾಟಾ ಟಿಯಾಗೋ EV ಗೆ ಸವಾಲೆಸೆಯಲಿದೆ. ಮತ್ತೊಂದೆಡೆ, 'ಜೈಕೂ J7' ಪ್ರೀಮಿಯಂ ಎಸ್‌ಯುವಿಯಾಗಿದ್ದು, ಪೆಟ್ರೋಲ್, ಹೈಬ್ರಿಡ್ ಹಾಗೂ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಗಳಲ್ಲಿ ಭಾರತಕ್ಕೆ ಬರುವ ನಿರೀಕ್ಷೆಯಿದೆ.
ಜೆಎಸ್‌ಡಬ್ಲ್ಯೂನ ಈ ಹೊಸ ಎಸ್‌ಯುವಿ ತಂತ್ರಜ್ಞಾನ ಮತ್ತು ಕಾರುಗಳ ದಂಡು ಭಾರತೀಯ ಆಟೋಮೊಬೈಲ್ ರಂಗದಲ್ಲಿ ಕಂಪನಿಯ ಬಲವಾದ ಹೆಜ್ಜೆಯನ್ನು ತೋರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಎಸ್‌ಯುವಿ ವಿಭಾಗದಲ್ಲಿ ಪೈಪೋಟಿ ಮತ್ತಷ್ಟು ಕಾವೇರಲಿದೆ.


