2025ರ ಜೂನ್‌ನಲ್ಲಿ ಭಾರತದ ಆಟೋಮೊಬೈಲ್ ಉದ್ಯಮವು ಮಿಶ್ರ ಫಲಿತಾಂಶಗಳನ್ನು ಕಂಡಿದೆ. ಒಟ್ಟಾರೆ ವಾಹನ ಮಾರಾಟ ಕುಸಿದಿದ್ದರೂ, ಕೆಲವು SUVಗಳು ಗಮನಾರ್ಹ ಏರಿಕೆ ದಾಖಲಿಸಿವೆ. ಮಾರುತಿ ಸುಜುಕಿ ಅಗ್ರಸ್ಥಾನದಲ್ಲಿ ಉಳಿದಿದ್ದರೆ, ಮಹೀಂದ್ರ & ಮಹೀಂದ್ರ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ.

2025ರ ಜೂನ್ ತಿಂಗಳು ಭಾರತದ ಆಟೋಮೊಬೈಲ್ ಉದ್ಯಮಕ್ಕೆ ಅಷ್ಟೇನೂ ಚೆನ್ನಾಗಿರಲಿಲ್ಲ. 2024ರ ಜೂನ್‌ಗೆ ಹೋಲಿಸಿದರೆ ಒಟ್ಟಾರೆ ವಾಹನ ರಫ್ತು ಮತ್ತು ಮಾರಾಟ ಕ್ರಮವಾಗಿ ಶೇ.6.4 ಮತ್ತು ಶೇ.9.1ರಷ್ಟು ಕುಸಿತ ಕಂಡಿವೆ. ಕಳೆದ ತಿಂಗಳು ಸುಮಾರು 3.17 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 3.39 ಲಕ್ಷ ಯೂನಿಟ್‌ಗಳು ಮಾರಾಟ ಆಗಿದ್ದವು.

  • ಮಾರುತಿ ಸುಜುಕಿ 1,18,906 ಯೂನಿಟ್‌ಗಳ ಮಾರಾಟದೊಂದಿಗೆ ಅಗ್ರಸ್ಥಾನದಲ್ಲಿ ಉಳಿದಿದೆ. ಆದರೆ ವಾರ್ಷಿಕವಾಗಿ ಶೇ.13.3ರಷ್ಟು ಕುಸಿತ ಕಂಡಿದೆ.
  • ಹೊಸ ಎಲೆಕ್ಟ್ರಿಕ್ ವಾಹನಗಳು ಮತ್ತು ಬಲಿಷ್ಠ SUV ಪೋರ್ಟ್‌ಫೋಲಿಯೋದಿಂದಾಗಿ ಮಹೀಂದ್ರ & ಮಹೀಂದ್ರ ಸತತ ಮೂರನೇ ತಿಂಗಳೂ ಹುಂಡೈಯನ್ನು ಹಿಂದಿಕ್ಕಿ 2ನೇ ಸ್ಥಾನದಲ್ಲಿ ಉಳಿದಿದೆ.
  • 44,024 ಯೂನಿಟ್‌ಗಳು (ಶೇ.12.1 ಕುಸಿತ) ಮಾರಾಟದೊಂದಿಗೆ ಹುಂಡೈ 3ನೇ ಸ್ಥಾನವನ್ನು ಪಡೆದುಕೊಂಡಿದೆ.
  • ಇನ್ನು 37,083 ಯೂನಿಟ್‌ಗಳು (ಶೇ.14.8 ಕುಸಿತ) ಯೂಟಿಟ್‌ಗಳ ಮಾರಾಟದ ಮೂಲಕ ಟಾಟಾ 4ನೇ ಸ್ಥಾನವನ್ನು ಪಡೆದಿದೆ.
  • 26,453 ಯೂನಿಟ್‌ಗಳ ಮಾರಾಟದೊಂದಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಭಾರತದ 5ನೇ ಅತಿದೊಡ್ಡ ಕಾರು ತಯಾರಕರಾಗಿ ಹೊರಹೊಮ್ಮಿದೆ.

SUV ವಿಭಾಗದ ಮಾರಾಟದ ಬಗ್ಗೆ ಹೇಳುವುದಾದರೆ, 15,786 ಯೂನಿಟ್‌ಗಳ ಮಾರಾಟದೊಂದಿಗೆ ಹುಂಡೈ ಕ್ರೆಟಾ ಅಗ್ರಸ್ಥಾನದಲ್ಲಿದೆ. ಆದರೆ, ವಾರ್ಷಿಕವಾಗಿ ಮಾರಾಟ ಶೇ.3ರಷ್ಟು ಕುಸಿತ ಕಂಡಿದೆ. ಜೂನ್‌ನಲ್ಲಿ ಹೆಚ್ಚು ಮಾರಾಟವಾದ SUVಗಳಲ್ಲಿ ಮಾರುತಿ ಬ್ರೆಝಾ ಮತ್ತು ಮಹೀಂದ್ರ ಸ್ಕಾರ್ಪಿಯೋ ಕ್ರಮವಾಗಿ 14,507 ಯೂನಿಟ್‌ಗಳು ಮತ್ತು 12,740 ಯೂನಿಟ್‌ಗಳ ಮಾರಾಟದೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆದಿವೆ. ಬ್ರೆಝಾ ವಾರ್ಷಿಕ ಮಾರಾಟ ಶೇ.10ರಷ್ಟು ಏರಿಕೆ ಕಂಡರೆ, ಸ್ಕಾರ್ಪಿಯೋ ಮಾರಾಟ ಶೇ.4ರಷ್ಟು ಸ್ವಲ್ಪ ಏರಿಕೆ ಕಂಡಿದೆ.

ಟಾಟಾದ ಜನಪ್ರಿಯ ನೆಕ್ಸಾನ್, ಪಂಚ್ ಕಾಂಪ್ಯಾಕ್ಟ್ SUVಗಳ ವಾರ್ಷಿಕ ಮಾರಾಟ ಕ್ರಮವಾಗಿ ಶೇ.4 ಮತ್ತು ಶೇ.43ರಷ್ಟು ಕುಸಿತ ಕಂಡಿದೆ. 2024ರ ಜೂನ್‌ನಲ್ಲಿ ಇದು 12,066 ಯೂನಿಟ್‌ಗಳಾಗಿದ್ದವು. ಕಳೆದ ತಿಂಗಳು ಒಟ್ಟು 11,602 ನೆಕ್ಸಾನ್ ಯೂನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ 18,238 ಯೂನಿಟ್‌ಗಳನ್ನು ಮಾರಾಟ ಮಾಡಿದ್ದ ಟಾಟಾ ಪಂಚ್ ಕೇವಲ 10,446 ಯೂನಿಟ್‌ಗಳನ್ನು ಮಾರಾಟ ಮಾಡಿದೆ.

ಮಾರುತಿ ಫ್ರಾಂಕ್ಸ್ 9,815 ಯೂನಿಟ್‌ಗಳ ಮಾರಾಟದೊಂದಿಗೆ 6ನೇ ಸ್ಥಾನದಲ್ಲಿದೆ. ಮಹೀಂದ್ರ ಥಾರ್ ಮತ್ತು ಟೊಯೋಟಾ ಹೈರೈಡರ್ ಸ್ಥಾನ ಗಳಿಸಿವೆ. 2024ರ ಜೂನ್‌ನಲ್ಲಿ 5,376 ಯೂನಿಟ್‌ಗಳನ್ನು ಮಾರಾಟ ಮಾಡಿದ್ದ ಮಹೀಂದ್ರ 9,542 ಥಾರ್ ಯೂನಿಟ್‌ಗಳನ್ನು ಮಾರಾಟ ಮಾಡಿ ಶೇ.77ರಷ್ಟು ಗಣನೀಯ ಏರಿಕೆ ದಾಖಲಿಸಿದೆ. ಟೊಯೋಟಾ ಹೈರೈಡರ್ 7,462 ಯೂನಿಟ್‌ಗಳನ್ನು ಮಾರಾಟ ಮಾಡಿ ಶೇ.75ರಷ್ಟು ವಾರ್ಷಿಕ ಏರಿಕೆ ದಾಖಲಿಸಿದೆ. ಮಹೀಂದ್ರ XUV300 (7,089 ಯೂನಿಟ್‌ಗಳು) ಮತ್ತು ಹುಂಡೈ ವೆನ್ಯೂ (6,858 ಯೂನಿಟ್‌ಗಳು) ಕ್ರಮವಾಗಿ ಒಂಬತ್ತನೇ ಮತ್ತು ಹತ್ತನೇ ಸ್ಥಾನಗಳನ್ನು ಪಡೆದಿವೆ.