ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಬೇಕು. ವ್ಯಕ್ತಿಯಾದರೂ ಸರಿ, ಉದ್ಯಮವಾದರೂ ಸರಿ. ಟೆಕ್ನಾಲಜಿಯಂತೂ ವೇಗವಾಗಿ ಬೆಳೆಯುತ್ತಲೇ ಇರುತ್ತದೆ. ನಾವು ಅದರ ಹಿಂದೆ ಅಷ್ಟೇ ವೇಗವಾಗಲ್ಲದಿದ್ದರೂ ಸಮೀಪವನ್ನು ತಲುಪುವಷ್ಟಾದರೂ ಅಪ್ಡೇಟ್ ಇರದಿದ್ದರೆ ಹೇಗೆ? ಅದೂ ಇಂಥ ಕೊರೋನಾದಂತಹ ಮಹಾಮಾರಿಗಳು ವಕ್ಕರಿಸಿಕೊಂಡು ಮನೆಯಿಂದ ಹೊರಬರಲು ಆಗದೆ ಲಾಕ್‌ಡೌನ್ ಮಂತ್ರ ಜಪಿಸಿ ಮನೆಯಲ್ಲೇ ಕೂತರೆ ಮುಂದಿನ ತುತ್ತಿನ ಚೀಲದ ಗತಿ? ಈಗ ಅದಕ್ಕಾಗಿಯೇ ಫಿಯೆಟ್ ತನ್ನ ಜೀಪ್ ಮಾರಾಟಕ್ಕೆ ಆನ್‌ಲೈನ್ ಮೊರೆಹೋಗಿದೆ.

ಹೌದು. ಈಗ ಸದ್ಯಕ್ಕೆ ಸಡಿಲಿಸಿರುವುದು ಲಾಕ್‌ಡೌನ್ ಅನ್ನು ಮಾತ್ರ. ಹಾಗಂತ ಕೊರೋನಾವೇನೂ ಸಂಪೂರ್ಣ ಮುಕ್ತವಾಗಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಲೇಬೇಕು. ಇದಕ್ಕೆ ಬಹುಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ನೇರ ಸಂಪರ್ಕದಿಂದ ಸಾಧ್ಯವಾದಷ್ಟು ಮಟ್ಟಿಗೆ ದೂರು ಉಳಿಯುವುದು.

ಇದನ್ನು ಓದಿ: ಸೋಷಿಯಲ್ ಡಿಸ್ಟೆನ್ಸಿಂಗ್‌ನಿಂದ ಹೆಚ್ಚಾಗಲಿದೆಯೇ ಕಾರು ಖರೀದಿ?

ಟಚ್ ಫ್ರೀ 
ಈಗ ಲಾಕ್‌ಡೌನ್ ಮುಗಿದು ಎಲ್ಲ ವಹಿವಾಟುಗಳು ಎಂದಿನಂತೆ ಪ್ರಾರಂಭವಾಯಿತು ಎಂದೇ ಇಟ್ಟುಕೊಳ್ಳೋಣ. ಆಗ ವಾಹನ ಖರೀದಿಸುವವನು ಶೋರೂಂಗೆ ಬರಲೇಬೇಕು ಅಲ್ಲಿ ಪರಸ್ಪರ ಮಾತುಕತೆ, ಟೆಸ್ಟ್ ಡ್ರೈವ್ ಇತ್ಯಾದಿ ಚಟುವಟಿಕೆ ನಡೆಯುತ್ತದೆ. ಆಗ, ಒಂದೋ ಆತನಿಗೇ ಕೊರೋನಾ ಬಂದಿದ್ದರೂ ಶೋರೂಂನಲ್ಲಿದ್ದವರಿಗೆಲ್ಲರಿಗೂ ಹಾಗೂ ಅಲ್ಲಿಗೆ ಬರುವ ಗ್ರಾಹಕರಿಗೂ ಸೋಂಕು ತಗುಲುವುದು ಪಕ್ಕಾ. ಈ ಹಿನ್ನೆಲೆಯಲ್ಲಿ ಆದಷ್ಟು ನೇರ ಸಂಪರ್ಕ ಕಡಿಮೆ ಮಾಡುವ ಉದ್ದೇಶದಿಂದ ಫಿಯಟ್ ತನ್ನ ಜೀಪ್ ಸರಣಿ ಉತ್ಪನ್ನಗಳನ್ನು “ಟಚ್ ಫ್ರೀ”ಯಾಗಿ ಮಾರಾಟ ಮಾಡಲು ಹೊರಟಿದೆ. 

ಮನೆ ಬಾಗಿಲಿಗೇ ಜೀಪ್
ಇಲ್ಲಿ ನಾಗರಿಕರು ಶೋರೂಂಗೆ ಹೋಗುವ ತೊಂದರೆ ತೆಗೆದುಕೊಳ್ಳಬೇಕಿಲ್ಲ. ಅಲ್ಲಿ ಹೋಗದೆಯೇ ಆನ್‌ಲೈನ್ ಮೂಲಕ ಬುಕ್ ಮಾಡಿಬಿಡಬಹುದಾಗಿದೆ. ಒಮ್ಮೆ ನೀವು ಆಸಕ್ತರಾಗಿ ಬುಕ್ ಮಾಡಿದಿರೆಂದಾದರೆ ಟೆಸ್ಟ್ ಡ್ರೈವ್ ಸೇವೆಯನ್ನು ಕಂಪನಿ ಮನೆ ಬಾಗಿಲಿಗೇ ತಂದು ಕೊಡಲಿದೆ. ಜೊತೆಗೆ ಸ್ಯಾನಿಟೈಸ್ ಹೊಂದಿದ ವಾಹನವನ್ನು ಮನೆಗೆ ತಲುಪಿಸುವ ಸೌಲಭ್ಯವಿದೆ ಎಂದು ಕಂಪನಿ ಹೇಳಿಕೊಂಡಿದೆ. ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಂಡಿದ್ದಾಗಿಯೂ ಕಂಪನಿ ಹೇಳಿಕೊಂಡಿದೆ. 

ಇಲ್ಲಿ ನೀವು ಮಾಡಬೇಕ್ಕಾದ್ದಿಷ್ಟೇ
ಇಲ್ಲಿ ನೀವು ಮಾಡಬೇಕಿರುವುದು ತುಂಬಾ ಸರಳ. ಸೀದಾ ಫಿಯಟ್ ವೆಬ್‌ಸೈಟ್‌ಗೆ ಭೇಟಿಕೊಡುವುದು. ಅಲ್ಲಿ ನಿಮ್ಮ ದಾಖಲೆಗಳನ್ನು ಸಲ್ಲಿಸಬೇಕು. ಅಂದರೆ, ನಿಮ್ಮ ಸಂಪರ್ಕ ಮಾಹಿತಿ, ನೀವಿರುವ ಭೌಗೋಳಿಕ ಪ್ರದೇಶ (ಜಿಯೋಗ್ರಾಫಿಕಲ್ ಲೊಕೇಶನ್), ನೀವು ಯಾವ ವಾಹನವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ, ಅದು ಯಾವ ಬಣ್ಣದ್ದಾಗಿರಬೇಕು? ಇತ್ಯಾದಿ ಮಾಹಿತಿಯನ್ನು ಅಲ್ಲಿ ಕೇಳಿದಂತೆ ನಮೂದಿಸಬೇಕು. ಬಳಿಕ ಕಂಪನಿ ನಿಮ್ಮಿಂದ ಪುನರ್ ದೃಢೀಕರಣ ಪಡೆದು ಆನ್‌ಲೈನ್ ಮೂಲಕ ಬುಕ್ಕಿಂಗ್ ಹಣವನ್ನು ಪಾವತಿ ಮಾಡಿಸಿಕೊಳ್ಳುತ್ತದೆ. 

ಇದನ್ನು ಓದಿ: ಲಾಕ್‌ಡೌನ್ ಮುಗಿದರೆ ವಿಮಾನಯಾನದಲ್ಲೂ ಸೋಷಿಯಲ್ ಡಿಸ್ಟೆನ್ಸ್; ಇಲ್ಲಿದೆ ಸೂತ್ರ!

ಅಲ್ಲಿಂದ ಸ್ವಯಂಚಾಲಿತವಾಗಿ ನಿಮ್ಮದೊಂದು ಐಡಿ ಕ್ರಿಯೇಟ್ ಆಗುತ್ತದೆ. ಜೊತೆಗೆ ಗ್ರಾಹಕರ ವಾಸಸ್ಥಳದ ಮಾಹಿತಿಯನ್ನು ಅವರ ವಾಸಸ್ಥಳ ಸಮೀಪದ ಡೀಲರ್‌ಗೆ ತಲುಪಿಸಲಾಗುತ್ತದೆ. ಬಳಿಕ ಶೋರೂಂನ ಸೇಲ್ಸ್ ಎಕ್ಸಿಕ್ಯುಟಿವ್ ನಿಮಗೆ ಟೆಸ್ಟ್‌ಡ್ರೈವ್ ಗೆ ಅವಕಾಶ ಕಲ್ಪಿಸಿ, ಒಪ್ಪಿಗೆಯಾದಲ್ಲಿ ಅಂತಿಮ ಪೇಮೆಂಟ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದರಿಂದ ಡೀಲರ್ ಶೋರೂಂನಲ್ಲಿರುವ ಉದ್ಯೋಗಿಗಳೂ ಸುರಕ್ಷಿತವಾಗಿರುತ್ತಾರೆ ಎಂದು ಕಂಪನಿ ಹೇಳಿಕೊಂಡಿದೆ. 

ಮಹೀಂದ್ರ ಕೊಡುಗೆ
ಮಹೀಂದ್ರ ಸ್ಕಾರ್ಪಿಯೋ BS6 ವಾಹನವನ್ನು ಆನ್‌ಲೈನ್ ಮೂಲಕ ಕೇವಲ 5000 ರೂಪಾಯಿ ಮುಂಗಡ ಪಾವತಿಸಿ ಬುಕ್ ಮಾಡಬಹುದು ಎಂದು ಈಚೆಗಷ್ಟೇ ಕಂಪನಿ ಆಫರ್ ನೀಡಿದೆ. ಈ ಸೌಲಭ್ಯದಡಿ S5, S7, S9 ಹಾಗೂ S 11 ವೇರಿಯಂಟ್ ಅನ್ನು ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳಬಹುದಾಗಿದೆ. ಸ್ಕಾರ್ಪಿಯೋ ಜೊತೆಗೆ ಮಹೀಂದ್ರ XUV500, ಬೊಲೇರೋ, KUV100 NXT, XUV300 ಹಾಘೂ G4 ಕಾರನ್ನು ಆನ್‌‌ಲೈನ್ ಬುಕ್ಕಿಂಗ್ ಆರಂಭಗೊಂಡಿದೆ.

ಇದನ್ನು ಓದಿ: ಫೋಟೋ ನೋಡಿ ಕಾರು ರಿಪೇರಿ, ಇದೊಂಥರ ಡಿಜಿಟಲ್ ಮಾರ್ಕೆಟಿಂಗ್!

ಹೀರೋ ಎಲೆಕ್ಟ್ರಿಕ್‌ಗೂ ಆನ್‌ಲೈನ್ ಆಫರ್
ಭಾರತದ ಮತ್ತೊಂದು ಹೆಸರುವಾಸಿ ಬ್ರಾಂಡ್ ಆಗಿರುವ ಹೀರೋ ತನ್ನ ಎಲೆಕ್ಟ್ರಿಕ್ ವಾಹನಗಳ ಎಲ್ಲ ಶ್ರೇಣಿಯ ವಾಹನಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುವುದಾಗಿ ಈಗಾಗಲೇ ಘೋಷಿಸಿಕೊಂಡಿತ್ತು. ಆದರೆ, ಇದು ಸೀಮಿತ ಅವಕಾಶವಾಗಿದ್ದು, ಏ. 15ರಿಂದ ಪ್ರಾರಂಭವಾಗಿ ಇದೇ ಮೇ 15ರವರೆಗೆ ಮಾತ್ರ ಬುಕ್ಕಿಂಗ್‌ಗೆ ಅವಕಾಶ ನೀಡಿದೆ. ಈಗ ಮೇ 17ರವರೆಗೆ ಲಾಕ್‌ಡೌನ್ ಮುಂದುವರಿದಿದ್ದು, ಇನ್ನೂ ಮುಂದುವರಿದರೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕು.