ಮಾರುಕಟ್ಟೆಯಲ್ಲಿರುವ ಮಾರುತಿ ಬ್ರೆಜಾ 1.5 ಲೀಟರ್ ಕಾರಿಗಿಂತ ಹೊಸದಾಗಿ ಬಿಡುಗಡೆಯಾಗಿರುವ ಬ್ರೆಜಾ ಫೇಸ್‌ಲಿಫ್ಟ್ ಬರೋಬ್ಬರಿ 90 ಸಾವಿರ ರೂಪಾಯಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಬೇಸಿಕ್ ವೇರಿಯೆಂಟ್ ಖರೀದಿಗೆ ಜನ ಮುಗಿಬಿದ್ದಿದ್ದು ಯಾಕೆ?

ಬೆಂಗಳೂರು (ಆ.01) ಭಾರತದಲ್ಲಿ ಇತ್ತೀಚೆಗೆ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ. ವಿಶೇಷ ಅಂದರೆ ಹೊಸ ಬ್ರೇಜಾ ಫೇಸ್‌ಲಿಫ್ಟ್ ಆರಂಭಿಕ ಬೆಲೆ 7.40 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದು ಸದ್ಯ ಮಾರುಕಟ್ಟೆಯಲ್ಲಿರುವ 1.5 ಲೀಟರ್ ಪೆಟ್ರೋಲ್ ಬ್ರೆಜಾ ಕಾರಿಗಿಂತ 90,000 ರೂಪಾಯಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಹಾಗಂತ ಪರ್ಫಾಮೆನ್ಸ್‌ನಲ್ಲಿ ಹಿಂದೆ ಬಿದ್ದಿಲ್ಲ. ಕಾರಣ 1.0 ಲೀಟರ್ ಟರ್ಬೋ ಎಂಜಿನ್ ಮೂಲಕ ಪವರ್ ಹಾಗೂ ಟಾರ್ಕ್ ನೀಡುತ್ತಿದೆ. ಕಾರು ಪ್ರಿಯರು ಇದೀಗ 7.40 ಲಕ್ಷ ರೂಪಾಯಿ ಬೆಲೆಯ ಬೇಸಿಕ್ ವೇರಿಯೆಂಟ್ LXi ಟರ್ಬೋ ಕಾರು ಬುಕಿಂಗ್ ಮಾಡಲು ಮುಗಿಬಿದಿದ್ದಾರೆ.

ಕಡಿಮೆ ಬೆಲೆಯಲ್ಲಿ ಪವರ್‌ಫುಲ್ ಕಾರು ಬಯಸುತ್ತಿರುವ ಜನರಿಗೆ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಉತ್ತಮ ಆಯ್ಕೆಯಾಗಿದೆ. ಸುರಕ್ಷತೆಯಲ್ಲೂ ಗರಿಷ್ಠ ರೇಟಿಂಗ್ ಪಡೆದಿದೆ. ಇನ್ನು ಮೈಲೇಜ್ ಹಾಗೂ ನಿರ್ವಹಣೆಯಲ್ಲೂ ಮಾರುತಿ ಸುಜುಕಿಯನ್ನು ಮೀರಿಸುವ ಬ್ರ್ಯಾಂಡ್ ಇಲ್ಲ. ಮಾರುಜಿ ಸುಜುಕಿ ಆರಂಭಿಕ ವೇರಿಯೆಂಟ್ LXi ಬ್ರೆಜಾ ಕಾರಿನಲ್ಲಿ ಏನೆಲ್ಲಾ ಇದೆ? ಯಾಕೆ ಬಹುತೇಕರು ಇದೇ ಕಾರು ಬುಕ್ ಮಾಡುತ್ತಿದ್ದಾರೆ.

ಬ್ರೆಜಾ LXi ಬೇಸಿಕ್ ವೇರಿಯೆಂಟ್

ಹೊಸ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್‌ನ ಬೇಸಿಕ್ ವೇರಿಯೆಂಟ್ ಅಂದರೆ 7.40 ಲಕ್ಷ ರೂಪಾಯಿಗೆ ಲಭ್ಯವಿರುವ ಈ ಕಾರು 1.0 ಲೀಟರ್ ಕೆ ಸೀರಿಸ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. 110 ಪಿಎಸ್ ಪವರ್ ಹಾಗೂ 170 ಎನ್ಎಂ ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ ಕಂಪನಿ ಪ್ರಕಾರ 20.47 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಸುರಕ್ಷತೆ ಹಾಗೂ ಫೀಚರ್

ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಶಾರ್ಕ್ ಫಿನ್ ಆ್ಯಂಟೆನಾ, ಎಲ್ಇಡಿ ಟೇಲ್ ಲ್ಯಾಂಪ್ ಬ್ರೆಜಾ ಫೇಸ್‌ಲಿಫ್ಟ್ ಕಾರಿನ ಲುಕ್ ಹೆಚ್ಚಿಸಿದೆ. 16 ಇಂಚಿನ ಆಲೋಯ್ ವ್ಹೀಲ್ ನೀಡಲಾಗಿದೆ. ಡಿಜಿಟಲ್ ಅನಲಾಗ್ ಇನ್ಸುಸ್ಟ್ರುಮೆಂಟ್ ಕ್ಲಸ್ಟರ್, ಫ್ರಂಟ್ ಪವರ್ ವಿಂಡೋ, ಇನ್ನು ರೇರ್ ಪವರ್ ವಿಂಡೋ ಇರುವುದಿಲ್ಲ. ಮಾನ್ಯುಯೆಲ್ ಏರ್ ಕಂಡೀಷನ್ ಸಿಸ್ಟಮ್ ನೀಡಲಾಗಿದೆ. ಸುರಕ್ಷತೆ ವಿಚಾರದಲ್ಲಿ BNCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್, ಡ್ಯುಯೆಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಇವಿಎಲ್, ಹಿಲ್ ಹೋಲ್ಡ್ ಅಸಿಸ್ಟ್, ಚೈಲ್ಡ್ ಸೀಟ್ ಮೌಂಟ್ ನೀಡಲಾಗಿದೆ.