ಕೇವಲ 28 ದಿನದ ಮಗುವೊಂದು ಜೆರೋಧಾ ಇತಿಹಾಸದಲ್ಲೇ ಅತ್ಯಂತ ಕಿರಿಯ ಹೂಡಿಕೆದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಪೋಷಕರು ಮೈನರ್ ಖಾತೆ ತೆರೆದು ಮೊದಲ ಹೂಡಿಕೆ ಮಾಡಿದ್ದಾರೆ. ಈ ಕುತೂಹಲಕಾರಿ ಮಾಹಿತಿಯನ್ನು ಜೆರೋಧಾ ಸಹಸಂಸ್ಥಾಪಕ ನಿತಿನ್ ಕಾಮತ್ ಹಂಚಿಕೊಂಡಿದ್ದಾರೆ.

ಬೆಂಗಳೂರು (ಅ.7): ಭಾರತದ ಪ್ರಮುಖ ಆನ್‌ಲೈನ್ ಬ್ರೋಕರೇಜ್ ಸಂಸ್ಥೆಯಾದ 'ಜೆರೋಧಾ' (Zerodha) ತನ್ನ ಫ್ಲಾಟ್‌ಫಾರ್ಮ್‌ನಲ್ಲಿ ಹೊಸ ವಿಶಿಷ್ಟ ದಾಖಲೆಗೆ ಸಾಕ್ಷಿಯಾಗಿದೆ. ಜನಿಸಿ ಕೇವಲ 28 ದಿನಗಳಾಗಿರುವ ಪುಟಾಣಿ ಮಗುವೊಂದು ಜೆರೋಧಾದ ಇತಿಹಾಸದಲ್ಲೇ ಅತ್ಯಂತ ಕಿರಿಯ ಹೂಡಿಕೆದಾರ (Youngest Customer) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಪೋಷಕರು ಮೈನರ್ ಖಾತೆಯನ್ನು (Minor Account) ತೆರೆದು, ಅಕೌಂಟ್ ಪ್ರಕ್ರಿಯೆ ಪೂರ್ಣಗೊಂಡ ಕೇವಲ ಒಂದು ವಾರದಲ್ಲಿ ತಮ್ಮ ಮೊದಲ ಹೂಡಿಕೆಯನ್ನು ಮಾಡಿದ್ದಾರೆ.

ಈ ಕುತೂಹಲಕಾರಿ ಮಾಹಿತಿಯನ್ನು ಜೆರೋಧಾ ಸಂಸ್ಥೆಯ ಸಹಸಂಸ್ಥಾಪಕರಾದ ನಿತಿನ್ ಕಾಮತ್ (Nithin Kamath) ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಒಂದೇ ವರ್ಷದಲ್ಲಿ ಅರ್ಧಕ್ಕಿಳಿದ ಹೂಡಿಕೆದಾರರ ವಯಸ್ಸು!

ವಿಶೇಷವೆಂದರೆ, ಸರಿ ಸುಮಾರು ಒಂದು ವರ್ಷದ ಹಿಂದೆ ನಿತಿನ್ ಕಾಮತ್ ಅವರು ಇಂತಹದೇ ಒಂದು ದಾಖಲೆಯನ್ನು ಹಂಚಿಕೊಂಡಿದ್ದರು. ಆ ಸಮಯದಲ್ಲಿ ಜೆರೋಧಾದ ಅತ್ಯಂತ ಕಿರಿಯ ಖಾತೆದಾರನಾಗಿದ್ದ ಮಗುವಿಗೆ 64 ದಿನಗಳಾಗಿದ್ದವು. ಆದರೆ ಈ ವರ್ಷ ಆ ದಾಖಲೆ ಮುರಿದಿದ್ದು, ಹೂಡಿಕೆದಾರ ಮಗುವಿನ ವಯಸ್ಸು ನೇರವಾಗಿ 28 ದಿನಕ್ಕೆ ಇಳಿಕೆಯಾಗಿದೆ.

ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ವರ್ಷಗಟ್ಟಲೆ ಕಾಯುವ ಬದಲಿಗೆ, ಮಗು ಜನ್ಮ ತಾಳಿದ ತಕ್ಷಣವೇ ಆರ್ಥಿಕ ಭದ್ರತೆ ರೂಪಿಸಲು ಮುಂದಾಗುತ್ತಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.

ನಿತಿನ್ ಕಾಮತ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದೇನು?

ತಮ್ಮ 'X' ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ ನಿತಿನ್ ಕಾಮತ್, "ನಮ್ಮ ವೇದಿಕೆಯ ನೂತನ ಹಾಗೂ ಅತ್ಯಂತ ಕಿರಿಯ ಗ್ರಾಹಕನಿಗೆ ಕೇವಲ 28 ದಿನ ವಯಸ್ಸು" ಎಂದು ತಿಳಿಸಿದ್ದಾರೆ. ಮಗು ಹುಟ್ಟಿದ ತಕ್ಷಣವೇ ಪೋಷಕರು 'ಮೈನರ್ ಖಾತೆ' ತೆರೆದು, ಸೈನ್ ಅಪ್ ಮಾಡಿದ ಕೇವಲ ಒಂದು ವಾರದ ಒಳಗಾಗಿ ತಮ್ಮ ಮೊದಲ ಹೂಡಿಕೆಯನ್ನು ಮಾಡಿರುವುದು ಅತ್ಯಂತ ವೇಗದ ಹಾಗೂ ಶ್ಲಾಘನೀಯ ನಿರ್ಧಾರ ಎಂದು ಅವರು ಬಣ್ಣಿಸಿದ್ದಾರೆ.

ಜೆರೋಧಾ 'ಮೈನರ್ ಖಾತೆ' (Minor Account) ಹೇಗೆ ಕೆಲಸ ಮಾಡುತ್ತದೆ?

ಜೆರೋಧಾದಲ್ಲಿ ಮೈನರ್ ಅಕೌಂಟ್ ತೆರೆಯುವ ಮತ್ತು ನಿರ್ವಹಿಸುವ ಪ್ರಕ್ರಿಯೆ ಅತ್ಯಂತ ಸರಳವಾಗಿದೆ:

ಪೋಷಕರು ಅಥವಾ ಕಾನೂನುಬದ್ಧ ಪಾಲಕರು (Legal Guardian) ತಮ್ಮ ಅಪ್ರಾಪ್ತ ಮಕ್ಕಳ ಪರವಾಗಿ ಶೇರುಗಳು (Stocks), ಮ್ಯೂಚುವಲ್ ಫಂಡ್‌ಗಳು (Mutual Funds) ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಈ ಖಾತೆಯನ್ನು ಜೆರೋಧಾದ 'ಕೈಟ್' (Kite) ಆ್ಯಪ್ ಮೂಲಕ ಸುಲಭವಾಗಿ ತೆರೆಯಬಹುದು.

ಮೈನರ್ ಖಾತೆ ತೆರೆಯಲು ಜೆರೋಧಾ ಯಾವುದೇ ಅಕೌಂಟ್ ಓಪನಿಂಗ್ ಶುಲ್ಕ ಅಥವಾ ವಾರ್ಷಿಕ ನಿರ್ವಹಣಾ ವೆಚ್ಚವನ್ನು (Annual Maintenance Charge - AMC) ವಿಧಿಸುವುದಿಲ್ಲ.

ಮಗುವಿಗೆ 18 ವರ್ಷ ತುಂಬಿ ಪ್ರಾಪ್ತ ವಯಸ್ಕನಾಗುತ್ತಿದ್ದಂತೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಖಾತೆಯು ಸ್ವಯಂಚಾಲಿತವಾಗಿ ಸಾಮಾನ್ಯ ವ್ಯಕ್ತಿಗತ ಖಾತೆಯಾಗಿ (Individual Account) ಪರಿವರ್ತನೆಯಾಗುತ್ತದೆ.

ಇಷ್ಟೊಂದು ಬೇಗ ಪೋಷಕರು ಹೂಡಿಕೆ ಮಾಡಲು ಕಾರಣವೇನು?:

ಕಳೆದ ವರ್ಷ 64 ದಿನದ ಮಗುವಿನ ಹೆಸರಲ್ಲಿ ಖಾತೆ ತೆರೆದಾಗ ನಿತಿನ್ ಕಾಮತ್ ಅವರು ಪೋಷಕರ ಸಂದರ್ಶನದ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಪೋಷಕರೊಬ್ಬರು, "ಭಾರತೀಯ ಶಿಕ್ಷಣ ವ್ಯವಸ್ಥೆಯು ಮಕ್ಕಳಿಗೆ ಹಣಕಾಸಿನ ನಿರ್ವಹಣೆ ಮತ್ತು ಹೂಡಿಕೆಯ ಬಗ್ಗೆ ಸೂಕ್ತವಾಗಿ ಕಲಿಸಿಕೊಡುವುದಿಲ್ಲ" ಎಂದು ಕಳವಳ ವ್ಯಕ್ತಪಡಿಸಿದ್ದರು. ಮತ್ತೊಬ್ಬ ಪೋಷಕರು, "ನಾವು ಮಾಡುವ ಗಳಿಕೆ ಮತ್ತು ಖರ್ಚುಗಳ ನಡುವೆಯೂ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಅತ್ಯಗತ್ಯ" ಎಂದು ಪ್ರತಿಪಾದಿಸಿದ್ದರು.

ಅಂದಿನ ಪೋಷಕರ ಆ ವಿಶಾಲ ಮನೋಭಾವ ಹಾಗೂ ಆರ್ಥಿಕ ಜಾಗೃತಿ ಇಂದು ಭಾರತೀಯ ಸಮಾಜದಲ್ಲಿ ಮತ್ತಷ್ಟು ಗಟ್ಟಿಯಾಗುತ್ತಿರುವುದಕ್ಕೆ, ಹೂಡಿಕೆದಾರರ ವಯಸ್ಸು 64 ದಿನದಿಂದ 28 ದಿನಕ್ಕೆ ಕುಸಿದಿರುವುದೇ ಜೀವಂತ ಸಾಕ್ಷಿಯಾಗಿದೆ.