ಜಿಯೋ ಪ್ಲಾಟ್ಫಾರ್ಮ್ಸ್ನ ಐಪಿಒ ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಈ ಯಶಸ್ಸನ್ನು ಮುಖೇಶ್ ಅಂಬಾನಿ ತಮ್ಮ 'ಆಂಟಿಲಿಯಾ' ನಿವಾಸವನ್ನು ಜಿಯೋದ ನೀಲಿ ಬಣ್ಣದ ಲೈಟಿಂಗ್ಸ್ನಿಂದ ಅಲಂಕರಿಸಿ ಸಂಭ್ರಮಿಸಿದ್ದಾರೆ. ಅಲ್ಲದೆ, 'ಥ್ಯಾಂಕ್ ಯು ಇಂಡಿಯಾ' ಎಂಬ ಸಂದೇಶದ ಮೂಲಕ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮುಂಬೈ (ಅ.28): ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಯೋ ಪ್ಲಾಟ್ಫಾರ್ಮ್ಸ್ನ ಬಹುನಿರೀಕ್ಷಿತ ಐಪಿಒ (Jio IPO) ಭರ್ಜರಿಯಾಗಿ ಲಿಸ್ಟಿಂಗ್ ಆಗುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಈ ಐತಿಹಾಸಿಕ ಯಶಸ್ಸನ್ನು ಭಾರತದ ನಂ.1 ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮದೇ ಆದ ರಾಜವೈಭೋಗದ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಮುಂಬೈನಲ್ಲಿರುವ ಅವರ 27 ಮಹಡಿಗಳ ವಿಶ್ವವಿಖ್ಯಾತ ನಿವಾಸ ‘ಆಂಟಿಲಿಯಾ’ (Antilia) ಸಂಪೂರ್ಣ ನೀಲಿ ಬಣ್ಣದ ಚಿತ್ತಾರದೊಂದಿಗೆ ಕಂಗೊಳಿಸಿದೆ.
ಜಿಯೋ ಲೋಗೋದ ಅಧಿಕೃತ ನೀಲಿ ಬಣ್ಣದ ಬೆಳಕಿನಿಂದ ಇಡೀ ಆಂಟಿಲಿಯಾ ಕಟ್ಟಡವನ್ನು ಅತ್ಯಾಕರ್ಷಕವಾಗಿ ಅಲಂಕರಿಸಲಾಗಿತ್ತು. ದುಬೈನ ವಿಶ್ವವಿಖ್ಯಾತ ‘ಬುರ್ಜ್ ಖಲೀಫಾ’ ಗೋಪುರದ ಮೇಲೆ ಪ್ರದರ್ಶಿಸುವ ಎಲ್ಇಡಿ ಲೈಟಿಂಗ್ಸ್ ಮಾದರಿಯಲ್ಲೇ, ಆಂಟಿಲಿಯಾ ಮುಂಭಾಗದಲ್ಲಿ ಬೃಹತ್ ಅಕ್ಷರಗಳಲ್ಲಿ 'JIO' ಎಂದು ಲೈಟ್ಗಳ ಮೂಲಕ ಪ್ರದರ್ಶಿಸಲಾಯಿತು.
‘ಥ್ಯಾಂಕ್ ಯು ಇಂಡಿಯಾ’ ಎಂದು ಕೃತಜ್ಞತೆ:
ಕೇವಲ ಲೈಟಿಂಗ್ಸ್ ಅಷ್ಟೇ ಅಲ್ಲದೆ, ಜಿಯೋ ಯಶಸ್ಸಿಗೆ ಕಾರಣರಾದ ದೇಶದ ಕೋಟ್ಯಂತರ ಗ್ರಾಹಕರು ಮತ್ತು ಷೇರುದಾರರಿಗೆ ಅಂಬಾನಿ ಕುಟುಂಬ ವಿಶೇಷ ಧನ್ಯವಾದ ಅರ್ಪಿಸಿದೆ. ಕಟ್ಟಡದ ಮೇಲೆ 'ಥ್ಯಾಂಕ್ ಯು ಇಂಡಿಯಾ, ಜಿಯೋ ಆಪ್ನೇ ಬನಾಯಾ' (ಧನ್ಯವಾದ ಭಾರತ, ಜಿಯೋವನ್ನು ನೀವೇ ರೂಪಿಸಿದ್ದು) ಎಂಬ ಕೃತಜ್ಞತಾ ಸಂದೇಶವನ್ನು ಪ್ರದರ್ಶಿಸಿ ದೇಶವಾಸಿಗಳ ಮನಗೆದ್ದಿದ್ದಾರೆ.
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿ ದೇಶದ 45 ಕೋಟಿಗೂ ಅಧಿಕ ಜನರನ್ನು ಡಿಜಿಟಲ್ ಜಾಲಕ್ಕೆ ಬೆಸೆದ ಜಿಯೋ, ಇದೀಗ ಷೇರು ಮಾರುಕಟ್ಟೆಯಲ್ಲೂ ಸಾರ್ವಕಾಲಿಕ ದಾಖಲೆ ಬರೆದು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಆಂಟಿಲಿಯಾ ಕಟ್ಟಡವು ನೀಲಿ ಬೆಳಕಿನ ಚಿತ್ತಾರದಲ್ಲಿ ಕಂಗೊಳಿಸುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆ ‘ಪಿಟಿಐ’ (PTI) ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮುಂಬೈನ ಪ್ರಮುಖ ಆಕರ್ಷಣೆಯಾಗಿರುವ ಅಂಬಾನಿ ನಿವಾಸದ ಈ ಸಂಭ್ರಮವನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.





