ಕೇಂದ್ರ ಸರ್ಕಾರ ವಿದ್ಯುತ್ ಗೆ ಸಂಬಂಧಿಸಿ ನೂತನ ಟಿಒಡಿ ದರ ವ್ಯವಸ್ಥೆ ಪರಿಚಯಿಸಿದೆ. ಈ ವ್ಯವಸ್ಥೆಯಡಿಯಲ್ಲಿ ದಿನದ ಸಮಯ ಆಧರಿಸಿ ದರ ವಿಧಿಸಲಾಗುತ್ತದೆ. ಹಗಲಿನ ವೇಳೆಯಲ್ಲಿ ವಿದ್ಯುತ್ ದರ ಸಾಮಾನ್ಯ ದರಕ್ಕಿಂತ ಶೇ.10-20ರಷ್ಟು ಕಡಿಮೆಯಿರುತ್ತದೆ. ಹಾಗೆಯೇ ಅಧಿಕ ಬಳಕೆ ಅವಧಿಯಲ್ಲಿ ಶೇ.10-20ರಷ್ಟು ಹೆಚ್ಚಿರುತ್ತದೆ. ಹೀಗಾಗಿ ಸೂಕ್ತ ಯೋಜನೆ ರೂಪಿಸಿ ಅದರ ಅನುಸಾರ ವಿದ್ಯುತ್ ಬಳಸಿದರೆ ಬಿಲ್ ನಲ್ಲಿ ಭಾರೀ ಉಳಿತಾಯ ಮಾಡಲು ಸಾಧ್ಯವಿದೆ.
Business Desk:ವಿದ್ಯುತ್ ಬಳಕೆದಾರರು ಇನ್ಮುಂದೆ ಹಗಲಿನ ವೇಳೆಯಲ್ಲಿ ವಿದ್ಯುತ್ ಬಳಕೆಯನ್ನು ಸೂಕ್ತ ಯೋಜನೆ ಅನುಸಾರ ಮಾಡಿದರೆ ಬಿಲ್ ನಲ್ಲಿ ಶೇ.20ರಷ್ಟು ಉಳಿತಾಯ ಮಾಡಲು ಸಾಧ್ಯವಿದೆ. ದೇಶಾದ್ಯಂತ ವಿದ್ಯುತ್ ದರಕ್ಕೆ ಸಂಬಂಧಿಸಿ ಪ್ರಸಕ್ತ ಇರುವ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹೊಸದಾಗಿ ಪರಿಚಯಿಸಿರುವ 'ದಿನದ ಸಮಯ (ಟಿಒಡಿ)' ದರ ವ್ಯವಸ್ಥೆ ಹಾಗೂ ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆಯ ಕ್ರಮಬದ್ಧತೆ ನಿಮ್ಮ ವಿದ್ಯುತ್ ಬಿಲ್ ಮೊತ್ತದಲ್ಲಿ ಗಮನಾರ್ಹ ಬದಲಾವಣೆ ತರಬಲ್ಲದು. ಈ ಎರಡು ಬದಲಾವಣೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು 2020ಕ್ಕೆ ತಿದ್ದುಪಡಿ ತಂದಿದೆ. ಈ ಹೊಸ ವ್ಯವಸ್ಥೆ ಹಗಲಿನ ಸಮಯದಲ್ಲಿ ವಿದ್ಯುತ್ ದರದಲ್ಲಿ ಶೇ.20ರಷ್ಟು ಕಡಿತ ಮಾಡಲು ಹಾಗೂ ರಾತ್ರಿಯ ಗರಿಷ್ಠ ಬಳಕೆ ಅವಧಿಯಲ್ಲಿ ಶೇ.20ರಷ್ಟು ಹೆಚ್ಚಳ ಮಾಡಲು ಅವಕಾಶ ಕಲ್ಪಿಸಲಿದೆ. ಈ ಕ್ರಮ ಸೌರ ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಕೂಡ ಹೊಂದಿದೆ. 20230ರ ವೇಳೆಗೆ ಭಾರತ ತನ್ನ ಇಂಧನ ಸಾಮರ್ಥ್ಯದ ಶೇ.65ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆಯುವ ಗುರಿ ಹೊಂದಿದೆ. ಹಾಗೆಯೇ 2070ರ ವೇಳೆಗೆ ಶೂನ್ಯ ಹೊರಸೂಸುವಿಕೆ ಸಾಧಿಸುವ ಗುರಿ ಕೂಡ ಇದೆ.
ಹೊಸ ವಿದ್ಯುತ್ ದರ ನಿಗದಿ ವ್ಯವಸ್ಥೆ ನವೀಕರಿಸಬಹುದಾದ ಇಂಧನಗಳ ಗ್ರಿಡ್ ಸಮನ್ವಯತೆಯನ್ನು ಉತ್ತಮಗೊಳಿಸಲಿದ್ದು, ಆ ಮೂಲಕ ದೇಶಾದ್ಯಂತ ತ್ವರಿತವಾಗಿ ವಿದ್ಯುತ್ ಪ್ರಸಾರಕ್ಕೆ ನೆರವು ನೀಡಲಿದೆ.
ಮಿಲ್ಲಿಂಗ್ ದರ ಏರಿಕೆಗೆ ಗಿರಣಿಗಳು ಸಜ್ಜು: ಅಕ್ಕಿ ದರ ಶೀಘ್ರ ದುಬಾರಿ?
ಗ್ರಾಹಕರಿಗೇನು ಲಾಭ?
ಹಗಲಿನ ವೇಳೆಯಲ್ಲಿ ವಿದ್ಯುತ್ ಬಳಕೆ ಮೇಲೆ ದರ ಕಡಿಮೆಯಿರುವ ಕಾರಣ ಈ ಅವಧಿಯಲ್ಲಿ ಗ್ರಾಹಕರು ವಿದ್ಯುತ್ ಬಳಸಿ ಮಾಡುವ ಕೆಲಸಗಳನ್ನು ಮಾಡೋದ್ರಿಂದ ಬಿಲ್ ನಲ್ಲಿ ಉಳಿತಾಯ ಮಾಡಬಹುದು. ಇನ್ನು ಟಿಒಡಿ ದರ ವ್ಯವಸ್ಥೆಯಿಂದ ಬೇಸಿಗೆಯಲ್ಲಿ ಏರ್ ಕಂಡೀಷನರ್ ಹಾಗೂ ಕೂಲರ್ ಬಳಕೆ ದುಬಾರಿಯಾಗಬಹುದು. ಆದರೂ ದರ ಹೆಚ್ಚಿರುವ ಅವಧಿಯಲ್ಲಿ ವಾಷಿಂಗ್ ಮಷಿನ್ ಬಳಕೆ, ಅಡುಗೆ ಮಾಡೋದು ಹಾಗೂ ಇತರ ವಿದ್ಯುತ್ ಆಧಾರಿತ ಕೆಲಸಗಳನ್ನು ಮಾಡದಿರುವ ಮೂಲಕ ವಿದ್ಯುತ್ ಬಿಲ್ ತಗ್ಗಿಸಿಕೊಳ್ಳಬಹುದು.
ದಿನದ ಸಮಯ (ಟಿಒಡಿ) ದರ ಅಂದ್ರೇನು?
ಟೈಮ್ ಆಫ್ ದಿ ಡೇ ಅಥವಾ ಟಿಒಡಿ ದರ ವ್ಯವಸ್ಥೆ ಇಡೀ ದಿನಕ್ಕೆ ಒಂದೇ ಶುಲ್ಕ ವಿಧಿಸುವ ಬದಲು ದಿನದ ಅವಧಿ ಆಧಾರದಲ್ಲಿ ದರ ನಿಗದಿಪಡಿಸಲಿದೆ. ಈ ವ್ಯವಸ್ಥೆ ಅತೀಹೆಚ್ಚು ವಿದ್ಯುತ್ ಬಳಕೆ ಅವಧಿಯಲ್ಲಿನ ಬೇಡಿಕೆ ತಗ್ಗಿಸುವ ಗುರಿ ಹೊಂದಿದೆ. ಈ ಅಧಿಕ ಬಳಕೆ ಅವಧಿಯಲ್ಲಿ ಅನೇಕ ಭಾರತೀಯ ಮನೆಗಳಲ್ಲಿ ಎಸಿ ಹಾಗೂ ಕೂಲರ್ ಗಳ ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತದೆ.
10KW ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬೇಡಿಕೆ ಹೊಂದಿರುವ ಕಮರ್ಷಿಯಲ್ ಹಾಗೂ ಉದ್ಯಮ ಗ್ರಾಹಕರಿಗೆ ಹೊಸ ದರ ವ್ಯವಸ್ಥೆ 2024ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಕೃಷಿ ವಲಯ ಹೊರತುಪಡಿಸಿ ಇತರ ಎಲ್ಲ ಗ್ರಾಹಕರಿಗೆ ಈ ಹೊಸ ದರ ವ್ಯವಸ್ಥೆ 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇನ್ನು ಸ್ಮಾರ್ಟ್ ಮೀಟರ್ ಹೊಂದಿರೋರಿಗೆ ಈ ಹೊಸ ತೆರಿಗೆ ವ್ಯವಸ್ಥೆ ಅವುಗಳ ಅಳವಡಿಕೆ ಮಾಡಿದ ತಕ್ಷಣದಿಂದಲೇ ಜಾರಿಗೆ ಬರಲಿದೆ.
70 ವರ್ಷಗಳಿಂದ ಬೆಳಕು ಕಾಣದ ಅಜ್ಜಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಐಪಿಎಸ್ ಅಧಿಕಾರಿ!
'ದಿನದ ಎಲ್ಲ ಸಮಯದಲ್ಲೂ ವಿದ್ಯುತ್ ಗೆ ಒಂದೇ ದರ ವಿಧಿಸುವ ಬದಲು, ದಿನದ ಸಮಯದ ಅವಧಿಯಲ್ಲಿ ನೀವು ಪಾವತಿಸುವ ವಿದ್ಯುತ್ ದರ ಬದಲಾಗಲಿದೆ. ಟಿಒಡಿ ದರ ವ್ಯವಸ್ಥೆ ಅಡಿಯಲ್ಲಿ ಸೌರ ಗಂಟೆಗಳಲ್ಲಿ(ರಾಜ್ಯ ವಿದ್ಯುತ್ ನಿಯಂತ್ರಣ ಮಂಡಳಿ ನಿಗದಿಪಡಿಸಿರುವಂತೆ ಒಂದು ದಿನಕ್ಕೆ 8 ಗಂಟೆಗಳು) ದರವು ಸಾಮಾನ್ಯ ದರಕ್ಕಿಂತ ಶೇ.10-20ರಷ್ಟು ಕಡಿಮೆಯಿರುತ್ತದೆ. ಹಾಗೆಯೇ ಅಧಿಕ ಬಳಕೆ ಅವಧಿಯಲ್ಲಿದರ ಶೇ.10-20ರಷ್ಟು ಹೆಚ್ಚಿರುತ್ತದೆ' ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.
