ಪೊಲೀಸ್‌ ಅಧಿಕಾರಿಗಳ ಒಂದು ಸಣ್ಣ ಪ್ರಯತ್ನದಿಂದ ಉತ್ತರ ಪ್ರದೇಶದಲ್ಲಿ ದಶಕಗಳಿಂದ ಕತ್ತಲೆಯಲ್ಲಿದ್ದ ಕುಟುಂಬವೊಂದು ಇದೇ ಮೊದಲ ಬಾರಿಗೆ ವಿದ್ಯುತ್‌ ಸಂಪರ್ಕ ಪಡೆಯಲು ಸಾಧ್ಯವಾಗಿದೆ. ತಮ್ಮ ಪ್ರಯತ್ನದ ಬಗ್ಗೆ ಐಪಿಎಸ್‌ ಅಧಿಕಾರಿ ಅನುಕೃತಿ ಶರ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಲಖನೌ (ಜೂ.27): ಕೆಲವೊಮ್ಮೆ ಒಂದು ಸಿನಿಮಾ ಸಮಾಜದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಹುದು. ಕೆಲವೊಮ್ಮೆ ನಾವೇ ಕೇಳಿದ ಸುಂದರವಾದ ಕಥೆಯೊಂದು ನಿಜ ಜೀವನದಲ್ಲೂ ಘಟಿಸಬಹುದು. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಐಪಿಎಸ್‌ ಅಧಿಕಾರಿ ಅವರ ಜೀವನದಲ್ಲಾಗಿದೆ. ಇದನ್ನು ತಮ್ಮ ಜೀವನದ 'ಸ್ವದೇಸ್‌' ಕ್ಷಣ ಎಂದು ಅವರು ಬರೆದುಕೊಂಡಿದ್ದಾರೆ. ಅಶುತೋಶ್‌ ಗೋವಾರಿಕರ್‌ ನಿರ್ದೇಶನದ ಬಾಲಿವುಡ್‌ ಚಿತ್ರ 'ಸ್ವದೇಸ್‌'ಗೆ ಕನ್ನಡದ ಚಿಗುರಿದ ಕನಸು ಚಿತ್ರ ಸ್ಫೂರ್ತಿ. ನಾಸಾದಲ್ಲಿ ವಿಜ್ಞಾನಿಯಾಗಿರುವ ವ್ಯಕ್ತಿ ತನ್ನೂರಿಗೆ ಬಂದು ಊರಿಗೆ ವಿದ್ಯುತ್‌ ಸಂಪರ್ಕ ತಂದುಕೊಡುವ ಸಾಹಸದ ಕಥೆ. ಇದೇ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಐಪಿಎಸ್‌ ಅಧಿಕಾರಿ ಅನುಕೃತಿ ಶರ್ಮ, ಬುಲಂದ್‌ಶೇರ್‌ನಲ್ಲಿ ದಶಕಗಳಿಂದ ವಿದ್ಯುತ್‌ ಸಂಪರ್ಕದಿಂದ ವಂಚಿತರಾಗಿ ಕತ್ತಲಲ್ಲೇ ದಿನ ದೂಡುತ್ತಿದ್ದ 70 ವರ್ಷದ ನೂರ್‌ ಜಹಾನ್‌ ಕುಟುಂಬಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡುವ ಮೂಲಕ 'ಸ್ವದೇಶ್‌' ಕ್ಷಣವನ್ನು ಅನುಭವಿಸಿದ್ದಾರೆ. 2020ರ ಬ್ಯಾಚ್‌ನ ಐಪಿಎಎಸ್‌ ಅಧಿಕಾರಿಯಾಗಿರುವ ಅನುಕೃತಿ ಶರ್ಮ, ಪ್ರಸ್ತುತ ಬುಲಂದ್‌ಶೇರ್‌ನ ಸಹಾಯಕ ಎಸ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

'ನನ್ನ ಜೀವನದ ಸ್ವದೇಶ್‌ ಕ್ಷಣ. ಜೂರ್‌ಜಹಾನ್‌ ಆಂಟಿ ಅವರ ಮನೆಗೆ ವಿದ್ಯುತ್‌ ಸಂಪರ್ಕ ನೀಡಿ ಬೆಳಕಿನ ಸಂಪರ್ಕ ನೀಡಿದ್ದು, ಆಕೆಯ ಜೀವನಕ್ಕೆ ಬೆಳಕು ನೀಡಿದಷ್ಟು ಸಂತೋಷ ನನಗಾಗಿದೆ. ಆಕೆಯ ಮುಖದಲ್ಲಿನ ನಗು ನನಗೆ ಬಹಳ ತೃಪ್ತಿ ನೀಡಿದೆ. ಎಸ್‌ಎಚ್‌ಓ ಜೀತೇಂದ್ರ ಮತ್ತು ಇಡೀ ತಂಡಕ್ಕೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ' ಎಂದು ಅನುಕೃತಿ ಶರ್ಮ ವಿಡಿಯೋದ ಜೊತೆ ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ವೃದ್ಧ ಹೆಂಗಸಿನ ಮನೆಗೆ ವಿದ್ಯುತ್‌ ಸಂಪರ್ಕ ನೀಡುವಾಗ ಆಕೆಯ ಮುಖದಲ್ಲಿ ಖುಷಿಯ ನಗು ಕಾಣುತ್ತಿತ್ತು. ಕೊನೆಗೆ ವಿದ್ಯುತ್‌ ಸಂಪರ್ಕದಿಂದ ಬಲ್ಬ್‌ ಉರಿದಾಗ, ನೂರ್‌ ಜಹಾನ್‌ ಅವರ ಮುಖದಲ್ಲಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದು ಸ್ವದೇಶ್‌ ಚಿತ್ರದ ದೃಶ್ಯವನ್ನೇ ನೆನಪಿಸಿತು. ಶಾರುಖ್‌ ಖಾನ್‌ ನಟನೆಯ ಈ ಚಿತ್ರದಲ್ಲಿ ಇಡೀ ಗ್ರಾಮಕ್ಕೆ ಬೆಳಕು ಬಂದಾಗ ವೃದ್ಧೆಯ ಮನೆಯಲ್ಲಿನ ಬಲ್ಬ್‌ನಲ್ಲಿ ಬೆಳಕು ಉರಿಯುತ್ತದೆ. ಅದರ ಬೆನ್ನಲ್ಲಿಯೇ ಆಕೆ 'ಬಿಜ್ಲಿ' (ವಿದ್ಯುತ್‌) ಎಂದು ಹೇಳುವ ದೃಶ್ಯ ಇಂದಿಗೂ ಜನಮಾನಸದಲ್ಲಿ ಜನಪ್ರಿಯವಾಗಿ ಉಳಿದಿದೆ. ಅದೇ ರೀತಿಯ ಕ್ಷಣ ಇಲ್ಲಿಯೂ ದಾಖಲಾಯಿತು.

ಅನುಕೃತಿ ಶರ್ಮ ಕರೆಂಟ್‌ನಿಂದ ಉರಿಯುತ್ತಿದ್ದ ಫ್ಯಾನ್‌ಅನ್ನು ಆಕೆಯ ಬಳಿ ತಂದು ಇರಿಸಿದಾಗ, ನೂರ್‌ಜಹಾನ್‌ ಐಪಿಎಸ್‌ ಅಧಿಕಾರಿಯ ಹೆಗಲಿಗೆ ಕೈಯಿಟ್ಟು ಖುಷಿ ವ್ಯಕ್ತಪಡಿಸಿದರು. ಆಕೆಯಲ್ಲಿನ ಖುಷಿಗೆ ಮಾತುಗಳೇ ಹೊರಡುತ್ತಿಲ್ಲ ಎನ್ನುವುದಕ್ಕೆ ಅದು ಸಾಕ್ಷಿ ಎನ್ನುವಂತಿತ್ತು. ಅದರೊಂದಿಗೆ ಇನ್ನೂ ಕೆಲವು ಖುಷಿಯ ಕ್ಷಣಗಳು ಕೂಡ ದಾಖಲಾದವು. ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ನೂರ್‌ಜಹಾನ್‌ ಅವರಿಗೆ ಸಿಹಿ ತಿನ್ನಿಸುತ್ತಿರುವುದು ಕೂಡ ಕಾಣಿಸಿದೆ. ತೀರಾ ಬಡ ಕುಟುಂಬವಾಗಿರುವ ನೂರ್‌ಜಹಾನ್‌ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದಾರೆ. ಮನೆಗೆ ವಿದ್ಯುತ್‌ ಸಂಪರ್ಕ ನೀಡುವಂತೆ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಪೊಲೀಸ್‌ ಇಲಾಖೆ, ತಮ್ಮದೇ ಫಂಡ್‌ನಲ್ಲಿ ಆಕೆಯ ಮನೆಗೆ ಫ್ಯಾನ್‌ ಹಾಗೂ ಬಲ್ಬ್‌ ಜೊತೆಗೆ ವಿದ್ಯುತ್‌ ಸಂಪರ್ಕ ನೀಡಿದ್ದಾರೆ.

Scroll to load tweet…

ಅರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರ ಗುರು, ಈಗ ಬುಡಕಟ್ಟು ಜನರಿಗೆ ದೇವರು!

ಜನರು ಮತ್ತು ಪೊಲೀಸ್‌ ನಡುವಿನ ಅಂತರವನ್ನು ಕಡಿಮೆ ಮಾಡಲು ಪೊಲೀಸರು ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಮಹಿಳಾ ಐಪಿಎಸ್ ಅಧಿಕಾರಿ ವಿಡಿಯೋದಲ್ಲಿ ಹೇಳಿದ್ದಾರೆ. "ನಮ್ಮ ಚೌಪಲ್ ಒಂದರಲ್ಲಿ, ನೂರ್‌ಜಹಾನ್‌ ಅವರು ಬಂದು ತನ್ನ ಮನೆಗೆ ಇನ್ನೂ ಕರೆಂಟ್ ಇಲ್ಲ ಎಂದು ಹೇಳಿದ್ದರು. ಆಕೆ ತುಂಬಾ ಬಡವಳು. ಇದ್ದೊಬ್ಬ ಮಗಳ ಮದುವೆಯ ಬಳಿಕ ಒಬ್ಬಂಟಿಯಾಗಿ ಬದುಕುತ್ತಿದ್ದಾರೆ. ಇದನ್ನು ಕಂಡು ಆಕೆಯ ಮನೆಗೆ ವಿದ್ಯುತ್‌ ಸಂಪರ್ಕ ನೀಡಬೇಕು ಎಂದು ತೀರ್ಮಾನಿಸಿದ್ದೆವು. ಇದಕ್ಕಾಗಿ ವಿದ್ಯುತ್‌ ಇಲಾಖೆಯ ಜೊತೆಯಿಂದ ಮಾತುಕತೆ ನಡೆಸಿ ಸಂಪರ್ಕ ನೀಡಿದ್ದರೆ, ಪೊಲೀಸ್‌ ನಿಧಿಯಿಂದ ಬಲ್ಬ್‌ಗಳು ಹಾಗೂ ಫ್ಯಾನ್‌ ವ್ಯವಸ್ಥೆ ಮಾಡಲಾಗಿದೆ' ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

'ಉತ್ತಮ ಜೀವನಕ್ಕೆ ಶ್ರೇಷ್ಠ ಉದಾಹರಣೆ...' ದಿನಸಿ ಅಂಗಡಿ ಇಟ್ಟುಕೊಂಡ ಮಾವನ ಬಗ್ಗೆ ಕೋಟ್ಯಧೀಶ ಅಳಿಯನ ಮಾತು!