ನೀವು ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿದ್ರೆ ಆರ್ ಬಿಐಗೆ ತಲೆನೋವು, ಯಾಕೆ ಗೊತ್ತಾ?
ಕ್ರೆಡಿಟ್ ಕಾರ್ಡ್ ಬಳಕೆ ಮಾಡೋರ ಸಂಖ್ಯೆ ದೊಡ್ಡದಿದೆ.ಆದರೆ, ಇದು ಸಾಲದ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಸಾಲಗಳ ಪ್ರಮಾಣದಲ್ಲಿ ದಾಖಲೆಯ ಏರಿಕೆಯಾಗುತ್ತಿರೋದು ಆರ್ ಬಿಐ ಚಿಂತೆಗೆ ಕಾರಣವಾಗಿದೆ.
Business Desk:ಇಂದು ಕ್ರೆಡಿಟ್ ಕಾರ್ಡ್ ಬಳಕೆ ಮಾಡೋರ ಸಂಖ್ಯೆ ಹೆಚ್ಚಿದೆ. ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ರೂ ಬಯಸಿದ್ದನ್ನೆಲ್ಲ ಖರೀದಿಸುವ ಅವಕಾಶವನ್ನು ಕ್ರೆಡಿಟ್ ಕಾರ್ಡ್ ನೀಡುತ್ತೆ. ಇದೇ ಕಾರಣಕ್ಕೆ ಇದು ಇಂದಿನ ತಲೆಮಾರಿನ ಅಚ್ಚುಮೆಚ್ಚಿನ ಹಣಕಾಸಿನ ಸಾಧನ. ಆದ್ರೆ ಈ ಕ್ರೆಡಿಟ್ ಕಾರ್ಡ್ ಬಳಕೆ ಇತ್ತೀಚಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಗೆ (ಆರ್ ಬಿಐ) ತಲೆನೋವು ತಂದಿದೆ. ನಾವು ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿದ್ರೆ ಆರ್ ಬಿಐಗೆ ಏಕೆ ತಲೆನೋವು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಕಾರಣವಿದೆ. ಆರ್ ಬಿಐ ಇತ್ತೀಚೆಗೆ ದೇಶದಲ್ಲಿ ಕಿರು ಮೊತ್ತದ ವೈಯಕ್ತಿಕ ಸಾಲಗಳಲ್ಲಿ ಏರಿಕೆಯಾಗಿರೋದನ್ನು ಗಮನಿಸಿದೆ. ಅದರಲ್ಲಿ ಬಹುತೇಕ ಸಾಲಗಳು ಕ್ರೆಡಿಟ್ ಕಾರ್ಡ್ ಸಾಲಗಳಾಗಿವೆ. ಇಂಥ ಸಾಲಗಳನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಹಿಂತಿರುಗಿಸದವರ ಸಂಖ್ಯೆ ದೊಡ್ಡ ಮಟ್ಟದಲ್ಲಿರೊದು ಆರ್ ಬಿಐ ಚಿಂತೆಗೆ ಕಾರಣವಾಗಿದೆ. ಈಗಾಗಲೇ ದೇಶದಲ್ಲಿ ಕೆಟ್ಟ ಸಾಲಗಳ (ಮರುಪಾವತಿ ಮಾಡದ ಸಾಲ) ಪ್ರಮಾಣ ದೊಡ್ಡ ಮಟ್ಟದಲ್ಲಿದೆ. ಹೀಗಿರುವಾಗ ಮರುಪಾವತಿಯಾಗದ ಕ್ರೆಡಿಟ್ ಕಾರ್ಡ್ ಸಾಲಗಳ ಪ್ರಮಾಣದಲ್ಲಿ ಏರಿಕೆಯಾಗಿರೋದು ಆರ್ ಬಿಐಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ನಿಯಮ ಬಿಗಿಗೊಳಿಸುವಂತೆ ಸಲಹೆ
ಚಿಲ್ಲರೆ ಅಥವಾ ವೈಯಕ್ತಿಕ ಸಾಲಗಳಿಗೆ ಸಂಬಂಧಿಸಿ ನಿಯಮಗಳನ್ನು ಬಿಗಿಗೊಳಿಸುವಂತೆ ಆರ್ ಬಿಐ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿ ಆರ್ ಬಿಐ ಕಠಿಣ ನೀತಿಗಳನ್ನು ಜಾರಿಗೊಳಿಸುವ ಸೂಚನೆ ಕೂಡ ನೀಡಿದೆ. ಇತ್ತೀಚಿನ ದಿನಗಳಲ್ಲಿ ದೇಶಕ್ಕೆ ದೊಡ್ಡ ತಲೆನೋವಾಗಿದೆ ಕೆಟ್ಟ ಸಾಲಗಳ ಪ್ರಮಾಣ ದಶಕಗಳಲ್ಲೇ ಕಡಿಮೆ ಪ್ರಮಾಣಕ್ಕೆ ಇಳಿಕೆಯಾಗಿದೆ. ಇದಕ್ಕೆ ಆರ್ ಬಿಐ ಹಾಗೂ ಕೇಂದ್ರ ಸರ್ಕಾರ ಜೊತೆಯಾಗಿ ಕೈಗೊಂಡ ಕೆಲವು ಕ್ರಮಗಳು ಕಾರಣ ಎಂದು ಹೇಳಲಾಗಿದೆ. ಆದರೆ, ಇತ್ತೀಚೆಗಷ್ಟೇ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ವೈಯಕ್ತಿಕ ಸಾಲಗಳ ತ್ವರಿತ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಕಿರು ಅವಧಿ Vs ದೀರ್ಘಾವಧಿ ಹೂಡಿಕೆ: ಇವೆರಡರಲ್ಲಿ ಯಾವುದು ಉತ್ತಮ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
ಕ್ರೆಡಿಟ್ ಕಾರ್ಡ್ ವಹಿವಾಟಿನಲ್ಲಿ ಏರಿಕೆ
ಯಾವ ಮಾದರಿಯ ವೈಯಕ್ತಿಕ ಸಾಲಗಳ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಬಗ್ಗೆ ಆರ್ ಬಿಐ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಅಂಕಿಅಂಶಗಳನ್ನು ಗಮನಿಸಿದ್ರೆ ಕ್ರೆಡಿಟ್ ಕಾರ್ಡ್ ವೆಚ್ಚ ಹಾಗೂ ಕಿರು ಸಾಲಗಳ ಪ್ರಮಾಣದಲ್ಲಿ ಏರಿಕೆಯಾಗಿರೋದು ಕಂಡುಬರುತ್ತದೆ. ಅದರಲ್ಲೂ 3-4 ತಿಂಗಳ ಅವಧಿಯ ಜೀವನಶೈಲಿ ಸಂಬಂಧಿ ವಿಚಾರಗಳಿಗೆ ವ್ಯಯಿಸಿದ 10,000 ರೂ. ತನಕದ ಸಾಲಗಳಲ್ಲಿ ಏರಿಕೆ ಕಂಡುಬಂದಿದೆ. ಇಂಥ ಬಹುತೇಕ ವೆಚ್ಚಗಳು ಕ್ರೆಡಿಟ್ ಕಾರ್ಡ್ ಗಳ ಮೂಲಕವೇ ಆಗುತ್ತಿರೋದಾಗಿ ಇತ್ತೀಚಿನ ಬ್ಲೂಮ್ ಬರ್ಗ್ ನ್ಯೂಸ್ ವರದಿ ತಿಳಿಸಿದೆ. ಭಾರತೀಯರು ಕ್ರೆಡಿಟ್ ಕಾರ್ಡ್ ಬಳಸಿ ಮಾಡುತ್ತಿರುವ ವೆಚ್ಚಗಳಲ್ಲಿ ದಾಖಲೆಯ ಏರಿಕೆಯಾಗಿದೆ. ಇದು ಹಬ್ಬಗಳ ಸೀಸನ್ ನಲ್ಲಿ ಸಾಲಗಾರರ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಿದೆ.
ಕ್ರೆಡಿಟ್ ಕಾರ್ಡ್ ದಾಖಲೆ ವೆಚ್ಚ
2023ರ ಆಗಸ್ಟ್ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ನಡೆಸಿದ ವಹಿವಾಟಿನಲ್ಲಿ 1.48 ಲಕ್ಷ ಕೋಟಿ ರೂ. ಸರ್ವಕಾಲಿಕ ಏರಿಕೆ ಕಂಡುಬಂದಿದೆ. ಜುಲೈನಲ್ಲಿ 1.45 ಲಕ್ಷ ಕೋಟಿ ರೂ. ವಹಿವಾಟು ಕ್ರೆಡಿಟ್ ಕಾರ್ಡ್ ಮೂಲಕ ನಡೆದಿದೆ. ಅಕ್ಟೋಬರ್ ತಿಂಗಳಲ್ಲಿ ಕೂಡ ಹಬ್ಬಗಳಿರುವ ಕಾರಣ ಈ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ದಿನಕ್ಕೆ ಕೇವಲ7ರೂ. ಹೂಡಿಕೆ ಮಾಡಿದ್ರೆ ತಿಂಗಳಿಗೆ 5000ರೂ. ಪಿಂಚಣಿ ಖಚಿತ
ಕಿರು ಸಾಲದ ತೊಂದರೆ
ಇನ್ನು ಕಿರು ಸಾಲದ ಪ್ರಮಾಣದಲ್ಲಿ ಕೂಡ ಭಾರೀ ಏರಿಕೆಯಾಗಿರೋದು ಆರ್ ಬಿಐ ಚಿಂತೆ ಹೆಚ್ಚಿಸಿದೆ. ಬ್ಯಾಂಕ್ ಕ್ರೆಡಿಟ್ ಒಟ್ಟು ಬೆಳವಣಿಗೆಯಲ್ಲಿ ಸೇ.15ರಷ್ಟು ಹೆಚ್ಚಳವಾಗಿದೆ. ಆದರೆ, 10,000ರೂ. ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಸಾಲಗಳ ಪ್ರಮಾಣದಲ್ಲಿ 2023ನೇ ಹಣಕಾಸು ಸಾಲಿನಲ್ಲಿ ಶೇ.37ರಷ್ಟು ಏರಿಕೆ ಕಂಡುಬಂದಿದೆ. ಇನ್ನು 10,000-50,000ರೂ. ಸಾಲಗಳ ಪ್ರಮಾಣದಲ್ಲಿ ಕೂಡ ಶೇ.48ರಷ್ಟು ಏರಿಕೆಯಾಗಿದೆ ಎಂದು ರಾಯ್ಟರ್ಸ್ ವರದಿ ತಿಳಿಸಿದೆ.