ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ದಿನಕ್ಕೆ ಕೇವಲ7ರೂ. ಹೂಡಿಕೆ ಮಾಡಿದ್ರೆ ತಿಂಗಳಿಗೆ 5000ರೂ. ಪಿಂಚಣಿ ಖಚಿತ
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ಕಡಿಮೆ ಹಣ ಹೂಡಿಕೆ ಮಾಡುವ ಮೂಲಕ ಅಧಿಕ ಪಿಂಚಣಿ ಪಡೆಯಲು ಅವಕಾಶವಿದೆ.ದಿನಕ್ಕೆ ಕೇವಲ 7 ರೂ. ಹೂಡಿಕೆ ಮಾಡಿ ತಿಂಗಳಿಗೆ 5000ರೂ.ಪಿಂಚಣಿ ಪಡೆಯಬಹುದು. ಹೇಗೆ? ಇಲ್ಲಿದೆ ಮಾಹಿತಿ.
Business Desk:ನಿವೃತ್ತಿ ನಂತರದ ಬದುಕಿಗೆ ಒಂದಿಷ್ಟು ಹೂಡಿಕೆ ಮಾಡಿಡೋದು ಅತ್ಯಗತ್ಯ. ಇದಕ್ಕಾಗಿ ಹಲವು ಪಿಂಚಣಿ ಯೋಜನೆಗಳು ಕೂಡ ಲಭ್ಯವಿವೆ. ಅವುಗಳಲ್ಲಿ ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ ಅಥವಾ ಎಪಿವೈ ಕೂಡ ಒಂದು. ಕೇಂದ್ರ ಸರ್ಕಾರದ ಈ ಯೋಜನೆ ಸಮಾಜದ ಆರ್ಥಿಕ ದುರ್ಬಲ ವರ್ಗಕ್ಕೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ನೀಡುವ ಜೊತೆಗೆ ಅಸಂಘಟಿತ ವಲಯದ ಎಲ್ಲ ನಾಗರಿಕರನ್ನು ಕೇಂದ್ರೀಕರಿಸಿದೆ. ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಮೂಲಕ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದೆ. ಈ ಯೋಜನೆಯಲ್ಲಿ ದಿನಕ್ಕೆ ನೀವು ಒಂದು ಲೋಟ ಕಾಫಿಗೆ ತಗಲುವಷ್ಟು ಹಣ ಅಂದ್ರೆ ಕೇವಲ 7ರೂ. ಹೂಡಿಕೆ ಮಾಡುವ ಮೂಲಕ ತಿಂಗಳಿಗೆ 5 ಸಾವಿರ ರೂ. ಪಿಂಚಣಿ ಪಡೆಯಬಹುದು.
ದಿನಕ್ಕೆ 7ರೂ. ಹೂಡಿಕೆ ಮಾಡಿದ್ರೆ ತಿಂಗಳಿಗೆ 5 ಸಾವಿರ ರೂ.
ಕೆಲವು ಪಿಂಚಣಿ ಯೋಜನೆಗಳಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ್ರೆ ಮಾತ್ರ ದೊಡ್ಡ ಮೊತ್ತದ ಪಿಂಚಿ ಸಿಗುತ್ತದೆ. ಆದರೆ, ಅಟಲ್ ಪಿಂಚಣಿ ಯೋಜನೆಯಲ್ಲಿ ಆಗಲ್ಲ. ಅತೀಕಡಿಮೆ ಅಂದರೆ ದಿನಕ್ಕೆ 7ರೂ. ಹೂಡಿಕೆ ಮಾಡಿ ತಿಂಗಳಿಗೆ 5 ಸಾವಿರ ರೂ. ಪಿಂಚಣಿ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆ ಕೊಡುಗೆ ಚಾರ್ಟ್ ಅನುಸಾರ ನೀವು 18ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಪ್ರತಿ ತಿಂಗಳು 210ರೂ. ಹೂಡಿಕೆ ಮಾಡಬೇಕು. ಅಂದರೆ ದಿನಕ್ಕೆ ಬರೀ 7ರೂ. ಆಗ 60 ವರ್ಷ ದಾಟಿದ ಬಳಿಕ ನಿಮಗೆ ಪ್ರತಿ ತಿಂಗಳು 5 ಸಾವಿರ ರೂ. ಪಿಂಚಣಿ ಸಿಗುತ್ತದೆ.
ಅಟಲ್ ಪಿಂಚಣಿ ಯೋಜನೆ ನೋಂದಣಿಯಲ್ಲಿ ಶೇ.20ರಷ್ಟು ಏರಿಕೆ; 5.2 ಕೋಟಿಗಿಂತಲೂ ಅಧಿಕ ಜನರು ಸೇರ್ಪಡೆ
ತಡ ಮಾಡಿದಷ್ಟು ಹೂಡಿಕೆ ಮೊತ್ತ ಹೆಚ್ಚಳ
ಒಂದು ವೇಳೆ ನೀವು 25ನೇ ವಯಸ್ಸಿನಲ್ಲಿಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿಮ್ಮ ತಿಂಗಳ ಹುಡಿಕೆ 376ರೂ. ಆಗುತ್ತದೆ. ಅದೇ 30ನೆ ವಯಸ್ಸಿನಲ್ಲಾದ್ರೆ 577ರೂ. ಇನ್ನು 35ನೇ ವಯಸ್ಸಿನಲ್ಲಾದ್ರೆ ತಿಂಗಳಿಗೆ 902ರೂ. ಪಾವತಿಸಬೇಕು. ಆಗ ಮಾತ್ರ ನಿಮಗೆ ತಿಂಗಳಿಗೆ 5 ಸಾವಿರ ರೂ. ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ.
ಕನಿಷ್ಠ 20 ವರ್ಷ ಹೂಡಿಕೆ
ಪ್ರತಿ ತಿಂಗಳು ನಿಮಗೆ ಎಷ್ಟು ಪಿಂಚಣಿ ಸಿಗುತ್ತದೆ ಎಂಬುದು ನಿಮ್ಮ ಹೂಡಿಕೆಯನ್ನು ಆಧರಿಸಿರುತ್ತದೆ. ಇನ್ನು ತಿಂಗಳ ಹೂಡಿಕೆ ಮೊತ್ತ ಕೂಡ ನೀವು ತಿಂಗಳಿಗೆ 1,000 ರೂ. ಹಾಗೂ 5,000 ರೂ. ನಡುವೆ ಎಷ್ಟು ಪಿಂಚಣಿ ಪಡೆಯುತ್ತೀರಿ ಎಂಬುದನ್ನು ಆಧರಿಸಿ ಬದಲಾಗುತ್ತದೆ. ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಕನಿಷ್ಠ 20 ವರ್ಷಗಳ ತನಕ ಹೂಡಿಕೆ ಮಾಡಬೇಕು.
ಯಾರು ಹೂಡಿಕೆ ಮಾಡಬಹುದು?
18 ಹಾಗೂ 40 ವರ್ಷಗಳ ನಡುವಿನ ತೆರಿಗೆ ಪಾವತಿ ಮಾಡದ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನೀವು ಅಟಲ್ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಸಬಹುದು. 60 ವರ್ಷದಿಂದ ಪಿಂಚಣಿ ಬರಲು ಪ್ರಾರಂಭವಾಗುತ್ತದೆ. ಈ ಯೋಜನೆಗೆ ಸೇರ್ಪಡೆಗೊಂಡ ಬಳಿಕ ಪತಿ ಹಾಗೂ ಪತ್ನಿ ಇಬ್ಬರೂ ಈ ಯೋಜನೆ ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿಯಲ್ಲಿ ನೀವು ವಾರ್ಷಿಕ 1.5ಲಕ್ಷ ರೂ. ತನಕ ತೆರಿಗೆ ಪ್ರಯೋಜನ ಪಡೆಯಬಹುದು.
Atal Pension Yojana: ಪತಿ, ಪತ್ನಿ ಪ್ರತ್ಯೇಕ ಖಾತೆ ತೆರೆದ್ರೆ ಸಿಗುತ್ತೆ ಮಾಸಿಕ 10 ಸಾವಿರ ರೂ. ಪಿಂಚಣಿ
ಮರಣ ಹೊಂದಿದ್ರೂ ಸಿಗುತ್ತೆ ಪ್ರಯೋಜನ
ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಂಡಿರುವ ಅರ್ಜಿದಾರ ಒಂದು ವೇಳೆ ಮರಣ ಹೊಂದಿದರೂ ಆತನ ಕುಟುಂಬ ಸದಸ್ಯರಿಗೆ ಅದರ ಪ್ರಯೋಜನ ಸಿಗಲಿದೆ. ಅರ್ಜಿದಾರ ಮರಣ ಹೊಂದಿದ್ರೆ ಆತ ಅಥವಾ ಆಕೆಯ ಸಂಗಾತಿಗೆ ಯೋಜನೆಯ ಪ್ರಯೋಜನ ಸಿಗಲಿದೆ. ಒಂದು ವೇಳೆ ಪತಿ ಹಾಗೂ ಪತ್ನಿ ಇಬ್ಬರೂ ಯಾವುದೋ ಕಾರಣಕ್ಕೆ ಮರಣ ಹೊಂದಿದರೆ ಮಕ್ಕಳಿಗೆ ಈ ಯೋಜನೆ ಪ್ರಯೋಜನ ಸಿಗಲಿದೆ.