ಕೇವಲ ಶೇ.1 ಬಡ್ಡಿದರದಲ್ಲಿ ನೀವು ಸಾಲ ಪಡೆಯಬಹುದು; ಎಲ್ಲಿ ಸಿಗುತ್ತೆ? ಇಲ್ಲಿದೆ ಮಾಹಿತಿ
ಸಾಲಕ್ಕಿಂತ ಅದರ ಮೇಲಿನ ಬಡ್ಡಿ ಹೊರೆಯೇ ಸಾಲಗಾರರನ್ನು ಕಂಗೆಡಿಸುತ್ತದೆ. ಹೀಗಿರುವಾಗ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಕ್ಕರೆ ಆ ಅವಕಾಶವನ್ನು ಬಳಸಿಕೊಳ್ಳದೆ ಇರುತ್ತಾರೆಯೇ? ಅದರಲ್ಲೂ ಕೇವಲ ಶೇ.1 ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಎಂದರೆ ಯಾರು ಬೇಡ ಅನ್ನುತ್ತಾರೆ ಅಲ್ವಾ? ಹಾಗಾದ್ರೆ ಇಷ್ಟು ಕಡಿಮೆ ಬಡ್ಡಿದರದ ಸಾಲ ಎಲ್ಲಿ ಸಿಗುತ್ತೆ? ಇಲ್ಲಿದೆ ಮಾಹಿತಿ.

Business Desk: ಸಾಲ ಪಡೆಯೋದು ಈಗ ಹಿಂದಿನಷ್ಟು ಕಷ್ಟದ ಕೆಲಸವಂತೂ ಅಲ್ಲವೇ ಅಲ್ಲ. ಆದರೆ, ಸಾಲ ಮರುಪಾವತಿಸೋದು ಪಡೆದಷ್ಟು ಸುಲಭದ ಕೆಲಸವಂತೂ ಅಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ ರೆಪೋ ದರದಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿದರದಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಮಾಡಿವೆ. ಹೀಗಾಗಿ ಬಹುತೇಕರಿಗೆ ಅಧಿಕ ಬಡ್ಡಿದರದ ಸಾಲವೇ ದೊಡ್ಡ ಹೊರೆಯಾಗಿದೆ. ಇದೇ ಕಾರಣಕ್ಕೆ ಸಾಲ ಪಡೆಯುವ ಮುನ್ನ ಬಡ್ಡಿದರ ಎಲ್ಲಿ ಕಡಿಮೆಯಿದೆ ಎಂದು ಹುಡುಕೋದು ಅಗತ್ಯ. ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಸಾಲದ ಬಡ್ಡಿದರ ಶೇ.8ಕ್ಕಿಂತ ಹೆಚ್ಚೇ ಇದೆ. ಕೆಲವು ಸಾಲಗಳ ಮೇಲಿನ ಬಡ್ಡಿದರ ಶೇ.10ಕ್ಕಿಂತಲೂ ಹೆಚ್ಚಿದೆ. ಹೀಗಿರುವಾಗ ಶೇ.1ಕ್ಕೆ ನೀವು ಸಾಲ ಪಡೆಯಬಹುದು ಎಂದರೆ ನಂಬುತ್ತೀರಾ? ಹಾಗಾದ್ರೆ ಇಷ್ಟು ಕಡಿಮೆ ಬಡ್ಡಿದರಲ್ಲಿ ಸಾಲ ಎಲ್ಲಿ ಸಿಗುತ್ತೆ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಉತ್ತರ ಇಲ್ಲಿದೆ.
ಪಿಪಿಎಫ್ ಖಾತೆ ಮೇಲಿನ ಸಾಲ
ನೀವು ಸಾರ್ವಜನಿಕರ ಭವಿಷ್ಯ ನಿಧಿ (ಪಿಪಿಎಫ್) ಖಾತೆ ಹೊಂದಿದ್ದರೆ ಕೇವಲ ಶೇ.1 ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಹೌದು, ನಿಮ್ಮ ಪಿಪಿಎಫ್ ಖಾತೆ ಮೇಲೆ ಶೇ.1 ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಆದರೆ, ಇದನ್ನು ನೀವು ಪಿಪಿಎಫ್ ಖಾತೆ ತೆರೆದ ಮೂರು ಹಾಗೂ ಐದನೇ ವರ್ಷದ ನಡುವೆ ಪಡೆಯಬಹುದು. ಇನ್ನು ನೀವು ಸಾಲದ ಅರ್ಜಿ ಸಲ್ಲಿಕೆ ಮಾಡಿದ್ದಕ್ಕಿಂತ ಎರಡು ವರ್ಷಗಳ ಹಿಂದೆ ನಿಮ್ಮ ಪಿಪಿಎಫ್ ಖಾತೆಯಲ್ಲಿದ್ದ ಬ್ಯಾಲೆನ್ಸ್ ಮೊತ್ತದ ಶೇ.25ರಷ್ಟರ ತನಕ ಮಾತ್ರ ನೀವು ಸಾಲ ಪಡೆಯಬಹುದು. ಉದಾಹರಣೆಗೆ ನೀವು 2019-20ನೇ ಸಾಲಿನಲ್ಲಿ ಪಿಪಿಎಫ್ ಖಾತೆ ತೆರೆದಿದ್ದು, 2024-25ನೇ ಸಾಲಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತೀರಿ ಎಂದು ಭಾವಿಸೋಣ. ಆಗ 2022-23ನೇ ಸಾಲಿನಲ್ಲಿ ನಿಮ್ಮ ಪಿಪಿಎಫ್ ಖಾತೆಯಲ್ಲಿದ್ದ ಬ್ಯಾಲೆನ್ಸ್ ಮೊತ್ತದ ಶೇ.25ರಷ್ಟನ್ನು ಮಾತ್ರ ನಿಮಗೆ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇನ್ನು ನೀವು ಈ ಸಾಲವನ್ನು ಪೂರ್ಣಪ್ರಮಾಣದಲ್ಲಿ ಮರುಪಾವತಿಸಿದ್ರೆ ಪಿಪಿಎಫ್ ಖಾತೆ ತೆರೆದು ಆರು ವರ್ಷಗಳೊಳಗೆ ಎರಡನೇ ಬಾರಿ ಸಾಲ ಪಡೆಯಲು ಅವಕಾಶವಿದೆ.
PPF ಖಾತೆದಾರರೇ ಗಮನಿಸಿ; ಇಂದು ಹೂಡಿಕೆ ಮಾಡಿದ್ರೆ ಮಾತ್ರ ನಿಮಗೆ ಅಧಿಕ ರಿಟರ್ನ್ ಸಿಗುತ್ತೆ, ಏಕೆ? ಇಲ್ಲಿದೆ ಮಾಹಿತಿ
ಎಷ್ಟು ಅವಧಿಯೊಳಗೆ ಮರುಪಾವತಿಸಬೇಕು?
ಇನ್ನು ಪಿಪಿಎಫ್ ಖಾತೆ ಮೇಲೆ ಪಡೆದ ಸಾಲವನ್ನು ಗರಿಷ್ಠ 36 ತಿಂಗಳೊಳಗೆ ಮರುಪಾವತಿಸಬೇಕು. ಸಾಲದ ಮೂಲ ಮೊತ್ತ (principal amount) ಪಾವತಿಸಿದ ಬಳಿಕ ಒಂದು ಅಥವಾ ಎರಡು ಕಂತುಗಳಲ್ಲಿ ಬಡ್ಡಿ ಪಾವತಿಸಬೇಕು. ಒಂದು ವೇಳೆ 36 ತಿಂಗಳೊಳಗೆ ಸಾಲವನ್ನು ಮರುಪಾವತಿಸದಿದ್ರೆ, ಆಗ ಪಿಪಿಎಫ್ ಖಾತೆ ಮೇಲೆ ಪಡೆದ ಸಾಲದ ಮೇಲಿನ ಬಡ್ಡಿದರವನ್ನು ಶೇ.1ರಿಂದ ಶೇ.6ಕ್ಕೆ ಏರಿಕೆ ಮಾಡಲಾಗುವುದು. ಅಲ್ಲದೆ, ಸಾಲವನ್ನು ಪೂರ್ಣಪ್ರಮಾಣದಲ್ಲಿ ಮರುಪಾವತಿಸುವ ತನಕ ಪಿಪಿಎಫ್ ಖಾತೆಯಲ್ಲಿನ ಬ್ಯಾಲೆನ್ಸ್ ಗೆ ಯಾವುದೇ ಬಡ್ಡಿ ಗಳಿಕೆ ಸಿಗೋದಿಲ್ಲ.
ಶೇ.1 ಬಡ್ಡಿದರ
ಪಿಪಿಎಫ್ ಖಾತೆ ಮೇಲೆ 2019ರ ಡಿಸೆಂಬರ್ 12ಕ್ಕಿಂತ ಮೊದಲು ಸಾಲ ಪಡೆದಿದ್ದರೆ ಆಗ ಬಡ್ಡಿದರ ಶೇ.2ರಷ್ಟಿತ್ತು. ಆದರೆ, 2019ರ ಡಿಸೆಂಬರ್ 12ರ ಬಳಿಕ ಪಡೆದ ಸಾಲಕ್ಕೆ ಕೇವಲ ಶೇ.1ರಷ್ಟು ಬಡ್ಡಿ ವಿಧಿಸಲಾಗುತ್ತಿದೆ.
PPF ಬಡ್ಡಿದರ ಏಕೆ ಏರಿಕೆಯಾಗಿಲ್ಲ? ಮುಂದಿನ ದಿನಗಳಲ್ಲಿ ಹೆಚ್ಚಳವಾಗುತ್ತಾ?
ಈ ಸಾಲ ಪಡೆಯೋದು ಉತ್ತಮವೇ?
ಇದು ಸಾಲಕ್ಕೆ ಸಂಬಂಧಿಸಿ ನಿಮಗಿರುವ ಇತರ ಆಯ್ಕೆಗಳನ್ನು ಅವಲಂಬಿಸಿದೆ. ಏಕೆಂದರೆ ನೀವು ಪಿಪಿಎಫ್ ಮೇಲೆ ಸಾಲ ಪಡೆದಾಗ ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಯಾವುದೇ ಬಡ್ಡಿ ಸಿಗೋದಿಲ್ಲ. ಪ್ರಸ್ತುತ ಪಿಪಿಎಫ್ ಶೇ.7.1ರಷ್ಟು ಬಡ್ಡಿ ದರ ಹೊಂದಿದೆ. ಹೀಗಾಗಿ ನೀವು ಶೇ.1 ಬಡ್ಡಿದರದಲ್ಲಿ ಸಾಲ ಪಡೆದರೂ ನಿಮಗೆ ಒಟ್ಟು ಶೇ.8.1ರಷ್ಟು ಬಡ್ಡಿ ಬೀಳಲಿದೆ. ಹೀಗಾಗಿ ಪಿಪಿಎಫ್ ಖಾತೆ ಮೇಲೆ ಸಾಲ ಪಡೆಯೋದು ನಿಮ್ಮ ಕೊನೆಯ ಆಯ್ಕೆಯಾಗಿರಲಿ. ಸಾಲವನ್ನು ನಿಗದಿತ ಅವಧಿಯೊಳಗೆ ಮರುಪಾವತಿಸುವ ವಿಶ್ವಾಸವಿದ್ರೆ ಮಾತ್ರ ಇದನ್ನು ಪಡೆಯಿರಿ.