PPF ಖಾತೆದಾರರೇ ಗಮನಿಸಿ; ಇಂದು ಹೂಡಿಕೆ ಮಾಡಿದ್ರೆ ಮಾತ್ರ ನಿಮಗೆ ಅಧಿಕ ರಿಟರ್ನ್ ಸಿಗುತ್ತೆ, ಏಕೆ? ಇಲ್ಲಿದೆ ಮಾಹಿತಿ
ನೀವು ಪಿಪಿಎಫ್ ಖಾತೆ ಹೊಂದಿದ್ರೆ 2024ನೇ ಆರ್ಥಿಕ ಸಾಲಿನ ಕೊಡುಗೆಯನ್ನು ಇಂದೇ (ಏ.5) ಸಲ್ಲಿಕೆ ಮಾಡಿ. ನಾಳೆಯಿಂದ ನೀವು ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿದ್ರೆ ಅಧಿಕ ರಿಟರ್ನ್ ಗಳಿಸುವ ಅವಕಾಶ ಕಳೆದುಕೊಳ್ಳುತ್ತೀರಿ. ಪಿಪಿಎಫ್ ಬಡ್ಡಿ ದರವನ್ನು ತಿಂಗಳಿನ ಐದನೇ ಹಾಗೂ ಕೊನೆಯ ದಿನದ ನಡುವಿನ ಕನಿಷ್ಠ ಬ್ಯಾಲೆನ್ಸ್ ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ಹೀಗಾಗಿ ಏ.5ರೊಳಗೆ ಪಿಪಿಎಫ್ ಖಾತೆಗೆ ಹಣ ಕ್ರೆಡಿಟ್ ಮಾಡೋದು ಮುಖ್ಯ.
ನವದೆಹಲಿ (ಏ.5): ಸಾರ್ವಜನಿಕರ ಭವಿಷ್ಯ ನಿಧಿ (ಪಿಪಿಎಫ್) ಖಾತೆದಾರರು ಈ ಠೇವಣಿಯಿಂದ ಅಧಿಕ ರಿಟರ್ನ್ ಗಳಿಸಲು 2024ನೇ ಆರ್ಥಿಕ ಸಾಲಿನ ಕೊಡುಗೆಯನ್ನು ಸಲ್ಲಿಕೆ ಮಾಡಲು ಇಂದು (ಏ.5) ಕೊನೆಯ ದಿನವಾಗಿದೆ. ಏಕೆ ಅಂತೀರಾ? ಪಿಪಿಎಫ್ ಬಡ್ಡಿದರ ಲೆಕ್ಕಾಚಾರ ಇತರ ಸಣ್ಣ ಉಳಿತಾಯ ಯೋಜನೆಗಳಿಗಿಂತ ಭಿನ್ನ. ಪಿಪಿಎಫ್ ಬಡ್ಡಿ ದರವನ್ನು ತಿಂಗಳಿನ ಐದನೇ ಹಾಗೂ ಕೊನೆಯ ದಿನದ ನಡುವಿನ ಕನಿಷ್ಠ ಬ್ಯಾಲೆನ್ಸ್ ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ಹೀಗಾಗಿ ಏ.5ರೊಳಗೆ ಪಿಪಿಎಫ್ ಖಾತೆಗೆ ಹಣ ಕ್ರೆಡಿಟ್ ಮಾಡೋದು ಮುಖ್ಯ. ಉದಾಹರಣೆಗೆ ನಿಮ್ಮ ಪಿಪಿಎಫ್ ಖಾತೆಯಲ್ಲಿ 2ಲಕ್ಷ ರೂ. ಬ್ಯಾಲೆನ್ಸ್ ಇದೆ. ನೀವು ಇದರಲ್ಲಿ ಒಮ್ಮೆಗೆ 1.5 ಲಕ್ಷ ರೂ. ಹೂಡಿಕೆ ಮಾಡಲು ಬಯಸುತ್ತೀರಾದ್ರೆ ಏ.5ರ ಬಳಿಕ ಹೂಡಿಕೆ ಮಾಡಿದ್ರೆ ಬಡ್ಡಿ ರಿಟರ್ನ್ ಕಡಿಮೆ ಸಿಗುತ್ತದೆ. ಒಂದು ವೇಳೆ ನೀವು ಏ.5ಕ್ಕಿಂತ ಮುನ್ನ 1.5 ಲಕ್ಷ ರೂ. ಹೆಚ್ಚುವರಿ ಕೊಡುಗೆ ನೀಡಿದ್ರೆ ನಿಮ್ಮ ಹೊಸ ಪಿಪಿಎಫ್ ಖಾತೆ ಬ್ಯಾಲೆನ್ಸ್ 3.5ಲಕ್ಷ ರೂ. (ಈ ಹಿಂದಿನ 2ಲಕ್ಷ ರೂ. ಹಾಗೂ ಈಗ ಹೂಡಿಕೆ ಮಾಡಿರುವ 1.5ಲಕ್ಷ ರೂ.) ಇರಲಿದೆ. ಪಿಪಿಎಫ್ ನಿಯಮಗಳ ಅನ್ವಯ ಠೇವಣಿ ಮೇಲಿನ ಮಾಸಿಕ ಬಡ್ಡಿದರವನ್ನು 3.5ಲಕ್ಷ ರೂ. ಸಂಪೂರ್ಣ ಮೊತ್ತಕ್ಕೆ ಅನ್ವಯಿಸಿ ಲೆಕ್ಕಾಚಾರ ಮಾಡಿದ್ರೆ ಸುಮಾರು 2,070ರೂ. ಬಡ್ಡಿ ಸಿಗುತ್ತದೆ. ಒಂದು ವೇಳೆ ಏ.5ರ ಬಳಿಕ ಹೆಚ್ಚುವರಿ 1.5ಲಕ್ಷ ರೂ. ಹೂಡಿಕೆ ಮಾಡಿದ್ರೆ ಏಪ್ರಿಲ್ ತಿಂಗಳ ಬಡ್ಡಿ ಲೆಕ್ಕಾಚಾರಕ್ಕೆ ಇದನ್ನು ಪರಿಗಣಿಸೋದಿಲ್ಲ. ಅಂದರೆ ಈ ಹಿಂದಿನ 2ಲಕ್ಷ ರೂ. ಗೆ ಮಾತ್ರ ಬಡ್ಡಿ ನೀಡಲಾಗುತ್ತದೆ.
ಏನಿದು ಪಿಪಿಎಫ್?
ಸಾರ್ವಜನಿಕರ ಭವಿಷ್ಯ ನಿಧಿ ಅಥವಾ ಪಿಪಿಎಫ್ ಕೇಂದ್ರ ಸರ್ಕಾರ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದ್ದು, ಪ್ರಸ್ತುತ ವಾರ್ಷಿಕ ಶೇ.7.1 ಬಡ್ಡಿ ನೀಡುತ್ತಿದೆ. ಪಿಪಿಎಫ್ ಮೇಲಿನ ಬಡ್ಡಿದರವನ್ನು ತ್ರೈಮಾಸಿಕದ ಆಧಾರದಲ್ಲಿ ಪರಿಷ್ಕರಿಸಲಾಗುತ್ತದೆ. ಕಳೆದ ವಾರ ನಡೆದ ಬಡ್ಡಿ ಪರಿಷ್ಕರಣೆಯಲ್ಲಿ 2023ರ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಬಡ್ಡಿದರವನ್ನು ಶೇ.7.1ಕ್ಕೆ ನಿಗದಿಗೊಳಿಸಲಾಗಿದೆ. ಪಿಪಿಎಫ್ ಖಾತೆಯಲ್ಲಿ ಹೂಡಿಕೆದಾರರು ವಾರ್ಷಿಕ ಕನಿಷ್ಠ 500ರೂ. ಹಾಗೂ ಗರಿಷ್ಠ 1,50,000ರೂ. ಹೂಡಿಕೆ ಮಾಡಬಹುದು.
PPF ಬಡ್ಡಿದರ ಏಕೆ ಏರಿಕೆಯಾಗಿಲ್ಲ? ಮುಂದಿನ ದಿನಗಳಲ್ಲಿ ಹೆಚ್ಚಳವಾಗುತ್ತಾ?
ಪಿಪಿಎಫ್ ಅವಧಿ ಎಷ್ಟು?
ಪಿಪಿಎಫ್ ಅವಧಿ 15 ವರ್ಷ. ಅದಾದ ಬಳಿಕ ನೀವು ಬಯಸಿದರೆ ಪ್ರತೀ 5 ವರ್ಷಕ್ಕೊಮ್ಮೆ ಅವಧಿ ವಿಸ್ತರಣೆ ಮಾಡಬಹುದು. ಪಿಪಿಎಫ್ ಯೋಜನೆಗಳ ನಿಯಮಗಳು 2019ರ ಅನ್ವಯ ಪಿಪಿಎಫ್ ಖಾತೆ 15 ವರ್ಷಗಳ ಬಳಿಕ ಮೆಚ್ಯೂರ್ ಆದಾಗ ಮೂರು ಆಯ್ಕೆಗಳಿರುತ್ತವೆ. ಒಂದು ಖಾತೆ ಮುಚ್ಚುವುದು ಹಾಗೂ ಎಲ್ಲ ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವುದು. ಇನ್ನೊಂದು ಹೊಸ ಹೂಡಿಕೆಯಿಲ್ಲದೆ 5 ವರ್ಷಗಳಿಗೆ ಖಾತೆ ಅವಧಿ ವಿಸ್ತರಣೆ ಮಾಡುವುದು. ಹಾಗೆಯೇ ಮತ್ತೊಂದು ಹೊಸ ಹೂಡಿಕೆ ಸಮೇತ ಖಾತೆ ಅವಧಿ ವಿಸ್ತರಣೆ ಮಾಡುವುದು. ಹೀಗಾಗಿ 15 ವರ್ಷಗಳ ಬಳಿಕ ಪಿಪಿಎಫ್ ಖಾತೆದಾರ ಆತನ ಖಾತೆಯನ್ನು ಮುಚ್ಚಬಹುದು.ಆದರೆ, ನೆನಪಿಡಿ, ಪಿಪಿಎಫ್ ಖಾತೆ ತೆರೆದ ದಿನಾಂಕ ಅದರ ಮೆಚ್ಯುರಿಟಿ ದಿನಾಂಕವನ್ನು ನಿರ್ಧರಿಸೋದಿಲ್ಲ. ಬದಲಿಗೆ ಖಾತೆ ಪ್ರಾರಂಭಿಸಿದ ಆರ್ಥಿಕ ವರ್ಷದ ಕೊನೆಯಿಂದ ಹಿಡಿದು 15 ವರ್ಷಗಳ ಅವಧಿಯದ್ದಾಗಿರುತ್ತದೆ. ಅಂದರೆ ನೀವು 2009ರ ಜುಲೈ 20ರಂದು ಪಿಪಿಎಫ್ ಖಾತೆ ತೆರೆದ್ರೆ ನಿಮಯದ ಪ್ರಕಾರ ಈ ಖಾತೆ 2024ರ ಏಪ್ರಿಲ್ 1ರಂದು ಮೆಚ್ಯುರ್ ಆಗುತ್ತದೆ.
ಯಾರೆಲ್ಲ ಐಟಿಆರ್ -1 ಸಹಜ್ ಸಲ್ಲಿಕೆ ಮಾಡ್ಬೇಕು? ಯಾವೆಲ್ಲ ದಾಖಲೆಗಳು ಅಗತ್ಯ? ಇಲ್ಲಿದೆ ಮಾಹಿತಿ
ಖಾತೆ ಮುಚ್ಚುವುದು ಹೇಗೆ?
ನಿಮ್ಮ ಪಿಪಿಎಫ್ ಖಾತೆಗೆ 15 ವರ್ಷ ತುಂಬುತ್ತ ಬಂದಿದ್ದು, ನೀವು ಮುಚ್ಚಲು ಬಯಸಿದ್ರೆ ಖಾತೆ ಅವಧಿ ಮುಗಿದ ದಿನದಿಂದ ಒಂದು ವರ್ಷದೊಳಗೆ ನಿರ್ಧರಿಸಬೇಕು. ನೀವು ಖಾತೆ ಮುಚ್ಚಿದ ತಿಂಗಳಿಗಿಂತ ಹಿಂದಿನ ತಿಂಗಳ ತನಕದ ಹಣ ಬಡ್ಡಿಸಹಿತ ಸಿಗುತ್ತದೆ. ಖಾತೆ ಮುಚ್ಚಿದ ಬಳಿಕ ಅದರಲ್ಲಿರುವ ಎಲ್ಲ ಹಣವನ್ನು ಒಂದೇ ಬಾರಿಗೆ ವಿತ್ ಡ್ರಾ ಮಾಡಬಹುದು ಅಥವಾ ಒಂದು ವರ್ಷದ ಅವಧಿಯಲ್ಲಿ ಕಂತುಗಳಲ್ಲಿ ವಿತ್ ಡ್ರಾ ಮಾಡಿಕೊಳ್ಳಬಹುದು.