ನವದೆಹಲಿ(ಆ.31): ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯೀಕರಣ ನಿರ್ಧಾರವನ್ನು ಮಾಜಿ ವಿತ್ತ ಸಚಿವ ಯಶ್ವಂತ್ ಸಿನ್ಹಾ ಕಟುವಾಗಿ ಟೀಕಿಸಿದ್ದಾರೆ. ನೋಟು ಅಮಾನ್ಯೀಕರಣ ಎಂಬುದು ಮೋದಿ ಅವರ ನಾಟಕ ಎಂದು ಸಿನ್ಹಾ ಕಿಡಿಕಾರಿದ್ದಾರೆ.

ನೋಟು ಅಮಾನ್ಯೀಕರಣದ ನಂತರ ವಾಸ್ತವವಾಗಿ ಎಷ್ಟು ಹಳೆಯ ನೋಟುಗಳು ವಾಪಸ್ ಬಂದಿವೆ ಎಂಬ ಬಗ್ಗೆ ರಿಸರ್ವ ಬ್ಯಾಂಕ್ ಸುಳ್ಳು ಹೇಳುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿ ಅವರ ಒತ್ತಡವೇ ಕಾರಣ ಎಂದು ಸಿನ್ಹಾ ಆರೋಪಿಸಿದ್ದಾರೆ.

ಆರ್ ಬಿಐ ಶೇ.98.5 ಹಳೆಯ ನೋಟು ವಾಪಸ್ ಬಂದಿದೆ ಎನ್ನುತ್ತಿದೆ. ಆದರೆ ವಾಸ್ತವವನ್ನು ಪ್ರಕಟಿಸದಂತೆ ರಿಸರ್ವ ಬ್ಯಾಂಕ್ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಿದೆ ಎಂದು ಸಿನ್ಹಾ ಗಂಭೀರ ಆರೋಪ ಮಾಡಿದ್ದಾರೆ.

2019ರ ಲೋಕಸಭಾ ಚುನಾವಣೆ ಮುಕ್ತಾಯವಾಗಿ ಹೊಸ ಸರ್ಕಾರ ಬರುವವರೆಗೆ ವಾಪಸ್ಸಾದ ಹಳೆಯ ನೋಟುಗಳ ನಿಖರ ಮಾಹಿತಿಯನ್ನು ಆರ್ ಬಿಐ ಪ್ರಕಟಿವುದಿಲ್ಲ ಎಂದೂ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. 

ನೋಟು ಅಮಾನ್ಯೀಕರಣ ಶೇ 100ಕ್ಕೆ 100ರಷ್ಟು ವಿಫಲವಾಗಿದ್ದು, ಈ ದೇಶದ ಸರ್ವಾಧಿಕಾರಿಯೊಬ್ಬ ಕೈಗೊಂಡ ತಪ್ಪು ನಿರ್ಧಾರದ ಫಲ ಇದು ಎಂದು ಸಿನ್ಹಾ ಹರಿಹಾಯ್ದಿದ್ದಾರೆ‌.

ಪ್ರಧಾನಿ ಮೋದಿ ಅವರಿಗೆ ನೈತಿಕತೆ ಎಂಬುದಿದ್ದರೆ ನೋಟು ಅಮಾನ್ಯೀಕರಣ ವಿಫಲವಾದ ಕಾರಣಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದೂ ಸಿನ್ಹಾ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.