ಭಾರತದ ಜಿಡಿಪಿ ನಿರೀಕ್ಷಿತ ದರ ಕಡಿತಗೊಳಿಸಿದ ವಿಶ್ವ ಬ್ಯಾಂಕ್; ಶೇ.6.6ರಿಂದ ಶೇ.6.3ಕ್ಕೆ ಇಳಿಕೆ

2023-24ನೇ ಆರ್ಥಿಕ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷಿತ ದರವನ್ನು ವಿಶ್ವ ಬ್ಯಾಂಕ್  ಶೇ.6.6ರಿಂದ ಶೇ.6.3ಕ್ಕೆ  ಇಳಿಕೆ ಮಾಡಿದೆ. ಆದರೂ ಭಾರತದ ಆರ್ಥಿಕ ಬೆಳವಣಿಗೆಯನ್ನು ವಿಶ್ವ ಬ್ಯಾಂಕ್ ಶ್ಲಾಘಿಸಿದೆ. ಜಾಗತಿಕ ಆರ್ಥಿಕತೆಯು ಮಂದಗತಿಯಲ್ಲಿರುವ ಈ ಸಮಯದಲ್ಲಿ ಭಾರತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆವಣಿಗೆ ಕಾಣುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ವಿಶ್ವ ಬ್ಯಾಂಕ್ ಮೆಚ್ಚುಗೆ ಸೂಚಿಸಿದೆ.
 

World Bank Cuts Indias Growth Forecast For 2023 24 To 6 3percent anu

ನವದೆಹಲಿ (ಏ.4):2023-24ನೇ ಆರ್ಥಿಕ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ದರವನ್ನು ವಿಶ್ವ ಬ್ಯಾಂಕ್ ಈ ಹಿಂದಿನ ಶೇ.6.6ರಿಂದ ಶೇ.6.3ಕ್ಕೆ  ಇಳಿಕೆ ಮಾಡಿದೆ. ವಿಶ್ವ ಬ್ಯಾಂಕಿನ ಇತ್ತೀಚಿನ ಭಾರತ ಅಭಿವೃದ್ಧಿ ನವೀಕೃತ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಕಳೆದ ವರ್ಷದ ಮೇನಿಂದ ಇಲ್ಲಿಯ ತನಕ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಭಾರೀ ಏರಿಕೆ ಮಾಡಿದೆ. ಇದರಿಂದ ಸಾಲದ ಮೇಲಿನ ಬಡ್ಡಿದರಗಳು ಏರಿಕೆಯಾಗಿವೆ. ಸಾಲದ ಬಡ್ಡಿದರ ಏರಿಕೆ ಹಾಗೂ ಆದಾಯದ ನಿಧಾನ ಬೆಳವಣಿಗೆಯಿಂದ ಜನರ ಖರ್ಚು-ವೆಚ್ಚಗಳು ತಗ್ಗಿವೆ. ಇದು ಸಹಜವಾಗಿ ಬೇಡಿಕೆಯನ್ನು ತಗ್ಗಿಸಿದೆ. ಇನ್ನು ಕೋವಿಡ್ ಸಂದರ್ಭದಲ್ಲಿನ ಆರ್ಥಿಕ ಬೆಂಬಲ ಕ್ರಮಗಳನ್ನು ಸರ್ಕಾರ ಹಿಂತೆಗೆದುಕೊಂಡ ಪರಿಣಾಮ ಆರ್ಥಿಕ ಬೆಳವಣಿಗೆಯ ವೇಗ ಕೂಡ ನಿಧಾನಗತಿ ಪಡೆಯಬಹುದು ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯ ಪಟ್ಟಿದೆ. ಆದರೂ ಭಾರತದ ಆರ್ಥಿಕ ಬೆಳವಣಿಗೆಯನ್ನು ವಿಶ್ವ ಬ್ಯಾಂಕ್ ಶ್ಲಾಘಿಸಿದೆ. ಜಾಗತಿಕ ಆರ್ಥಿಕತೆಯು ಮಂದಗತಿಯಲ್ಲಿರುವ ಈ ಸಮಯದಲ್ಲಿ ಭಾರತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆವಣಿಗೆ ಕಾಣುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ವಿಶ್ವ ಬ್ಯಾಂಕ್ ಮೆಚ್ಚುಗೆ ಸೂಚಿಸಿದೆ. 

'ಬಾಹ್ಯ ಒತ್ತಡಗಳ ಹೊರತಾಗಿಯೂ ಭಾರತದ ಸೇವಾ ರಫ್ತಿನಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಹಾಗೆಯೇ ಪ್ರಸಕ್ತ ಚಾಲ್ತಿ ಕೊರತೆ ಕೂಡ ತಗ್ಗಿದೆ. ಭಾರತದ ಆರ್ಥಿಕತೆಯು ಬಾಹ್ಯ ಶಾಕ್ ಗಳಿಗೆ ಪ್ರಬಲ ಪ್ರತಿರೋಧ ತೋರುವುದನ್ನು ಮುಂದುವರಿಸಿದೆ' ಎಂದು ಭಾರತದಲ್ಲಿನ ವಿಶ್ವ ಬ್ಯಾಂಕಿನ ದೇಶೀಯ ನಿರ್ದೇಶಕರಾದ ಅಗಸ್ತೆ ಟ್ಯಾನೊ ಕೌಮಿ ಹೇಳಿದ್ದಾರೆ. 

PPF ಬಡ್ಡಿದರ ಏಕೆ ಏರಿಕೆಯಾಗಿಲ್ಲ? ಮುಂದಿನ ದಿನಗಳಲ್ಲಿ ಹೆಚ್ಚಳವಾಗುತ್ತಾ?

ಭಾರತದಲ್ಲಿ ಹಣದುಬ್ಬರ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದರೂ 2023-24ನೇ ಆರ್ಥಿಕ ಸಾಲಿನಲ್ಲಿ ಸರಾಸರಿ ಶೇ.5.2 ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಜಾಗತಿಕ ವಸ್ತುಗಳ ಬೆಲೆಗಳಲ್ಲಿನ ಇಳಿಕೆ ಹಾಗೂ ದೇಶೀಯ ಬೇಡಿಕೆಯಲ್ಲಿನ ಕೆಲವು ಮಾರ್ಪಾಡುಗಳಿಂದ ಇದು ಸಾಧ್ಯವಾಗಲಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. 

2022-23ನೇ ಆರ್ಥಿಕ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ವಿಶ್ವ ಬ್ಯಾಂಕ್ ಶೇ.6.9ಕ್ಕೆ ಅಂದಾಜಿಸಿತ್ತು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ.2.1ಕ್ಕೆ ಇಳಿಕೆಯಾಗಲಿದೆ ಎಂದು ಕೂಡ ವಿಶ್ವ ಬ್ಯಾಂಕ್ ಅಂದಾಜಿಸಿದೆ. ಇನ್ನು ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿನ ಬ್ಯಾಂಕಿಂಗ್ ಬಿಕ್ಕಟ್ಟು ಭಾರತದ ಮೇಲೆ ಸಣ್ಣ ಮಟ್ಟದಲ್ಲಿ ಪರಿಣಾಮ ಬೀರಬಹುದು. ಆದರೆ, ಭಾರತದ ಬ್ಯಾಂಕಿಂಗ್ ಕ್ಷೇತ್ರದ ಸದೃಢವಾಗಿದ್ದು, ಯಾವುದೇ ಹಾನಿಯಾಗದು ಎಂದು ವಿಶ್ವ ಬ್ಯಾಂಕ್ ವಿಶ್ವಾಸ ವ್ಯಕ್ತಪಡಿಸಿದೆ. 

ನಿಷ್ಕ್ರಿಯವಾಗಿದ್ದ ವಾರಸುದಾರರಿಲ್ಲದ ಖಾತೆಗಳಲ್ಲಿದ್ದ 35000 ಕೋಟಿ ಆರ್‌ಬಿಐ ವಶಕ್ಕೆ

ಭಾರತದಲ್ಲಿ ಚಿಲ್ಲರೆ ಹಣದುಬ್ಬರದಲ್ಲಿ ಸ್ವಲ್ಪ ಮಟ್ಟನ ಇಳಿಕೆಯಾಗಿದ್ದರೂ ಆರ್ ಬಿಐ ಗರಿಷ್ಠ ಸಹನ ಮಟ್ಟವಾದ ಶೇ.6ಕ್ಕಿಂತ ಹೆಚ್ಚಿದೆ. ಇನ್ನು 2023ರ ಫೆಬ್ರವರಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಕೂಡ ಶೇ.6.44ರಷ್ಟಿತ್ತು. ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ.6.52ರಷ್ಟಿತ್ತು. 

ಈ ವಾರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಮಿತಿಯ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ಸಭೆ ನಡೆಯಲಿದೆ. ಫೆಬ್ರವರಿಯಲ್ಲಿ ನಡೆದ ಆರ್ ಬಿಐ ಹಣಕಾಸು ಸಮಿತಿ ಸಭೆಯಲ್ಲಿ ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್ಸ್ ಅಥವಾ ಶೇ.0.25 ಏರಿಕೆ ಮಾಡಲಾಗಿತ್ತು. ಇದರಿಂದ ರೆಪೋ ದರ ಶೇ.6.5ಕ್ಕೆ ಏರಿಕೆಯಾಗಿತ್ತು. 2022ನೇ ಸಾಲಿನ ಮೇನಿಂದ ಇಲ್ಲಿಯ ತನಕ ಆರ್ ಬಿಐ ರೆಪೋ ದರದಲ್ಲಿ ಒಟ್ಟು 250 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. 

ನಾನಾ ಕಾರಣಗಳಿಂದಾಗಿ ಜಾಗತಿಕ ಆರ್ಥಿಕತೆಯು ಅಭಿವೃದ್ಧಿಯ ವಿಷಯದಲ್ಲಿ ಹಿಂದೆ ಬಿದ್ದಿದ್ದರೆ, ಭಾರತದ ಆರ್ಥಿಕತೆ ಮಾತ್ರ ಬೇರೆಲ್ಲ ದೇಶಗಳಿಗಿಂತ ವೇಗವಾಗಿ ಬೆಳೆಯುತ್ತಿದೆ ಎಂದು ವಿಶ್ವಬ್ಯಾಂಕ್‌  ಕೆಲವು ದಿನಗಳ ಹಿಂದೆ ಮೆಚ್ಚುಗೆ ವ್ಯಕ್ತಪಡಿಸಿತ್ತು.ಕುಸಿಯುತ್ತಿರುವ ದೀರ್ಘಾವಧಿ ಅಭಿವೃದ್ಧಿಯ ಅವಕಾಶಗಳು ಎಂಬ ವರದಿಯನ್ನು ವಿಶ್ವ ಬ್ಯಾಂಕ್‌ (World Bank)ಬಿಡುಗಡೆ ಮಾಡಿದ್ದು, ಅದರಲ್ಲಿ ಜಾಗತಿಕ ಆರ್ಥಿಕತೆಯ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆರ್ಥಿಕಾಭಿವೃದ್ಧಿಯ ವಿಷಯದಲ್ಲಿ 2030ರ ವೇಳಗೆ ಜಗತ್ತು ಒಂದು ದಶಕದಷ್ಟು ಹಿಂದೆ ಹೋಗಿರುತ್ತದೆ. ಆದರೆ, ಭಾರತದಲ್ಲಿ ಅಭಿವೃದ್ಧಿಯ ದರ ಉತ್ತಮವಾಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. 
 

Latest Videos
Follow Us:
Download App:
  • android
  • ios