*2022-23ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆಗೆ ಜು.31 ಅಂತಿಮ ಗಡುವು*ಜು.31 ಭಾನುವಾರವಾದ ಕಾರಣ ಬ್ಯಾಂಕಿಗೆ ರಜೆ*ಪೋರ್ಟಲ್ ನಲ್ಲಿನ ತಾಂತ್ರಿಕ ದೋಷ ಅಥವಾ ಇನ್ಯಾವುದೇ ಕಾರಣದಿಂದ ಐಟಿಆರ್ ಸಲ್ಲಿಕೆ ಕಷ್ಟವಾಗಬಹುದು
ನವದೆಹಲಿ (ಜು.22): 2022-23ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಜುಲೈ 31 ಭಾನುವಾರವಾದ ಕಾರಣ ಅಂದು ಬ್ಯಾಂಕಿಗೆ ರಜೆಯಿದೆ. ಹೀಗಾಗಿ ಇನ್ನೂ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡದಿರೋರು ಕೊನೆಯ ದಿನಾಂಕದ ತನಕ ಕಾಯದೆ ಮೊದಲೇ ಮಾಡೋದು ಉತ್ತಮ. ಆದ್ರೆ ಈಗ ಆನ್ ಲೈನ್ ಮೂಲಕವೇ ಐಟಿಆರ್ ಫೈಲ್ ಮಾಡೋ ಅವಕಾಶವಿರುವ ಕಾರಣ ಕೊನೆಯ ದಿನಾಂಕ ಭಾನುವಾರ ಅಥವಾ ಇನ್ಯಾವುದೇ ಸಾರ್ವಜನಿಕ ರಜಾದಿನದಂದು ಬಂದಿದ್ದರೂ ಅಥವಾ ಬ್ಯಾಂಕುಗಳು ಅಂದು ಮುಚ್ಚಿದ್ದರೂ ಯಾವುದೇ ತೊಂದರೆಯೇನೂ ಇಲ್ಲ. ಆದ್ರೂ ಆನ್ ಲೈನ್ ನಲ್ಲಿ ಐಟಿಆರ್ ಸಲ್ಲಿಕೆ ಮಾಡುವವರು ಕೂಡ ಅಂತಿಮ ದಿನದ ತನಕ ಕಾಯುವ ಬದಲು ಮೊದಲೇ ಮಾಡಿ ಮುಗಿಸೋದು ಉತ್ತಮ. ಏಕೆಂದ್ರೆ ಕೊನೆಯ ದಿನ ಐಟಿಆರ್ ಸಲ್ಲಿಕೆ ಮಾಡೋರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಇದ್ರಿಂದ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಐಟಿಆರ್ ಸಲ್ಲಿಕೆ ಕಷ್ಟವಾಗಬಹುದು. ಈ ಹಿಂದೆ ಕೂಡ ಇ-ಫೈಲಿಂಗ್ ಪೋರ್ಟಲ್ ನಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ಅನೇಕ ದೂರುಗಳು ಕೇಳಿಬಂದಿದ್ದವು.
ಯಾಕೆ ಕೊನೆಯ ದಿನಾಂಕದ ತನಕ ಕಾಯಬಾರದು?
ಇಂದು ಎಲ್ಲವೂ ಆನ್ ಲೈನ್ ಮೂಲಕವೇ ಲಭ್ಯವಿದ್ರೂ ರಜೆಯಿರುವ ಕಾರಣ ನೀವು ಖಾತೆ ಹೊಂದಿರುವ ಬ್ಯಾಂಕ್ ಅದೇ ದಿನ ಆನ್ ಲೈನ್ ಬ್ಯಾಂಕಿಂಗ್ ಗೆ ಸಂಬಂಧಿಸಿದ ನಿರ್ವಹಣಾ ಕೆಲಸಗಳನ್ನೇನಾದ್ರೂ ನಿಗದಿಪಡಿಸಿರಬಹುದು ಅಥವಾ ಆ ದಿನ ನೆಟ್ ಬ್ಯಾಂಕಿಂಗ್ ಸೌಲಭ್ಯ ಕಾರ್ಯನಿರ್ವಹಿಸದೆ ಇರಬಹುದು ಅಥವಾ ಇಂಟರ್ನೆಟ್ ಸಮಸ್ಯೆ ಎದುರಾಗಬಹುದು. ಇಂಥ ಸಮಸ್ಯೆಗಳು ಎದುರಾದ್ರೆ ಐಟಿಆರ್ ಫೈಲ್ ಮಾಡೋದು ಕಷ್ಟಸಾಧ್ಯವೇ ಸರಿ. ಇವೆಲ್ಲಕ್ಕಿಂತ ಹೆಚ್ಚಾಗಿ ಈಗಾಗಲೇ ಹೇಳಿದಂತೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ಮೇಲೆ ಹೆಚ್ಚಿನ ವಿಶ್ವಾಸ ಇಡುವಂತೆ ಇಲ್ಲ. ಆದಾಯ ತೆರಿಗೆ ಇಲಾಖೆ 2021ರ ಜೂನ್ 7 ರಂದು ಪ್ರಾರಂಭಿಸಿದ ಇ-ಫೈಲಿಂಗ್ (e-filling) ಪೋರ್ಟಲ್ ನಲ್ಲಿ(Portal) ತಾಂತ್ರಿಕ ಸಮಸ್ಯೆಗಳಿರುವ ಬಗ್ಗೆ ತೆರಿಗೆದಾರರಿಂದ ಕಳೆದ ವರ್ಷ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಎರಡು ಬಾರಿ ವಿಸ್ತರಿಸಿತ್ತು ಕೂಡ.
ಆರ್ ಬಿಐ ಎಂಪಿಸಿ ಸಭೆ ವೇಳಾಪಟ್ಟಿಯಲ್ಲಿ ಬದಲಾವಣೆ;ಆಗಸ್ಟ್ ನಲ್ಲಿ ಹೊಸ ದಿನಾಂಕ ನಿಗದಿ
ಯಾವಾಗ ಬ್ಯಾಂಕಿಗೆ ಭೇಟಿ ನೀಡಬೇಕು?
ಒಂದು ವೇಳೆ ತೆರಿಗೆದಾರರಿಗೆ ITNS 280 ಮಾದರಿಯಲ್ಲಿ ಚಲನ್ ಗಳನ್ನು ಬಳಸಿ ಆದಾಯ ತೆರಿಗೆ ಪಾವತಿಸಬೇಕಿದ್ರೆ ಆಗ ಎರಡು ಆಯ್ಕೆಗಳಿವೆ. ಒಂದು ಆನ್ ಲೈನ್ , ಇನ್ನೊಂದು ಸಹಿ ಮಾಡಿದ ಚಲನ್ ಜೊತೆಗೆ ಬ್ಯಾಂಕಿಗೆ ಭೇಟಿ ನೀಡಿ ತೆರಿಗೆ ಪಾವತಿಸೋದು. ಒಂದು ವೇಳೆ ನಿಮಗೆ ಆನ್ ಲೈನ್ ನಲ್ಲಿ ನಿಮ್ಮ ಟಿಡಿಎಸ್ ಸರ್ಟಿಫಿಕೇಟ್ ಅಥವಾ ಫಾರ್ಮ್ 16A ಸಿಗದಿದ್ರೆ ಬ್ಯಾಂಕಿಗೆ ಭೇಟಿ ನೀಡಬೇಕಾಗುತ್ತದೆ. ಹೀಗಾಗಿ ಐಟಿಆರ್ ಸಲ್ಲಿಕೆಯ ಕೊನೆಯ ದಿನಾಂಕ ಜುಲೈ 31ರ ತನಕ ಕಾಯಬೇಡಿ.
ನಾವೀನ್ಯತೆ: ಸತತ 3ನೇ ವರ್ಷ ಕರ್ನಾಟಕ ದೇಶಕ್ಕೇ ನಂಬರ್ 1
ವಿಳಂಬವಾದ್ರೆ ಏನೆಲ್ಲ ಸಮಸ್ಯೆಯಾಗುತ್ತೆ?
ನಿಗದಿತ ದಿನಾಂಕದೊಳಗೆ ಐಟಿಆರ್ (ITR) ಸಲ್ಲಿಕೆ ಮಾಡದಿದ್ರೂ ವಿಳಂಬ ಐಟಿಆರ್ (Belated ITR) ಸಲ್ಲಿಕೆಗೆ ಅವಕಾಶವಿದ್ದರೂ ತೆರಿಗೆದಾರರು (Taxpayers) ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಳಂಬ ಐಟಿಆರ್ ಸಲ್ಲಿಕೆ ಮಾಡೋ ತೆರಿಗೆದಾರರು (Taxpayers) ತಡವಾಗಿರೋದಕ್ಕೆ ದಂಡ ಶುಲ್ಕ ಕಟ್ಟಬೇಕು. ಹಣಕಾಸು ಕಾಯ್ದೆ ಅನ್ವಯ ಈ ದಂಡವನ್ನು ನಿಗದಿಪಡಿಸಲಾಗಿದ್ದು, 1,000ರೂ.ನಿಂದ 5,000ರೂ. ತನಕ ಇರುತ್ತದೆ. ಅಲ್ಲದೆ, ಈ ವರ್ಷ ತೆರಿಗೆದಾರರು (Taxpayers) ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff) ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ಅಂತಿಮ ಗಡುವಿನೊಳಗೆ ಐಟಿಆರ್ ಫೈಲ್ ಮಾಡದ ತೆರಿಗೆದಾರರಿಗೆ ಮರುಪಾವತಿ ಮಾಡೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ತೆರಿಗೆದಾರ ಈ ತನಕ ಪಾವತಿ ಮಾಡಿದ ತೆರಿಗೆ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ತೆರಿಗೆಗಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿ (Interest) ಕೂಡ ಕಟ್ಟಬೇಕಾಗುತ್ತದೆ.
