ಚೀನಾದ ಪ್ರಸಿದ್ಧ ಸಾಮಾಜಿಕ ಜಾಲತಾಣ ತಾರೆಯರಾದ ಸನ್ ಕೈಹಾಂಗ್ ಮತ್ತು ಗುವೊ ಬಿನ್, ದಿನಕ್ಕೆ ಕೋಟಿಗಟ್ಟಲೆ ಸಂಪಾದಿಸುತ್ತಿದ್ದರೂ, ಆರೋಗ್ಯ ಮತ್ತು ಕುಟುಂಬದ ಕಾರಣಗಳಿಂದ ಸಾಮಾಜಿಕ ಜಾಲತಾಣಗಳಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ. ಐದು ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ಲೈವ್ ಸೆಷನ್‌ಗಳನ್ನು ನಡೆಸಿದ ಈ ದಂಪತಿ, ಭವಿಷ್ಯದಲ್ಲಿ ಹೊಸ ರೂಪದಲ್ಲಿ ಮರಳುವ ಭರವಸೆ ನೀಡಿದ್ದಾರೆ. ಅಭಿಮಾನಿಗಳು ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಡಿಜಿಟಲ್ (Digital) ಜಗತ್ತಿನಲ್ಲಿಗುರುತಿಸಿಕೊಳ್ಳೋದು ಸುಲಭವಲ್ಲದೆ ಹೋದ್ರೂ ಕಠಿಣವೇನಲ್ಲ. ನಿರಂತರ ಪ್ರಯತ್ನ, ಹೊಸ ಹೊಸ ಕಂಟೆಂಟ್ ಕ್ರಿಯೇಟ್ ಮಾಡಿ ಜನರು ಸೋಶಿಯಲ್ ಮೀಡಿಯಾದಲ್ಲಿ ತಳವೂರ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಹೆಚ್ಚು ಟೆನ್ಷನ್ ಇಲ್ದೆ, ಅತಿ ಬೇಗ ಶ್ರೀಮಂತರಾಗುವ ಕೆಲ್ಸ ಅಂದ್ರೆ ಅದು ಸೋಶಿಯಲ್ ಮೀಡಿಯಾ ಲೈವ್ ಸ್ಟ್ರೀಮಿಂಗ್ (Live streaming) ಅಂತ ಅನೇಕರು ಭಾವಿಸಿದ್ದಾರೆ. ಅದು ಅರ್ಧ ಸತ್ಯ. ಮತ್ತರ್ಧ ಸತ್ಯ ಬೇರೆಯೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಕೋಟಿ ಕೋಟಿ ಹಣ ಸಂಪಾದನೆ ಮಾಡೋರಿಗೂ ನೂರಾರು ಟೆನ್ಷನ್ ಇರುತ್ತೆ. ಹಣಕ್ಕಿಂತ ಸಮಯ ಮುಖ್ಯ ಎನ್ನುವ ತೀರ್ಮಾನಕ್ಕೆ ಬರೋರಿದ್ದಾರೆ. ಅದ್ರಲ್ಲಿ ಈಗ ನಾವು ಹೇಳೋಕೆ ಹೊರಟಿರೋ ದಂಪತಿ ಕೂಡ ಹೌದು. ಕೋಟ್ಯಾಂತರ ರೂಪಾಯಿ ಪ್ರತಿ ದಿನ ಸಂಪಾದನೆ ಮಾಡುವ ಈ ಜೋಡಿ ಈಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

ಚೀನಾದ ಪ್ರಸಿದ್ಧ ಸೋಶಿಯಲ್ ಮೀಡಿಯಾ ಇನ್ ಇನ್ಫ್ಲುಯೆನ್ಸರ್ @Caihongfufu ಎಂದು ಕರೆಯಲ್ಪಡುವ ಸನ್ ಕೈಹಾಂಗ್ ಮತ್ತು ಗುವೊ ಬಿನ್, ಸೋಶಿಯಲ್ ಮೀಡಿಯಾ ಮೂಲಕ ಪ್ರತಿ ದಿನ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ 1.5 ಕೋಟಿಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇಷ್ಟಾದ್ರೂ ಸನ್ ಕೈಹಾಂಗ್ ಮತ್ತು ಗುವೋ ಬಿನ್, ಸಾಮಾಜಿಕ ಜಾಲತಾಣದಿಂದ ದೂರ ಇರುವ ನಿರ್ಧಾರ ತೆಗೆದುಕೊಂಡಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ. 

5 ವರ್ಷಗಳ ಕಠಿಣ ಪರಿಶ್ರಮ - 1000 ಕ್ಕೂ ಹೆಚ್ಚು ಲೈವ್ ಸೆಷನ್ : ಈ ದಂಪತಿ ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಕೆಲ್ಸ ಮಾಡ್ತಿದ್ದಾರೆ. 1000 ಕ್ಕೂ ಹೆಚ್ಚು ಬಾರಿ ಲೈವ್ ಸೆಷನ್ ನೀಡಿದ್ದಾರೆ. ಅವರು ಪ್ರತಿದಿನ 8 ಗಂಟೆಗಳ ಕಾಲ ಲೈವ್ನಲ್ಲಿ ಇರುತ್ತಿದ್ದರು. ನಾಲ್ಕು ಮಕ್ಕಳ ಪಾಲಕರಾಗಿರುವ ಇವರು, ಆನ್ಲೈನ್ ವ್ಯವಹಾರ ಕೂಡ ನಡೆಸ್ತಿದ್ದಾರೆ.

ಸೋಶಿಯಲ್ ಮೀಡಿಯಾದಿಂದ ದೂರವಿರಲು ಕಾರಣ ಏನು? : ಲೈವ್ ಬಂದ ದಂಪತಿ, ಸದ್ಯ ತಾವು ಸೋಶಿಯಲ್ ಮೀಡಿಯಾದಿಂದ ದೂರ ಇರೋದಾಗಿ ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಪ್ರತಿ ದಿನ ಇಷ್ಟು ಗಂಟೆ ಲೈವ್ ಇರ್ತಿದ್ದ ಕಾರಣ ಆಯಾಸವಾಗಿದೆ. ಗಂಟಲು ನೋವಾಗಿದೆ. ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗ್ತಿಲ್ಲ. ಮಾನಸಿಕ ಹಿಂಸೆಯಾಗ್ತಿದೆ. ನಮಗೆ ವಿಶ್ರಾಂತಿ ಅವಶ್ಯಕತೆ ಇದೆ ಎಂದಿದ್ದಾರೆ. ನಾಲ್ಕು ಮಕ್ಕಳ ಗರ್ಭಧಾರಣೆಯಲ್ಲೂ ನಾನು ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದ್ದೇನೆ ಎಂದು ಸನ್ ಹೇಳಿದ್ದಾರೆ. 

ಆರಂಭ ಎಲ್ಲಿಂದ? : ಸನ್ ಮತ್ತು ಗುವೊ ವಿಮಾ ಕಂಪನಿಯಲ್ಲಿ ಕೆಲ್ಸ ಮಾಡ್ತಿದ್ದರು. 8 ಚದರ ಮೀಟರ್ ವಿಸ್ತೀರ್ಣದ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದರು. 2020 ರಲ್ಲಿ ಅವರ ಅದೃಷ್ಟ ಬದಲಾಯ್ತು. ಅವರು ತಮ್ಮ ಲವ್ ಸ್ಟೋರಿ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದು ಅವರನ್ನು ರಾತ್ರೋರಾತ್ರಿ ಪ್ರಸಿದ್ಧಿಗೆ ತಂತು. ಕೇವಲ ಒಂದು ವರ್ಷದಲ್ಲಿ ಅವರು 30 ಲಕ್ಷ ಫಾಲೋವರ್ಸ್ ಪಡೆದ್ರು. ಇದಾದ ನಂತರ ಲೈವ್ ಸ್ಟ್ರೀಮಿಂಗ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ರು. ಚೀನಾದಲ್ಲಿ ಅಗ್ರ ಆನ್ಲೈನ್ ಮಾರಾಟಗಾರರಲ್ಲಿ ಒಬ್ಬರಾದರು. 

ದಿನಕ್ಕೆ 4 ಕೋಟಿ ರೂ.ಗೂ ಹೆಚ್ಚು ಗಳಿಕೆ :  2022 ರ ಹೊತ್ತಿಗೆ ಅವರು ದಿನಕ್ಕೆ 230 ಮಿಲಿಯನ್ ಯುವಾನ್ ಅಂದ್ರೆ ಸುಮಾರು 267 ಕೋಟಿ ರೂಪಾಯಿವರೆಗೆ ವಸ್ತುಗಳ ಮಾರಾಟ ಮಾಡಿದ್ದಾರೆ. ಸಾಮಾನ್ಯ ದಿನಗಳಲ್ಲಿಯೂ ಅವರು ದಿನಕ್ಕೆ 4 ಮಿಲಿಯನ್ ಯುವಾನ್, ಸುಮಾರು 4.6 ಕೋಟಿ ಗಳಿಸುತ್ತಿದ್ದರು. ಈ ಗಳಿಗೆ ಅವರ ಜೀವನ ಬದಲಿಸಿದೆ. ಅವರು ಈಗ 260 ಚದರ ಮೀಟರ್ ವಿಸ್ತೀರ್ಣದ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ.

ನಿರ್ಧಾರ ಬೆಂಬಲಿಸಿದ ಫಾಲೋವರ್ಸ್ : ಸನ್, ಲೈವ್ ಸೆಷನ್ ನಿಲ್ಲಿಸೋದಾಗಿ ಹೇಳಿದ್ದಾರೆ. ಅದನ್ನು ಫಾಲೋವರ್ಸ್ ಗೌರವಿಸಿದ್ದಾರೆ. ನೀವು ಸಾಕಷ್ಟು ಸಂಪಾದಿಸಿದ್ದೀರಿ, ಈಗ ವಿಶ್ರಾಂತಿ ಪಡೆಯಿರಿ, ಆರೋಗ್ಯ ಮುಖ್ಯ ಎಂದು ಸಲಹೆ ನೀಡಿದ್ದಾರೆ. ಆದ್ರೆ ಈ ವಿರಾಮ ಶಾಶ್ವತವಾಗಿ ವಿದಾಯವಲ್ಲ. ಭವಿಷ್ಯದಲ್ಲಿ ಮತ್ತೆ ಮರಳ್ತೆವೆ. ಮುಂದಿನ ಬಾರಿ ಸಮತೋಲನದೊಂದಿಗೆ, ಅಲ್ಪಾವಧಿಯ ಲೈವ್ಸ್ಟ್ರೀಮಿಂಗ್, ಟೀಂ ವರ್ಕ್ ಅಥವಾ ಕಂಟೆಂಟ್ ಕ್ರಿಯೇಟ್ ನಂತ ಹೊಸದ ವಿಧಾನದ ಜೊತೆ ಬರ್ತೇವೆ ಎಂದಿದ್ದಾರೆ.