ಲಾಕ್ಡೌನಿಂದ ಉನ್ನತ ಶ್ರೇಣಿಯ 66 ಲಕ್ಷ ಜನರ ಉದ್ಯೋಗ ಕಟ್!
ಲಾಕ್ಡೌನಿಂದ ಉನ್ನತ ಶ್ರೇಣಿಯ 66 ಲಕ್ಷ ಜನರ ಉದ್ಯೋಗ ಕಟ್| ಟೆಕಿ, ಡಾಕ್ಟರ್, ಶಿಕ್ಷಕರು, ಅಕೌಂಟೆಂಟ್‌ಗಳಿಗೆ ಹೆಚ್ಚು ಉದ್ಯೋಗ ನಷ್ಟ| 2ನೇ ಅತಿ ಹೆಚ್ಚು ಉದ್ಯೋಗ ನಷ್ಟವಾಗಿದ್ದು ಕಾರ್ಮಿಕರಿಗೆ: 50 ಲಕ್ಷ
ನವದೆಹಲಿ(ಸೆ. 19): ಕೊರೋನಾ ವೈರಸ್ ಲಾಕ್‌ಡೌನ್‌ನ ಪರಿಣಾಮವಾಗಿ ಮೇ ಹಾಗೂ ಆಗಸ್ಟ್ ತಿಂಗಳ ನಡುವೆ ದೇಶದಲ್ಲಿ 66 ಲಕ್ಷ ಬಿಳಿ ಕಾಲರ್ ನೌಕರರು, ಅಂದರೆ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವೈದ್ಯರು, ಶಿಕ್ಷಕರು, ಅಕೌಂಟೆಂಟ್ ಮುಂತಾದ ಸಂಬಳದಾರರು, ಕೆಲಸ ಕಳೆದುಕೊಂಡಿದ್ದಾರೆ.
ಸಿಎಂಐಇಯ ಕನ್ಸೂಮರ್ ಪಿರಾಮಿಡ್ಸ್ ಹೌಸ್‌ಹೋಲ್ಡ್ ಸಮೀಕ್ಷೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಲಾಕ್‌ಡೌನ್‌ನ ಪರಿಣಾಮವಾಗಿ ದೇಶದಲ್ಲೇ ಅತಿಹೆಚ್ಚು ಉದ್ಯೋಗ ನಷ್ಟವಾಗಿರುವುದು ಬಿಳಿ ಕಾಲರ್ ನೌಕರರಿಗೆ. ನಂತರದ ಸ್ಥಾನದಲ್ಲಿ ಕಾರ್ಮಿಕರಿದ್ದು, ಸುಮಾರು 50 ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಅಂದರೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉದ್ಯೋಗಾವಕಾಶ ಶೇ.26ರಷ್ಟುಕಡಿಮೆಯಾಗಿದೆ ಎಂದು ಸಮೀಕ್ಷೆ ಹೇಳಿದೆ.
2016ರ ಜನವರಿ ಮತ್ತು ಏಪ್ರಿಲ್ ನಡುವೆ ಸುಮಾರು 1.2 ಕೋಟಿ ಬಿಳಿ ಕಾಲರ್ ನೌಕರರಿಗೆ ಕೆಲಸ ದೊರೆತಿತ್ತು. ಲಾಕ್‌ಡೌನ್‌ನಿಂದಾಗಿ ಆ ಉದ್ಯೋಗಗಳಲ್ಲಿ ಅರ್ಧಕ್ಕಿಂತ ಹೆಚ್ಚು ಉದ್ಯೋಗಗಳು ನಷ್ಟವಾಗಿವೆ ಎಂದು ಸಮೀಕ್ಷೆ ತಿಳಿಸಿದೆ.
ಇತ್ತೀಚೆಗಷ್ಟೇ ಮುಂಬೈ ಮೂಲದ ಆರ್ಥಿಕ ತಜ್ಞರ ವರದಿಯೊಂದು ಲಾಕ್‌ಡೌನ್‌ನಿಂದಾಗಿ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ 2.1 ಕೋಟಿ ನೌಕರರು ಕೆಲಸ ಕಳೆದುಕೊಂಡಿದ್ದಾರೆ ಎಂದು ಹೇಳಿತ್ತು.