ಹೆಣ್ಣು ಮಗು ಜನಿಸಿತೆಂದು ಬೇಸರಪಟ್ಟುಕೊಳ್ಳೋದು,ಜಾಸ್ತಿ ಓದಿಸದೆ ಮನೆಗೆಲಸಕ್ಕೆ ಹಚ್ಚೋದು, ಹೆಣ್ಣು ಹುಟ್ಟಿರೋದೆ ಮದುವೆ ಮಾಡೋಕೆ ಎಂದು ಭಾವಿಸಿ ಬಾಲ್ಯದಲ್ಲೇ ವಿವಾಹ ಮಾಡಿಸೋದು…..ಹೀಗೆ ಹೇಳುತ್ತ ಹೋದ್ರೆ ಹೆಣ್ಣಿಂಬ ತಿರಸ್ಕಾರದ ಪಟ್ಟಿ ಬೆಳೆಯುತ್ತ ಹೋಗುತ್ತೆ. ಜನ ಅದೆಷ್ಟೇ ವಿದ್ಯಾವಂತರಾಗಿದ್ರೂ ನಮ್ಮ ದೇಶದಲ್ಲಿ ಗಂಡು ಮಗುವಿನ ಮೇಲಿನ ವ್ಯಾಮೋಹ ಇನ್ನೂ ತಗ್ಗಿಲ್ಲ.ಇದೇ ಕಾರಣಕ್ಕೆ ಭ್ರೂಣ ಹತ್ಯೆ ಹೆಚ್ಚಿ, ಮಹಿಳೆಯರ ಸಂಖ್ಯೆ ಪುರುಷರಿಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರೋದು. ಹೀಗಾಗಿ ಹೆಣ್ಣು ಮಗುವಿನ ಕುರಿತ ಸಮಾಜದ ದೃಷ್ಟಿಕೋನ ಬದಲಾಗಲಿ,ಆಕೆಗೂ ಉತ್ತಮ ಶಿಕ್ಷಣ ಸಿಗಲಿ,ಅವಳ ಮದುವೆ ಹೆತ್ತವರಿಗೆ ಹೊರೆಯಾಗದಿರಲಿ ಎಂಬ ಕಾರಣದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಯೋಜನೆಯೇ ಸುಕನ್ಯಾ ಸಮೃದ್ಧಿ.ಈ ಯೋಜನೆಯಡಿಯಲ್ಲಿ 10ವರ್ಷದೊಳಗಿನ ಹೆಣ್ಣು ಮಗುವಿನ ಹೆತ್ತವರು ಅಥವಾ ಪಾಲಕರು ಬ್ಯಾಂಕ್‌ ಅಥವಾ ಅಂಚೆ ಕಚೇರಿಯಲ್ಲಿ ಆಕೆ ಹೆಸರಲ್ಲಿ ಉಳಿತಾಯ ಖಾತೆ ತೆರೆಯಬಹುದು. ಎರಡು ಹೆಣ್ಣು ಮಕ್ಕಳಿದ್ರೆ ಅವರಿಬ್ಬರ ಹೆಸರಿನಲ್ಲೂ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು.ಒಂದು ವೇಳೆ ಮೊದಲನೇ ಮಗು ಹೆಣ್ಣಾಗಿದ್ದು, ಎರಡನೇ  ಹೆರಿಗೆಯಲ್ಲಿ ಅವಳಿ ಹೆಣ್ಣು ಮಕ್ಕಳಾದ್ರೆ ಅವರಿಬ್ಬರ ಹೆಸರಿನಲ್ಲೂ ಪ್ರತ್ಯೇಕ ಖಾತೆ ತೆರೆಯಬಹುದು. ಖಾತೆ ಹೊಂದಿರೋ ಹೆಣ್ಣು ಮಗು 21 ವರ್ಷಕ್ಕೆ ಕಾಲಿಟ್ಟ ನಂತರ ಠೇವಣಿ ಹಿಂಪಡೆಯಲು ಅಧಿಕಾರ ಹೊಂದಿರುತ್ತಾಳೆ. ಹಾಗಾದ್ರೆ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಹೆಣ್ಣು ಮಗುವಿನ ಪೋಷಕರು ಏನ್‌ ಮಾಡ್ಬೇಕು? 

ಕಷ್ಟ ಕಾಲದಲ್ಲಿ ಗೋಲ್ಡ್ ಲೋನ್ ಪಡೆಯಲು ಹೀಗೆ ಮಾಡಿ

ಎಲ್ಲಿ ಖಾತೆ ತೆರೆಯಬಹುದು?
ನಿಮ್ಮ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ತೆರೆಯುತ್ತಿರೋ ಅಥವಾ ಪೋಸ್ಟ್‌ ಆಫೀಸ್‌ನಲ್ಲಿ ತೆರೆಯುತ್ತಿರೋ ಎಂಬುದನ್ನು ಮೊದಲು ನಿರ್ಧರಿಸಿ. ಇವೆರಡರಲ್ಲಿ ಪ್ರತಿ ತಿಂಗಳು ಹಣ ಭರ್ತಿ ಮಾಡಲು ನಿಮಗೆ ಯಾವುದು ಹೆಚ್ಚು ಅನುಕೂಲವೆನಿಸುತ್ತದೋ ಅಲ್ಲಿ ಖಾತೆ ತೆರೆಯಿರಿ. 

ಅಕೌಂಟ್‌ ಫಾರ್ಮ್‌ ತುಂಬಿಸಬೇಕು
ಹೆಣ್ಣು ಮಗುವಿನ ಹೆತ್ತವರು ಅಥವಾ ಪಾಲಕರು ಸುಕನ್ಯಾ ಸಮೃದ್ಧಿ ಅಕೌಂಟ್‌ ಫಾರ್ಮ್‌ (ಎಸ್‌ಎಸ್‌ಎ-೧) ತುಂಬಿಸಬೇಕು. ಈ ಫಾರ್ಮ್‌ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಸಿಗುತ್ತೆ. ಈಗಂತೂ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಭಾರತೀಯ ಅಂಚೆ ಇಲಾಖೆ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಎಸ್‌ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಖಾಸಗಿ ವಲಯದ ಬ್ಯಾಂಕ್‌ಗಳ ವೆಬ್‌ಸೈಟ್‌ನಿಂದಲೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದರಲ್ಲಿ ಪಾಲಕರ ಹೆಸರು, ಮಗುವಿನ ಹೆಸರು, ಜನನ ಪ್ರಮಾಣ ಪತ್ರದ ವಿವರಗಳು, ವಿಳಾಸ ಪಾಲಕರ ಕೆವೈಸಿ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಈ ದಾಖಲೆಗಳು ಬೇಕು
ಎಸ್‌ಎಸ್‌ಎ-1 ಫಾರ್ಮ್‌ ತುಂಬಿಸಿದ ಬಳಿಕ ಅದರೊಂದಿಗೆ ಈ ಕೆಳಗಿನ ದಾಖಲೆಗಳನ್ನು ಲಗತ್ತಿಸಬೇಕು.
-ಮಗುವಿನ ಜನನ ಪ್ರಮಾಣ ಪತ್ರ.
-ಹೆತ್ತವರು/ ಪಾಲಕರ ವಿಳಾಸ ದೃಢೀಕರಣಕ್ಕೆ ಪಾಸ್‌ಪೋರ್ಟ್‌,ರೇಷನ್‌ ಕಾರ್ಡ್‌,ಚುನಾವಣಾ ಐಡಿ,ವಿದ್ಯುತ್‌ ಅಥವಾ ದೂರವಾಣಿ ಬಿಲ್‌, ಡ್ರೈವಿಂಗ್‌ ಲೈಸೆನ್ಸ್‌ಗಳಲ್ಲಿ ಯಾವುದಾದರೂ ಒಂದರ ನಕಲು ಪ್ರತಿ.
- ಹೆತ್ತವರು/ ಪಾಲಕರ ಗುರುತು ದೃಢೀಕರಣಕ್ಕೆ ಪಾನ್‌, ಮತದಾರರ ಐಡಿ, ಆಧಾರ್‌ ಅಥವಾ ಪಾಸ್‌ಪೊರ್ಟ್‌ಗಳಲ್ಲಿ ಯಾವುದಾದರೂ ಒಂದರ ನಕಲು ಪ್ರತಿ.
-ಖಾತೆಗೆ ಆರಂಭಿಕ ಠೇವಣಿ 250ರೂ. ಚೆಕ್‌, ಡಿಮ್ಯಾಂಡ್‌ ಡ್ರಾಫ್ಟ್‌,ಇ-ಬ್ಯಾಂಕಿಂಗ್‌ ದಾಖಲೆ ಅಥವಾ ನಗದು.

ಡೆಬಿಟ್ ಕಾರ್ಡ್‌ ಇಲ್ಲದೆಯೂ ಎಟಿಎಂನಿಂದ ಹಣ ತೆಗೆಯಬಹುದು!

ಖಾತೆ ತೆರೆದ ತಕ್ಷಣ ಸಿಗುತ್ತೆ ಪಾಸ್‌ಬುಕ್‌
ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ನೀವು ನೀಡಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಿಮಗೆ ಪಾಸ್‌ಬುಕ್‌ ನೀಡುತ್ತಾರೆ. ಮುಂದೆ ಪ್ರತಿ ಬಾರಿ ನೀವು ಈ ಖಾತೆಗೆ ಜಾಮಾ ಮಾಡೋ ಹಣದ ವಿವರವನ್ನು ಇದರಲ್ಲಿ ದಾಖಲಿಸಲಾಗುತ್ತೆ.

ವಾರ್ಷಿಕ ಎಷ್ಟು ಹಣ ಜಮೆ ಮಾಡ್ಬೇಕು?
ಈ ಖಾತೆಗೆ ವರ್ಷಕ್ಕೆ ಕನಿಷ್ಠ 250ರೂ.ನಿಂದ ಗರಿಷ್ಠ 1.5 ಲಕ್ಷ ರೂ. ಜಮೆ ಮಾಡಬಹುದು. ವಾರ್ಷಿಕ 250ರೂ.ಕನಿಷ್ಠ ಮೊತ್ತ ಜಮೆ ಮಾಡದಿದ್ರೆ ಎಸ್‌ಎಸ್‌ವೈ ಖಾತೆ ನಿಷ್ಕ್ರಿಯಗೊಳ್ಳುತ್ತೆ. ಆದ್ರೆ ಆ ವರ್ಷ ಜಮೆ ಮಾಡಬೇಕಾದ ಕನಿಷ್ಠ ಮೊತ್ತದ ಜೊತೆ 5೦ ರೂ. ದಂಡ ಪಾವತಿಸೋ ಮೂಲಕ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.

ಬಡ್ಡಿ ದರ ಎಷ್ಟು?
ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಅತ್ಯಂತ ಗರಿಷ್ಠ ಬಡ್ಡಿ ದರ ಹೊಂದಿರೋ ಖಾತೆಯೆಂದ್ರೆ ಅದು ಸುಕನ್ಯಾ ಸಮೃದ್ಧಿ. ಸದ್ಯಕ್ಕೆ ಶೇ.7.6 ಬಡ್ಡಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷವೂ ಬಡ್ಡಿಯನ್ನು ಬದಲಾಯಿಸುತ್ತೆ.

ಬೀದಿಯಲ್ಲಿ ಸಿಗುವ ತಿನಿಸು ಇನ್ನು ಆನ್‌ಲೈನ್‌ ಡೆಲಿವರಿ!

ಯಾವಾಗ ಠೇವಣಿ ಹಿಂಪಡೆಯಬಹುದು?
ನಿಮ್ಮ ಮಗಳಿಗೆ 21 ವರ್ಷ ತುಂಬಿದ ತಕ್ಷಣ ಈ ಖಾತೆಯಿಂದ ಹಣ ಪಡೆಯಬಹುದು. ಆದ್ರೆ ಆಕೆ ವಿದ್ಯಾಭ್ಯಾಸಕ್ಕೆ ಹಣದ ಅವಶ್ಯಕತೆಯಿದ್ರೆ ಆಕೆಗೆ 18 ವರ್ಷ ತುಂಬಿದ ಬಳಿಕ ಶೇ.5೦ರಷ್ಟು ಹಣ ಪಡೆಯಲು ಅವಕಾಶ ನೀಡಲಾಗಿದೆ. ಒಂದು ವೇಳೆ 18 ವರ್ಷಕ್ಕಿಂತ ಮೊದಲು ನೀವು ಮಗಳಿಗೆ ಮದುವೆ ಮಾಡಿದರೆ ಈ ಖಾತೆಯಿಂದ ಯಾವುದೇ ಹಣ ಸಿಗೋದಿಲ್ಲ. ಮಗು ಸಾವಿಗೀಡಾದ್ರೆ ತಕ್ಷಣ ಖಾತೆಯನ್ನು ಮುಚ್ಚಿ, ಅದರಲ್ಲಿರೋ ಮೊತ್ತವನ್ನು ಪಾಲಕರಿಗೆ ನೀಡಲಾಗುತ್ತದೆ. 

ತೆರಿಗೆ ಪ್ರಯೋಜನ 
ಎಸ್‌ಎಸ್‌ವೈ ಖಾತೆಯಲ್ಲಿರೋ ಠೇವಣಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ ೮೦ಸಿ ಅಡಿಯಲ್ಲಿ ಗರಿಷ್ಠ 1.5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ನೀಡಲಾಗಿದೆ. ಹೀಗಾಗಿ ಹೆಣ್ಣುಮಗುವಿನ ಪೋಷಕರು ಆದಾಯ ತೆರಿಗೆಯಿಂದ ವಿನಾಯ್ತಿ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.