Ban On Food Export:ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಆಹಾರ ರಫ್ತಿನ ಮೇಲೆ ನಿಷೇಧ ಹೇರಲು ಕಾರಣವೇನು? ಇಲ್ಲಿದೆ ಮಾಹಿತಿ

*ಆಹಾರ ರಫ್ತಿನ ಮೇಲೆ ನಿಷೇಧದಿಂದ ಜಾಗತಿಕ ಮಟ್ಟದಲ್ಲಿ ಬೆಲೆಯೇರಿಕೆ 
*ಆಹಾರ ಭದ್ರತೆ ಹಿತದೃಷ್ಟಿಯಿಂದ ಆಹಾರ ಪದಾರ್ಥಗಳ ಮೇಲೆ ನಿಷೇಧ ಹೇರುತ್ತಿರುವ ರಾಷ್ಟ್ರಗಳು
*ಕೆಲವು ರಾಷ್ಟ್ರಗಳಲ್ಲಿ ಈಗಾಗಲೇ ಗೋಧಿ ಸೇರಿದಂತೆ ಕೆಲವು ಧಾನ್ಯಗಳ ಕೊರತೆ

Wheat to palm oil not only India but many countries ban food exports

Business Desk: ಗೋಧಿ (Wheat) ಬೆಲೆ (Price) ಮಂಗಳವಾರ (ಮೇ 17)  14 ವರ್ಷಗಳ ಗರಿಷ್ಠ ಏರಿಕೆ ಕಂಡಿದೆ. ವಿಶ್ವದ ಎರಡನೇ ಅತೀದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾದ ಭಾರತ (India) ಗೋಧಿ ರಫ್ತಿನ (export) ಮೇಲೆ ನಿಷೇಧ ಹೇರಿರುವ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆಯಲ್ಲಿ ಏರಿಕೆಯಾಗಿದೆ. ಹಾಗಂತ ಗೋಧಿ ರಫ್ತಿನ ಮೇಲೆ ಭಾರತ ಮಾತ್ರ ನಿಷೇಧ ಹೇರಿಲ್ಲ.ಜಗತ್ತಿನ ಅನೇಕ ರಾಷ್ಟ್ರಗಳು ಗೋಧಿ ಸೇರಿದಂತೆ ಆಹಾರ ಪದಾರ್ಥಗಳ ರಫ್ತಿನ ಮೇಲೆ ನಿಷೇಧ ಹೇರಿವೆ. ಜಾಗತಿಕ ಮಟ್ಟದಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿರುವುದು,ಕೆಲವು ಆಹಾರ ಪದಾರ್ಥಗಳ ಕೊರತೆ ಸೃಷ್ಟಿಯಾಗಬಹುದೆಂಬ ಭಯ ಇಂಥ ನಿರ್ಧಾರಕ್ಕೆ ಕಾರಣವಾಗಿದೆ.

ಕೋವಿಡ್ -19 (COVID-19) ಕಾರಣದಿಂದ ಜಾಗತಿಕ ಪೂರೈಕೆ ವ್ಯವಸ್ಥೆ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು.ಇನ್ನೇನು ಕೊರೋನಾ (Corona) ಹಾವಳಿ ಮುಗಿದು ಎಲ್ಲವೂ ಯಥಾಸ್ಥಿತಿಗೆ ಮರಳುತ್ತದೆ ಎನ್ನುವಾಗ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾಯಿತು. ಇದು ಆಗಲೇ ಸಾಕಷ್ಟು ಹೊಡೆತ ಅನುಭವಿಸಿರುವ ಜಾಗತಿಕ ಆರ್ಥಿಕತೆಗೆ ಇನ್ನಷ್ಟು ಪೆಟ್ಟು ನೀಡಿತು. ಗೋಧಿ (Wheat)  ಸೇರಿದಂತೆ ಕೆಲವು ಧಾನ್ಯಗಳ ಉತ್ಪಾದನೆಯಲ್ಲಿ ರಷ್ಯಾ (Russia)  ಹಾಗೂ ಉಕ್ರೇನ್ (Ukraine)  ಮುಂಚೂಣಿಯಲ್ಲಿರುವ ಜೊತೆಗೆ ಜಗತ್ತಿನ ಇತರ ರಾಷ್ಟ್ರಗಳಿಗೆ ಪೂರೈಕೆ ಮಾಡುತ್ತಿದ್ದವು ಕೂಡ. ಯುದ್ಧದ ಪರಿಣಾಮ ಉಭಯ ರಾಷ್ಟ್ರಗಳಿಂದ ರಫ್ತು ನಿಂತಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕೆಲವು ರಾಷ್ಟ್ರಗಳಲ್ಲಿ ಗೋಧಿ ಸೇರಿದಂತೆ ಕೆಲವು ಧಾನ್ಯಗಳ ಕೊರತೆಯೂ ತಲೆದೋರಿದೆ. ಈ ಹಿನ್ನೆಲೆಯಲ್ಲಿ ತಮ್ಮ ರಾಷ್ಟ್ರದ ಆಹಾರ ಭದ್ರತೆಯ ಹಿತದೃಷ್ಟಿಯಿಂದ ಕೆಲವು ರಾಷ್ಟ್ರಗಳು ಈಗಾಗಲೇ ಕೆಲವೊಂದು ಆಹಾರ ಉತ್ಪನ್ನಗಳ ರಫ್ತನ್ನು ನಿಷೇಧಿಸಿವೆ. ಈಜಿಪ್ಟ್ (Egypt), ಕಜಕಿಸ್ತಾನ್ (Kazakhstan), ಕೊಸೊವೊ (Kosovo) ಹಾಗೂ ಸರ್ಬಿಯಾ (Serbia) ಕೂಡ ಕೆಲವೊಂದು ಆಹಾರ ಉತ್ಪನ್ನಗಳ ರಫ್ತಿನ ಮೇಲೆ ನಿಷೇಧ ಹೇರಿವೆ. 

ಗೋಧಿ ರಫ್ತಿನ ಮೇಲೆ ಭಾರತದ ನಿಷೇಧ, ಜಗತ್ತಿನ ಆಹಾರ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದ ವಿಶ್ವ ನಾಯಕರು!

ರಷ್ಯಾ ಹಾಗೂ ಉಕ್ರೇನ್ ಜಗತ್ತಿನ ಗೋಧಿ ರಫ್ತಿನಲ್ಲಿ ಶೇ.29ರಷ್ಟು ಪಾಲು ಹೊಂದಿರೋದು ಕೂಡ ಗೋಧಿ ಬೆಲೆಯೇರಿಕೆಗೆ ಕಾರಣವಾಗಿದೆ. ಷರ್ಯಾ ಹಾಗೂ ಉಕ್ರೇನ್ ಯುದ್ಧ ಜಾಗತಿಕ ಆಹಾರ ಕೊರತೆಯ ಅಪಾಯವನ್ನು ಹೆಚ್ಚಿಸಿವೆ. ಯುದ್ಧದ ಕಾರಣ ಉಕ್ರೇನ್ ಆಹಾರ ಧಾನ್ಯಗಳು, ರಸಗೊಬ್ಬರ ಹಾಗೂ ಸೂರ್ಯಕಾಂತಿ ಎಣ್ಣೆಯನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಯುದ್ಧದ ಕಾರಣ ಉಕ್ರೇನ್ ಜಮೀನಿನಲ್ಲಿ ಬೆಳೆದು ನಿಂತ ಫಸಲುಗಳು ಕೂಡ ಹಾಳಾಗುತ್ತಿವೆ. ಜಾಗತಿಕ ಗೋಧಿ ಕೊರತೆಯನ್ನು ಬ್ಯಾಲೆನ್ಸ್ ಮಾಡಲು ಭಾರತ ಪ್ರಾರಂಭದಲ್ಲೇ ಹೆಜ್ಜೆಯಿಟ್ಟಿತ್ತು. ಆದ್ರೆ, ದೇಶದ ಆಹಾರ ಭದ್ರತೆಯ ಹಿತದೃಷ್ಟಿಯಿಂದ ಮೇ14ರಂದು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದೆ. ಭಾರತ ಈ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಗೋಧಿ ಬೆಲೆಯಲ್ಲಿ ಶೇ.6ರಷ್ಟು ಹೆಚ್ಚಳವಾಗಿದೆ. 

ದೇಶದಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರ ಹಾಗೂ ಬೆಳೆಗಳನ್ನು ಹಾನಿ ಮಾಡುತ್ತಿರುವ ಬಿಸಿ ಗಾಳಿ ಕಾರಣದಿಂದ ಭಾರತ ಗೋಧಿ ರಫ್ತಿನ ಮೇಲೆ ನಿಷೇಧ ಹೇರುವುದು ಅನಿವಾರ್ಯವಾಗಿತ್ತು. ಇದಕ್ಕೂ ಒಂದು ತಿಂಗಳು ಮುನ್ನ ಆಹಾರ ಧಾನ್ಯಗಳ ಕೊರತೆ ಎದುರಿಸುತ್ತಿರುವ ರಾಷ್ಟ್ರಗಳಿಗೆ ಅವುಗಳನ್ನು ಪೂರೈಕೆ ಮಾಡುವುದಾಗಿ ಭಾರತ ತಿಳಿಸಿತ್ತು.

Ban On Wheat Export:ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ಭಾರತದಂತೆ ದೇಶದ ಆಹಾರ ಭದ್ರತೆ ದೃಷ್ಟಿಯಿಂದ ಇಂಡೋನೇಷ್ಯಾ (Indonesia) ಕೂಡ ತಾಳೆ ಎಣ್ಣೆ (Palm oil) ರಫ್ತಿನ ಮೇಲೆ ನಿಷೇಧ ಹೇರಿದೆ.  ಇಂಡೋನೇಷ್ಯಾ ಜಗತ್ತಿನ ಶೇ.50ರಷ್ಟು ತಾಳೆ ಎಣ್ಣೆ ಬೇಡಿಕೆಯನ್ನು ಪೂರೈಸುವ ರಾಷ್ಟ್ರವಾಗಿದೆ. ಇದು ಈಗಾಗಲೇ ಜಾಗತಿಕ ಮಟ್ಟದಲ್ಲಿ ಏರಿಕೆಯಾಗಿರುವ ಖಾದ್ಯ ತೈಲ ಬೆಲೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ರಷ್ಯಾ ಹಾಗೂ ಉಕ್ರೇನ್ ಗೋಧಿ, ಬಾರ್ಲಿ, ಸೂರ್ಯಕಾಂತಿ, ಸೂರ್ಯಕಾಂತಿ ಎಣ್ಣೆ ಹಾಗೂ ಜೋಳದ ಪ್ರಮುಖ ಉತ್ಪಾದಕ ಹಾಗೂ ರಫ್ತು ರಾಷ್ಟ್ರವಾಗಿದೆ. ಆಹಾರ ಪದಾರ್ಥಗಳ ರಫ್ತಿನ ಮೇಲಿನ ನಿಷೇಧದಿಂದ ಆಹಾರ ಹಣದುಬ್ಬರ ಇನ್ನಷ್ಟು ಹೆಚ್ಚಲಿದೆ. ಈಗಾಗಲೇ ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ, ರಸಗೊಬ್ಬರ ಹಾಗೂ ಧಾನ್ಯಗಳು ಸೇರಿದಂತೆ ಕೆಲವು ಆಹಾರ ಪದಾರ್ಥಗಳ ಮೇಲೆ ಕೆಲವು ರಾಷ್ಟ್ರಗಳು ನಿಷೇಧ ಹೇರಿವೆ. 

Latest Videos
Follow Us:
Download App:
  • android
  • ios