ಹೊಸ ತೆರಿಗೆ ವ್ಯವಸ್ಥೆ ಪ್ರಭಾವ, ಜನಪ್ರಿಯತೆ ಕಳೆದುಕೊಂಡ 5 ಉಳಿತಾಯ ಯೋಜನೆಗಳು!

ಹೂಡಿಕೆ ಮಾಡುವ ಮುನ್ನ ರಿಟರ್ನ್ ಜೊತೆಗೆ ತೆರಿಗೆ ಉಳಿತಾಯದ ಪ್ರಯೋಜನಗಳ ಬಗ್ಗೆ ಕೂಡ ಹೂಡಿಕೆದಾರರು ಯೋಚಿಸುತ್ತಾರೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ತೆರಿಗೆ ಪ್ರಯೋಜನ ಸಿಗುತ್ತಿಲ್ಲ. ಈ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ತೆರಿಗೆ ಉಳಿತಾಯದ ಯೋಜನೆಗಳು ಜನಪ್ರಿಯತೆ ಕಳೆದುಕೊಳ್ಳುತ್ತಿವೆ. ಹಾಗಾದ್ರೆ ಈ ರೀತಿ ಜನಪ್ರಿಯತೆ ಕಳೆದುಕೊಳ್ಳುತ್ತಿರುವ 5 ಪ್ರಮುಖ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ. 

5 tax saving investments that will lose their charm under the new tax regime anu

Business Desk: ಹೂಡಿಕೆ ಮಾಡುವಾಗ ಸಾಮಾನ್ಯವಾಗಿ ಎಲ್ಲರೂ ಎರಡು ವಿಚಾರಗಳಿಗೆ ಮಹತ್ವ ನೀಡುತ್ತಾರೆ. ಒಂದು ರಿಟರ್ನ್ ಹಾಗೂ ಇನ್ನೊಂದು ತೆರಿಗೆ ಪ್ರಯೋಜನ. ಆದರೆ, ಹೊಸ ತೆರಿಗೆ  ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡವರಿಗೆ ಹೂಡಿಕೆ ಮೇಲೆ ತೆರಿಗೆ ಕಡಿತಗಳು ಸಿಗೋದಿಲ್ಲ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಕಡಿತದ ಪ್ರಯೋಜನವನ್ನು ನೀಡಲಾಗಿತ್ತು. ಹೀಗಾಗಿ ಇಂಥ ಹೂಡಿಕೆಗಳು ತೆರಿಗೆ ವ್ಯಾಪ್ತಿಗೊಳಪಡುವ ಆದಾಯವನ್ನು ತಗ್ಗಿಸಲು ನೆರವು ನೀಡುವ ಜೊತೆಗೆ ತೆರಿಗೆ ಉಳಿತಾಯ ಮಾಡುತ್ತಿದ್ದವು ಕೂಡ. ಆದರೆ, ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಸರ್ಕಾರ ತೆರಿಗೆ ಸ್ಲ್ಯಾಬ್ ಗಳನ್ನು ಪರಿಷ್ಕರಿಸಿದೆ. ಅಲ್ಲದೆ, 2023-4ನೇ ಸಾಲಿನ ಬಜೆಟ್ ನಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಡಿಫಾಲ್ಟ್ ವ್ಯವಸ್ಥೆಯನ್ನಾಗಿ ಮಾಡಿದೆ. ಇನ್ನು ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳುವುದರಿಂದ ಹೆಚ್ಚಿನ ತೆರಿಗೆ ಉಳಿಸಬಹುದು ಎಂಬ ಕಾರಣಕ್ಕೆ ಕೆಲವು ಹೂಡಿಕೆದಾರರಿಗೆ ಇದು ಆಕರ್ಷಕ ಎನಿಸಿದೆ. ಈ ನಡುವೆ ತೆರಿಗೆ ಕಡಿತದ ಹಿನ್ನೆಲೆಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ಕೆಲವು ಹೂಡಿಕೆ ಯೋಜನೆಗಳು ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ಬಳಿಕ ಆಕರ್ಷಣೆ ಕಳೆದುಕೊಂಡಿವೆ. ಹಳೇ ತೆರಿಗೆ ವ್ಯವಸ್ಥೆಯಡಿಯಲ್ಲಿ ಸೆಕ್ಷನ್ 80 ಸಿ ಅಡಿಯಲ್ಲಿ ವಿವಿಧ ಹೂಡಿಕೆಗಳಿಗೆ 1.5ಲಕ್ಷ ರೂ. ನಕ ತರಿಗೆ ಕಡಿತದ ಪ್ರಯೋಜನ ಪಡೆಯಲು ಅವಕಾಶವಿದೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಈ ಅವಕಾಶವಿಲ್ಲ. ಹೀಗಾಗಿ ತೆರಿಗೆ ಉಳಿತಾಯದ ಅವಕಾಶ ಕಲ್ಪಿಸುತ್ತಿದ್ದ ಕೆಲವು ಹೂಡಿಕೆ ಯೋಜನೆಗಳು ಜನಪ್ರಿಯತೆ ಕಳೆದುಕೊಂಡಿವೆ. ಆ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.

1.ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) 
ಪಿಪಿಎಫ್ (PPF) ಕೇಂದ್ರ ಸರ್ಕಾರದ ಬೆಂಬಲಿತ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ, ಗಳಿಸಿದ ಬಡ್ಡಿ ಹಾಗೂ ಮೆಚ್ಯುರಿಟಿ ಬಳಿಕದ ಪಾವತಿ ಈ ಎಲ್ಲದಕ್ಕೂ ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಸಿಗುತ್ತದೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಪಿಪಿಎಫ್ ಹೂಡಿಕೆಗೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕೆಲವು ಹೂಡಿಕೆದಾರರಿಗೆ ಪಿಪಿಎಫ್ ಆಕರ್ಷಕವಾಗಿ ಉಳಿದಿಲ್ಲ ಎನ್ನುತ್ತಾರೆ ತಜ್ಞರು. 

2.ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆ  (ELSS) 
ಈಎಲ್ ಎಸ್ ಎಸ್ ಸೆಕ್ಷನ್  80 ಸಿ ಅಡಿಯಲ್ಲಿ ತೆರಿಗೆ ಉಳಿತಾಯಕ್ಕೆ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಈ ಯೋಜನೆ ಮೂರು ವರ್ಷಗಳ ಅವಧಿಯದ್ದಾಗಿದ್ದು ಹಾಗೂ ಮಾರ್ಕೆಟ್ ಲಿಂಕ್ಡ್ ರಿಟರ್ನ್ಸ್ ಹೊಂದಿರುವ ಕಾರಣ ಈ ಯೋಜನೆ ಜನಪ್ರಿಯತೆ ಗಳಿಸಿದೆ. ಆದರೆ, ಹೊಸ ತೆರಿಗೆ ವ್ಯವಸ್ಥೆ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅವಕಾಶವಿಲ್ಲದ ಕಾರಣ ಇತ್ತೀಚಿನ ದಿನಗಳಲ್ಲಿ ಈ ಯೋಜನೆ ಕೂಡ ಸ್ವಲ್ಪ ಮಟ್ಟಿಗೆ ಜನಪ್ರಿಯತೆ ಕಳೆದುಕೊಂಡಿದೆ.

3.ತೆರಿಗೆ ಉಳಿತಾಯದ ಎಫ್ ಡಿ
ಸ್ಥಿರ ಠೇವಣಿ ಅಥವಾ ಎಫ್ ಡಿ ಜನಪ್ರಿಯ ಹೂಡಿಕೆ ಯೋಜನೆಯಾಗಿದೆ. ಇದು ಸ್ಥಿರ ರಿಟರ್ನ್ ನೀಡುತ್ತದೆ. ತೆರಿಗೆ ಉಳಿತಾಯ ಸ್ಥಿರ ಠೇವಣಿಗಳು ದೀರ್ಘಾವಧಿ ಠೇವಣಿ ಯೋಜನೆಯಾಗಿದ್ದು, ಐದು ವರ್ಷಗಳ ಅವಧಿಯನ್ನು ಹೊಂದಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಈ ಎಫ್ ಡಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೆರಿಗೆ ವಿನಾಯ್ತಿ ಸಿಗುತ್ತದೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ತೆರಿಗೆ ಕಡಿತದ ಸೌಲಭ್ಯವಿಲ್ಲ ಕಾರಣ ಈ ಯೋಜನೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ತಗ್ಗಿದೆ. 

4.ಎಂಡೋಮೆಂಟ್ ಪ್ಲ್ಯಾನ್ 
ಹೊಸ ತೆರಿಗೆ ವ್ಯವಸ್ಥೆ ಜಾರಿಯಿಂದ ಸಾಂಪ್ರದಾಯಿಕ ಎಂಡೋಮೆಂಟ್ ಪ್ಲ್ಯಾನ್  ಗಳು ಸೇರಿದಂತೆ ನಿರ್ದಿಷ್ಟ ವಿಧದ ಜೀವ ವಿಮಾ ಪಾಲಿಸಿಗಳು ಜನಪ್ರಿಯತೆ ಕಳೆದುಕೊಂಡಿವೆ. ಎಂಡೋಮೆಂಟ್ ಪ್ಲ್ಯಾನ್ ಗಳಲ್ಲಿ ಹೂಡಿಕೆ ಮಾಡೋದು ಜಾಣತನದ ನಿರ್ಧಾರ ಅಲ್ಲದಿದ್ದರೂ ನಿರ್ದಷ್ಟ ರಿಟರ್ನ್ ಹಾಗೂ ತೆರಿಗೆ ಪ್ರಯೋಜನಗಳ ಕಾರಣಕ್ಕೆ ಈ ಯೋಜನೆಯಲ್ಲಿ ತೆರಿಗೆದಾರರು ಹೂಡಿಕೆ ಮಾಡಲು ಹೆಚ್ಚಿನ ಉತ್ಸುಕತೆ ತೋರುತ್ತಿದ್ದರು. ಆದರೆ, ಈಗ ತೆರಿಗೆ ಪ್ರಯೋಜನವೂ ಸಿಗದ ಕಾರಣ ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

5.ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)
ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಎನ್ ಎಸ್ ಸಿ ಹೂಡಿಕೆ ಮೇಲೆ ಯಾವುದೇ ತೆರಿಗೆ ಪ್ರಯೋಜನ ಸಿಗೋದಿಲ್ಲ. ವ್ಯಕ್ತಿಗತ ಆದಾಯ ತೆರಿಗೆ ಸ್ಲ್ಯಾಬ್ ದರದ ಆಧಾರದಲ್ಲಿ ಎನ್ ಎಸ್ ಸಿ ಮೇಲಿನ ಹೂಡಿಕೆಗೆ ತೆರಿಗೆ ವಿಧಿಸಲಾಗುತ್ತದೆ. 

Latest Videos
Follow Us:
Download App:
  • android
  • ios