ಅಮೆರಿಕಾ ಅಧ್ಯಕ್ಷ ಟ್ರಂಪ್ ಜಾರಿಗೆ ತಂದ 'ಬಿಗ್ ಬ್ಯೂಟಿಫುಲ್' ಮಸೂದೆಯಿಂದ ಭಾರತಕ್ಕೆ ಆರ್ಥಿಕ ಹೊಡೆತ ಬೀಳುವ ಸಾಧ್ಯತೆ ಇದೆ. ಅದೇನು ಅಂತ ನೋಡೋಣ.
ಕುಚುಕುಗಳಂತಿದ್ದ ಉದ್ಯಮಿ ಎಲಾನ್ ಮಸ್ಕ್ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಣ ದೊಡ್ಡ ವಿರಸಕ್ಕೆ ಕಾರಣವಾದ, ಅಮೆರಿಕಾ ಅಧ್ಯಕ್ಷ ಟ್ರಂಪ್ ಜಾರಿಗೆ ತರಲು ಬಯಸಿದ್ದ 'ಬಿಗ್ ಬ್ಯೂಟಿಫುಲ್ ಮಸೂದೆಯಿಂದ ಭಾರತಕ್ಕೆ ಆಗುವ ಪರಿಣಾಮ ಏನು ಎಂಬುದು ಅನೇಕರ ಪ್ರಶ್ನೆ ಈ ಬಗ್ಗೆ ಇಲ್ಲಿದೆ ಮಾಹಿತಿ.
ಎಲಾನ್ ಮಸ್ಕ್ ತೀವ್ರವಾಗಿ ವಿರೋಧಿಸಿದ್ದ ಈ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಮಸ್ಕ್ ವಿರೋಧವನ್ನು ಲೆಕ್ಕಿಸದೇ ಟ್ರಂಪ್ ಜಾರಿಗೆ ತಂದಿದ್ದಾರೆ. ಈ ಮಸೂದೆಯಲ್ಲಿ ದೇಶದಿಂದ ಹೊರ ಹೋಗುವ ಹಣಕ್ಕೆ ಶೇಕಡಾ 3.5 ರಷ್ಟು ತೆರಿಗೆ ವಿಧಿಸುವ ಉಲ್ಲೇಖವಿದೆ. ಈ ಮಸೂದೆಯನ್ನು ಇತ್ತೀಚೆಗೆ ಅಮೆರಿಕಾ ಸಂಸತ್ ಅಂಗೀಕರಿಸಿದೆ. ಇದರಿಂದ ಭಾರತದ ಮೇಲೆ ತೀವ್ರವಾದ ಪರಿಣಾಮ ಬೀರಲಿದೆ ಎಂದು ಕೆಲವು ತಜ್ಞರು ಬಣ್ಣಿಸಿದ್ದಾರೆ ಏಕೆಂದರೆ ಅಮೆರಿಕಾದಿಂದ ಅತೀಹೆಚ್ಚು ಹಣವೂ ಭಾರತಕ್ಕೆ ರವಾನೆಯಾಗುತ್ತದೆ. ಹೀಗಾಗಿ ಈ ತೆರಿಗೆಯಿಂದ ಗಮನಾರ್ಹ ಆರ್ಥಿಕ ನಷ್ಟವನ್ನು ಭಾರತ ಎದುರಿಸಲಿದೆ. 2024ರಲ್ಲಿ ಭಾರತಕ್ಕೆ ಸುಮಾರು 129 ಶತಕೋಟಿ ಡಾಲರ್‌ನಷ್ಟು ಹಣ ಅಮೆರಿಕಾದಿಂದ( ಅಮೆರಿಕಾದಲ್ಲಿರುವ ಭಾರತೀಯ ಉದ್ಯೋಗಿಗಳಿಂದ) ಭಾರತಕ್ಕೆ ರವಾನೆಯಾಗಿದೆ. ಈ ಹಣವೂ ಭಾರತದಲ್ಲಿರುವ ಅನೇಕ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಶ್ರೀಮಂತಗೊಳಿಸಿದೆ. ಆದರೆ ಈಗ ಇದಕ್ಕೂ ತೆರಿಗೆ ವಿಧಿಸಿರವುದರಿಂದ ಭಾರತದ ಮೇಲೆ ಇದು ಆರ್ಥಿಕವಾಗಿ ದೊಡ್ಡ ಹೊಡೆತ ಬೀರಲಿದೆ ಎಂದು ಹೇಳಲಾಗುತ್ತಿದೆ.
ಹೌದು ಇತ್ತೀಚೆಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿ ಅಂಗೀಕರಿಸಲ್ಪಟ್ಟ 'ಒನ್ ಬಿಗ್ ಬ್ಯೂಟಿಫುಲ್ ಮಸೂದೆ'ಯಲ್ಲಿ ಜಾಗತಿಕ ಹಣದ ಹರಿಯುವಿಕೆಯನ್ನು ಬದಲಿಸಬಹುದಾದ ಒಂದು ನಿಬಂಧನೆ ಇದೆ. ಹೀಗಾಗಿ ವಿಶ್ವದಿಂದ ತನ್ನೆಡೆಗೆ ಅತೀ ಹೆಚ್ಚು ಹಣದ ಹರಿಯುವಿಕೆಯನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಭಾರತದ ಮೇಲೆ ಇದು ಹೆಚ್ಚು ಪರಿಣಾಮ ಬೀರಲಿದೆ.
ಮೇ 22 ರಂದು ಅಮೆರಿಕಾದ ಸಂಸತ್ 215-214 ಅಂತರದಿಂದ ಈ ಮಸೂದೆಯನ್ನು ಅಂಗೀಕರಿಸಿತು. ಇದರ ಪ್ರಕಾರ ಎಲ್ಲಾ ಹೊರ ಹೋಗುವ ಹಣ ರವಾನೆ ವರ್ಗಾವಣೆಗಳ ಮೇಲೆ ಶೇಕಡಾ 3.5 ರಷ್ಟು ತೆರಿಗೆ ವಿಧಿಸುವುದನ್ನು ಒಳಗೊಂಡಿರುವ ಕಾನೂನನ್ನು ಜಾರಿಗೆ ತರಲಾಯ್ತು. ಇದಕ್ಕೂ ಮೊದಲೂ ಶೇಕಡಾ 5ರಷ್ಟು ತೆರಿಗೆ ವಿಧಿಸುವ ಚಿಂತನೆ ನಡೆದಿತ್ತು. ಆದರ ನಂತರ ತೀವ್ರ ಒತ್ತಡ ಕೇಳಿ ಬಂದ ಹಿನ್ನೆಲೆ ಈ ತೆರಿಗೆ ದರವನ್ನು ಶೇಕಡಾ 3.5ಕ್ಕೆ ಇಳಿಸಲಾಗಿತ್ತು.
ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಹೊಂದಿರುವವರು ಮತ್ತು H-1B ಉದ್ಯೋಗಿಗಳಂತಹ ತಾತ್ಕಾಲಿಕ ವೀಸಾದಡಿ ಕೆಲಸ ಮಾಡಲು ಬಂದಿರುವ ಕಾನೂನುಬದ್ಧ ನಿವಾಸಿಗಳು ಸೇರಿದಂತೆ ಅಲ್ಲಿನ ವಿದೇಶಿ ಉದ್ಯೋಗಿಗಳು ತಮ್ಮ ದೇಶಕ್ಕೆ ಅಮೆರಿಕಾದಿಂದ ಕಳುಹಿಸುವ ಹಣಕ್ಕೆ ಈ ತೆರಿಗೆ ಅನ್ವಯಿಸುತ್ತದೆ. ಈ ಪ್ರಸ್ತಾಪಿಸಲ್ಪಟ್ಟ ಮಸೂದೆಯನ್ನು ಬಿಲಿಯನೇರ್ ಎಲಾನ್ ಮಸ್ಕ್ ತೀವ್ರವಾಗಿ ಟೀಕಿಸಿದ್ದರು. ಇದೇ ಕಾರಣಕ್ಕೆ ಮಸ್ಕ್ ಹಾಗೂ ಅಮೆರಿಕಾ ಅಧ್ಯಕ್ಷರ ಮಧ್ಯೆ ಭಾರಿ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಒಂದು ಮಸೂದೆ ದೊಡ್ಡದಾಗಿರಬಹುದು ಅಥವಾ ಸುಂದರವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಅದು ನಿಜವಾಗಿಯೂ ಎರಡೂ ಆಗಿರಬಹುದೇ ಎಂದು ನನಗೆ ತಿಳಿದಿಲ್ಲ ಎಂದು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥನೂ ಆಗಿರುವ ಎಲಾನ್ ಮಸ್ಕ್ ಇತ್ತೀಚೆಗೆ ಹೇಳಿದ್ದರು.
ಇದು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ವಿಶ್ವ ಬ್ಯಾಂಕ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, 2024 ರಲ್ಲಿ ಭಾರತಕ್ಕೆ ಸುಮಾರು $129 ಬಿಲಿಯನ್ ಡಾಲರ್ ಹಣ ವಿದೇಶದಿಂದ ರವಾನೆಯಾಗಿದೆ. ಈ ಮೊತ್ತವೂ ಪಾಕಿಸ್ತಾನ ($67 ಬಿಲಿಯನ್) ಮತ್ತು ಬಾಂಗ್ಲಾದೇಶ ($68 ಬಿಲಿಯನ್) ಗಳ ವಾರ್ಷಿಕ ಬಜೆಟ್‌ಗಳ ಒಟ್ಟು ಮೊತ್ತಕ್ಕೆ ಸಮಾನವಾಗಿದೆ. ಅಲ್ಲದೇ ಈ ಮೊತ್ತದ ಅತಿದೊಡ್ಡ ಭಾಗವು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಭಾರತೀಯ ಉದ್ಯೋಗಿಗಳಿಂದಲೇ ಬಂದಿದೆ.
ಹೀಗಾಗಿ ಈ ಮಸೂದೆಯಿಂದ ಕುಟುಂಬಕ್ಕೊಂದು ಸುಂದರ ಬದುಕು ಕಟ್ಟಿಕೊಡಬೇಕು ಎಂಬ ಬಯಕೆಯೊಂದಿಗೆ ಅಮೆರಿಕಾದಲ್ಲಿ ದುಡಿಮೆ ಮಾಡಲು ಹೋಗಿರುವ ಭಾರತದ ಲಕ್ಷಾಂತರ ಜನರಿಗೆ ಹಾಗೂ ಅವರ ಕುಟುಂಬಗಳಿಗೆ ಅವರು ಕಳಿಸುವ ಹಣದಿಂದ ಭಾರಿ ಮೊತ್ತದ ಹಣ ಕಡಿತವಾಗಬಹುದು.
ಕಳೆದ 10 ವರ್ಷಗಳಲ್ಲಿ ಅಂದರೆ ಒಟ್ಟಾರೆಯಾಗಿ, 2014 ಮತ್ತು 2024 ರ ನಡುವೆ ವಿದೇಶದಿಂದ ಭಾರತಕ್ಕೆ ಹೀಗೆ ರವಾನೆಯಾದ ಹಣದ ಪ್ರಮಾಣದಲ್ಲಿ ಶೇ. 57 ರಷ್ಟು ಹೆಚ್ಚಾಗಿದೆ. ಭಾರತವು ಸುಮಾರು $1 ಟ್ರಿಲಿಯನ್ ಡಾಲರ್‌ಗಳನ್ನು ($982 ಬಿಲಿಯನ್) ಹಣ ರವಾನೆಯ ರೂಪದಲ್ಲಿ ಸ್ವೀಕರಿಸಿದೆ.
ಗೃಹಬಳಕೆಗಾಗಿ ವಿದೇಶದಲ್ಲಿರುವ ಮಕ್ಕಳು ತಮ್ಮ ಪೋಷಕರು ಅಥವಾ ಕುಟುಂಬಕ್ಕೆ ಕಳುಹಿಸುವ ಹಣವನ್ನು ಹೆಚ್ಚಾಗಿ ಅವಲಂಬಿಸಿರುವ ಭಾರತದ ರಾಜ್ಯಗಳ ಮೇಲೆ ಈ ತೆರಿಗೆಯು ಅಸಮಾನವಾಗಿ ಪರಿಣಾಮ ಬೀರಬಹುದು. ವಿಶೇಷವಾಗಿ ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರಗಳು ಅತಿ ಹೆಚ್ಚು ವಿದೇಶಿ ಹಣ ಪಡೆಯುವ ರಾಜ್ಯಗಳಾಗಿವೆ.
ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಳ
ಭಾರತದ ಅಂತರರಾಷ್ಟ್ರೀಯ ವಲಸಿಗರ ಸಂಖ್ಯೆ 1990 ರಲ್ಲಿ 6.6 ಮಿಲಿಯನ್‌ನಷ್ಟಿತ್ತು. ಆದರೆ 2024 ರ ವೇಳೆಗೆ ಅಂದಾಜು 18.5 ಮಿಲಿಯನ್‌ಗೆ ಇದು ಏರಿಕೆಯಾಗಿದೆ. ಇದರಲ್ಲಿ ಗಲ್ಫ್ ದೇಶಗಳು ಭಾರತದ ಈ ವಲಸಿಗರಲ್ಲಿ ಹೆಚ್ಚಿನ ಭಾಗವನ್ನು ಹೊಂದಿವೆ. ಹಾಗೆಯೇ ಉಳಿದ ಗಮನಾರ್ಹ ಪಾಲು ಈಗ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ, ವಿಶೇಷವಾಗಿ ಅಮೆರಿಕಾ ಹೊಂದಿದೆ. ಅಲ್ಲಿ ಭಾರತೀಯರು ಐಟಿ, ಆರೋಗ್ಯ ರಕ್ಷಣೆ, ಹಣಕಾಸು ಮತ್ತು ಎಂಜಿನಿಯರಿಂಗ್‌ನಂತಹ ಹೆಚ್ಚಿನ ಆದಾಯ ಸಿಗುವ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ತಮ್ಮದೇ ಪ್ರಭಾವ ಹೊಂದಿದ್ದಾರೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಅಮೆರಿಕದಲ್ಲಿ ಸುಮಾರು ಶೇ. 78 ರಷ್ಟು ಭಾರತೀಯ ಉದ್ಯೋಗಿಗಳು ಹೆಚ್ಚಿನ ಆದಾಯ ತರುವ ಕೆಲಸ ಮಾಡುತ್ತಿದ್ದಾರೆ. ಇದು ಅಮೆರಿಕದಿಂದ ಒಟ್ಟು ಹಣ ರವಾನೆಯಾಗುತ್ತಿರುವ ಹಣದ ತೀವ್ರ ಹೆಚ್ಚಳಕ್ಕೆ ಕಾರಣವಾಗಿದೆ. ಈ ರವಾನೆಯಾದ ಹಣದ ಪ್ರಮಾಣವೂ 2023-24 ರಲ್ಲಿ ಭಾರತದ ಒಟ್ಟು ಹಣದ ಶೇ. 28 ರಷ್ಟಿತ್ತು ಹಾಗೆಯೇ 2020-21 ರಲ್ಲಿ ಶೇ. 23.4 ರಷ್ಟು ಇತ್ತು.
ನಾಗರಿಕರಲ್ಲದವರು ವಿದೇಶಗಳಿಗೆ ಕಳುಹಿಸುವ ಹಣದ ಮೇಲಿನ ಅಮೆರಿಕದ ಪ್ರಸ್ತಾವಿತ ತೆರಿಗೆಯು ಭಾರತದಲ್ಲಿ ಆತಂಕ ಮೂಡಿಸುತ್ತಿದೆ, ಈ ಯೋಜನೆ ಕಾನೂನಾದರೆ ವಾರ್ಷಿಕ ಶತಕೋಟಿ ವಿದೇಶಿ ಕರೆನ್ಸಿ ಒಳಹರಿವು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ (ಜಿಟಿಆರ್‌ಐ)ದ ವಿಶ್ಲೇಷಣೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
