ಐಟಿಆರ್ ಸಲ್ಲಿಕೆ ಮಾಡೋವಾಗ ಉದ್ಯೋಗಿಗಳಿಗೆ ಫಾರ್ಮ್ 16 ಏಕೆ ಅಗತ್ಯ? ಅದಿಲ್ಲ ಅಂದ್ರೆ ಏನಾಗುತ್ತೆ?
ಪ್ರತಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಫಾರ್ಮ್ -16 ನೀಡುತ್ತದೆ. ವೇತನ ಪಡೆಯುವ ಉದ್ಯೋಗಿಗಳಿಗೆ ಐಟಿಆರ್ ಸಲ್ಲಿಕೆಗೆ ಫಾರ್ಮ್ -16 ಏಕೆ ಅಗತ್ಯ? ಅದಿಲ್ಲದೆ ಐಟಿಆರ್ ಸಲ್ಲಿಕೆ ಮಾಡಲು ಆಗೋದಿಲ್ವ?
Business Desk: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆ ಮಾಡೋದು ತೆರಿಗೆದಾರರ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಈಗಾಗಲೇ ಆದಾಯ ತೆರಿಗೆ ಇಲಾಖೆ ವಿವಿಧ ಐಟಿಆರ್ ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿದೆ ಕೂಡ. 2023-24ನೇ (ಎವೈ 2024-25) ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕವಾಗಿದೆ. ಹಾಗಂತ ಕೊನೆಯ ಕ್ಷಣದ ತನಕ ಐಟಿಆರ್ ಸಲ್ಲಿಕೆ ಮಾಡದೆ ಕುಳಿತರೆ ಮುಂದೆ ಸಮಸ್ಯೆ ಎದುರಾಗಬಹುದು. ಐಟಿಆರ್ ಅನ್ನು ಸಮಯಕ್ಕೆ ಸರಿಯಾಗಿ ಸಲ್ಲಿಕೆ ಮಾಡದಿದ್ರೆ ದಂಡ ಬೀಳುವ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೇತನ ಪಡೆಯುವ ಉದ್ಯೋಗಿಗಳಿಗೆ ಐಟಿಆರ್ ಸಲ್ಲಿಕೆಗೆ ಫಾರ್ಮ್ 16 ಅತ್ಯಗತ್ಯ. ಇದು ಟಿಡಿಎಸ್ ಪ್ರಮಾಣಪತ್ರವಾಗಿದ್ದು, ಇದರಲ್ಲಿ ವೇತನ, ಭತ್ಯೆಗಳು ಹಾಗೂ ಒಬ್ಬ ಉದ್ಯೋಗಿಗೆ ಸಂಸ್ಥೆ ಆ ಆರ್ಥಿಕ ಸಾಲಿನಲ್ಲಿ ನೀಡಿರುವ ಇತರ ಪ್ರಯೋಜನಗಳ ಮಾಹಿತಿಗಳನ್ನು ಒಳಗೊಂಡಿರುತ್ತದೆ. ವೇತನದಿಂದ ಮಾಡಿರುವ ಕಡಿತಗಳ ಮಾಹಿತಿ ಕೂಡ ಇದರಲ್ಲಿರುತ್ತದೆ. ವೇತನ ಆದಾಯದಿಂದ ತೆರಿಗೆ ಕಡಿತ ಮಾಡಿರುವ ಪ್ರತಿ ಉದ್ಯೋಗಿಗೆ ಫಾರ್ಮ್ 16 ನೀಡುವುದು ಕಡ್ಡಾಯ. ಆದಾಯ ತೆರಿಗೆ ಕಾಯ್ದೆಗಳ ಅನ್ವಯ ಉದ್ಯೋಗದಾತ ಸಂಸ್ಥೆ ಅಥವಾ ಕಂಪನಿ ಉದ್ಯೋಗಿಗೆ ಫಾರ್ಮ್ 16 ಅನ್ನು ಜೂನ್ 15ರೊಳಗೆ ವಿತರಿಸೋದು ಕಡ್ಡಾಯ.
ಫಾರ್ಮ್ -16 ಅಂದ್ರೇನು?
ಪ್ರತಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಫಾರ್ಮ್ -16 (ITR Form 16) ಒದಗಿಸುತ್ತದೆ. ಇದರಲ್ಲಿ ಉದ್ಯೋಗಿಗಳ ವೇತನದಿಂದ (Salary) ಕಡಿತವಾದ (Deduction) ತೆರಿಗೆಗಳ (Taxes) ಸಂಪೂರ್ಣ ಮಾಹಿತಿಯಿರುತ್ತದೆ. ಉದ್ಯೋಗಿಗಳು ಎಚ್ ಆರ್ ಎ (HRA) ಅಥವಾ ಗೃಹಸಾಲ (Home loan) ಅಥವಾ ಇನ್ಯಾವುದೇ ತೆರಿಗೆ ಉಳಿತಾಯದ ವಿವರಗಳನ್ನು ನಮೂದಿಸಿದ್ರೆ ಅದರ ಮಾಹಿತಿ ಕೂಡ ಈ ಫಾರ್ಮ್ ನಲ್ಲಿರುತ್ತದೆ. ಸರಳವಾಗಿ ಹೇಳೋದಾದ್ರೆ ಯಾವುದೇ ಉದ್ಯೋಗಿಯ ವೇತನದ ಮೇಲೆ ವಿಧಿಸಲಾಗೋ ತೆರಿಗೆಯ ಪ್ರಮಾಣಪತ್ರವೇ ಫಾರ್ಮ್ -16. ಈ ಪ್ರಮಾಣಪತ್ರವನ್ನು ಕಂಪನಿಯ ಕಡೆಯಿಂದ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ.
ತೆರಿಗೆದಾರರೇ ನೆನಪಿಡಿ, ಐಟಿಆರ್ ಸಲ್ಲಿಕೆ ಮಾಡೋವಾಗ ಯಾವುದೇ ಕಾರಣಕ್ಕೂ ಈ 10 ತಪ್ಪುಗಳನ್ನು ಮಾಡ್ಬೇಡಿ
ಫಾರ್ಮ್ -16 ಇಲ್ಲದೆ ಐಟಿಆರ್ ಸಲ್ಲಿಕೆ ಮಾಡ್ಬಹುದಾ?
ವೇತನ ಪಡೆಯುವ ಉದ್ಯೋಗಿಗಳಿಗೆ ಐಟಿಆರ್ ಸಲ್ಲಿಕೆಗೆ ಫಾರ್ಮ್ -16 ಅತ್ಯಗತ್ಯ ದಾಖಲೆಯಾಗಿದೆ. ಇದು ಆ ಆರ್ಥಿಕ ಸಾಲಿನಲ್ಲಿ ಉದ್ಯೋಗಿ ಗಳಿಸಿದ ಆದಾಯ ಹಾಗೂ ಮೂಲದಲ್ಲಿ ತೆರಿಗೆ ಕಡಿತದ (ಟಿಡಿಎಸ್) ಮಾಹಿತಿಗಳನ್ನು ಒಳಗೊಂಡಿರುತ್ತದೆ. ತೆರಿಗೆ ವ್ಯಾಪ್ತಿಗೊಳಪಡುವ ಆದಾಯವನ್ನು ಲೆಕ್ಕ ಹಾಕಲು ಹಾಗೂ ಎಷ್ಟು ತೆರಿಗೆ ಪಾವತಿಸಬೇಕು ಎಂಬುದನ್ನು ನಿರ್ಧರಿಸಲು ಫಾರ್ಮ್ -16 ಅಗತ್ಯ. ಹೀಗಾಗಿ ಫಾರ್ಮ್ -16 ಇಲ್ಲದೆ ಉದ್ಯೋಗಿಗಳಿಗೆ ನಿಖರವಾಗಿ ಐಟಿಆರ್ ಸಲ್ಲಿಕೆ ಮಾಡೋದು ಕಷ್ಟವಾಗಬಹುದು. ಐಟಿಆರ್ ಸಲ್ಲಿಕೆಯಲ್ಲಿ ತಪ್ಪುಗಳಾದ್ರೆ ಮುಂದೆ ದಂಡ ಹಾಗೂ ಇತರ ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೂ ಫಾರ್ಮ್ -16 ಇಲ್ಲದೆ ಐಟಿಆರ್ ಸಲ್ಲಿಕೆ ಮಾಡಬಹುದು. ಆದರೆ, ತೆರಿಗೆದಾರರು ಎಲ್ಲ ಮಾಹಿತಿಗಳನ್ನು ಸಮರ್ಪಕವಾಗಿ ನೀಡಬೇಕಷ್ಟೆ.
ಇನ್ನು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗಿಗಳು ಸಾಲ ಅಥವಾ ಕ್ರೆಡಿಟ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಿದಾಗ ಫಾರ್ಮ್ -16 ಅನ್ನು ದಾಖಲೆಯಾಗಿ ಪಡೆಯುತ್ತಾರೆ. ಹೀಗಾಗಿ ಉದ್ಯೋಗಿಗಳು ಪ್ರತಿವರ್ಷ ಸಂಸ್ಥೆಯಿಂದ ಮರೆಯದೆ ಫಾರ್ಮ್ -16 ಪಡೆಯಬೇಕು.
ತೆರಿಗೆದಾರರೇ ಗಮನಿಸಿ, ನೀವು ಆನ್ ಲೈನ್ ಐಟಿಆರ್ ಸಲ್ಲಿಕೆ ಮಾಡ್ಬಹುದು; ಐಟಿಆರ್-1, ಐಟಿಆರ್-2, ಐಟಿಆರ್-4 ಈಗ ಲಭ್ಯ
ಫಾರ್ಮ್ -16ನಲ್ಲಿ ಯಾವೆಲ್ಲ ಮಾಹಿತಿ ಇರುತ್ತದೆ?
*ವೇತನ, ಬಡ್ಡಿ ಆದಾಯ, ಬಾಡಿಗೆ ಹಾಗೂ ಇತರ ಮೂಲಗಳ ಮೇಲಿನ ಟಿಡಿಎಸ್ ಮಾಹಿತಿಗಳು.
*ಯಾವುದೇ ಟಿಸಿಎಸ್ (ಮೂಲದಲ್ಲಿ ತೆರಿಗೆ ಸಂಗ್ರಹ) ಇದ್ದರೆ, ಅದರ ಮಾಹಿತಿ.
*ಅಡ್ವಾನ್ಸ್ ಟ್ಯಾಕ್ಸ್, ಸೆಲ್ಫ್ ಎಸ್ಸೆಸ್ ಮೆಂಟ್ ಟ್ಯಾಕ್ಸ್, ರೆಗ್ಯುಲರ್ ಎಸ್ಸೆಸ್ ಮೆಂಟ್ ಟ್ಯಾಕ್ಸ್ ಮಾಹಿತಿ.
*ಆಸ್ತಿ ಖರೀದಿಗಳು, ಹೂಡಿಕೆಗಳು ಸೇರಿದಂತೆ ಅಧಿಕ ಮೌಲ್ಯದ ವಹಿವಾಟುಗಳ ಮಾಹಿತಿ ಇರುತ್ತದೆ.
*ಆ ಹಣಕಾಸು ಸಾಲಿನಲ್ಲಿ ಸ್ವೀಕರಿಸಿದ ತೆರಿಗೆ ರೀಫಂಡ್ಸ್ ಮಾಹಿತಿ ಇರುತ್ತದೆ.