ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್, ಸಿಇಒ ಸುಂದರ್ ಪಿಚೈ ಅವರಿಗೆ ಮುಂದಿನ 3 ವರ್ಷಗಳ ಅವಧಿಗೆ ₹5,750 ಕೋಟಿವರೆಗಿನ ಸಂಭಾವನೆ ಪ್ಯಾಕೇಜ್ ಘೋಷಿಸಿದೆ. ಈ ಮೊತ್ತದ ಬಹುಪಾಲು ವೇಯ್ಮೋ ಮತ್ತು ವಿಂಗ್ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಅವಲಂಬಿಸಿದ್ದು, ಇದು ಅವರ ವೈಯಕ್ತಿಕ ಸಂಪತ್ತಿಗೆ ಮಹತ್ವದ ಸೇರ್ಪಡೆಯಾಗಲಿದೆ.

ಕ್ಯಾಲಿಫೋರ್ನಿಯಾ (ಮಾ.7): ಗೂಗಲ್‌ನ ಪೋಷಕ ಸಂಸ್ಥೆ 'ಆಲ್ಫಾಬೆಟ್', ತನ್ನ ಸಿಇಒ ಸುಂದರ್ ಪಿಚೈ ಅವರಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಗರಿಷ್ಠ 692 ಮಿಲಿಯನ್ ಡಾಲರ್ (ಸುಮಾರು ₹5,750 ಕೋಟಿ) ವರೆಗಿನ ಬೃಹತ್ ಸಂಭಾವನೆ ಪ್ಯಾಕೇಜ್ ಅನ್ನು ಅನುಮೋದಿಸಿದೆ. ವಿಶೇಷವೆಂದರೆ, ಈ ಮೊತ್ತದ ಬಹುಪಾಲು ಆಲ್ಫಾಬೆಟ್‌ನ ಸ್ವಯಂಚಾಲಿತ ಕಾರು ಸಂಸ್ಥೆ 'ವೇಯ್ಮೋ' (Waymo) ಮತ್ತು ಡ್ರೋನ್ ವಿತರಣಾ ಸಂಸ್ಥೆ 'ವಿಂಗ್' (Wing) ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿದೆ.

Add Asianetnews Kannada as a Preferred SourcegooglePreferred

ಸುಂದರ್‌ ಪಿಚೈ ಪ್ಯಾಕೇಜ್‌ ಎಷ್ಟು

ಮಾರ್ಚ್ 4, 2026ರ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಫೈಲಿಂಗ್ ಪ್ರಕಾರ, ಈ ಪ್ಯಾಕೇಜ್ ನಾಲ್ಕು ಭಾಗಗಳನ್ನು ಹೊಂದಿದೆ. ಪಿಚೈ ಅವರ ವಾರ್ಷಿಕ ಸ್ಥಿರ ವೇತನ 2 ಮಿಲಿಯನ್ ಡಾಲರ್ (₹16.6 ಕೋಟಿ) ಆಗಿ ಮುಂದುವರಿಯಲಿದೆ. 2020ರಿಂದ ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 84 ಮಿಲಿಯನ್ ಡಾಲರ್ ಮೌಲ್ಯದ ರೆಸ್ಟ್ರಿಕ್ಟೆಡ್ ಸ್ಟಾಕ್ ಯೂನಿಟ್‌ಗಳು (RSU) ಇವರಿಗೆ ಖಚಿತವಾಗಿ ಸಿಗಲಿದ್ದು, ಇದು 2026 ಮಾರ್ಚ್ 25 ರಿಂದ ಮೂರು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಇವರ ಕೈ ಸೇರಲಿದೆ.

ಕಂಪನಿಯ ಒಟ್ಟು ಷೇರು ಮಾರುಕಟ್ಟೆ ಲಾಭದ ಆಧಾರದ ಮೇಲೆ ಅಂದರೆ ಆಲ್ಫಾಬೆಟ್ ಪರ್ಫಾರ್ಮೆನ್ಸ್ ಆಧಾರದ ಮೇಲೆ ತಲಾ 63 ಮಿಲಿಯನ್ ಡಾಲರ್ ಮೌಲ್ಯದ ಎರಡು ಕಂತುಗಳ ಷೇರುಗಳು ಸಿಗಲಿವೆ.

ಹೊಸ ಸಾಹಸಗಳ ಬಾಜಿ

ಈ ಪ್ಯಾಕೇಜ್‌ನ ಅತ್ಯಂತ ಆಕರ್ಷಕ ಅಂಶವೆಂದರೆ ವೇಯ್ಮೋ ($130 ಮಿಲಿಯನ್) ಮತ್ತು ವಿಂಗ್ ($45 ಮಿಲಿಯನ್) ಸಂಸ್ಥೆಗಳ ಗುರಿ ತಲುಪಿದರೆ ಸಿಗುವ ಸಂಭಾವನೆ. ಇದು ಆಲ್ಫಾಬೆಟ್ ಷೇರುಗಳ ರೂಪದಲ್ಲಿ ಇರುವುದಿಲ್ಲ, ಬದಲಾಗಿ ಈ ಸಂಸ್ಥೆಗಳಲ್ಲೇ ಪಿಚೈ ಅವರಿಗೆ ನೇರ ಪಾಲುದಾರಿಕೆ ಸಿಗಲಿದೆ. ಒಂದು ವೇಳೆ ಈ ಸಂಸ್ಥೆಗಳ ಮೌಲ್ಯ ಹೆಚ್ಚಾಗದಿದ್ದರೆ, ಪಿಚೈ ಅವರಿಗೆ ಈ ವಿಭಾಗದಲ್ಲಿ ಶೂನ್ಯ ಸಂಭಾವನೆ ಸಿಗಲಿದೆ. ಗರಿಷ್ಠ ಮಟ್ಟದಲ್ಲಿ ಈ ಎಲ್ಲಾ ಗುರಿಗಳನ್ನು ತಲುಪಿದರೆ ಪಿಚೈ ಅವರಿಗೆ ಸಿಗುವ ಒಟ್ಟು ಮೊತ್ತ $692 ಮಿಲಿಯನ್ ತಲುಪಲಿದೆ.

ಶೂನ್ಯದಿಂದ ಶತಕೋಟ್ಯಧಿಪತಿಯವರೆಗೆ ಏರಿದ ಸುಂದರ್ ಪಿಚೈ

1972 ಜೂನ್ 10ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದ ಪಿಚೈ ಬೆಳೆದದ್ದು ಚೆನ್ನೈನ ಮಧ್ಯಮ ವರ್ಗದ ಕುಟುಂಬದಲ್ಲಿ. ಅವರ ತಂದೆಯ ವಾರ್ಷಿಕ ಸಂಬಳವು ಪಿಚೈ ಅಮೆರಿಕಕ್ಕೆ ಹಾರಲು ಬೇಕಾದ ವಿಮಾನದ ಟಿಕೆಟ್ ದರಕ್ಕಿಂತಲೂ ಕಡಿಮೆಯಿತ್ತು. ಆದರೆ ಇಂದು ಅವರು ತಮ್ಮ ಪರಿಶ್ರಮದಿಂದಲೇ $1.6 ಬಿಲಿಯನ್ (ಸುಮಾರು ₹13,300 ಕೋಟಿ) ನಿವ್ವಳ ಆಸ್ತಿ ಹೊಂದಿದ್ದಾರೆ.

ಕಂಪನಿಯ ಸ್ಥಾಪಕರಲ್ಲದಿದ್ದರೂ ಸಿಇಒ ಆಗಿ ಕಾರ್ಯನಿರ್ವಹಿಸಿ ಬಿಲಿಯನೇರ್ ಆದ ಕೆಲವೇ ವ್ಯಕ್ತಿಗಳಲ್ಲಿ ಪಿಚೈ ಒಬ್ಬರು. ಕಳೆದ ದಶಕದಲ್ಲಿ ಅವರು ಸುಮಾರು $650 ಮಿಲಿಯನ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಒಂದು ವೇಳೆ ಅವುಗಳನ್ನು ಹಾಗೆಯೇ ಉಳಿಸಿಕೊಂಡಿದ್ದರೆ, ಅವರ ಆಸ್ತಿ ಇಂದು $2.5 ಬಿಲಿಯನ್ (₹20,000 ಕೋಟಿ) ಮೀರುತ್ತಿತ್ತು.

ಟೆಕ್ ದೈತ್ಯರ ನಡುವೆ ಎಲ್ಲಿದ್ದಾರೆ ಪಿಚೈ?

ಪಿಚೈ ಅವರ ಆಸ್ತಿ ದೊಡ್ಡದಾಗಿದ್ದರೂ, ಅವರ ಸಮಕಾಲೀನರಾದ ಎಲಾನ್ ಮಸ್ಕ್ ($300 ಬಿಲಿಯನ್+), ಮಾರ್ಕ್ ಜುಕರ್‌ಬರ್ಗ್ ($200 ಬಿಲಿಯನ್+) ಅಥವಾ ಎನ್ವಿಡಿಯಾದ ಜೆನ್ಸನ್ ಹುವಾಂಗ್ ($100 ಬಿಲಿಯನ್+) ಗೆ ಹೋಲಿಸಿದರೆ ಕಡಿಮೆಯಿದೆ. ಇದಕ್ಕೆ ಕಾರಣ ಪಿಚೈ ಕಂಪನಿಯ ಸ್ಥಾಪಕರಲ್ಲದಿರುವುದು. ಆದ್ದರಿಂದಲೇ ಈ ಹೊಸ $692 ಮಿಲಿಯನ್ ಪ್ಯಾಕೇಜ್ ಅವರ ವೈಯಕ್ತಿಕ ಸಂಪತ್ತಿನ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.