ತೆರಿಗೆದಾರರೇ ಗಮನಿಸಿ, ನೀವು ಆನ್ ಲೈನ್ ಐಟಿಆರ್ ಸಲ್ಲಿಕೆ ಮಾಡ್ಬಹುದು; ಐಟಿಆರ್-1, ಐಟಿಆರ್-2, ಐಟಿಆರ್-4 ಈಗ ಲಭ್ಯ
2024-25ನೇ ಮೌಲ್ಯಮಾಪನ ವರ್ಷದ ಐಟಿಆರ್ ಸಲ್ಲಿಕೆಗೆ ಆದಾಯ ತೆರಿಗೆ ಇಲಾಖೆ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆ ಪೋರ್ಟಲ್ ನಲ್ಲಿ ಐಟಿಆರ್-1, ಐಟಿಆರ್-2, ಐಟಿಆರ್-4 ಅರ್ಜಿ ನಮೂನೆಗಳನ್ನು ಬಿಡುಗಡೆಗೊಳಿಸಿದೆ.
ನವದೆಹಲಿ (ಏ.3): ತೆರಿಗೆದಾರರು 2023-24ನೇ ಹಣಕಾಸು ಸಾಲಿಗೆ ಆದಾಯ ತೆರಿಗೆ ರಿಟರ್ನ್ಸ್ ಇ-ಫೈಲ್ಲಿಂಗ್ ಸಲ್ಲಿಕೆ ಪ್ರಕ್ರಿಯೆಯನ್ನು ಈಗ ಪ್ರಾರಂಭಿಸಬಹುದು. ಏಕೆಂದ್ರೆ ಆದಾಯ ತೆರಿಗೆ ಇಲಾಖೆ ಐಟಿಆರ್-1,
ಐಟಿಆರ್-2, ಐಟಿಆರ್-4 ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿದ್ದು, ಆನ್ ಲೈನ್ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಈ ತೆರಿಗೆ ಅರ್ಜಿ ನಮೂನೆಗಳು ವೈಯಕ್ತಿಕ, ವೃತ್ತಿಪರ ಹಾಗೂ ಸಣ್ಣ ಉದ್ಯಮಿದಾರರಿಗೆ ಅನ್ವಯಿಸುತ್ತವೆ. '2024-25ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್-1, ಐಟಿಆರ್-2, ಐಟಿಆರ್-4 ಅರ್ಜಿಗಳನ್ನು ಇ-ಫೈಲ್ಲಿಂಗ್ ಪೋರ್ಟಲ್ ನಲ್ಲಿ ಆನ್ ಲೈನ್ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ' ಎಂದು ಆದಾಯ ತೆರಿಗೆ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ. ಅಡಿಟ್ ಗೊಳಪಡದ ಖಾತೆಗಳನ್ನು ಹೊಂದಿರುವ ತೆರಿಗೆದಾರರಿಗೆ 2024-25ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆಗೆ ಜುಲೈ 31ಅಂತಿಮ ಗಡುವು. ವೈಯಕ್ತಿಕ, ವೃತ್ತಿ ಹಾಗೂ ಉದ್ಯಮ ವರ್ಗಗಳ ಆಧಾರದಲ್ಲಿ ಐಟಿಆರ್ ಅರ್ಜಿ ನಮೂನೆ ಕೂಡ ಬದಲಾಗುತ್ತದೆ. ಸದ್ಯ ಆದಾಯ ತೆರಿಗೆ ಇಲಾಖೆ 6 ವಿಧದ ಐಟಿಆರ್ ಅರ್ಜಿ ನಮೂನೆ ನೀಡುತ್ತಿದೆ.
ಈ ಅರ್ಜಿ ನಮೂನೆಗಳನ್ನು ಯಾರು ಸಲ್ಲಿಸಬಹುದು?
ಐಟಿಆರ್ 1: ಇದರ ಮೂಲಕ ವೇತನ ವರ್ಗ, ಹಿರಿಯ ನಾಗರಿಕರು ಸೇರಿದಂತೆ ವೈಯಕ್ತಿಕ ತೆರಿಗೆದಾರರು ಮಾಹಿತಿ ಸಲ್ಲಿಸಬಹುದು. ಇದನ್ನು ಐಟಿಆರ್-1 ಸಹಜ್ ಎಂದೂ ಕರೆಯಲ್ಪಡುತ್ತದೆ.
ಐಟಿಆರ್ 2: ವಾರ್ಷಿಕವಾಗಿ 50 ಲಕ್ಷ ರೂ. ಮೀರದ ಆದಾಯ ಹೊಂದಿರೋರು ಈ ಐಟಿಆರ್ ಫಾರ್ಮ್ ಸಲ್ಲಿಕೆ ಮಾಡಬಹುದು.
ಐಟಿಆರ್ 4: ಐಟಿಆರ್-4 ಫಾರ್ಮ್ ಅನ್ನು ಸುಗಮ್ ಎಂದೂ ಕರೆಯುತ್ತಾರೆ. ಇದು ವ್ಯಕ್ತಿಗಳು, HUF ಫರ್ಮ್‌ಗಳು ಹಾಗೂ ಸಂಸ್ಥೆಗಳು(ಎಲ್‌ಎಲ್‌ಪಿ ಹೊರತುಪಡಿಸಿ)ಸಲ್ಲಿಸಬಹುದು. ಇವರ ಒಟ್ಟು ಆದಾಯ 50 ಲಕ್ಷ ರೂ.ವರೆಗೂ ಇರಬೇಕು.
ಪಿಂಚಣಿ ಪಡೆಯುತ್ತಿರೋರು ಕೂಡ ಐಟಿಆರ್ ಸಲ್ಲಿಕೆ ಮಾಡ್ಬೇಕು; ಅದು ಹೇಗೆ? ಇಲ್ಲಿದೆ ಮಾಹಿತಿ
ಆಪ್ ಲೈನ್ ಐಟಿಆರ್ ಸಲ್ಲಿಕೆ ಹೇಗೆ?
ಆದಾಯ ತೆರಿಗೆ ಇಲಾಖೆ ಆಪ್ ಲೈನ್ ಐಟಿಆರ್ ಸಲ್ಲಿಕೆಗೆ ಕೂಡ ಏ.1ರಿಂದ ಅವಕಾಶ ಕಲ್ಪಿಸಿದೆ. ಇದಕ್ಕಾಗಿ JSON ಹಾಗೂ Excel ಫಾರ್ಮ್ಯಾಟ್ ನಲ್ಲಿ ಐಟಿಆರ್1,ಐಟಿಆರ್ -2, ಐಟಿಆರ್-4, ಐಟಿಆರ್-6 ಅರ್ಜಿ ನಮೂನೆಗಳನ್ನು ಒದಗಿಸಿದೆ. ತೆರಿಗೆದಾರರು ತಮಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ, ಆ ಬಳಿಕ ಆದಾಯ ತೆರಿಗೆ ಪೋರ್ಟಲ್ ನಲ್ಲಿ ಅದನ್ನು ಅಪ್ಲೋಡ್ ಮಾಡಬೇಕು.
ಆನ್ ಲೈನ್ ಸಲ್ಲಿಕೆ ಹೇಗೆ?
ಆದಾಯ ತರಿಗೆ ಇಲಾಖೆಯ ಪೋರ್ಟಲ್ ನಲ್ಲಿ ನೇರವಾಗಿ ಮಾಹಿತಿಗಳನ್ನು ತುಂಬುವ ಮೂಲಕ ತೆರಿಗೆದಾರರು ಐಟಿಆರ್ ಸಲ್ಲಿಕೆ ಮಾಡಬಹುದು. ಆದರೆ, ಐಟಿಆರ್ ಸಲ್ಲಿಕೆ ಮಾಡುವ ಮೂಲಕ ಅದನ್ನು ದೃಢೀಕರಿಸೋದು ಕೂಡ ಅಗತ್ಯ. ತೆರಿಗೆದಾರರು ದೃಢೀಕರಿಸದ ಐಟಿಆರ್ ಅನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸೋದಿಲ್ಲ.
Income Tax Tips: ಐಟಿಆರ್ ಸಲ್ಲಿಕೆಗೂ ಮುನ್ನ ತೆರಿಗೆ ಉಳಿತಾಯ ಹೆಚ್ಚಿಸಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್
ಆನ್ ಲೈನ್ Vs ಆಪ್ ಲೈನ್, ಐಟಿಆರ್ ಸಲ್ಲಿಕೆಗೆ ಯಾವುದು ಬೆಸ್ಟ್?
ಇದು ತೆರಿಗೆದಾರರನ್ನು ಅವಲಂಬಿಸಿರುತ್ತದೆ. ಕೆಲವು ತೆರಿಗೆದಾರರಿಗೆ ಆನ್ ಲೈನ್ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರಬಹುದು. ಅಥವಾ ಅವರು ವಾಸಿಸುವ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕ ಅಷ್ಟೊಂದು ಉತ್ತಮವಾಗಿರದೆ ಇರಬಹುದು. ಆಗ ಅಂಥ ತೆರಿಗೆದಾರರು ಆಪ್ ಲೈನ್ ಐಟಿಆರ್ ಸಲ್ಲಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ನಿಮಗೆ ಆನ್ ಲೈನ್ ಸಲ್ಲಿಕೆ ಬಗ್ಗೆ ತಿಳಿವಳಿಕೆಯಿದ್ದು, ಉತ್ತಮ ಇಂಟರ್ನೆಟ್ ಕೂಡ ಹೊಂದಿದ್ದರೆ ಆನ್ ಲೈನ್ ಸಲ್ಲಿಕೆ ಉತ್ತಮ. ಏಕೆಂದರೆ ಆನ್ ಲೈನ್ ವಿಧಾನದಲ್ಲಿ ತ್ವರಿತವಾಗಿ ಐಟಿಆರ್ ಸಲ್ಲಿಕೆ ಮಾಡಬಹುದು. ಮಾಹಿತಿಗಳನ್ನು ಪೋರ್ಟಲ್ ನಲ್ಲೇ ಸಲ್ಲಿಕೆ ಮಾಡಬಹುದು. ಆದರೆ, ಕೆಲವೇ ಕೆಲವು ತೆರಿಗೆದಾರರಿಗೆ ಮಾತ್ರ ಆಪ್ ಲೈನ್ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಂದ್ರೆ ಹಿರಿಯ ನಾಗರಿಕರು, ಉದ್ಯಮೇತರ ಆದಾಯ ಹೊಂದಿರೋರು ಆಪ್ ಲೈನ್ ಐಟಿಆರ್ ಸಲ್ಲಿಕೆ ಮಾಡಬಹುದು.