Digital Lending: ನಿಮಗೆ ಹಣದ ತುರ್ತು ಅಗತ್ಯವಿದೆಯಾ? ಮನೆಯಲ್ಲೇ ಕುಳಿತು ಡಿಜಿಟಲ್ ಸಾಲ ಪಡೆಯೋದು ಹೇಗೆ?
ಈ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಸಾಲ ಪಡೆಯೋದು ಈಗ ಹಿಂದಿನಷ್ಟು ಕಷ್ಟದ ಕೆಲಸವಂತೂ ಅಲ್ಲವೇ ಅಲ್ಲ. ಮನೆಯಲ್ಲೇ ಕುಳಿತು ಆನ್ ಲೈನ್ ನಲ್ಲೇ ಡಿಜಿಟಲ್ ಸಾಲ ಪಡೆಯಬಹುದು. ಹಾಗಾದ್ರೆ ಈ ಡಿಜಿಟಲ್ ಸಾಲ ಅಂದ್ರೇನು?
Business Desk:ಅದೆಷ್ಟೇ ಆದಾಯದ (Income) ಮೂಲವಿದ್ರೂ ಒಂದಲ್ಲ ಒಂದು ಸಂದರ್ಭದಲ್ಲಿ ಸಾಲ ಮಾಡಲೇಬೇಕಾದ ಅನಿವಾರ್ಯತೆ ಎಲ್ಲರಿಗೂ ಎದುರಾಗುತ್ತದೆ. ಈಗಂತೂ ಸಾಲ ಪಡೆಯೋದು ಹಿಂದಿನಷ್ಟು ಕಷ್ಟದ ಕೆಲಸವಂತೂ ಅಲ್ಲವೇ ಅಲ್ಲ. ಸಾಲ ಬೇಕು ಅಂದ್ರೆ ಸಾಕು, ಕೊಡಲು ಬ್ಯಾಂಕುಗಳು anks), ಫೈನಾನ್ಸ್ ಸಂಸ್ಥೆಗಳು (Finances) ಸಾಲಲ್ಲಿ ನಿಲ್ಲುತ್ತವೆ. ಇಂದಿನ ತಂತ್ರಜ್ಞಾನ (Technology) ಯುಗದಲ್ಲಿ ಎಲ್ಲವೂ ತ್ವರಿತಗೊಂಡಿದ್ದು, ಸಾಲ (Loan) ನೀಡುವ ಪ್ರಕ್ರಿಯೆ ಕೂಡ ಹೊರತಾಗಿಲ್ಲ. ಇಂಥ ತ್ವರಿತ ಸಾಲವೇ ಡಿಜಿಟಲ್ ಸಾಲ (Digital lending) ಅಥವಾ ಡಿಜಿಟಲ್ ಲೆಂಡಿಂಗ್. ಏನಿದು ಡಿಜಿಟಲ್ ಸಾಲ? ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.
ಡಿಜಿಟಲ್ ಸಾಲ ಅಂದ್ರೇನು?
ಡಿಜಿಟಲ್ ಸಾಲ (Digital lending) ಅಥವಾ ಲೆಂಡಿಂಗ್ ಅಂದ್ರೆ ವೆಬ್ ಪ್ಲ್ಯಾಟ್ ಫಾರ್ಮ್ ಗಳು (Web platforms) ಅಥವಾ ಮೊಬೈಲ್ ಅಪ್ಲಿಕೇಷನ್ ಗಳ (Mobile apps) ಮೂಲಕ ಸಾಲ ಪಡೆಯೋದು. ಇಲ್ಲಿ ಕ್ರೆಡಿಟ್ ಮೌಲ್ಯಮಾಪನ ಹಾಗೂ ದೃಢೀಕರಣಕ್ಕೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ಕ್ಲೌಡ್ ಕಂಪ್ಯೂಟಿಂಗ್ (cloud computing),ಕೃತಕ ಬುದ್ಧಿಮತ್ತೆ (Artificial Intelligency) ಹಾಗೂ ಬ್ಲಾಕ್ ಚೈನ್ (Block chain) ಜೊತೆಗೆ ವೇಗವಾದ ಇಂಟರ್ನೆಟ್ ಸಂಪರ್ಕದಿಂದ ಇಂದು ಡಿಜಿಟಲ್ ಸಾಲ ಒದಗಿಸುವ ಫಿನ್ ಟೆಕ್ ಸ್ಟಾರ್ಟ್ ಅಪ್ ಗಳ ಸಂಖ್ಯೆ ಹೆಚ್ಚಿದೆ. ಅಲ್ಲದೆ, ಸಾಲ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ಇದು ನಾಂದಿ ಹಾಡಿದೆ. ಹಿಂದೆಲ್ಲ ಸಾಲ ಪಡೆಯಲು ಬ್ಯಾಂಕ್ ಗಳಿಗೆ ತಿಂಗಳುಗಟ್ಟಲೆ ಅಲೆದಾಟ ನಡೆಸಬೇಕಿತ್ತು. ಹತ್ತಾರು ದಾಖಲೆಗಳನ್ನು ನೀಡಬೇಕಿತ್ತು. ಆದರೆ, ಈಗ ಎಲ್ಲವೂ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕವೇ ಮುಗಿಸಬಹುದು. ಇದೇ ಕಾರಣಕ್ಕೆ ಇಂದು ಬಹುತೇಕ ಜನರು ಡಿಜಿಟಲ್ ಸಾಲದ ಮೊರೆ ಹೋಗುತ್ತಿದ್ದಾರೆ.
Personal Finance : ಬ್ಯಾಂಕ್ ಬಂದ್ ಆದ್ರೆ ನಿಮ್ಮ ಠೇವಣಿ ಹಣದ ಕಥೆ ಏನು?
ಭಾರತದಲ್ಲಿ 190 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಕರು ಬ್ಯಾಂಕ್ ಖಾತೆ ಹೊಂದಿಲ್ಲ. ಹೀಗಾಗಿ ಇಂಥ ಜನರಿಗೆ ಫಿನ್ ಟೆಕ್ (Fintech)ಸಂಸ್ಥೆಗಳು ಬಹುದೊಡ್ಡ ಅವಕಾಶ ಒದಗಿಸಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಸಾಲದ ಮಾರುಕಟ್ಟೆ ವಿಸ್ತರಿಸುತ್ತಿದೆ. ಇದಕ್ಕೆ ಕಾರಣ ಡಿಜಿಟಲ್ ಸಾಲಕ್ಕೆ ಬೇಡಿಕೆ ಹೆಚ್ಚುತ್ತಿರೋದು. ಡಿಜಿಟಲ್ ಸಾಲದ ಮೌಲ್ಯ 2015ನೇ ಸಾಲಿನಲ್ಲಿ 33 ಶತಕೋಟಿ ಡಾಲರ್ ಇತ್ತು,
2020ನೇ ಹಣಕಾಸು ಸಾಲಿನಲ್ಲಿ 150 ಶತಕೋಟಿ ಡಾಲರ್ ಗೆ ಏರಿಕೆಯಾಗಿತ್ತು. 2023ನೇ ಹಣಕಾಸು ಸಾಲಿನಲ್ಲಿ ಇದು 350 ಶತಕೋಟಿ ಡಾಲರ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಡಿಜಿಟಲ್ ಲೆಂಡಿಂಗ್ ಭವಿಷ್ಯ?
ಕೋವಿಡ್ -19 ಬಳಿಕ ಡಿಜಿಟಲ್ ಲೆಂಡಿಂಗ್ ಕ್ಷೇತ್ರ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಿದೆ. ಈ ಸಮಯದಲ್ಲಿ ಜನರು ಸಂಪರ್ಕರಹಿತ ವಹಿವಾಟಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಸಾಲ ಪಡೆಯುವ ಈ ವ್ಯವಸ್ಥೆ ಹೆಚ್ಚು ಜನಪ್ರಿಯತೆ ಗಳಿಸಿತು. ಅಷ್ಟೇ ಅಲ್ಲ, ಸಾಂಪ್ರದಾಯಿಕ ಬ್ಯಾಂಕುಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕೂಡ ಡಿಜಿಟಲ್ ಪ್ರಕ್ರಿಯೆಗಳ ಮಹತ್ವವನ್ನು ಮನಗಂಡವು. ಗ್ರಾಹಕರ ಆನ್ ಬೋರ್ಡಿಂಗ್, ಅಪಾಯದ ಮೌಲ್ಯಮಾಪನ, ಸಾಲ ನೀಡುವಿಕೆ, ಸಾಲಕ್ಕೆ ಸಂಬಂಧಿಸಿದ ದಾಖಲೆಗಳ ಸಂಗ್ರಹ ಹಾಗೂ ಮರುಪಾವತಿಗೆ ಸಂಬಂಧಿಸಿದ ಕಾರ್ಯನಿರ್ವಹಣಾ ವೆಚ್ಚವನ್ನು ತಗ್ಗಿಸಲು ಡಿಜಿಟಲ್ ಪ್ರಕ್ರಿಯೆಗಳು ನೆರವು ನೀಡುತ್ತವೆ ಎಂಬುದನ್ನು ಬ್ಯಾಂಕುಗಳು ಈಗ ಮನಗಂಡಿವೆ. ಕೆಲವು ಬ್ಯಾಂಕುಗಳು ಇದನ್ನು ಅನುಷ್ಠಾನಗೊಳಿಸಿವೆ ಕೂಡ. ಹೀಗಾಗಿ ಮುಂದಿನ ದಿನಗಳಲ್ಲಿ ಸಾಲ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣಗೊಂಡರೂ ಅಚ್ಚರಿಯಿಲ್ಲ.
Personal Finance: ವ್ಯಾಪಾರಸ್ಥ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಬೇಕು
ಗ್ರಾಹಕರಿಗೆ ಹೇಗೆ ಸಹಕಾರಿ?
ಡಿಜಿಟಲ್ ಸಾಲ ಗ್ರಾಹಕರ ಸಮಯ ಹಾಗೂ ಶ್ರಮ ಎರಡನ್ನೂ ಉಳಿಸುತ್ತದೆ. ಹತ್ತಾರು ಬಾರಿ ಬ್ಯಾಂಕಿಗೆ ಅಲೆದಾಡಬೇಕಾದ ಅಗತ್ಯವಿಲ್ಲ. ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ, ಸಾಲ ಮಂಜೂರು ಎಲ್ಲವೂ ಆನ್ ಲೈನ್ ನಲ್ಲಿ ನಡೆಯುವ ಕಾರಣ ಮನೆಯಲ್ಲೇ ಕುಳಿತು ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದು. ಇನ್ನು ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಬ್ಯಾಂಕುಗಳು ದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದವು. ಆದ್ರೆ ಡಿಜಿಟಲ್ ಸಾಲದಲ್ಲಿ ಶೀಘ್ರದಲ್ಲೇ ಈ ಪ್ರಕ್ರಿಯೆಗಳು ಮುಗಿದು ಸಾಲ ಮಂಜೂರು ಮಾಡಲಾಗುತ್ತದೆ.