ಆಪಲ್ ಕಂಪನಿಯಿಂದ ವಾರನ್ ಬಫೆಟ್‌ಗೆ 1814 ಕೋಟಿ ರೂಪಾಯಿ ಡಿವಿಡೆಂಡ್!
ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿಒಬ್ಬರಾಗಿರುವ ಅಮೆರಿಕದ ವಾರನ್ ಬಫೆಟ್ ಅವರ ಕಂಪನಿ ಬರ್ಕ್‌ಷೈರ್ ಹಾಥ್‌ವೇ, ಈ ತ್ರೈಮಾಸಿಕದಲ್ಲಿ ಆಪಲ್ ಕಂಪನಿಯೊಂದರಿಂದಲೇ 1814 ಕೋಟಿ ರೂಪಾಯಿ ಡಿವಿಡೆಂಡ್ ಪಡೆದುಕೊಳ್ಳಲಿದೆ.
ನವದೆಹಲಿ (ಆ.10): ವಿಶ್ವದ ಅಗ್ರ ಹೂಡಿಕೆದಾರ ಕಂಪನಿಗಳಲ್ಲಿ ಒಂದಾಗಿರುವ ವಾರನ್ ಬಫೆಟ್ ನೇತೃತ್ವದ ಬರ್ಕ್‌ಷೈರ್ ಹಾಥ್‌ವೇ ಕಂಪನಿಯ ಷೇರು ಬೆಲೆಗಳು ಇತ್ತೀಚೆಗೆ ಸಾರ್ವಕಾಲಿಕ ಗರಿಷ್ಠ ಬೆಲೆ ಮುಟ್ಟಿದೆ. ಅದಕ್ಕೆ ಕಾರಣ ಇದೇ ಮೊದಲ ಬಾರಿಗೆ ಕಂಪನಿಯ ಆದಾಯ 10 ಬಿಲಿಯನ್ ಯುಎಸ್ ಡಾಲರ್ ಗಡಿ ಮುಟ್ಟಿದೆ. ಇದರ ನಡುವೆ ಬರ್ಕ್‌ಷೈರ್ ಹಾಥ್‌ವೇ ಕಂಪನಿ ಗರಿಷ್ಠ ಹೂಡಿಕೆ ಮಾಡಿರುವ ಕಂಪನಿಯಾದ ಆಪಲ್ ಕಳೆದ ವಾರ ತನ್ನ ತ್ರೈಮಾಸಿಕ ಫಲಿತಾಂಶಗಳನ್ನು ವರದಿ ಮಾಡಿದ್ದು, ಆಗಸ್ಟ್ 17ಕ್ಕೆ ಪ್ರತಿ ಸಾಮಾನ್ಯ ಷೇರಿಗೆ 0.24 ಡಾಲರ್ ಡಿವಿಡೆಂಡ್‌ಅನ್ನು ಪಾವತಿ ಮಾಡಲಾಗುವುದಾಗಿ ತಿಳಿಸಿದೆ. ಇದರ ರೆಕಾರ್ಡ್ ಡೇಟ್ ಆಗಿ ಆಗಸ್ಟ್ 14 ಅನ್ನು ಇರಿಸಲಾಗಿದೆ. ಇದರ ಬೆನ್ನಲ್ಲಿಯೇ ಬರ್ಕ್‌ಷೈರ್ ಕಂಪನಿ ಪಡೆಯಲಿರುವ ಡಿವಿಡೆಂಡ್ ಅನ್ನು ಲೆಕ್ಕಹಾಕಲಾಗುತ್ತದೆ. ಮೂಲಗಳ ಪ್ರಕಾರ ಆಪಲ್ ಕಂಪನಿಯ ಡಿವಿಡೆಂಡ್ ಒಂದರಿಂದಲೇ ಕಂಪನಿ ದೊಡ್ಡ ಮಟ್ಟದ ಲಾಭ ಪಡೆದುಕೊಳ್ಳಲಿದೆ. ಜೂನ್ ಅಂತ್ಯದ ವೇಳೆ ಬರ್ಕ್‌ಷೈರ್ ಹಾಥ್‌ವೇ ಕಂಪನಿ 177.6 ಬಿಲಿಯನ್ ಡಾಲರ್ ಮೌಲ್ಯದ 915,560,382 (915 ಮಿಲಿಯನ್ ಷೇರುಗಳು) ಆಪಲ್ ಷೇರುಗಳನ್ನು 2ನೇ ತ್ರೈಮಾಸಿಕದ ವೇಳೆ ಹೊಂದಿದೆ. ಇದರಿಂದಾಗಿ ಬಫೆಟ್ ನೇತೃತ್ವದ ಕಂಪನಿ 219.74 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಡಿವಿವೆಂಡ್ ಆಗಿ ಪಡೆಯಲಿದೆ. ಅಂದರೆ ಬರೋಬ್ಬರಿ 1814 ಕೋಟಿ ರೂಪಾಯಿ..!
ಟಿಮ್ ಕುಕ್ ನೇತೃತ್ವದಲ್ಲಿರುವ ಆಪಲ್ ಕಂಪನಿಯಲ್ಲಿ ತನ್ನ ಷೇರುಗಳನ್ನು ವಾರನ್ ಬಫೆಟ್ ಕಂಪನಿ ನಿರಂತರವಾಗಿ ಏರಿಸಿಕೊಳ್ಳುತ್ತಲೇ ಇದೆ. 2016ರ ಮೇ ವೇಳೆಗೆ ಕಂಒನಿ 1 ಬಿಲಿಯನ್ ಮೌಲ್ಯದ ಅಪಲ್ ಷೇರುಗಳನ್ನು ಹೊಂದಿತ್ತು. 2023ರ ಮೇ ವೇಳೆಗೆ ಇದು 151 ಬಿಲಿಯನ್ ಮೌಲ್ಯದ ಷೇರುಗಳನ್ನು ಹೊಂದಿದೆ. ಆಪಲ್ ಷೇರುಗಳಿಗೆ ಸಂಬಂಧಿಸಿದಂತೆ, ಅವರು ಈ ವರ್ಷ ಇಲ್ಲಿಯವರೆಗೆ 43% ಮತ್ತು ಕಳೆದ ಐದು ವರ್ಷಗಳಲ್ಲಿ ಸುಮಾರು 250% ರಷ್ಟು ಹೆಚ್ಚಳ ಕಂಡಿದೆ. ಇನ್ನು 3 ಟ್ರಿಲಿಯನ್ ಮಾರುಕಟ್ಟೆ ಮೌಲ್ಯದ ಗುರಿಯನ್ನು ಆಪಲ್ ಕಂಪನಿ ಈವರೆಗೂ 2 ಬಾರಿ ಮಟ್ಟಿದೆ. 2022ರ ಜನವರಿ ಹಾಗೂ 2023ರ ಜೂನ್‌ನಲ್ಲಿ ಆಪಲ್ ಈ ಗುರಿ ಮುಟ್ಟಿದೆ.
ಬರ್ಕ್‌ಷೈರ್ ಹಾಥ್‌ವೇ ಡಿವಿಡೆಂಡ್‌ಗಳ ಮೂಲಕ ದೊಡ್ಡ ಮಟ್ಟದ ಆದಾಯ ಗಳಿಸುತ್ತಿದ್ದರೂ, ತನ್ನ ಕಂಪನಿಯ ಷೇರುಗಳನ್ನು ಹೊಂದಿರುವವರಿಗೆ ಡಿವಿಡೆಂಡ್‌ಗಳು ಅದು ಪಾವತಿ ಮಾಡುತ್ತಿಲ್ಲ. ಅದಕ್ಕೆ ಕಾರಣವೂ ಇದೆ. ವಾರೆನ್ ಬಫೆಟ್ ಹಣವನ್ನು ಲಾಭಾಂಶವಾಗಿ ಪಾವತಿಸುವ ಬದಲು ಇತರ ರೀತಿಯಲ್ಲಿ ಉತ್ತಮವಾಗಿ ಖರ್ಚು ಮಾಡಬಹುದು ಎಂದು ನಂಬಿದ್ದಾರೆ.
ಇನ್ವೆಸ್ಟೋಪೀಡಿಯಾ ವರದಿಯ ಪ್ರಕಾರ, ಬಫೆಟ್ ಅವರು ತಮ್ಮ ದಕ್ಷತೆಯನ್ನು ಸುಧಾರಿಸಲು, ಅವರ ವ್ಯಾಪ್ತಿಯನ್ನು ವಿಸ್ತರಿಸಲು, ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ರಚಿಸಲು ಮತ್ತು ಅಸ್ತಿತ್ವದಲ್ಲಿರುವವುಗಳನ್ನು ಸುಧಾರಿಸಲು ಅವರು ನಿಯಂತ್ರಿಸುವ ಕಂಪನಿಗಳಲ್ಲಿ ಲಾಭವನ್ನು ಮರುಹೂಡಿಕೆ ಮಾಡಲು ಬಯಸುತ್ತಾರೆ.
Warren Buffett: ಕಾಫಿ ರೇಟ್ ನೋಡಿ ದಂಗಾದ ಕೋಟ್ಯಧಿಪತಿಯ ಪತ್ನಿ!
ಅನೇಕ ಉದ್ಯಮಿಗಳಂತೆ, ಬಫೆಟ್ ಅವರು ವ್ಯಾಪಾರದಲ್ಲಿ ಹೂಡಿಕೆ ಮಾಡುವುದರಿಂದ ಷೇರುದಾರರಿಗೆ ನೇರವಾಗಿ ಪಾವತಿಸುವುದಕ್ಕಿಂತ ಹೆಚ್ಚು ದೀರ್ಘಾವಧಿಯ ಮೌಲ್ಯವನ್ನು ಒದಗಿಸುತ್ತದೆ ಎಂದು ಭಾವಿಸುತ್ತಾರೆ ಏಕೆಂದರೆ ಕಂಪನಿಯ ಆರ್ಥಿಕ ಯಶಸ್ಸು ಷೇರುದಾರರಿಗೆ ಹೆಚ್ಚಿನ ಸ್ಟಾಕ್ ಮೌಲ್ಯಗಳೊಂದಿಗೆ ಪ್ರತಿಫಲ ನೀಡುತ್ತದೆ. ಬರ್ಕ್‌ಷೈರ್ ಹಾಥ್‌ವೇ ಇಲ್ಲಿಯವರೆಗೂ ಡಿವಿಡೆಂಡ್‌ಗಳನ್ನು ನೀಡಿದ್ದು 1967ರಲ್ಲಿ ಮಾತ್ರ. ಈ ನಿರ್ಧಾರದ ಬಗ್ಗೆ ಕಾರಣವೇನು ಅಂದು ಪತ್ರಕರ್ತರು ಕೇಳಿದ್ದಾಗ, ಬಹುಶಃ ಈ ನಿರ್ಧಾರ ಮಾಡುವ ವೇಳೆ ನಾನು ಬಾಥ್‌ರೂಮ್‌ನಲ್ಲಿ ಇದ್ದೆ ಎಂದು ಕಾಣುತ್ತದೆ ಎಂದು ತಮಾಷೆ ಮಾಡಿದ್ದರು.
380 ಸಾವಿರ ಕೋಟಿ ಮೊತ್ತವನ್ನು ದಾನ ಮಾಡಿದ ವಾರನ್ ಬಫೆಟ್!