ಲಕ್ನೋ ಮೂಲದ ಉದ್ಯಮಿ ಆಕಾಶ್ ಸಿಂಗ್, ಸ್ವಂತ ಬಿಸಿನೆಸ್ ಆರಂಭಿಸುವ ಮುನ್ನ ಉದ್ಯೋಗ ಮಾಡಿ ವೃತ್ತಿಪರ ಅನುಭವ ಗಳಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಕಚೇರಿ ವಾತಾವರಣದಲ್ಲಿ ಕೆಲಸ ಮಾಡುವುದರಿಂದ ಸಿಗುವ ಪ್ರಾಯೋಗಿಕ ಜ್ಞಾನವು, ಬಿಸಿನೆಸ್ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತದೆ ಎಂಬುದು ಅವರ ಅಭಿಪ್ರಾಯ.

ಸ್ವಂತ ಬಿಸಿನೆಸ್ ಶುರು ಮಾಡಬೇಕು ಅಂತ ಕನಸು ಕಾಣೋರಿಗೆ ಇಲ್ಲೊಬ್ಬರು ಉದ್ಯಮಿ ಸೂಪರ್ ಸಲಹೆ ಕೊಟ್ಟಿದ್ದಾರೆ. ಲಕ್ನೋ ಮೂಲದ ರಿಯಲ್ ಎಸ್ಟೇಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಸಂಸ್ಥಾಪಕ ಆಕಾಶ್ ಸಿಂಗ್ ಈ ಕಿವಿಮಾತು ಹೇಳಿದ್ದಾರೆ. ಸ್ವಂತ ಉದ್ಯಮ ಆರಂಭಿಸುವ ಮೊದಲು, ಒಂದು ಸಾಮಾನ್ಯ ಕೆಲಸ ಮಾಡಿ ವೃತ್ತಿಪರ ಅನುಭವ ಗಳಿಸಬೇಕು ಅನ್ನೋದು ಅವರ ಅಭಿಪ್ರಾಯ. ಯಾಕಂದ್ರೆ, ಆಫೀಸ್ ವಾತಾವರಣದಲ್ಲಿ ಕೆಲಸ ಮಾಡಿದ್ರೆ ಸಿಗೋ ಪ್ರಾಕ್ಟಿಕಲ್ ಜ್ಞಾನ, ಸುಮ್ಮನೆ ಬಿಸಿನೆಸ್ ಬಗ್ಗೆ ಕನಸು ಕಾಣುವಾಗ ಸಿಗಲ್ಲ ಅಂತ ಆಕಾಶ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಮೊದಲು ಕೆಲಸಕ್ಕೆ ಸೇರಿ ವರ್ಕ್ ಕಲ್ಚರ್ ತಿಳಿಯಿರಿ

'ಮೊದಲು ಎಲ್ಲರೂ ಒಂದು ಕೆಲಸಕ್ಕೆ ಸೇರಿ ವರ್ಕ್ ಕಲ್ಚರ್ ಅಂದ್ರೆ ಏನು, ಈ ಜಗತ್ತು ಹೇಗೆ ಕೆಲಸ ಮಾಡುತ್ತೆ, ಜನ ಹೇಗೆ ಹಣ ಸಂಪಾದಿಸುತ್ತಾರೆ ಅನ್ನೋದನ್ನ ನೋಡಿ ಕಲಿಬೇಕು. ಒಂದು ಕಾಲದಲ್ಲಿ ನನಗೂ ತುಂಬಾ ಐಡಿಯಾಗಳಿದ್ದವು. ಆದರೆ, ಕೆಲಸ ಮಾಡಲು ಶುರು ಮಾಡಿದ ಮೇಲೆಯೇ, ವಿಷಯಗಳನ್ನು ನಿಜವಾಗಿ ಹೇಗೆ ಕಾರ್ಯಗತಗೊಳಿಸಲಾಗುತ್ತೆ ಅನ್ನೋದು ನನಗೆ ಅರ್ಥವಾಗಿದ್ದು, ಅದರ ಬಗ್ಗೆ ಜ್ಞಾನ ಬಂದಿದ್ದು' ಅಂತ ಆಕಾಶ್ ಸಿಂಗ್ ವಿಡಿಯೋದಲ್ಲಿ ಹೇಳಿದ್ದಾರೆ.

ಬೇರೆಯವರ ಕೈಕೆಳಗೆ ಕೆಲಸ ಮಾಡುವುದರಿಂದ, ಪ್ರಾಜೆಕ್ಟ್‌ಗಳನ್ನು ನಿಜ ಜೀವನದಲ್ಲಿ ಹೇಗೆ ಕಾರ್ಯಗತಗೊಳಿಸಬಹುದು ಅನ್ನೋದರ ಬಗ್ಗೆ ಪ್ರಮುಖ ಒಳನೋಟಗಳು ಸಿಗುತ್ತವೆ ಅಂತಾನೂ ಅವರು ಹೇಳಿದ್ದಾರೆ. ಬಿಸಿನೆಸ್ ಶುರು ಮಾಡೋ ಮುನ್ನ ಹೊರಗೆ ಹೋಗಿ ಜಗತ್ತು ಹೇಗೆ ಕೆಲಸ ಮಾಡುತ್ತೆ ಅಂತ ನೋಡಿದ್ರೆ, ಐಡಿಯಾಗಳನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ತಾನಾಗಿಯೇ ಬರುತ್ತೆ ಅನ್ನೋದು ಅವರ ಮಾತು.

ಯುವ ಉದ್ಯಮಿಯ ಮಾತು ವೈರಲ್

Instagram ನಲ್ಲಿ ಶೇರ್ ಮಾಡಲಾದ ಈ ವಿಡಿಯೋವನ್ನು ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬರು, 'ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ನಾನು ಇಂದು ಎರಡು ಕಂಪನಿಗಳನ್ನು ನಡೆಸುತ್ತಿದ್ದೇನೆ, ಆದರೆ ಎರಡು ವರ್ಷ ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವದೊಂದಿಗೆ ಬಿಸಿನೆಸ್‌ಗೆ ಇಳಿದಿದ್ದೆ' ಎಂದು ಬರೆದಿದ್ದಾರೆ.

View post on Instagram

ಇನ್ನೊಬ್ಬರು, 'ನಿಮ್ಮ ಮಾತಿನ ಅರ್ಥ ನನಗೆ ಗೊತ್ತಾಯ್ತು. ಆದರೆ ಕೆಲವೊಮ್ಮೆ ಒಂದೇ ಕೆಲಸದಲ್ಲಿ ಉಳಿದುಕೊಂಡರೆ, ಜನರು ಅದನ್ನೇ ಸೇಫ್ ಝೋನ್ ಅಂದುಕೊಂಡು ಅಲ್ಲೇ ಉಳಿದುಬಿಡುವ ಅಪಾಯವೂ ಇದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೋರ್ವ ನೆಟ್ಟಿಗರು, ನೀವೆಷ್ಟೇ ಶಿಕ್ಷಣ ಪಡೆದರೂ, ನಿಮಗೆ ಒಪ್ಪುವ ಕನಸಿನ ಕೆಲಸ ಸಿಗಲಿಲ್ಲ ಎಂದಾದರೇ, ಯಾವುದೇ ಹಿಂಜರಿಕೆಯಿಲ್ಲದೇ ಸಣ್ಣದೋ ದೊಡ್ಡದೋ ನಿಮ್ಮಿಷ್ಟದ ಕೆಲಸ ಮಾಡಿ. ಅಲ್ಲಿಂದ ಕಲಿತು ಒಂದೊಂದೇ ಹೆಜ್ಜೆಯಿಡುತ್ತಾ ಯಶಸ್ಸಿನ ಶಿಖರವೇರಬಹುದು ಎಂದು ಕಮೆಂಟ್ ಮಾಡಿದ್ದಾರೆ.