ಹರಾರೆ(ಜ.17): ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜಿಂಬಾಬ್ವೆಯಲ್ಲಿ ಕೆಲ ದಿನಗಳ ಹಿಂದಷ್ಟೇ ತೈಲ ದರಗಳನ್ನು ದುಪ್ಪಟ್ಟುಗೊಳಿಸಲಾಗಿತ್ತು.

ಜಿಂಬಾಬ್ವೆಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3.31 ಯುಎಸ್ ಡಾಲರ್ ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 3.11 ಯುಎಸ್ ಡಾಲರ್ ಆಗಿದೆ. 

ಅಧ್ಯಕ್ಷ ಎಮರ್ಸನ್ ಮ್ನಾನ್‌ಗಗ್ವಾ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಘೋಷಿಸಿದ್ದು, ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ದೇಶವನ್ನು ಪಾರು ಮಾಡಲು ಬೇರೆ ದಾರಿ ಇಲ್ಲ ಎಂದು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಮಧ್ಯೆ ರಾಜಕೀಯ ತಜ್ಞರು ಎಚ್ಚರಿಸಿದಂತೆ ಜಿಂಬಾಬ್ವೆಯಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದ್ದು, ತೈಲದರ ಏರಿಕೆ ಖಂಡಿಸಿ ಜನ ಬೀದಿಗಿಳಿದಿದ್ದಾರೆ.

ರಾಜಧಾನಿ ಹರಾರೆಯಲ್ಲಿ ಪ್ರಾರಂಭವಾದ ಹಿಂಸಾತ್ಮಕ ಪ್ರತಿಭಟನೆ, ನಿಧಾನವಾಗಿ ದೇಶದ ತುಂಬೆಲ್ಲಾ ಹರಡುತ್ತಿದೆ. ಹರಾರೆಯಲ್ಲಿ ಈಗಾಗಲೇ ಬ್ಯಾಂಕ್ ಗಳು, ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗುತ್ತಿದೆ.

ಭಾರೀ ಪ್ರತಿಭಟನೆಯಿಂದ ಅಧ್ಯಕ್ಷ ಎಮರ್ಸನ್ ಮ್ನಾನ್‌ಗಗ್ವಾ ಸರ್ಕಾರ ಕಂಗಾಲಾಗಿದ್ದು, ಸೇನಾ ಬಲದ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿದೆ. ಅಲ್ಲದೇ  ರಾಜಧಾನಿಯಲ್ಲಿ ಅಘೋಷಿತ ಬಂದ್ ಘೋಷಿಸಲಾಗಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ.

ಶತಮಾನದ ಶಾಕ್: ಪೆಟ್ರೋಲ್ ಬೆಲೆ ಬರೋಬ್ಬರಿ ಡಬಲ್!