ಹರಾರೆ(ಜ.13): ಇದು ನಿಜಕ್ಕೂ ಶತಮಾನದ ಶಾಕ್. ಆದರೆ ನಮಗಲ್ಲ. ದೂರದ ಜಿಂಬಾಬ್ವೆ ಜನರಿಗೆ ಅಲ್ಲಿನ ಸರ್ಕಾರ ಶತಮಾನದ ಶಾಕ್ ಕೊಟ್ಟಿದೆ. ಜಿಂಬಾಬ್ವೆಯಲ್ಲಿ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಸಲಾಗಿದ್ದು, ಜನತೆ ತೀವ್ರ ಆತಂಕಗೊಂಡಿದ್ದಾರೆ.

ಜಿಂಬಾಬ್ವೆಯಲ್ಲಿ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ತೈಲದರವನ್ನು ಏರಿಸಲಾಗಿದ್ದು, ಈ ಭಾರೀ ಬೆಲೆ ಏರಿಕೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಅಧ್ಯಕ್ಷ ಎಮರ್ಸನ್ ಮ್ನಾನ್‌ಗಗ್ವಾ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಘೋಷಿಸಿದ್ದು, ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ದೇಶವನ್ನು ಪಾರು ಮಾಡಲು ಬೇರೆ ದಾರಿ ಇಲ್ಲ ಎಂದು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅದರಂತೆ ಜಿಂಬಾಬ್ವೆಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3.31 ಯುಎಸ್ ಡಾಲರ್ ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 3.11 ಯುಎಸ್ ಡಾಲರ್ ಆಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 1.43 ಯುಎಸ್ ಡಾಲರ್ ಇದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 1.38 ಯುಎಸ್ ಡಾಲರ್ ಆಗಿತ್ತು.

ಅಂದರೆ ಜಿಂಬಾಬ್ವೆಯಲ್ಲಿ ಇದೀಗ ತೈಲಬೆಲೆ ಬರೋಬ್ಬರಿ ದುಪ್ಪಟ್ಟು ಏರಿಕೆ ಕಂಡಿದ್ದು, ಸರ್ಕಾರದ ಈ ನಿರ್ಧಾರ ದೇಶದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂಬ ಆತಂಕ ಎದುರಾಗಿದೆ.

ಇಳಿಕೆ ಬಳಿಕ ಮತ್ತೆ ಏರಿದ ಪೆಟ್ರೋಲ್, ಡೀಸೆಲ್ ಬೆಲೆ!

ಅಚ್ಚರಿಯಲ್ಲಿ ದೇಶದ ಪೆಟ್ರೋಲ್ ಸಾಮ್ರಾಜ್ಯ: ಅಲೆಲೆ ನಂಬಲಾಗದ ಬೆಲೆ!