ಲಂಡನ್‌[ಏ.13]: ಭಾರತದ ಬ್ಯಾಂಕುಗಳಿಗೆ 9000 ಕೋಟಿ ರು. ಟೋಪಿ ಹಾಕಿ ಬ್ರಿಟನ್ನಿನಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್‌ ಮಲ್ಯ ಇದೀಗ ಭಾರತಕ್ಕೆ ಗಡೀಪಾರಾಗುವುದರಿಂದ ತಪ್ಪಿಸಿಕೊಳ್ಳಲು ಬ್ರಿಟನ್ನಿನ ಹೈಕೋರ್ಟ್‌ಗೆ ಅಂತಿಮ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ವಯ ಮಲ್ಯ ಪರ ವಕೀಲರು ಜಡ್ಜ್‌ ಮುಂದೆ ಗಡೀಪಾರು ಆದೇಶದ ವಿರುದ್ಧ ಏಕೆ ಮೇಲ್ಮನವಿಯ ವಿಚಾರಣೆ ನಡೆಸಬೇಕು ಎಂದು ಮೌಖಿಕವಾಗಿ ವಾದ ಮಂಡಿಸಲಿದ್ದಾರೆ. ಅದು ಜಡ್ಜ್‌ಗೆ ಮನವರಿಕೆಯಾದರೆ ಅವರು ಗಡೀಪಾರು ಆದೇಶದ ವಿರುದ್ಧದ ಮೇಲ್ಮನವಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಭಾರತ ಸಲ್ಲಿಸಿದ್ದ ಗಡೀಪಾರು ಅರ್ಜಿಯ ವಿಚಾರಣೆ ನಡೆಸಿದ್ದ ಲಂಡನ್ನಿನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಕಳೆದ ಡಿಸೆಂಬರ್‌ನಲ್ಲಿ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಬೇಕೆಂದೂ, ಮಲ್ಯ ಅವರು ಭಾರತದ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಬೇಕೆಂದೂ ಆದೇಶ ನೀಡಿತ್ತು. ಅದಕ್ಕೆ ಫೆಬ್ರವರಿಯಲ್ಲಿ ಬ್ರಿಟನ್ನಿನ ಗೃಹ ಕಾರ್ಯದರ್ಶಿ ಸಹಿ ಕೂಡ ಹಾಕಿದ್ದರು. ಆ ಆದೇಶದ ವಿರುದ್ಧ ಕಳೆದ ವಾರ ಮಲ್ಯ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಯತ್ನಿಸಿದ್ದರು. ಅದನ್ನು ತಿರಸ್ಕರಿಸಿದ್ದ ಹೈಕೋರ್ಟ್‌, ಐದು ದಿನದೊಳಗಾಗಿ ‘ಸಂಕ್ಷಿಪ್ತ ಮೌಖಿಕ ವಿಚಾರಣೆಗೆ’ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ಅದರಂತೆ ಮಲ್ಯ ಈಗ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯು ಮುಂದಿನ ವಾರಗಳಲ್ಲಿ ಹೈಕೋರ್ಟ್‌ ಮುಂದೆ ಬರಲಿದೆ. ವಿಜಯ್‌ ಮಲ್ಯ ಅವರ ವಕೀಲರು ಹಾಗೂ ಭಾರತ ಸರ್ಕಾರದ ಪರ ವಾದ ಮಂಡಿಸುತ್ತಿರುವ ಕ್ರೌನ್‌ ಪ್ರಾಸಿಕ್ಯೂಷನ್‌ ಸೇವೆಯ ವಕೀಲರು ಜಡ್ಜ್‌ ಮುಂದೆ ತಮ್ಮತಮ್ಮ ವಾದ ಮಂಡಿಸಲಿದ್ದಾರೆ. ನಂತರ ಮಲ್ಯರ ಗಡೀಪಾರು ವಿರುದ್ಧದ ಅರ್ಜಿಯನ್ನು ಪೂರ್ಣ ಪ್ರಮಾಣದ ವಿಚಾರಣೆ ನಡೆಸಬೇಕೇ ಬೇಡವೇ ಎಂಬುದನ್ನು ಜಡ್ಜ್‌ ನಿರ್ಧರಿಸಲಿದ್ದಾರೆ.

ಸದ್ಯ ವಿಜಯ್‌ ಮಲ್ಯ ಅವರು ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ಗಡೀಪಾರಿಗೆ ಹೊರಡಿಸಿರುವ ವಾರಂಟ್‌ಗೆ ಜಾಮೀನು ಪಡೆದು ಬ್ರಿಟನ್ನಿನ ಜೈಲಿನಿಂದ ಹೊರಗಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.