2008 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 112 ಮಿಲಿಯನ್ ಡಾಲರ್‌ಗೆ ಖರೀದಿಸಿದ್ದಾಗಿ ವಿಜಯ್ ಮಲ್ಯ ಹೇಳಿದ್ದಾರೆ.
ನವದೆಹಲಿ (ಜೂ.6):18 ವರ್ಷಗಳ ಹೋರಾಟ, ಛಲ ಮತ್ತು ಪರಿಶ್ರಮದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂತಿಮವಾಗಿ 2025 ರ T20 ಲೀಗ್‌ನ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್‌ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದ್ದರೂ, ಆರ್‌ಸಿಬಿ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ಇಂದಿನವರೆಗೂ ಸಾಧ್ಯವಾಗಿರಲಿಲ್ಲ. 18 ವರ್ಷಗಳ ಈ ಅವಧಿಯಲ್ಲಿ ಹಲವಾರು ಶ್ರೇಷ್ಠ ಆಟಗಾರರು ತಂಡಕ್ಕೆ ಬಂದು ಹೋಗಿದ್ದಾರೆ. ಆದರೆ, ತಂಡದಲ್ಲಿ ಅಂದಿನಿಂದ ಇಂದಿನವರೆಗೂ ಉಳಿದ ಏಕೈಕ ಆಟಗಾರ ವಿರಾಟ್ ಕೊಹ್ಲಿ.
ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಂತಿಮವಾಗಿ ಟ್ರೋಫಿ ಗೆಲ್ಲುತ್ತಿದ್ದಂತೆ ಮೊದಲು ಗಮನ ಸೆಳೆದ ವ್ಯಕ್ತಿ ವಿರಾಟ್ ಕೊಹ್ಲಿ. ಈ ಸಂದರ್ಭ ಅಭಿಮಾನಿಗಳು ಮತ್ತು ಸೋಶಿಯಲ್ ಮೀಡಿಯಾ, ಫ್ರಾಂಚೈಸಿಯ ಮೊದಲ ಮಾಲೀಕರಾಗಿದ್ದ ಪರಾರಿಯಾಗಿದ್ದ ವಿಜಯ್ ಮಲ್ಯ ಅವರನ್ನು ನೆನಪಿಸಿಕೊಳ್ಳುವಂತೆ ಮಾಡಿತು.
ಭಾರತದಲ್ಲಿ ಇನ್ನೂ ವಾಂಟೆಡ್ ಆಗಿರುವ ವಿಜಯ್ ಮಲ್ಯ, ಮುಂಬೈ ಇಂಡಿಯನ್ಸ್ ಸೇರಿದಂತೆ ಒಟ್ಟು ಮೂರು ಫ್ರಾಂಚೈಸಿಗಳಿಗೆ ಬಿಡ್ ಮಾಡಿದ್ದಾಗಿ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ, ಈ ತಂಡವನ್ನು ಅಂತಿಮವಾಗಿ ಮುಖೇಶ್ ಅಂಬಾನಿ ಖರೀದಿಸಿದರು. ಮುಂಬೈ ತಂಡವನ್ನು ಮುಖೇಶ್ ಅಂಬಾನಿಗೆ ಅತ್ಯಂತ ಕಡಿಮೆ ಅಂತರದಲ್ಲಿ ನಾನು ಸೋತಿದ್ದೆ, ಬಳಿಕ ಅಂತಿಮವಾಗಿ ಆರ್‌ಸಿಬಿಯನ್ನು 112 ಮಿಲಿಯನ್ ಯುಎಸ್ ಡಾಲರ್‌ಗಳಿಗೆ ಖರೀದಿ ಮಾಡಿದೆ. ಇದು 2008ರ ಲೆಕ್ಕಾಚಾರದಲ್ಲಿ 600-700 ಕೋಟಿ ಎಂದು ಹೇಳಬಹುದು.
"ಈ ಲೀಗ್ ಬಗ್ಗೆ ಲಲಿತ್ ಮೋದಿ ಬಿಸಿಸಿಐ ಸಮಿತಿಗೆ ಮಾಡಿದ ಸಲಹೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. ಅವರು ಒಂದು ದಿನ ನನಗೆ ಕರೆ ಮಾಡಿ, ತಂಡಗಳನ್ನು ಹರಾಜು ಮಾಡಲಾಗುತ್ತದೆ ಎಂದು ಹೇಳಿದರು. ನೀವು ಅದನ್ನು ಖರೀದಿಸುತ್ತೀರಾ? ಎಂದರು. ನಾನು ಮೂರು ಫ್ರಾಂಚೈಸಿಗಳಿಂದ ಬಿಡ್ ಮಾಡಿದೆ, ಮತ್ತು ನಾನು ಮುಂಬೈಯನ್ನು ಬಹಳ ಕಡಿಮೆ ಮೊತ್ತದಿಂದ ಕಳೆದುಕೊಂಡೆ' ಎಂದರು.
2008ರಲ್ಲಿ ನಾನು ಆರ್‌ಸಿಬಿ ಫ್ರಾಂಚೈಸಿಗೆ ಬಿಡ್ ಮಾಡಲು ಹೋದಾಗ, ಖಂಡಿತವಾಗಿ ಭಾರತೀಯ ಕ್ರಿಕೆಟ್‌ಗೆ ಐಪಿಎಲ್ ಗೇಮ್ ಚೇಂಜರ್ ಆಗುತ್ತದೆ ಎಂದು ತಿಳಿದಿತ್ತು. ಬೆಂಗಳೂರಿನ ಉತ್ಸಾಹಭರಿತ, ಕ್ರಿಯಾಶೀಲ, ಆಕರ್ಷಕ ಮನೋಭಾವವನ್ನು ಸಾಕಾರಗೊಳಿಸುವ ತಂಡವನ್ನು ರಚಿಸುವುದು ನನ್ನ ದೃಷ್ಟಿಕೋನವಾಗಿತ್ತು. ನಾನು $112 ಮಿಲಿಯನ್ ಪಾವತಿಸಿದೆ, ಇದು ಎರಡನೇ ಅತಿ ಹೆಚ್ಚು ಬಿಡ್, ಏಕೆಂದರೆ ನಾನು ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಿದ್ದೆ. ಆರ್‌ಸಿಬಿ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೆಯೂ ಶ್ರೇಷ್ಠತೆಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ಆಗಬೇಕೆಂದು ನಾನು ಬಯಸಿದ್ದೆ. ಅದಕ್ಕಾಗಿಯೇ ನಾನು ಅದನ್ನು ನಮ್ಮ ಹೆಚ್ಚು ಮಾರಾಟವಾಗುವ ಮದ್ಯದ ಬ್ರಾಂಡ್‌ಗಳಲ್ಲಿ ಒಂದಾದ ರಾಯಲ್ ಚಾಲೆಂಜ್ ಅನ್ನೋ ಹೆಸರನ್ನೇ ನೀಡಿದ್ದೆ. ಆ ಮೂಲಕ ಇಡೀ ಟೀಮ್‌ಗೆ ಬೋಲ್ಡ್ ಐಡೆಂಟಿಟಿ ನೀಡಿದ್ದೆ ಎಂದು ಹೇಳಿದ್ದಾರೆ.
ನೇರ ಮಾತುಕತೆಯ ಸಮಯದಲ್ಲಿ, ಮಲ್ಯ ಅವರು ಆರ್‌ಸಿಬಿ ಖರೀದಿಸುವ ಹಿಂದಿನ ಏಕೈಕ ಉದ್ದೇಶ ತಮ್ಮ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅನ್ನು ಪ್ರಚಾರ ಮಾಡುವುದಾಗಿತ್ತು. ಇದರ ಹಿಂದೆ ಯಾವುದೇ ಕ್ರಿಕೆಟ್ ಪ್ರೀತಿ ಇದ್ದಿರಲಿಲ್ಲ ಎಂದಿದ್ದಾರೆ.
ವಿಜಯ್ ಮಲ್ಯ ಮಾಲೀಕರಾಗಿದ್ದ ಸಮಯದಲ್ಲಿ, ಆರ್‌ಸಿಬಿಯ ಪಂದ್ಯದ ನಂತರದ ಪಾರ್ಟಿಗಳು ಸಹ ಸಾಕಷ್ಟು ಸುದ್ದಿ ಮಾಡಿದ್ದವು. ತಮ್ಮ ತಂಡಕ್ಕೆ ಗ್ಲಾಮರ್ ಸೇರಿಸುವುದು ಸಹ ಉದ್ದೇಶಪೂರ್ವಕ ಪ್ರಯತ್ನವಾಗಿತ್ತು ಎಂದು ಮಲ್ಯ ಹೇಳಿದರು.
"ಆರ್‌ಸಿಬಿ ಕೇವಲ ಕ್ರಿಕೆಟ್ ತಂಡಕ್ಕಿಂತ ಹೆಚ್ಚಿನದಾಗಬೇಕೆಂದು ನಾನು ಬಯಸಿದ್ದೆ. ಅದು ಜೀವನಶೈಲಿಯ ಬ್ರ್ಯಾಂಡ್ ಆಗಬೇಕು ಅನ್ನೋದು ನನ್ನ ಬಯಕೆಯಾಗಿತ್ತು. ಆಫ್ಟರ್-ಪಾರ್ಟಿಗಳು, ಚಿಯರ್‌ಲೀಡರ್‌ಗಳು, ಫ್ಯಾನ್ ಎಂಗೇಜ್‌ಮೆಂಟ್. ಇವೆಲ್ಲವೂ ಆರ್‌ಸಿಬಿಯನ್ನು ಅತ್ಯಂತ ರೋಮಾಂಚಕಾರಿ ಫ್ರಾಂಚೈಸಿಯನ್ನಾಗಿ ಮಾಡುವ ಉದ್ದೇಶಪೂರ್ವಕವಾಗಿತ್ತು. ಕಿಂಗ್‌ಫಿಷರ್ ಮತ್ತು ರಾಯಲ್ ಚಾಲೆಂಜ್ ಪ್ರಾಯೋಜಕರಾಗಿದ್ದರು, ಆದ್ದರಿಂದ ನಾವು ಅದನ್ನು ಬಳಸಿಕೊಂಡು ಪ್ರತಿ ಪಂದ್ಯವನ್ನು ಒಂದು ಈವೆಂಟ್ ಆಗಿ ಮಾಡಿದ್ದೆವು. ಜನರು ಇದನ್ನು ಆಕರ್ಷಕ ಎಂದು ಕರೆದರು, ಆದರೆ ಇದು ಕಾರ್ಯತಂತ್ರದದ್ದಾಗಿತ್ತು. ಬೆಂಗಳೂರು ಅದನ್ನು ಇಷ್ಟಪಟ್ಟಿತು ಮತ್ತು ಆರ್‌ಸಿಬಿ ನಗರದ ಹೃದಯಬಡಿತವಾಯಿತು" ಎಂದು ಮಲ್ಯ ಹೇಳಿದ್ದಾರೆ.
ಈಗ ಇದ್ದಿದ್ರೆ ಈ ಆಟಗಾರರ ಖರೀದಿ ಮಾಡ್ತಿದ್ದೆ: ಇಂದು ಆರ್‌ಸಿಬಿ ತಂಡದ ಮಾಲೀಕರಾಗಿದ್ದಲ್ಲಿ ಯಾವ ಎದುರಾಳಿ ಆಟಗಾರರನ್ನು ಆಯ್ಕೆ ಮಾಡಲು ಬಯಸುತ್ತೀರಿ ಎನ್ನುವ ಪ್ರಶ್ನೆಗೆ, ಅವರು ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರನ್ನು ಆಯ್ಕೆ ಮಾಡಿದರು.
