ನಷ್ಟದಲ್ಲಿರುವ ವಿಡಿಯೋಕಾನ್ 90 ಸಾವಿರ ಕೋಟಿ ರು.ಗಳನ್ನು ಅದು ಬ್ಯಾಂಕ್‌ಗಳಿಗೆ ಪಾವತಿ ಮಾಡಬೇಕಿದ್ದು, ಇದರೊಂದಿಗೆ ಇದು ದೇಶದ ಬ್ಯಾಂಕಿಂಗ್‌ ಇತಿಹಾಸದ ಅತಿ ದೊಡ್ಡ ‘ದಿವಾಳಿ ಪ್ರಕರಣ’ವಾಗಿ ಮಾರ್ಪಡಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ

ಮುಂಬೈ(ಏ.06): ನಷ್ಟದಲ್ಲಿರುವ ವಿಡಿಯೋಕಾನ್‌ ಸಮೂಹವು ತಾನು ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ಭಾರೀ ಮೊತ್ತದ ಸಾಲ ಮರುಪಾವತಿ ಮಾಡಬೇಕು ಎಂದು ಒಪ್ಪಿಕೊಂಡಿದೆ. 
ಸುಮಾರು 90 ಸಾವಿರ ಕೋಟಿ ರು.ಗಳನ್ನು ಅದು ಬ್ಯಾಂಕ್‌ಗಳಿಗೆ ಪಾವತಿ ಮಾಡಬೇಕಿದ್ದು, ಇದರೊಂದಿಗೆ ಇದು ದೇಶದ ಬ್ಯಾಂಕಿಂಗ್‌ ಇತಿಹಾಸದ ಅತಿ ದೊಡ್ಡ ‘ದಿವಾಳಿ ಪ್ರಕರಣ’ವಾಗಿ ಮಾರ್ಪಡಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಹೀಗಾಗಿ ವಿಡಿಯೋಕಾನ್‌ ಕಂಪನಿ ಮುಳುಗಿದರೆ ಬ್ಯಾಂಕ್‌ಗಳಿಗೆ ಸುಮಾರು 90 ಸಾವಿರ ಕೋಟಿ ರು.ಗಳಷ್ಟು ನಷ್ಟವಾಗುವ ಭೀತಿ ಎದುರಾಗಿದೆ.

ವಿಡಿಯೋಕಾನ್‌ ಸಮೂಹವು 2 ಪ್ರಮುಖ ಕಂಪನಿಗಳನ್ನು ಹೊಂದಿದೆ. ಅದರಲ್ಲಿ ವಿಡಿಯೋಕಾನ್‌ ಇಂಡಸ್ಟ್ರೀಸ್‌ ಲಿ. (ವಿಐಎಲ್‌) 59,451.8 ಕೋಟಿ ರು.ಗಳನ್ನು ಬಾಕಿ ಇರಿಸಿಕೊಂಡಿದೆ. ಇನ್ನು ವಿಡಿಯೋಕಾನ್‌ ಟೆಲಿಕಮ್ಯುನಿಕೇಷನ್ಸ್‌ ಲಿ. 26,674 ಕೋಟಿ ರು. ಸಾಲವನ್ನು ಬ್ಯಾಂಕ್‌ಗಳಿಗೆ ಮರುಪಾವತಿ ಮಾಡಬೇಕಿದೆ. ಇದೆರಡೂ ಸೇರಿ 86,126 ಕೋಟಿ ರು. ಆಗುತ್ತದೆ. ಇದರ ಜತೆ ಇನ್ನಿತರ ಬಾಕಿಗಳು ಸೇರಿ ಸುಮಾರು 90 ಸಾವಿರ ಕೋಟಿ ರು.ಗಳಷ್ಟು ಬಾಕಿಯನ್ನು ಬ್ಯಾಂಕ್‌ಗಳಿಗೆ ಅದು ನೀಡಬೇಕಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಆದರೆ ತಾನು ಬ್ಯಾಂಕ್‌ಗಳಿಗೆ ನೀಡಬೇಕಾದ ಬಾಕಿ ಹಣ 39 ಸಾವಿರ ಕೋಟಿ ರು. ಮಾತ್ರ. ತನ್ನ ಬಳಿ ಕೆಲವು ‘ತೈಲೋತ್ಪನ್ನ ಆಸ್ತಿ’ಗಳು ಇದ್ದು ಅವುಗಳ ಮೂಲಕ ಬಾಕಿ ಹಣ ತೀರಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.