ಅಮೆರಿಕಕ್ಕೆ ಒಂದರ ಮೇಲೊಂದರಂತೆ ಆರ್ಥಿಕ ಸವಾಲುಗಳು ಎದುರಾಗುತ್ತಲೇ ಇವೆ. ಒಂದೆಡೆ ಬ್ಯಾಂಕ್ ಗಳು ಸಂಕಷ್ಟಕ್ಕೆ ಸಿಲುಕಿದ್ದರೆ, ಇನ್ನೊಂದೆಡೆ ಸರ್ಕಾರದ ಖಜಾನೆ ಖಾಲಿಯಾಗುವ ಭೀತಿ ಎದುರಾಗಿದೆ. ಈ ನಡುವೆ ಸಾಲದ ಸೀಲಿಂಗ್ ಮಿತಿಯನ್ನು ಹೆಚ್ಚಳ ಮಾಡದಿದ್ರೆ ಅಮೆರಿಕದ ಫೆಡರಲ್ ಸರ್ಕಾರ ಈ ವರ್ಷದ ಜೂನ್ ನಲ್ಲಿ ಬಿಲ್ ಗಳನ್ನು ಪಾವತಿಸಲು ಹಣದ ಕೊರತೆ ಎದುರಿಸಲಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್ (ಮೇ 5): ಅಮೆರಿಕದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಆಘಾತದ ಮೇಲೆ ಆಘಾತ ಎದುರಾಗುತ್ತಲೇ ಇದೆ. ಅಮೆರಿಕದಲ್ಲಿ ನಿರ್ಮಾಣವಾಗಿರುವ ಈ ಸಂಕಷ್ಟ ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ದೊಡ್ಡ ಮಟ್ಟದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ನಡುವೆ ಸಾಲದ ಸೀಲಿಂಗ್ ಮಿತಿಯನ್ನು ಹೆಚ್ಚಳ ಮಾಡದಿದ್ರೆ ಅಮೆರಿಕದ ಫೆಡರಲ್ ಸರ್ಕಾರ ಈ ವರ್ಷದ ಜೂನ್ ನಲ್ಲಿ ಬಿಲ್ ಗಳನ್ನು ಪಾವತಿಸಲು ಹಣದ ಕೊರತೆ ಎದುರಿಸಲಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಲದ ಸೀಲಿಂಗ್ ಫೆಡರಲ್ ಸರ್ಕಾರ ಎಷ್ಟು ಸಾಲ ಪಡೆಯಬಹುದು ಎಂಬುದರ ಮಿತಿಯನ್ನು ಸೂಚಿಸುತ್ತದೆ. ಇನ್ನು ಯುಎಸ್ ಕಾಂಗ್ರೆಸ್ ಸಾಲದ ಸೀಲಿಂಗ್ ಮಿತಿಯನ್ನು ನಿಗದಿಪಡಿಸುತ್ತದೆ. 'ಪ್ರಸಕ್ತ ಅಂದಾಜಿನ ಪ್ರಕಾರ ಕಾಂಗ್ರೆಸ್ ಆದಷ್ಟು ಶೀಘ್ರದಲ್ಲಿ ಸಾಲದ ಮಿತಿಯ ಏರಿಕೆ ಅಥವಾ ರದ್ದು ಮಾಡಬೇಕು. ಇದರಿಂದ ದೀರ್ಘಾವಧಿಗೆ ನಿಶ್ಚಿತತೆ ಸಿಗಲಿದ್ದು, ಸರ್ಕಾರ ಪಾವತಿಗಳನ್ನು ಮಾಡೋದನ್ನು ಮುಂದುವರಿಸಲಿದೆ' ಎಂದು ಯೆಲೆನ್ ಹೌಸ್ ಸ್ಪೀಕರ್ ಕೆವಿನ್ ಮೆಕ್ ಕಾರ್ಥೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅಮೆರಿಕವು ಊಹಿಸಲಾಗದ ಡೀಫಾಲ್ಟ್ ಪರಿಸ್ಥಿತಿಯತ್ತ ವಾಲುವ ಸಾಧ್ಯತೆ ಹೆಚ್ಚಿದ್ದು, ಇದು ಜಾಗತಿಕ ಆರ್ಥಿಕತೆಯನ್ನು ತಲ್ಲಣಗೊಳಿಸಲಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಆರ್ಥಿಕ ಬಿಕ್ಕಟ್ಟನ್ನು ನಿಯಂತ್ರಿಸಲು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಕಾಂಗ್ರೆಸ್ ನ ನಾಲ್ಕು ಹಿರಿಯ ಅಧಿಕಾರಿಗಳನ್ನು ಮೇ 9ರಂದು ವೈಟ್ ಹೌಸ್ ಗೆ ಆಹ್ವಾನಿಸಿದ್ದಾರೆ.ರಿಪಬ್ಲಿಕನ್ ಹೌಸ್ ಸ್ಪೀಕರ್ ಕೆವಿನ್ ಮ್ಯಾಕ್ ಕಾರ್ಥೆ, ಹೌಸ್ ಡೆಮಾಕ್ರಟಿಕ್ ನಾಯಕ ಹಕೇಮ್ ಜೆಫ್ರೆಸ್, ಸೆನಟ್ ಮ್ಯಾಜರಿಟಿ ಲೀಡರ್ ಸ್ಚುಮೆರ್ ಹಾಗೂ ರಿಪಬ್ಲಿಕನ್ ಲೀಡರ್ ಮಿಚ್ ಮೆಕ್ ಕೊನೆಲ್ ಅವರನ್ನು ಬಿಡೆನ್ ಆಹ್ವಾನಿಸಿದ್ದಾರೆ.
ಅಮೆರಿಕದ ಮತ್ತೊಂದು ಬ್ಯಾಂಕ್ ಪತನ: ದೊಡ್ಡಣ್ಣನಿಗೆ ಸರಣಿ ಶಾಕ್
ಸಾಲದ ಮಿತಿ ಏರಿಕೆಗೆ ತಡೆ ಹಾಕಲು ಭಾರೀ ವೆಚ್ಚ ಕಡಿತ ಹಾಗೂ ಇತರ ನೀತಿ ಬದಲಾವಣಿಗಳನ್ನು ಮಾಡುವಂತೆ ಹೌಸ್ ರಿಪಬ್ಲಿಕನ್ಸ್ ಆಗ್ರಹಿಸಿದ್ದಾರೆ. ಆದರೆ, ಬಿಡೆನ್ ಸಾಲದ ಮಿತಿ ಹೆಚ್ಚಳಕ್ಕೆ ಸಂಬಂಧಿಸಿದ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ಆದರೆ, ಹೊಸ ಮಿತಿಯನ್ನು ಪಾಸ್ ಮಾಡಿದ ಬಳಿಕ ಬಜೆಟ್ ಕಡಿತಗಳ ಬಗ್ಗೆ ಚರ್ಚೆ ನಡೆಸೋದಾಗಿ ಬಿಡೆನ್ ಸ್ಪಷ್ಟಪಡಿಸಿದ್ದಾರೆ. ಸಾಲದ ಮಿತಿ ಹೆಚ್ಚಳಗಳನ್ನು ಇತರ ಬಜೆಟ್ ಹಾಗೂ ವೆಚ್ಚ ಕಡಿತದದ ಮಾನದಂಡಗಳ ಮೂಲಕ ಸರಿಪಡಿಸಲು ಕಾಂಗ್ರೆಸ್ ಸದಾ ಪ್ರಯತ್ನಿಸುತ್ತಿರುತ್ತದೆ.
2011ರಲ್ಲಿ ಇದೇ ಮಾದರಿಯಲ್ಲಿ ಸಾಲದ ಮಿತಿ ಹೆಚ್ಚಳಕ್ಕೆ ಸಂಬಂಧಿಸಿ ಅಮೆರಿಕದಲ್ಲಿ ಚರ್ಚೆ ನಡೆದಿತ್ತು. ಇನ್ನು ಡಿಸೆಂಬರ್ 2021 ರಲ್ಲಿ, ಈ ಕ್ಯಾಪ್ ಅನ್ನು $31.4 ಟ್ರಿಲಿಯನ್‌ಗೆ ವಿಸ್ತರಿಸಲಾಗಿತ್ತು ಕೂಡ . ಸಾಲದ ಮಿತಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಅನೇಕ ಸಮಯದಿಂದ ವಾದ-ವಿವಾದಗಳು ನಡೆಯುತ್ತಲೇ ಇವೆ.
ಪತನದ ಭೀತಿಯಿಂದ ಪಾರಾದ ಸ್ವಿಜರ್ಲೆಂಡ್ ಮೂಲದ ಬ್ಯಾಂಕ್
ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಮುಟ್ಟುಗೋಲು
ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ (First Republic Bank of America) ದಿವಾಳಿ ಅಂಚಿಗೆ ಸಿಲುಕಿದ ಹಿನ್ನೆಲೆಯಲ್ಲಿ ಕ್ಯಾಲಿರ್ಫೋನಿಯಾದ (California) ಹಣಕಾಸು ಸಂರಕ್ಷಣೆ ಹಾಗೂ ನಾವೀನ್ಯತೆ ಇಲಾಖೆಯು ಅದನ್ನು ಇತ್ತೀಚೆಗೆ ಮುಟ್ಟುಗೋಲು ಹಾಕಿಕೊಂಡಿದೆ. ಇನ್ನು ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕ್ ಅನ್ನು ಜೆಪಿ ಮೊರ್ಗಾನ್ ಚೇಸ್ ಅಂಡ್ ಕಂಪನಿಗೆ (JPMorgan Chase & Co) ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ನ ಆಸ್ತಿ ಹಾಗೂ ಠೇವಣಿಗಳ ಬಗ್ಗೆ ಜೆಪಿ ಮೊರ್ಗಾನ್ ಕಾಳಜಿ ತೆಗೆದುಕೊಳ್ಳಲಿದ್ದು, ಹೂಡಿಕೆದಾರರಿಗೆ ಅಭಯ ಸಿಕ್ಕಂತಾಗಿದೆ.
