ಪತನದ ಅಂಚಿನಲ್ಲಿದೆ ಎಂದು ಹೇಳಲಾಗಿದ್ದ ಸ್ವಿಜರ್ಲೆಂಡ್‌ ಮೂಲದ ಕ್ರೆಡಿಸ್‌ ಸೂಸಿ ಬ್ಯಾಂಕ್‌, ಆರ್ಥಿಕ ಸಮಸ್ಯೆ ಪರಿಹಾರಕ್ಕಾಗಿ ತಕ್ಷಣವೇ ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ನಿಂದ 4.50 ಲಕ್ಷ ಕೋಟಿ ರು.ನಷ್ಟು ಬೃಹತ್‌ ಸಾಲ ಪಡೆಯುವುದಾಗಿ ಘೋಷಿಸಿದೆ.

ಜಿನೆವಾ: ಪತನದ ಅಂಚಿನಲ್ಲಿದೆ ಎಂದು ಹೇಳಲಾಗಿದ್ದ ಸ್ವಿಜರ್ಲೆಂಡ್‌ ಮೂಲದ ಕ್ರೆಡಿಸ್‌ ಸೂಸಿ ಬ್ಯಾಂಕ್‌, ಆರ್ಥಿಕ ಸಮಸ್ಯೆ ಪರಿಹಾರಕ್ಕಾಗಿ ತಕ್ಷಣವೇ ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ನಿಂದ 4.50 ಲಕ್ಷ ಕೋಟಿ ರು.ನಷ್ಟು ಬೃಹತ್‌ ಸಾಲ ಪಡೆಯುವುದಾಗಿ ಘೋಷಿಸಿದೆ. ಈ ಮೂಲಕ ತಕ್ಷಣಕ್ಕೆ ಪತನದ ಅಪಾಯದಿಂದ ಪಾರಾಗುವ ಸುಳಿವು ನೀಡಿದೆ. ಅದರ ಬೆನ್ನಲ್ಲೇ ಬುಧವಾರ ಶೇ.30ರಷ್ಟು ಭಾರೀ ಕುಸಿತ ಕಂಡಿದ್ದ ಬ್ಯಾಂಕ್‌ನ ಷೇರುಗಳು ಗುರುವಾರ ಶೇ.30ರಷ್ಟು ಏರಿಕೆ ಕಂಡಿವೆ.

ಆದರೆ ಅಮೆರಿಕದಲ್ಲಿ ಈಗಾಗಲೇ ಪತನಗೊಂಡ ಮೂರು ಬ್ಯಾಂಕ್‌ಗಳ ಸುದ್ದಿ ಮತ್ತು ಕ್ರೆಡಿಟ್‌ ಸೂಸಿಯ ಆರ್ಥಿಕ ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ಮೂಡಿಸಿರುವ ತಲ್ಲಣ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಗುರುವಾರ ವಿವಿಧ ದೇಶಗಳ ಹಲವು ಬೃಹತ್‌ ಜಾಗತಿಕ ಬ್ಯಾಂಕ್‌ಗಳ ( global banks) ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ.

ಕಾಡಿತ್ತು ಆತಂಕ:

ಕ್ರೆಡಿಟ್‌ ಸೂಸಿ ಭಾರೀ ಆರ್ಥಿಕ ಸಮಸ್ಯೆಗೆ ಸಿಕ್ಕಿಬಿದ್ದಿದೆ ಎಂಬ ವರದಿಗಳ ಬೆನ್ನಲ್ಲೇ ಅದರಲ್ಲಿ ಇನ್ನಷ್ಟು ಹೂಡಿಕೆ ಸಾಧ್ಯವಿಲ್ಲ ಎಂದು ಬ್ಯಾಂಕ್‌ನ ಬಹುದೊಡ್ಡ ಷೇರುದಾರನ ಪೈಕಿ ಒಂದಾದ ಸೌದಿ ನ್ಯಾಷನಲ್‌ ಬ್ಯಾಂಕ್‌ (Saudi National Bank) ಘೋಷಿಸಿತ್ತು. ಹೀಗಾಗಿ ಬ್ಯಾಂಕ್‌ ಯಾವುದೇ ಕ್ಷಣ ಪತನಗೊಳ್ಳುವ ಭೀತಿ ಎದುರಾಗಿತ್ತು. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಹೂಡಿಕೆದಾರರು ಭಾರೀ ಪ್ರಮಾಣದ ಠೇವಣಿ ಹಿಂದಕ್ಕೆ ಪಡೆದ ಕಾರಣ, ಬ್ಯಾಂಕ್‌ನ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿತ್ತು. ಅದರ ಜೊತೆಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ತನ್ನ ಗರಿಷ್ಠ ಷೇರುಮೌಲ್ಯದ ಪೈಕಿ ಶೆ.80ರಷ್ಟು ಮೌಲ್ಯ ಕಳೆದುಕೊಂಡಿದ್ದ ಕ್ರೆಡಿಟ್‌ ಸೂಸಿಯ ಷೇರು ಮೌಲ್ಯ, ಬುಧವಾರ ಮತ್ತೆ ಶೇ.30ರಷ್ಟು ಕುಸಿದು, ಹೂಡಿಕೆದಾರರ ಜಂಘಾಬಲವನ್ನೇ ಉಡುಗಿಸಿತ್ತು.

ವಿಶ್ವದ 8ನೇ ಅತಿ ದೊಡ್ಡ ಬ್ಯಾಂಕ್‌ ಅಮೆರಿಕದ ಸ್ವಿಸ್‌ ಬ್ಯಾಂಕ್‌ ಕೂಡ ಪತನದತ್ತ..?

ಸಹಾಯದಿಂದ ಚೇತರಿಕೆ:

ಆದರೆ ಬ್ಯಾಂಕ್‌ ಉಳಿಸಲು ತುರ್ತು ಕ್ರಮ (emergency measures) ಕೈಗೊಳ್ಳುವಲ್ಲಿ ಯಶಸ್ವಿಯಾಗಿರುವ ಕ್ರೆಡಿಟ್‌ ಸೂಸಿ, ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ನಿಂದ ತಾನು 4.50 ಲಕ್ಷ ಕೋಟಿ ರು. ಸಾಲ ಪಡೆದುಕೊಳ್ಳಲು ಇರುವ ಅವಕಾಶವನ್ನು ಬಳಸಿಕೊಳ್ಳುತ್ತಿರುವುದಾಗಿ ಘೋಷಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕ್ರೆಡಿಟ್‌ ಸೂಸಿ ಬ್ಯಾಂಕ್‌ ಅಧ್ಯಕ್ಷ ಆ್ಯಕ್ಸೆಲ್‌ ಲೆಹಮನ್‌, ಅಪಾಯದ ಪ್ರಮಾಣವನ್ನು ಕಡಿಮೆ ಮಾಡಲು ನಾವು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ನಮ್ಮ ಬಂಡವಾಳ ರೇಶ್ಯೋ ಮತ್ತು ಬ್ಯಾಲೆನ್ಸ್‌ ಶೀಟ್‌ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬ್ಯಾಂಕ್‌ನ ಷೇರು ಬೆಲೆ ಸ್ವಿಜೆರ್ಲೆಂಡ್‌ನ ಸಿಕ್ಸ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ(Six Stock Exchange) 187.10 ರು.(2.10 ಸ್ವಿಸ್‌ ಫ್ರಾಂಕ್‌)ನಲ್ಲಿ ವಹಿವಾಟು ನಡೆಸುತ್ತಿದೆ. ಬುಧವಾರ ಒಂದು ಹಂತದಲ್ಲಿ ಷೇರು ಬೆಲೆ 142.55 ರು.(1.6 ಸ್ವಿಸ್‌ ಫ್ರಾಂಕ್‌)ಗೆ ಕುಸಿದಿತ್ತು. 2017ರಲ್ಲಿ ಇದೇ ಷೇರಿನ ಮೌಲ್ಯ 7127 ರು. (80 ಫ್ರಾಂಕ್‌)ನಷ್ಟಿತ್ತು.

ಒಂದೇ ವಾರದಲ್ಲಿ ಅಮೆರಿಕದ ಮೂರು ಬ್ಯಾಂಕ್‌ ದಿವಾಳಿ, ಆರ್ಥಿಕ ರಕ್ತಪಾತಕ್ಕೆ ಕಾರಣವೇನು?

ಜಾಗತಿಕ ಕುಸಿತ:

ಈ ನಡುವೆ ಅಮೆರಿಕದ ಬ್ಯಾಂಕ್‌ಗಳ (American banks)ಪತನ ಜಾಗತಿಕ ಬ್ಯಾಂಕಿಂಗ್‌ ವಲಯದಲ್ಲಿ ತಲ್ಲಣ ಉಂಟು ಮಾಡಿದ್ದು, ಫ್ರಾನ್ಸ್‌ನ ಸೊಸೈಟೆ ಜನರಲೆ ಎಸ್‌ಎ ಶೇ.12, ಫ್ರಾನ್ಸ್‌ನ ಬಿಎನ್‌ಪಿ ಪರಿಬಾಸ್‌ ಶೇ.10, ಜರ್ಮನಿಯ ಡೆಶ್ಚುಯ್‌ನ ಬ್ಯಾಂಕ್‌ ಶೇ.8, ಬ್ರಿಟನ್‌ನ ಬಾಕ್ಲೇರ್ಸ್‌ ಶೇ.8ರಷ್ಟು ಕುಸಿತ ಕಂಡಿವೆ. ಜೊತೆಗೆ ಭಾರೀ ಕುಸಿತದ ಕಾರಣ ಫ್ರಾನ್ಸ್‌ನ ಎರಡು ಬ್ಯಾಂಕ್‌ಗಳ ಷೇರು ವಹಿವಾಟನ್ನೇ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.