ಶಿವಮೊಗ್ಗದ ಸಂಸದರು, ಶಾಸಕರು ಹಾಗೂ ಉದ್ಯಮ ವಲಯದ ಪ್ರಮುಖರು ಕೇಂದ್ರ ಬಜೆಟ್ 2026-27 ಅನ್ನು ಸ್ವಾಗತಿಸಿದ್ದಾರೆ. ಈ ಬಜೆಟ್ 'ವಿಕಸಿತ ಭಾರತ-2047' ಗುರಿಯನ್ನು ತಲುಪಲು ಸಹಕಾರಿಯಾಗಿದ್ದು, ಯುವಶಕ್ತಿ, ಕೃಷಿ, ಮೂಲಸೌಕರ್ಯ ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಿವಮೊಗ್ಗ: ಕೇಂದ್ರ ಬಜೆಟ್ ಕೇವಲ ಆರ್ಥಿಕ ಪತ್ರವಲ್ಲ, ಅದು 'ವಿಕಸಿತ ಭಾರತ-2047'ರ ಗುರಿ ತಲುಪುವ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಯ ಪಯಣಕ್ಕೆ ವೇಗ ನೀಡಿದ ಬಜೆಟ್ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಈ ಬಜೆಟ್‌ 1.4 ಬಿಲಿಯನ್ ಭಾರತೀಯರ ಆಶೋತ್ತರಗಳ ಪ್ರತಿಬಿಂಬ. ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದೂರದರ್ಶಿತ್ವದ, ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್ ಮಂಡಿಸಿದ್ದಾರೆ.

ಯುವಶಕ್ತಿ, ಮೂಲಸೌಕರ್ಯ ಮತ್ತು ಕೃಷಿಗೆ ಆದ್ಯತೆ ನೀಡಲಾಗಿದ್ದು, ಈ ಬಜೆಟ್‌ನಲ್ಲಿ ನಮ್ಮ ದೇಶದ ಬೆನ್ನೆಲುಬಾದ ಅನ್ನದಾತ ರೈತರಿಗೆ, ದೇಶದ ಶಕ್ತಿಯಾದ ಯುವಜನತೆಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿರುವುದು ಸ್ವಾಗತಾರ್ಹ. 17 ನಿರ್ದಿಷ್ಟ ಕ್ಯಾನ್ಸರ್ ಔಷಧಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ, ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌ಗಳ ನಿರ್ಮಾಣ, ಮುಖ್ಯವಾಗಿ ಕೇಂದ್ರ ಸರ್ಕಾರ ತೆರಿಗೆ ನಿಯಮಗಳನ್ನು ಮತ್ತಷ್ಟು ಸರಳೀಕರಣ, ಸಾರಿಗೆ ವಲಯಕ್ಕೆ 5,98,520 ಕೋಟಿ ರು, ಗ್ರಾಮೀಣಾಭಿವೃದ್ಧಿಗೆ 2,73,108 ಕೋಟಿ ರು, ಶಿಕ್ಷಣಕ್ಕೆ 1,39,289 ಕೋಟಿ ರು, ಆರೋಗ್ಯ ವಲಯಕ್ಕೆ 1,04,599 ಕೋಟಿ ರು., ಆಯಾ ವಲಯಗಳ ಪರಿವರ್ತನೆಗೆ ನಾಂದಿ ಹಾಡಲಿದೆ ಎಂದು ತಿಳಿಸಿದ್ದಾರೆ.

Scroll to load tweet…

ಒಟ್ಟಾರೆಯಾಗಿ, 2026-27ರ ಬಜೆಟ್ ವಿಕಸಿತ ಭಾರತದ ನಿರ್ಮಾಣದ ಸಂಕಲ್ಪವನ್ನು ಪುನರುಚ್ಚರಿಸಿದೆ. ದೇಶದ ಆರ್ಥಿಕತೆಯನ್ನು ವಿಶ್ವದ ಅಗ್ರಮಾನ್ಯ ಸ್ಥಾನಕ್ಕೆ ಏರಿಸುವ ಬದ್ಧತೆ ಜೊತೆಗೆ 1.4 ಬಿಲಿಯನ್ ಭಾರತೀಯರ ಆಶೋತ್ತರಗಳನ್ನು ಈ ಬಜೆಟ್ ಪ್ರತಿಬಿಂಬಿಸುತ್ತಿದೆ ಎಂದು ತಿಳಿಸಿದ್ದಾರೆ.

ಎಂಎಸ್‌ಎಂಇ ಕ್ಷೇತ್ರಗಳಿಗೆ ಪ್ರೋತ್ಸಾಹ: ಬಿ.ಗೋಪಿನಾಥ್

ಶಿವಮೊಗ್ಗ: ಕೇಂದ್ರ ಸರ್ಕಾರದ 2026ರ ಬಜೆಟ್‌ನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ ) ಬೆಳವಣಿಗೆಗೆ ಪೂರಕವಾದ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಕುರಿತು ಪ್ರತಿಕ್ರಿಯಿಸಿ, ಪ್ರಮುಖ ಅಂಶಗಳನ್ನು ಬಜೆಟ್‌ನಲ್ಲಿ ಪರಿಗಣಿಸಲಾಗಿದೆ. ಇದರಿಂದ ದೇಶದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಸಾರ್ವಜನಿಕ ಬಂಡವಾಳ ವೆಚ್ಚವನ್ನು 12.2 ಲಕ್ಷ ಕೋಟಿ ರು.ಗೆ ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ.

40,000 ಕೋಟಿ ರು. ವೆಚ್ಚದಲ್ಲಿ ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗ, ಖಾದಿ, ಗುಡಿ ಕೈಗಾರಿಕೆಗೆ ಒತ್ತು ನೀಡಲು ಯೋಜನೆ, ಮೆಗಾ ಟೆಕ್ಸ್ ಟೈಲ್ಸ್ ಪಾರ್ಕ್ ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದಿದ್ದಾರೆ.

ವಿಕಸಿತ ಭಾರತದ ಯಾತ್ರೆಗೆ ಚೈತನ್ಯದ ಬಜೆಟ್: ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ 2026-27 ಭಾರತದ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಸಮತೋಲನಗೊಳಿಸುವ ಜವಾಬ್ದಾರಿಯುತ ಹಾಗೂ ಭವಿಷ್ಯಮುಖಿ ಹಣಕಾಸು ದೃಷ್ಟಿಕೋನವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ತಿಳಿಸಿದ್ದಾರೆ.

ಜಿಡಿಪಿಯ ಶೇ.4.3 ರಷ್ಟು ಹಣಕಾಸು ಕೊರತೆಯನ್ನು ಗುರಿಯಾಗಿ ನಿಗದಿಪಡಿಸಿರುವುದು, ಹಣಕಾಸು ಶಿಸ್ತು ಮತ್ತು ಸಾಲದ ಸಮಗ್ರ ನಿರ್ವಹಣೆಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ರಾಜ್ಯಗಳಿಗೆ 1.4 ಲಕ್ಷ ಕೋಟಿ ರು. ತೆರಿಗೆ ಹಂಚಿಕೆ, ಒಟ್ಟು ಶುದ್ಧ ತೆರಿಗೆ ಆದಾಯವನ್ನು 28.7 ಲಕ್ಷ ಕೋಟಿ ರು. ಎಂದು ಅಂದಾಜು ಮಾಡಿರುವುದು ಹಾಗೂ ಒಟ್ಟು ಬಜೆಟ್ ಗಾತ್ರವನ್ನು 53.5 ಲಕ್ಷ ಕೋಟಿ ರು.ಗೆ ವಿಸ್ತರಿಸಿರುವುದು ಅಭಿವೃದ್ಧಿ ವೆಚ್ಚ ಮತ್ತು ಹಣಕಾಸು ಶಿಸ್ತಿನ ನಡುವೆ ಸಮತೋಲನ ಸಾಧಿಸಲು ಕೈಗೊಂಡ ಪ್ರಾಮಾಣಿಕ ಪ್ರಯತ್ನವಾಗಿದೆ.

ತೆರಿಗೆದಾರರಿಗೆ ಸಹಾನುಭೂತಿಯ ದೃಷ್ಟಿಯಿಂದ, ಐಟಿಆರ್ ತಿದ್ದುಪಡಿ ಸಲ್ಲಿಕೆ ಅವಧಿಯನ್ನು ಡಿ. 31ರಿಂದ ಮಾರ್ಚ್ 31ರವರೆಗೆ ವಿಸ್ತರಿಸಿ ಅಲ್ಪ ಶುಲ್ಕದೊಂದಿಗೆ ಅವಕಾಶ ನೀಡಿರುವುದು ನಿಜವಾದ taxpayer-friendly ಕ್ರಮವಾಗಿದೆ ಎಂದಿದ್ದಾರೆ.

ವಿಕಸಿತ ಭಾರತಕ್ಕೆ ಭದ್ರ ಬುನಾದಿ ಈ ಬಜೆಟ್: ಡಿ.ಎಸ್. ಅರುಣ್

ಶಿವಮೊಗ್ಗ: ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಮಂಡಿಸಿರುವ 2026ರ ಕೇಂದ್ರ ಬಜೆಟ್ ದೇಶದ ಭವಿಷ್ಯಕ್ಕೆ ದಿಕ್ಕು ತೋರಿಸುವ, ಅಭಿವೃದ್ಧಿಯ ಸ್ಪಷ್ಟ ದೃಷ್ಟಿಪತ್ರವಾಗಿದೆ ಎಂದು ವಿಪ ಸದಸ್ಯ ಡಿ.ಎಸ್.ಅರುಣ್ ತಿಳಿಸಿದ್ದಾರೆ.

ಗ್ರಾಪಂಗಳಿಗೆ ಅನುದಾನ ನೀಡದೇ ಗ್ರಾಮೀಣ ಬದುಕನ್ನು ಅಸ್ತವ್ಯಸ್ತಗೊಳಿಸಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರದ ಗ್ರಾಮ ಸ್ವರಾಜ್ ದೃಷ್ಟಿಕೋನವೇ ಪಾಠವಾಗಿದೆ. ಹಳ್ಳಿಯ ಕುಶಲಕರ್ಮಿಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು, ರೈತರಿಗೆ ಡ್ರೋನ್ ತಂತ್ರಜ್ಞಾನ ಮತ್ತು ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವುದು ಮಹಾತ್ಮ ಗಾಂಧೀಜಿಯವರ ನಿಜವಾದ ಗ್ರಾಮ ಸ್ವರಾಜ್ಯದ ಕನಸನ್ನು ಮೋದಿಜಿ ಸರ್ಕಾರ ಸಾಕಾರಗೊಳಿಸುತ್ತಿರುವುದಕ್ಕೆ ಉದಾಹರಣೆಗಳಾಗಿವೆ. ಇದು ಕೇವಲ ಬಜೆಟ್ ಅಲ್ಲ, ಭಾರತೀಯರ ಬದುಕನ್ನು ಬದಲಿಸುವ ವಿಕಸಿತ ಭಾರತದ ಸಂಕಲ್ಪ ಪತ್ರವಾಗಿದೆ ಎಂದು ತಿಳಿಸಿದ್ದಾರೆ

ಸಮತೋಲನ, ಭವಿಷ್ಯ ನಿರೀಕ್ಷಿತ ಬಜೆಟ್: ಕೆ.ಎನ್‌.ಜಯಕುಮಾರ

ಶಿವಮೊಗ್ಗ: ಕೇಂದ್ರ ಸರ್ಕಾರ ಮಂಡಿಸಿರುವ 2026-27ರ ಬಜೆಟ್‌ ವಿಕಸಿತ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುವ, ಸಮತೋಲನ ಮತ್ತು ಭವಿಷ್ಯ ನಿರೀಕ್ಷಿತ ಬಜೆಟ್ ಆಗಿದೆ. ಆರ್ಥಿಕ ಬೆಳವಣಿಗೆ, ಹಣಕಾಸು ಶಿಸ್ತು ಮತ್ತು ಜನಕೇಂದ್ರಿತ ಅಭಿವೃದ್ಧಿಗೆ ಈ ಬಜೆಟ್ ಸ್ಪಷ್ಟ ಆದ್ಯತೆ ನೀಡಿದೆ ಎಂದು ಶ್ರೀಮ್ ಫೈನಾನ್ಸಿಯಲ್ ಸರ್ವೀಸಸ್ ವ್ಯವಸ್ಥಾಪಕ ಪಾಲುದಾರ ಕೆ.ಎನ್‌.ಜಯಕುಮಾರ ತಿಳಿಸಿದ್ದಾರೆ. ಉತ್ಪಾದನಾ ವಲಯ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾರ್ವಜನಿಕ ಹೂಡಿಕೆಗಳಿಗೆ ನೀಡಿರುವ ಬಲವು ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತದೆ. ತೆರಿಗೆ ಸರಳೀಕರಣ, ವ್ಯಾಪಾರ ಸ್ನೇಹಿ ಸುಧಾರಣೆಗಳು ಮತ್ತು ನಂಬಿಕೆ ಆಧಾರಿತ ಆಡಳಿತವು ಉದ್ಯಮಿಗಳು ಹಾಗೂ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸುತ್ತದೆ. ರೈತರ ಆದಾಯ ವೃದ್ಧಿ, ಗ್ರಾಮೀಣ ಅಭಿವೃದ್ಧಿ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದ ಮೂಲಕ ಈ ಬಜೆಟ್ ಸಮಗ್ರ ಹಾಗೂ ಸ್ಥಿರ ಭಾರತದ ನಿರ್ಮಾಣಕ್ಕೆ ದಿಟ್ಟ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

----ಬಹುನಿರೀಕ್ಷಿತ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಮತ್ತು ಹೈವೇಗೆ ಒತ್ತು ನೀಡಿರುವುದು, ಕ್ಯಾನ್ಸರ್ -ಶುಗರ್ ಔಷಧಿ ಬೆಲೆ ಇಳಿಕೆ, ತೆಂಗು ಬೆಳೆಗಾರರಿಗೆ ಉತ್ತೇಜನೆ, ಪಶು ಪಾಲನೆ ಮತ್ತು ಮೀನುಗಾರಿಕೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ.

-ಕೆ.ಆರ್. ರಾಜು, ಆಚಾಪುರ ಕೃಷಿ ಪತ್ತಿನ ಸಹಕಾರ ಸಂಘ, ಸಾಗರ.