Union Budget 2024: ಪಿಎಂ ಕಿಸಾನ್ ಯೋಜನೆ ಸಹಾಯಧನ 9,000ರೂಪಾಯಿಗೆ ಏರಿಕೆ ಸಾಧ್ಯತೆ,ರೈತರಲ್ಲಿ ಹೆಚ್ಚಿದ ನಿರೀಕ್ಷೆ
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಹಾಯಧನ ಮೊತ್ತವನ್ನು ಈ ಬಾರಿಯ ಬಜೆಟ್ ನಲ್ಲಿ 6000ರೂ.ನಿಂದ 9,000ರೂ.ಗೆ ಹೆಚ್ಚಳ ಮಾಡುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ನವದೆಹಲಿ (ಜ.30): ಕೇಂದ್ರ ಸರ್ಕಾರದ 2024ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಲಿದ್ದಾರೆ. ಈಗಾಗಲೇ ಬಜೆಟ್ ಕುರಿತು ಸಾರ್ವಜನಿಕ ವಲಯದಲ್ಲಿ ನಿರೀಕ್ಷೆಗಳು ಹೆಚ್ಚಿವೆ. ಏಪ್ರಿಲ್, ಮೇನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿರುವ ಕಾರಣ ಈ ಬಾರಿಯ ಬಜೆಟ್ ಪೂರ್ಣ ಪ್ರಮಾಣದಲ್ಲಿರೋದಿಲ್ಲ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಮಹತ್ವದ ಘೋಷಣೆಗಳೇನೂ ಆಗುವ ಸಾಧ್ಯತೆಗಳಿಲ್ಲ. ಆದರೂ ಬಜೆಟ್ ಕುರಿತು ಒಂದಷ್ಟು ನಿರೀಕ್ಷೆಗಳು ಇದ್ದೇಇವೆ. ಅದರಲ್ಲೂ ರೈತರು ಈ ಬಾರಿಯ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯ ಸಹಾಯಧನದ ಮೊತ್ತವನ್ನು 6000ರೂ.ನಿಂದ 9,000ರೂ.ಗೆ ಹೆಚ್ಚಳ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಅಂದರೆ ಪಿಎಂ ಕಿಸಾನ್ ಯೋಜನೆ ಸಹಾಯಧನದ ಮೊತ್ತದಲ್ಲಿ ಶೇ.50ರಷ್ಟು ಹೆಚ್ಚಳವಾಗುವ ನಿರೀಕ್ಷೆಯಲ್ಲಿದ್ದಾರೆ.
ಕೆಲವು ತಜ್ಞರ ಪ್ರಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಹಾಯಧನ ಮೊತ್ತದಲ್ಲಿ 8,000ರೂ.ನಿಂದ 10,000ರೂ. ತನಕ ಏರಿಕೆಯಾಗಲಿದೆ. ಇನ್ನೂ ಕೆಲವರ ಪ್ರಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಹಾಯಧನ 9,000ರೂ.ಗೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಹೀಗಾಗಿ ರೈತರಲ್ಲಿ ಈ ಬಾರಿಯ ಬಜೆಟ್ ಕುರಿತು ಹೆಚ್ಚಿನ ನಿರೀಕ್ಷೆ ಗರಿಗೆದರಿದೆ.
ಪಿಎಂ ಕಿಸಾನ್ ಯೋಜನೆಯ 15ನೇ ಕಂತನ್ನು 2023ರ ನವೆಂಬರ್ ತಿಂಗಳಲ್ಲಿ ರೈತರಿಗೆ ವಿತರಿಸಲಾಗಿದೆ. 15ನೇ ಕಂತಿನಲ್ಲಿ 18,000 ಕೋಟಿ ರೂ. ಮೊತ್ತದ ಹಣವನ್ನು ರೈತರಿಗೆ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. 15ನೇ ಕಂತಿನಲ್ಲಿ 8 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಜಮೆ ಮಾಡಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯಲು ಇ-ಕೆವೈಸಿ ಕಡ್ಡಾಯ; ಈ ಪ್ರಕ್ರಿಯೆ ಪೂರ್ಣಗೊಳಿಸದ ರೈತರಿಗಿಲ್ಲ ಹಣ
ಏನಿದು ಪಿಎಂ ಕಿಸಾನ್ ಯೋಜನೆ?
ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಲು ಇದನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. 2019ರ ಫೆಬ್ರವರಿ 24ರಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ 11 ಕೋಟಿ ರೈತರಿಗೆ ಒಟ್ಟು 2.59 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ನೀಡಲಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಈ ಯೋಜನೆ ಪ್ರಾರಂಭಿಸಿತು.
ಈ ಯೋಜನೆಗೆ ಯಾರು ಅರ್ಹರು?
ಭೂಮಿಯನ್ನು ಹೊಂದಿರುವ ಎಲ್ಲ ರೈತರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ಅರ್ಹತೆ ಹೊಂದಿದ್ದಾರೆ.
ಇ-ಕೆವೈಸಿ ಕಡ್ಡಾಯ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯಲು ಇ-ಕೆವೈಸಿ ಹಾಗೂ ಭೌತಿಕ ದೃಢೀಕರಣವನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ತನಕ ಇ-ಕೆವೈಸಿ ಹಾಗೂ ಭೌತಿಕ ದೃಢೀಕರಣ ಪೂರ್ಣಗೊಳಿಸದ ಫಲಾನುಭವಿಗಳ ಸಹಾಯಧನ ಪಾವತಿಯನ್ನು ತಡೆಹಿಡಿಯೋದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಎಂ ಕಿಸಾನ್, ಶ್ರಮಯೋಗಿ ಮಾನಧನ್.. 2019ರ ಮಧ್ಯಂತರ ಬಜೆಟ್‌ನಲ್ಲಿ ಘೋಷಣೆ ಆಗಿತ್ತು ಈ ಯೋಜನೆಗಳು!
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಸೇರ್ಪಡೆಗೊಳ್ಳೋದು ಹೇಗೆ?
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ www.pmkisan.gov.in. ಭೇಟಿ ನೀಡಿ.
-ಮುಖಪುಟದಲ್ಲಿ ಕಾಣಿಸೋ 'Farmers Corner'ಎಂಬ ಆಯ್ಕೆ ಮೇಲೆ ಕ್ಲಿಕಿಸಿ.
-ಈಗ 'New Farmer Registration'ಮೇಲೆ ಕ್ಲಿಕ್ ಮಾಡಿ.
-ಈಗ ನೋಂದಣಿ ಅರ್ಜಿ ತೆರೆದುಕೊಳ್ಳುತ್ತದೆ. ಇದ್ರಲ್ಲಿ ಕೇಳಿರೋ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
-ಬಳಿಕ submit ಆಯ್ಕೆ ಮೇಲೆ ಕ್ಲಿಕ್ ಮಾಡಿ.