ಪಿಎಂ ಕಿಸಾನ್, ಶ್ರಮಯೋಗಿ ಮಾನಧನ್.. 2019ರ ಮಧ್ಯಂತರ ಬಜೆಟ್‌ನಲ್ಲಿ ಘೋಷಣೆ ಆಗಿತ್ತು ಈ ಯೋಜನೆಗಳು!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 1 ಫೆಬ್ರವರಿ 2024 ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ವರ್ಷ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಮತ್ತು 2024-25 ರ ಹಣಕಾಸು ವರ್ಷದ ಪೂರ್ಣ ಬಜೆಟ್ ಅನ್ನು ಹೊಸ ಸರ್ಕಾರ ರಚನೆಯ ನಂತರ ಮಂಡಿಸಲಾಗುತ್ತದೆ.
ನವದೆಹಲಿ (ಜ.27): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 1 ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ನಂತರ ಪೂರ್ಣ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಪ್ರಧಾನಿ ಮೋದಿ ಅವರ ಅಧಿಕಾರವಧಿಯಲ್ಲಿ 2019ರಲ್ಲಿ ಮಧ್ಯಂತರ ಬಜೆಟ್‌ಅನ್ನು ಮಂಡಿಸಲಾಗಿತ್ತು. ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅನಾರೋಗ್ಯದ ಕಾರಣ ಹಣಕಾಸು ಸಚಿವಾಲಯದ ಹೆಚ್ಚುವರಿ ಉಸ್ತುವಾರಿ ವಹಿಸಿದ್ದ ಪಿಯೂಷ್ ಗೋಯಲ್ ಅವರು ಬಜೆಟ್‌ಅನ್ನು ಮಂಡಿಸಿದ್ದರು. ಆ ಮಧ್ಯಂತರ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿತ್ತು. ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಪ್ರಮುಖ ನೀತಿ ಬದಲಾವಣೆ ಮಾಡಲಾಗೋದಿಲ್ಲ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ, ಆದರೆ 2019ರ ಫೆಬ್ರವರಿ 1 ರಂದು ಪಿಯೂಷ್ ಗೋಯಲ್ ಅವರು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಅನೇಕ ಪ್ರಮುಖ ಘೋಷಣೆಗಳನ್ನು ಮಾಡಲಾಗಿತ್ತು. ಸಂಬಳ ಪಡೆಯುವ ತೆರಿಗೆದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 10,000 ರೂ.ನಿಂದ 40,000 ರೂ.ನಿಂದ 50,000 ರೂ.ಗೆ ಹೆಚ್ಚಿಸುವ ಯೋಜನೆ ಪ್ರಕಟಿಸಲಾಗಿತ್ತು.
ಪಿಎಂ ಕಿಸಾನ್ ಯೋಜನೆ ಆರಂಭ: ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸುವುದರ ಜೊತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯನ್ನು ರೈತರಿಗೆ ಉಡುಗೊರೆಯಾಗಿ ಘೋಷಿಸಲಾಗಿತ್ತು.. ಇದರ ಅಡಿಯಲ್ಲಿ 2 ಹೆಕ್ಟೇರ್ ವರೆಗೆ ಕೃಷಿ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6,000 ರೂಪಾಯಿ ನೀಡುವ ಯೋಜನೆ ಇದಾಗಿತ್ತು. ಇದರ ಅಡಿಯಲ್ಲಿ 12 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಾಗಿತ್ತು. ಅದಲ್ಲದೆ, ರಾಷ್ಟ್ರೀಯ ಗೋಕುಲ್ ಮಿಷನ್‌ಗೆ 750 ಕೋಟಿ ರೂಪಾಯಿ ಘೋಷಿಸಲಾಗಿತ್ತು.
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹೊರತಾಗಿ ಮೀನುಗಾರಿಕೆ ಅಭಿವೃದ್ಧಿಗೆ ಒತ್ತು ನೀಡಿ ಪ್ರತ್ಯೇಕ ಮೀನುಗಾರಿಕೆ ಇಲಾಖೆ ರಚಿಸಲು ಸರ್ಕಾರ ನಿರ್ಧರಿಸಿತ್ತು. ಸರ್ಕಾರದ ಈ ಉಪಕ್ರಮದಿಂದ, ಈ ವಲಯವನ್ನು ಅವಲಂಬಿಸಿರುವ ಸುಮಾರು 1.45 ಕೋಟಿ ಜನರ ಜೀವನೋಪಾಯವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಅಂದಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದ ಪಶುಸಂಗೋಪನೆ ಮತ್ತು ಮೀನು ಸಾಕಾಣಿಕೆಯಲ್ಲಿ ತೊಡಗಿರುವ ರೈತರಿಗೆ ಶೇಕಡಾ 2 ರಷ್ಟು ಬಡ್ಡಿ ರಿಯಾಯಿತಿ ಘೋಷಿಸಿದ್ದರು. ಇದರೊಂದಿಗೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನಧನ್ ಯೋಜನೆಯನ್ನು ಪ್ರಾರಂಭಿಸಲಾಯಿತು, ಇದರಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ 3,000 ರೂ ಪಿಂಚಣಿ ನೀಡುವ ಘೋಷಣೆ ಮಾಡಲಾಗಿತ್ತು.
ಇತರ ಪ್ರಮುಖ ನಿರ್ಧಾರಗಳ ಕುರಿತು ಮಾತನಾಡುವುದಾದರೆ, 2019 ರ ಮಧ್ಯಂತರ ಬಜೆಟ್‌ನಲ್ಲಿ, ದೇಶದಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣೆಗಾಗಿ ಭಾರತೀಯ ರೈಲ್ವೆಗೆ 1.58 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಅಸಂಘಟಿತ ವಲಯದ ಕಾರ್ಮಿಕರಿಗೆ ಹೊಸ ಸಾಮಾಜಿಕ ಭದ್ರತಾ ವ್ಯಾಪ್ತಿ ಯೋಜನೆಯನ್ನು ಘೋಷಿಸಲಾಯಿತು. ರಕ್ಷಣಾ ಬಜೆಟ್ ಅನ್ನು 3 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಚಲನಚಿತ್ರಗಳ ಚಿತ್ರೀಕರಣವನ್ನು ಸುಲಭಗೊಳಿಸಲು, ನಿರ್ದೇಶಕರಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸೌಲಭ್ಯವನ್ನು ಸಹ ನೀಡಲಾಯಿತು.
ಪಿಯೂಷ್ ಗೋಯಲ್ ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ 5 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವ ವೈಯಕ್ತಿಕ ತೆರಿಗೆದಾರರಿಗೆ ಯಾವುದೇ ಆದಾಯ ತೆರಿಗೆ ಇಲ್ಲ ಎಂದು ಘೋಷಿಸಿದರು, ಆದಾಯ ತೆರಿಗೆ ರಿಟರ್ನ್ಸ್ ಅನ್ನು 24 ಗಂಟೆಗಳ ಒಳಗೆ ಪ್ರಕ್ರಿಯೆಗೊಳಿಸಲಾಗುವುದು ಎನ್ನಲಾಗಿತ್ತು. ಇದಲ್ಲದೇ ಬಡವರಿಗೆ ಶೇ.10ರಷ್ಟು ಮೀಸಲಾತಿಯನ್ನು ಪೂರೈಸಲು ಶಿಕ್ಷಣ ಸಂಸ್ಥೆಗಳಲ್ಲಿ ಶೇ.25ರಷ್ಟು ಹೆಚ್ಚುವರಿ ಸೀಟುಗಳನ್ನು ನೀಡುವುದಾಗಿ ಘೋಷಿಸಲಾಗಿತ್ತು.
Union Budget 2024: ಬಜೆಟ್ ಮಂಡನೆ ದಿನಾಂಕವನ್ನು ಫೆ.28ರಿಂದ ಫೆ.1ಕ್ಕೆ ಬದಲಾಯಿಸಿದ್ದು ಏಕೆ ಗೊತ್ತಾ?
ಭಾರೀ ನಿರೀಕ್ಷೆ ಬೇಡ ಎಂದ ನಿರ್ಮಲಾ ಸೀತಾರಾಮನ್: 2024 ರಲ್ಲಿ ಈ ವರ್ಷ ಮಂಡಿಸಲಿರುವ ಮಧ್ಯಂತರ ಬಜೆಟ್ ಬಗ್ಗೆ ಸಾಕಷ್ಟು ಕುತೂಹಲಗಳಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಮಂಡಿಸಲಾಗುವ 2024-25 ರ ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಅದ್ಭುತ ಘೋಷಣೆಯನ್ನು ನಾಗರಿಕರು ನಿರೀಕ್ಷಿಸಬಾರದು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. 2024-25ರ ಹಣಕಾಸು ವರ್ಷದ ಪೂರ್ಣ ಬಜೆಟ್ ಅನ್ನು ಹೊಸ ಆಡಳಿತ ರಚನೆಯ ನಂತರ ಮಂಡಿಸಲಾಗುತ್ತದೆ ಎಂದಿದ್ದಾರೆ.
ಸತತ 6 ಬಾರಿ ಕೇಂದ್ರ ಬಜೆಟ್ ಮಂಡಿಸಿ 2ನೇ ಸಚಿವೆಯಾಗಲಿರೋ ನಿರ್ಮಲಾ ಸೀತಾರಾಮನ್: ಈ ಸಾಧನೆ ಮಾಡಿದ ಮೊದಲ ವ್ಯಕ್ತಿ ಇವರೇ!