ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯಲು ಇ-ಕೆವೈಸಿ ಕಡ್ಡಾಯ; ಈ ಪ್ರಕ್ರಿಯೆ ಪೂರ್ಣಗೊಳಿಸದ ರೈತರಿಗಿಲ್ಲ ಹಣ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಇ-ಕೆವೈಸಿ ಕಡ್ಡಾಯಗೊಳಿಸಿದೆ. ಇ-ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳ ಸಹಾಯಧನ ತಡೆಹಿಡಿಯೋದಾಗಿ ತಿಳಿಸಿದೆ.
ನವದೆಹಲಿ (ಜ.10): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯಲು ಇ-ಕೆವೈಸಿ ಹಾಗೂ ಭೌತಿಕ ದೃಢೀಕರಣವನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ತನಕ ಇ-ಕೆವೈಸಿ ಹಾಗೂ ಭೌತಿಕ ದೃಢೀಕರಣ ಪೂರ್ಣಗೊಳಿಸದ ಫಲಾನುಭವಿಗಳ ಸಹಾಯಧನ ಪಾವತಿಯನ್ನು ತಡೆಹಿಡಿಯೋದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆಯ ಪ್ರಯೋಜನ ಪಡೆಯುತ್ತಿರುವ ಸಾಕಷ್ಟು ರೈತರು ಇನ್ನೂ ಇ-ಕೆವೈಸಿ ಪೂರ್ಣಗೊಳಿಸಿಲ್ಲ. ಕೃಷಿ ಇಲಾಖೆ ನಿರಂತರವಾಗಿ ಮನವಿ ಮಾಡಿದರೂ ರೈತರು ಇ-ಕೆವೈಸಿ ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಕೃಷಿ ಇಲಾಖೆ ವಿವಿಧ ಪಂಚಾಯತ್ ಮಟ್ಟದಲ್ಲಿ ಇ-ಕೆವೈಸಿ ಹಾಗೂ ಭೌತಿಕ ದೃಢೀಕರಣ ಶಿಬಿರಗಳನ್ನು ಆಯೋಜಿಸಿದೆ ಕೂಡ. ಈ ಯೋಜನೆಯಡಿಯಲ್ಲಿ ಅರ್ಹ ರೈತರು ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ನಂತೆ ವಾರ್ಷಿಕ ಒಟ್ಟು 6000 ರೂ.ಪಡೆಯುತ್ತಾರೆ.
ಕೇಂದ್ರ ಸರ್ಕಾರವು ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ 2019ರಲ್ಲಿ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು.
ರೈತರಿಗೆ ಗುಡ್ ನ್ಯೂಸ್;ಪಿಎಂ ಕಿಸಾನ್ ಯೋಜನೆ ಮೊತ್ತ 6,000 ರೂ.ನಿಂದ 8,000ರೂ.ಗೆ ಏರಿಕೆ ಸಾಧ್ಯತೆ
ಏನಿದು ಪಿಎಂ ಕಿಸಾನ್ ಯೋಜನೆ?
ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಲು ಇದನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. 2019ರ ಫೆಬ್ರವರಿ 24ರಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ 11 ಕೋಟಿ ರೈತರಿಗೆ ಒಟ್ಟು 2.59 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ನೀಡಲಾಗಿದೆ.
ಈ ಯೋಜನೆಗೆ ಯಾರು ಅರ್ಹರು?
ಭೂಮಿಯನ್ನು ಹೊಂದಿರುವ ಎಲ್ಲ ರೈತರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ಅರ್ಹತೆ ಹೊಂದಿದ್ದಾರೆ.
ಇ-ಕೆವೈಸಿ ಮಾಡಿಸೋದು ಹೇಗೆ?
ಇ-ಕೆವೈಸಿಯನ್ನು https://pmkisan.gov.in ವೆಬ್‍ಸೈಟ್ ಮುಖಾಂತರ ಅಥವಾ ಪಿ.ಎಂ.ಕಿಸಾನ್ ಮೊಬೈಲ್ ಆ್ಯಪ್ ಮುಖಾಂತರ ಫಲಾನುಭವಿಗಳು ತಾವೇ ಮಾಡಿಕೊಳ್ಳಬಹುದು.ಇ-ಕೆವೈಸಿಯನ್ನು ಓಟಿಪಿ ಮುಖಾಂತರ ಆಧಾರ ಸಂಖ್ಯೆಯೊಂದಿಗೆ ಮೊಬೈಲ್ ನಂಬರ್ ಜೋಡಣೆಯಾದ ಫಲಾನುಭವಿಗಳು https://pmkisan.gov.in ವೆಬ್‍ಸೈಟ್‍ನ ಇ-ಕೆವೈಸಿ ಲಿಂಕ್ ಮೇಲೆ ಕ್ಲಿಕ್ಕಿಸಿ ಆಧಾರ ನಂಬರ್ (ಹಾಗೂ ಕ್ಯಾಪಚಾ ನಮೂದಿಸಿ ತದನಂತರ) ಇರುವ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ದಾಖಲಿಸಿ ಉಚಿತವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು. ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ರೆ ಮಾತ್ರ ಸ್ಮಾರ್ಟ್ ಫೋನ್ ನಲ್ಲಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಉಯ. ಏಕೆಂದರೆ ಒಟಿಪಿಯನ್ನು ಆಧಾರ್ ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಇನ್ನು ಆಸಕ್ತ ರೈತರು ಕೃಷಿ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಕೂಡ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಸಹಾಯಧನ ಹೆಚ್ಚಳ ಸಾಧ್ಯತೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆ ಅಡಿಯಲ್ಲಿ ರೈತರಿಗೆ ನೀಡುತ್ತಿರುವ ಸಹಾಯಧನದ ಮೊತ್ತವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದರ ಅನ್ವಯ ರೈತರಿಗೆ ನೀಡಲಾಗುತ್ತಿರುವ ಸಹಾಯಧನದ ಮೊತ್ತ ವಾರ್ಷಿಕ 6,000 ರೂ.ನಿಂದ 8,000ರೂ.ಗೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ: ಇ-ಕೆವೈಸಿ ಕಡ್ಡಾಯ; ರಂಗನಾಥ್.ಆರ್
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಸೇರ್ಪಡೆಗೊಳ್ಳೋದು ಹೇಗೆ?
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ www.pmkisan.gov.in. ಭೇಟಿ ನೀಡಿ.
-ಮುಖಪುಟದಲ್ಲಿ ಕಾಣಿಸೋ 'Farmers Corner'ಎಂಬ ಆಯ್ಕೆ ಮೇಲೆ ಕ್ಲಿಕಿಸಿ.
-ಈಗ 'New Farmer Registration'ಮೇಲೆ ಕ್ಲಿಕ್ ಮಾಡಿ.
-ಈಗ ನೋಂದಣಿ ಅರ್ಜಿ ತೆರೆದುಕೊಳ್ಳುತ್ತದೆ. ಇದ್ರಲ್ಲಿ ಕೇಳಿರೋ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
-ಬಳಿಕ submit ಆಯ್ಕೆ ಮೇಲೆ ಕ್ಲಿಕ್ ಮಾಡಿ.