Union Budget 2023: ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು; ಕೌಶಲಾಭಿವೃದ್ಧಿಗೆ ಡಿಜಿಟಲ್ ವೇದಿಕೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಮೋದಿ ಸರ್ಕಾರ ಈ ಹಿಂದಿನಿಂದಲೂ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿದೆ. ಅದರಂತೆ ಈ ಬಾರಿಯ ಬಜೆಟ್ ನಲ್ಲಿ ಕೂಡ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ನವದೆಹಲಿ (ಫೆ.1): 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ.1) ಮಂಡಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಹಿಂದಿನಂತೆ ಈ ಬಾರಿ ಕೂಡ ಡಿಜಿಟಲ್ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಮಹತ್ವ ನೀಡಿದೆ. ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಹಣಕಾಸು ಕ್ಷೇತ್ರಗಳಲ್ಲಿ ಡಿಜಿಟಲ್ ಕ್ರಾಂತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಗೆ ಕೇಂದ್ರ ಸರ್ಕಾರ ಈ ಹಿಂದಿನಂತೆ 2023-24ನೇ ಸಾಲಿನಲ್ಲಿ ಕೂಡ ಪ್ರೋತ್ಸಾಹ ನೀಡಲಿದೆ ಎಂದು ವಿತ್ತ ಸಚಿವರು ಬಜೆಟ್ ಮಂಡನೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಆರ್ ಬಿಐ ಈಗಾಗಲೇ ದೇಶದಲ್ಲಿ ಡಿಜಿಟಲ್ ಕರೆನ್ಸಿ ಪರಿಚಯಿಸಿದ್ದು, ಆ ಬಗ್ಗೆ ಕೂಡ ಬಜೆಟ್ ನಲ್ಲಿ ಸಚಿವೆ ಪ್ರಸ್ತಾವನೆ ಮಾಡಿದ್ದಾರೆ. ಇನ್ನು ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.30 ತೆರಿಗೆ ವಿಧಿಸೋದಾಗಿ ಕೂಡ ಬಜೆಟ್ ನಲ್ಲಿ ಘೋಷಿಸಲಾಗಿದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಡಿಜಿಟಲ್ ತಂತ್ರಜ್ಞಾನದ ಬಳಕೆ ಕೂಡ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ಹಾಗೆಯೇ ಅಪ್ಲಿಕೇಷನ್ (ಆಪ್) ಅಭಿವೃದ್ಧಿಗೆ ಕೂಡ ಒತ್ತು ನೀಡಲಾಗಿದೆ.
ಕೌಶಲ ಭಾರತ ಡಿಜಿಟಲ್ ವೇದಿಕೆ
ದೇಶದ ಜನರ ಕೌಶಲಾಭಿವೃದ್ಧಿಗೆ ಏಕೀಕೃತ ಕೌಶಲ ಭಾರತ ಡಿಜಿಟಲ್ ವೇದಿಕೆ (unified Skill India Digital platform) ಪ್ರಾರಂಭಿಸಲಾಗಿದೆ. ಇದರ ಮೂಲಕ ಬೇಡಿಕೆಗೆ ಅನುಗುಣವಾಗಿ ಕೌಶಲವನ್ನು ಅಭಿವೃದ್ಧಿಪಡಿಸಲಾಗುವುದು. ಹಾಗೆಯೇ ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಿಗಳು ಸೇರಿದಂತೆ ಉದ್ಯೋಗದಾತರ ಜೊತೆಗೆ ತರಬೇತಿ ಹೊಂದಿದ ಅಭ್ಯರ್ಥಿಗಳನ್ನು ಸಂಪರ್ಕಿಸಲಾಗುವುದು. ಹಾಗೆಯೇ ಉದ್ಯಮ ಸ್ಥಾಪನೆಗೆ ನೆರವು ನೀಡುವ ಯೋಜನೆಗಳ ಲಾಭ ಈ ಅಭ್ಯರ್ಥಿಗಳಿಗೆ ದೊರಕುವಂತೆ ಮಾಡಲಾಗುವುದು.
ಬಜೆಟ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಡೀಜಿಲಾಕರ್ ಮೇಲ್ದರ್ಜೆಗೆ
ಡೀಜಿಲಾಕರ್ ಸೌಲಭ್ಯವನ್ನು ಮೇಲ್ದರ್ಜೆಗೇರಿಸಲಾಗಿದೆ. ಈಗ ಡೀಜಿಲಾಕರ್ ಹೆಚ್ಚಿನ ದಾಖಲೆಗಳನ್ನು ಸ್ಟೋರ್ ಮಾಡಲಿದೆ. ಅಗತ್ಯ ಬಿದ್ದಾಗ ಬಳಕೆದಾರರು ಡೀಜಿಲಾಕರ್ ಮೂಲಕ ದಾಖಲೆಗಳನ್ನು ಸಂಗ್ರಹಿಸಬಹುದು ಹಾಗೂ ಹಂಚಿಕೊಳ್ಳಬಹುದು.
ಡಿಜಿಟಲ್ ಪಾವತಿಗೆ ಉತ್ತೇಜನ
ಈ ಹಿಂದಿನಂತೆ ಮುಂದಿನ ಆರ್ಥಿಕ ಸಾಲಿನಲ್ಲಿ ಕೂಡ ಡಿಜಿಟಲ್ ಪಾವತಿಗೆ ಸರ್ಕಾರ ಉತ್ತೇಜನ ನೀಡಲಿದೆ. 2022ನೇ ಸಾಲಿನಲ್ಲಿ ಡಿಜಿಟಲ್ ವಹಿವಾಟಿನಲ್ಲಿ ಶೇ.76 ಹೆಚ್ಚಳವಾಗಿತ್ತು. ಹಾಗೆಯೇ ವಹಿವಾಟಿನ ಮೌಲ್ಯದಲ್ಲಿ ಶೇ.91 ಏರಿಕೆ ಕಂಡುಬಂದಿತ್ತು. ಈ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ 2023-24ನೇ ಆರ್ಥಿಕ ಸಾಲಿನಲ್ಲಿ ಕೂಡ ಆರ್ಥಿಕ ಬೆಂಬಲವನ್ನು ಸರ್ಕಾರ ಮುಂದುವರಿಸಲಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.
ಆಪ್ ಗಳ ಅಭಿವೃದ್ಧಿಗೆ ಪ್ರಯೋಗಾಲಯ
5G ಸೇವೆಗಳನ್ನು ಬಳಸಿ ಅಪ್ಲಿಕೇಷನ್ ಗಳನ್ನು (ಆಪ್) ಅಭಿವೃದ್ಧಿಪಡಿಸಲು 100 ಪ್ರಯೋಗಾಲಯಗಳನ್ನು (labs) ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಸ್ಥಾಪಿಸೋದಾಗಿ ವಿತ್ತ ಸಚಿವರು ಘೋಷಿಸಿದ್ದಾರೆ. ಹೊಸ ಅವಕಾಶಗಳ ಬಗ್ಗೆ ರಿಯಲು, ಉದ್ಯಮ ಮಾದರಿಗಳು ಹಾಗೂ ಉದ್ಯೋಗಾವಕಾಶಗಳು, ಸ್ಮಾರ್ಟ್ ಕ್ಲಾಸ್ ರೂಮ್ ಗಳು, ಕೃಷಿ, ಸಾರಿಗೆ ಹಾಗೂ ಆರೋಗ್ಯ ಸೇವೆಗಳಿಗೆ ಸಂಬಂಧಿಸಿ ಆಪ್ ಗಳ ಅಭಿವೃದ್ಧಿಗೆ ಈ ಪ್ರಯೋಗಾಲಯ ಉತ್ತೇಜನ ನೀಡಲಿದೆ.
ಕೃಷಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ
ಕೃಷಿಗೆ ಸಂಬಂಧಿಸಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ನಿರ್ಮಿಸಲಾಗುವುದು. ಇದು ಮುಕ್ತ ಮೂಲ, ಮಾನದಂಡ ಹೊಂದಿದ್ದು, ಸಾರ್ವಜನಿಕರ ಒಳಿತಿಗೆ ಕಾರ್ಯನಿರ್ವಹಿಸಲಿದೆ. ಇದು ರೈತರನ್ನು ಒಳಗೊಂಡ, ರೈತ ಕೇಂದ್ರೀಕೃತ ಪರಿಹಾರಗಳಿಗೆ ಒತ್ತು ನೀಡಲಿದೆ. ಬೆಳೆ ಪ್ಲಾನಿಂಗ್ ಹಾಗೂ ಆರೋಗ್ಯ, ಕೃಷಿ ಉತ್ಪಾದನೆ ಲಭ್ಯತೆ, ಕ್ರೆಡಿಟ್ ಹಾಗೂ ವಿಮೆ, ಬೆಳೆ ಅಂದಾಜಿಗೆ ನೆರವು, ಮಾರುಕಟ್ಟೆ ಮಾಹಿತಿ ಹಾಗೂ ಕೃಷಿ ತಂತ್ರಜ್ಞಾನ ಕೈಗಾರಿಕೆಗಳು ಹಾಗೂ ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಬೆಂಬಲ ನೀಡಲಿದೆ.
ಫಿನ್ ಟೆಕ್ ಸೇವೆಗಳು
ಆಧಾರ್, ಪಿಎಂ ಜನ್ ಧನ್ ಯೋಜನೆ, ವಿಡಿಯೋ ಕೆವೈಸಿ, ಇಂಡಿಯಾ ಸ್ಟಾಕ್ ಹಾಗೂ ಯುಪಿಐ ಒಳಗೊಂಡ ಡಿಜಿಟಲ್ ಪಬ್ಲಿಕ್ ಮೂಲಸೌಕರ್ಯದ ಮೂಲಕ ಭಾರತದಲ್ಲಿ ಫಿನ್ ಟೆಕ್ ಸೇವೆಗಳಿಗೆ ಉತ್ತೇಜನ ನೀಡಲಾಗುವುದು.
Budget 2023: ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!
ಸಂಸ್ಥೆ ಡೀಜಿಲಾಕರ್
ಸಂಸ್ಥೆ ಡೀಜಿಲಾಕರ್ (Entity DigiLocker) ಸೌಲಭ್ಯವನ್ನು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ದೊಡ್ಡ ಉದ್ಯಮಗಳು ಹಾಗೂ ಚಾರಿಟೇಬಲ್ ಟ್ರಸ್ಟ್ ಗಳ ಬಳಕೆಗೆ ಸ್ಥಾಪಿಸಲಾಗುವುದು. ಇದರಿಂದ ಆನ್ ಲೈನ್ ಮೂಲಕ ಅಗತ್ಯ ಬಿದ್ದಾಗ ಸುರಕ್ಷಿತವಾಗಿ ದಾಖಲೆಗಳನ್ನು ಸಂಗ್ರಹಿಸಲು ಹಾಗೂ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಕೆವೈಸಿ ಪ್ರಕ್ರಿಯೆ ಸರಳ
ರಾಷ್ಟ್ರೀಯ ಡೇಟಾ ನಿರ್ವಹಣೆ ನೀತಿ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಡಿಜಿಲಾಕರ್ ಅಪ್ಲಿಕೇಷನ್ ಮೂಲಕ ಈ ಪ್ರಕ್ರಿಯೆಯನ್ನು ಸರಳವಾಗಿ ಪೂರ್ಣಗೊಳಿಸಬಹುದಾಗಿದೆ.
ಕೃತಕ ಬುದ್ಧಿಮತ್ತೆ ಕೇಂದ್ರಗಳು
'ಭಾರತದಲ್ಲಿ ಎಐ ಸಿದ್ಧಪಡಿಸಲು ಹಾಗೂ ಭಾರತಕ್ಕಾಗಿ ಎಐ ಕಾರ್ಯನಿರ್ವಹಿಸುವಂತೆ ಮಾಡಲು' ಶಿಕ್ಷಣ ಸಂಸ್ಥೆಗಳಲ್ಲಿ ಮೂರು ಎಕ್ಸ್ ಲೆನ್ಸ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.