Budget 2022 Expectations :ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಭತ್ಯೆ, 1ಲಕ್ಷ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ನಿರೀಕ್ಷೆ
*ವರ್ಕ್ ಫ್ರಂ ಹೋಮ್ ನಿಂದ ಹೆಚ್ಚಿದ ಉದ್ಯೋಗ ಸಂಬಂಧಿ ವೆಚ್ಚ
*ಕೊರೋನಾ ಬಳಿಕ ಉದ್ಯೋಗ ನಷ್ಟ,ವೇತನ ಕಡಿತದಿಂದ ಅನೇಕ ಉದ್ಯೋಗಿಗಳಿಗೆ ಆರ್ಥಿಕ ಸಂಕಷ್ಟ
*ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸಲು ವ್ಯಯಿಸಿದ ವೆಚ್ಚಗಳಿಗೆ ತೆರಿಗೆ ವಿನಾಯ್ತಿ ನೀಡಲು ಆಗ್ರಹ
ನವದೆಹಲಿ (ಜ.12): ಕೇಂದ್ರ ಸರ್ಕಾರದ (Central Government) 2022ನೇ ಆರ್ಥಿಕ ಸಾಲಿನ ಬಜೆಟ್ (Budget) ಮಂಡನೆಗೆ ದಿನಗಣನೆ ಪ್ರಾರಂಭವಾಗಿದೆ. ಈ ನಡುವೆ ಬಜೆಟ್ (Budget) ಕುರಿತು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿಂದ ಒಂದಿಷ್ಟು ನಿರೀಕ್ಷೆಗಳು ವ್ಯಕ್ತವಾಗುತ್ತಿವೆ. ಅದೇ ರೀತಿ ವೇತನ (Salary) ಪಡೆಯುತ್ತಿರೋ ಉದ್ಯೋಗಿಗಳು ಕೂಡ ಬಜೆಟ್ ನಲ್ಲಿ ಸರ್ಕಾರ ವರ್ಕ್ ಫ್ರಂ ಹೋಮ್ ( Work From Home) ಭತ್ಯೆ (Allowance) ಘೋಷಿಸೋ ಜೊತೆಗೆ ಕೊರೋನಾ ಕಾರಣದಿಂದ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸಲು ವ್ಯಯಿಸಿದ ವೆಚ್ಚಗಳಿಗೆ (Expenses) ತೆರಿಗೆ ವಿನಾಯ್ತಿ (Tax relief) ನೀಡಬಹುದೆಂಬ ನಿರೀಕ್ಷೆ ಹೊಂದಿದ್ದಾರೆ. ಸರ್ಕಾರ 50,000 ರೂ. ವರ್ಕ್ ಫ್ರಂ ಹೋಮ್ ಭತ್ಯೆ ಹಾಗೂ ಒಂದು ಲಕ್ಷ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction) ಘೋಷಿಸಬಹುದೆಂಬ ನಿರೀಕ್ಷೆ ಹೊಂದಿದ್ದಾರೆ.
ಹೆಚ್ಚಿದ ವೆಚ್ಚ
2020ರಿಂದ ಕೋವಿಡ್ -19 ಪೆಂಡಾಮಿಕ್ ಉದ್ಯೋಗಿಗಳ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಉದ್ಯೋಗ ನಷ್ಟ, ವೇತನ ಕಡಿತದಿಂದ ಅನೇಕ ಉದ್ಯೋಗಿಗಳು ಆರ್ಥಿಕ ಸಂಕಷ್ಟ ಅನುಭವಿಸಿದ್ದರು. ಇನ್ನು ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರೋದ್ರಿಂದ ಇಂಟರ್ನೆಟ್ (internet), ಟೆಲಿಫೋನ್ ಬಿಲ್ ಗಳು (telephone charges), ಮನೆಯಲ್ಲೇ ಆಫೀಸ್ ಕಾರ್ಯ ನಿರ್ವಹಿಸಲು ಅಗತ್ಯ ಪೀಠೋಪಕರಣಗಳು (furniture), ಹೆಚ್ಚುವರಿ ವಿದ್ಯುತ್ ಬಿಲ್ (electricity bills) ಮುಂತಾದ ವೆಚ್ಚಗಳನ್ನು ಉದ್ಯೋಗಿಗಳೇ ಭರಿಸಬೇಕಾಗಿದೆ. ಆಫೀಸ್ ಗೆ ತೆರಳಿ ಕೆಲಸ ನಿರ್ವಹಿಸೋ ಸಂದರ್ಭದಲ್ಲಿ ಉದ್ಯೋಗಿಗಳು ಈ ಎಲ್ಲ ವೆಚ್ಚಗಳನ್ನು ಭರಿಸಬೇಕಾಗಿರಲಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಭತ್ಯೆ ಹಾಗೂ ತೆರಿಗೆ ಕಡಿತದ ಸೌಲಭ್ಯವನ್ನು ಕಲ್ಪಿಸಬಹುದೆಂಬ ನಿರೀಕ್ಷೆ ಉದ್ಯೋಗಿಗಳಲ್ಲಿದೆ. ಇಂಗ್ಲೆಂಡ್ ನಲ್ಲಿ ಉದ್ಯೋಗಿಗಳಿಗೆ ಸರ್ಕಾರ ತೆರಿಗೆ ವಿನಾಯ್ತಿ ನೀಡಿದೆ. ಹೀಗಾಗಿ ಇಂಗ್ಲೆಂಡ್ ಸರ್ಕಾರದ ಕ್ರಮದಿಂದ ಸ್ಫೂರ್ತಿ ಪಡೆದು ಭಾರತ ಸರ್ಕಾರ ಕೂಡ ಇಂಥದೊಂದು ಕ್ರಮ ಕೈಗೊಳ್ಳಬಹುದೆಂಬ ನಿರೀಕ್ಷೆಯಿದೆ.
50,000 ರೂ. ವರ್ಕ್ ಫ್ರಂ ಹೋಮ್ ಭತ್ಯೆ
ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರೋ ಕಾರಣ ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗಿದೆ. ಕೆಲವು ಕಂಪನಿಗಳು ಉದ್ಯೋಗಿಗಳ ಇಂಟರ್ನೆಟ್, ಟೆಲಿಫೋನ್ ವೆಚ್ಚಗಳನ್ನು ಭರಿಸುತ್ತಿವೆ. ಆದ್ರೆ ಚಿಕ್ಕ ಕಂಪನಿ ಉದ್ಯೋಗಿಗಳಿಗೆ ಇಂಥ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರೋ ಉದ್ಯೋಗಿಗಳಿಗೆ 50,000ರೂ. ವರ್ಕ್ ಫ್ರಂ ಹೋಮ್ ಭತ್ಯೆ ಹೆಚ್ಚುವರಿ ಕಡಿತದ ಸೌಲಭ್ಯ ಕಲ್ಪಿಸಬೇಕೆಂದು ಡೆಲೊಟ್ಟೆ ಇಂಡಿಯಾ (Deloitte India) ಸಲಹೆ ನೀಡಿದೆ. ಭಾರತೀಯ ಚಾರ್ಟೆಡ್ ಅಕೌಂಟ್ಸ್ ಸಂಸ್ಥೆ (ICAI) ಕೂಡ ವರ್ಕ್ ಫ್ರಮ್ ಹೋಮ್ ವೆಚ್ಚಗಳ ಮೇಲೆ ತೆರಿಗೆ ವಿನಾಯ್ತಿ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.
Tax Free Incomes: ಈ ಮೂಲಗಳಿಂದ ಹಣ ಗಳಿಸಿದರೆ ಸಿಗುತ್ತೆ ತೆರಿಗೆ ವಿನಾಯಿತಿ!
1ಲಕ್ಷ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್
ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರೋ ಉದ್ಯೋಗಿಗಳಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 16 ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000ರೂ.ನಿಂದ 1ಲಕ್ಷ ರೂ.ಗೆ ಏರಿಕೆ ಮಾಡುವಂತೆ ಸರ್ಕಾರಕ್ಕೆ ಭಾರತೀಯ ಚಾರ್ಟೆಡ್ ಅಕೌಂಟ್ಸ್ ಸಂಸ್ಥೆ (ICAI) ಸಲಹೆ ನೀಡಿದೆ. ಉದ್ಯೋಗದ ಮೇಲಿನ ವೃತ್ತಿ ತೆರಿಗೆ ಹೊರತುಪಡಿಸಿ ಉದ್ಯೋಗಕ್ಕೆ ಸಂಬಂಧಿಸಿದ ಅನೇಕ ವೆಚ್ಚಗಳನ್ನು ಸ್ಟ್ಯಾಂಡರ್ಡ್ ಡಿಡಕ್ಷನ್ ಕವರ್ ಮಾಡುತ್ತದೆ. ಸ್ಟ್ಯಾಂಡರ್ಡ್ ಡಿಡಕ್ಷನ್ 2005ರಲ್ಲಿ ರದ್ದುಗೊಂಡಿತ್ತು. ಅದನ್ನು 2017-18ರ ಬಜೆಟ್‌ನಲ್ಲಿ ಮತ್ತೆ ಪರಿಚಯಿಸಲಾಯಿತು. 2019 ರ ಮಧ್ಯಂತರ ಬಜೆಟ್‌ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 40,000ರೂ.ನಿಂದ 50,000ರೂ.ಕ್ಕೆ ಹೆಚ್ಚಿಸಲಾಯಿತು.